ತರಕಾರಿಗಳಲ್ಲಿದೆ ಕೊಬ್ಬಿಗೆ ಮದ್ದು
ಆಸ್ತಮಾ ಇದ್ದವರಿಗೆ ಮೀನೆಣ್ಣೆ ಕೊಡಿ ಎಂದು ಹಿರಿಯರು ಸಲಹೆ ಮಾಡುವುದುಂಟು. ಕೆಲವು ಕಡೆ ನಿರ್ದಿಷ್ಟ ದಿನದಂದು ಜೀವಂತ ಮೀನನ್ನು ನುಂಗಿಸುವುದೂ ಉಂಟು. ಅದು ಗುಟ್ಟೇನು ಗೊತ್ತಾ? ಇದೇ ಒಮೇಗಾ-3! ಹೌದು. ಮೀನು ಮತ್ತು ಮೀನೆಣ್ಣೆಯಲ್ಲಿ ಒಮೇಗಾ-3 ಪುಷ್ಕಳವಾಗಿದೆ. ಪಾಶ್ಚಾತ್ಯರು ಕೂಡ ಈ ವಿಧಾನವನ್ನು ಒಪ್ಪಿಕೊಂಡಿದ್ದಾರೆ. ಒಮೇಗಾ-3 ಶ್ವಾಸಕೋಶದಲ್ಲಿನ ಅಡೆತಡೆಗಳನ್ನು ತೆರವುಗೊಳಿಸುವ ಮೂಲಕ ಸರಾಗ ಉಸಿರಾಟಕ್ಕೆ ಅನುವು ಮಾಡಿಕೊಡುತ್ತದೆ. ಪರಿಣಾಮವಾಗಿ ಆಸ್ತಮಾ ನಿಯಂತ್ರಣಕ್ಕೆ ಬರುತ್ತದೆ ಎನ್ನುವ ಸಂಗತಿಯನ್ನು ಅಮೆರಿಕದ 'ಚೆಸ್ಟ್ ಜರ್ನಲ್' ಕೂಡ ಒಪ್ಪಿಕೊಂಡಿದೆ.
ಒಮೇಗಾ-3ಯಿಂದ ಇಷ್ಟೆಲ್ಲ ಅನುಕೂಲಗಳಿವೆ ಎಂದಾದ ಮೇಲೆ ಅದನ್ನು ಅಧಿಕ ಪ್ರಮಾಣದಲ್ಲಿ ಸೇವಿಸಬೇಕು. ಹಾಗಿದ್ದರೆ ಅವು ಜಾಸ್ತಿ ಇರುವ ಆಹಾರ ಪದಾರ್ಥಗಳಾದರೂ ಯಾವವು ಎನ್ನುವ ಪ್ರಶ್ನೆ ಮೂಡದಿರದು. ಏಕದಳ ಧಾನ್ಯಗಳು, ಹಸಿರು ತರಕರಿಗಳಂತೂ ಒಮೇಗಾ-3ಯಿಂದ ಸಮೃದ್ಧವಾಗಿವೆ. ಅದರಲ್ಲೂ ಗೋಳಿಸೊಪ್ಪು (ಕೆಲವು ಕಡೆ ಗೋಣಿ ಸೊಪ್ಪು ಅಂತಲೂ ಹೇಳುತ್ತಾರೆ), ಕಾಲಿಫ್ಲವರ್, ಎಲೆಕೋಸುಗಳಂತೂ ಅತ್ಯಧಿಕ ಪ್ರಮಾಣದ ಒಮೇಗಾ-3 ಹೊಂದಿವೆ. ಸೀಮೆ ಅಗಸೆ ಬೀಜ ಅಥವಾ ಎಣ್ಣೆ ಕೂಡ ಭಾರಿ ಪ್ರಮಾಣದಲ್ಲಿ ಒಮೇಗಾ-3 ನೀಡುತ್ತದೆ. ಆಶ್ಚರ್ಯ ಅನ್ನಿಸಬಹುದು. ಸೆಣಬಿನ ಬೀಜದ ಎಣ್ಣೆ, ಸೋಯಾ ಮತ್ತು ಕೆನೊಲಾ ಎಣ್ಣೆ ಕೂಡ ಒಮೇಗಾ-3 ದೃಷ್ಟಿಯಿಂದ ಒಳ್ಳೆಯದೇ. ಇವಕ್ಕೆ ರುಚಿ ಇಲ್ಲದ ಕಾರಣ ಬಳಕೆ ತುಸು ಕಡಿಮೆ ಎನ್ನಬಹುದು. ಅಡುಗೆಯಲ್ಲಿ, ಸಲಾಡ್ಗಳಲ್ಲಿ ಇವನ್ನು ಧಾರಾಳವಾಗಿ ಬಳಸಬಹುದು.
ಕಾಲಿಫ್ಲವರ್ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಹೃದಯದ ತೊಂದರೆಯಿಂದ ಬಳಲುವವರಿಗಂತೂ ಇದು ಅತ್ಯುತ್ತಮ ಆಹಾರ. ಒಮೇಗಾ-3 ಅನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವುದು ಮಾತ್ರವಲ್ಲ, ಪೊಟಾಷಿಯಂ, ಮ್ಯಾಗ್ನೇಶಿಯಂ, ನಿಯಾಸಿನ್ಗಳಂಥ ಹೃದಯಕ್ಕೆ ಅಗತ್ಯವಿರುವ ಪೋಶಕಾಂಶಗಳನ್ನೂ ಕಾಲಿಫ್ಲವರ್ ಹೊಂದಿದೆ. ಸ್ವಲ್ಪ ನೀರು ಕೊಟ್ಟರೆ ಧಾರಾಳಾವಾಗಿ ಬೆಳೆದುಕೊಳ್ಳುವ ಗೋಳಿ ಸೊಪ್ಪು ಕೂಡ ಅಷ್ಟೆ. ಒಮ್ಮೆ ಸೇವಿಸಿದಿರಿ ಅಂತಾದರೆ 400 ಮಿಲಿಗ್ರಾಂನಷ್ಟು ಒಮೇಗಾ-3 ಶರೀರದೊಳಕ್ಕೆ ಹೋಗುತ್ತದೆ. ವಿಟಮಿನ್ ಎ, ಕ್ಯಾಲ್ಶಿಯಂ, ಕಬ್ಬಿಣದ ಅಂಶಗಳೂ ಹೇರಳವಾಗಿವೆ. ಎಲೆಕೋಸು ಕೂಡ 430 ಮಿಲಿಗ್ರಾಂನಷ್ಟು ಒಮೇಗಾ-3 ಒದಗಿಸಬಲ್ಲದು.
ಒಮೇಗಾ-3ಯನ್ನು ಹೆಚ್ಚೆಚ್ಚು ಸೇವಿಸುವುದಷ್ಟೇ ಅಲ್ಲ, ಒಮೇಗಾ-6 ಇರುವ ಆಹಾರ ಪದಾರ್ಥಗಳ ಸೇವನೆ ಕಡಿಮೆ ಮಾಡುವುದು ಕೂಡ ಆರೋಗ್ಯ ರಕ್ಷಣೆಯಲ್ಲಿ ಮುಖ್ಯ ಎನ್ನುವುದು ನೆನಪಿನಲ್ಲಿರಲಿ. ಸಂಸ್ಕರಿತ ಆಹಾರಗಳನ್ನು ಎಷ್ಟು ಕಡಿಮೆ ಮಾಡುತ್ತೀರೋ ಅಷ್ಟು ಒಳ್ಳೆಯದು.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

