ಬೈಟುಕಾಫಿ

ಯಶಸ್ಸಿನ ಸತ್ಯ ನಂಬಿ

Published On :

ಈ ಬದುಕಿನ ಯಶಸ್ಸು ಎನ್ನುವುದು ನಿಂತಿರುವುದೇ ಮೂರು ಸಂಗತಿಗಳ ಮೇಲೆ. ಪ್ರಯತ್ನ, ಸತ್ಯ ಮತ್ತು ನಂಬಿಕೆಗಳಿಲ್ಲದ ಜೀವನ ಪಯಣ ಯಶಸ್ಸಿನ ದಡ ಸೇರಲು ಸಾಧ್ಯವೇ ಇಲ್ಲ. ಮೊದಲು ನಾವು ನಮ್ಮ ಪ್ರಯತ್ನವನ್ನು ಹನಿಸಬೇಕು. ಅಂಥ ಪ್ರಯತ್ನ ಸತ್ಯವಾಗಿರಬೇಕು. ಸತ್ಯವಾದ ಪ್ರಯತ್ನದ ಮೇಲೆ ನಮ್ಮ ನಂಬಿಕೆ ಬಲವಾಗಿರಬೇಕು. ಇವು ಮೂರು ಸಹ ಪರಸ್ಪರ ಅವಲಂಬಿತವಾದುದು. ಯಾವುದೇ ಯಶಸ್ಸನ್ನು ಪ್ರಯತ್ನರಹಿತವಾಗಿ ನಿರೀಕ್ಷಿಸಲಾಗದು. ಅಪ್ರಯತ್ನ ಪೂರ್ವಕ ಒಲಿದು ಬಂದ ಯಶಸ್ಸು ಖಂಡಿತಾ ಶಾಶ್ವತವಾಗಿರಲು ಸಾಧ್ಯವೇ ಇಲ್ಲ. ಏಕೆಂದರೆ ಪ್ರಯತ್ನವಿಲ್ಲದೇ ಸಿಕ್ಕಿದ ಯಶಸ್ಸನ್ನು ಉಳಿಸಿಕೊಳ್ಳುವ ರೀತಿ ವ್ಯಕ್ತಿಗೆ ಗೊತ್ತಿರುವುದಿಲ್ಲ. ಮಾತ್ರವಲ್ಲ, ಅಂಥ ಯಶಸ್ಸಿನ ಮೌಲ್ಯ ಅರಿವಾಗುವುದಿಲ್ಲ. ಯಾವುದರ ಹಿಂದೆ ಅತಿಯಾದ ಪರಿಶ್ರಮವಿರುತ್ತದೋ ಅದಕ್ಕೆ ಯಾವತ್ತಿಗೂ ಬೆಲೆ ಹೆಚ್ಚಿರುತ್ತದೆ. ಪರಿಶ್ರಮಿ ಅದರ ಅಪಮೌಲ್ಯವಾಗದಂತೆ ಎಚ್ಚರ ವಹಿಸುತ್ತಾನೆ. ಅಂಥ ಸಂದರ್ಭದಲ್ಲಿ ಪುಟ್ಟದೊಂದು ಹೋರಾಟ ಸದ್ದಿಲ್ಲದೇ ನಡೆಯುತ್ತಿರುತ್ತದೆ. ಗಳಿಸಿದ್ದನ್ನು ಉಳಿಸಿಕೊಳ್ಳುವ ಕುರಿತು ಅವನು ಸದಾ ಜಾಗೃತನಾಗಿರುತ್ತಾನೆ. ಅಂಥ ಜಾಗೃತಿ ವ್ಯಕ್ತಿಯಲ್ಲಿ ಒಂದಿಲ್ಲೊಂದು ಚಟುವಟಿಕೆಯನ್ನು ಜೀವಂತವಾಗಿಯೇ ಇಟ್ಟಿರುತ್ತದೆ. ವ್ಯಕ್ತಿಯನ್ನು ಸೋಮಾರಿಯಾಗದಂತೆ, ಬೇಜವಾಬ್ದಾರಿಯಾಗದಂತೆ ತಡೆಯುತ್ತಿರುತ್ತದೆ. ಅದೇ ಸತ್ಯ. ಸತ್ಯಕ್ಕೆ ಇನ್ನೊಂದು ಮುಖ ಇರಲು ಸಾಧ್ಯವೇ ಇಲ್ಲ. ಅದು ಸಾರ್ವಕಾಲಿಕ ನಂಬಿಕೆ. ಅದೇ ನಂಬಿಕೆ ನಿಮ್ಮದಾಗಿರಲಿ. 'ಬೇರೆಯವರು ಪ್ರಯತ್ನ ಪಡುತ್ತಿಲ್ಲ, ಆದರೂ ಅವರು ಯಶಸ್ವಿಯಾಗುತ್ತಿದ್ದಾರೆ, ಯಾವುದೇ ಶ್ರಮ ಪಡದಿದ್ದರೂ ಅವರಿಗೆ ಎಲ್ಲವೂ ಸಿಗುತ್ತಿದೆ. ನಾನು ಮಾತ್ರ ಗೇಯುತ್ತಲೇ ಇರಬೇಕು. ಇಷ್ಟು ಮಾಡಿದರೂ ಬೆಲೆ ಇಲ್ಲ. ಕತ್ತೆ ದುಡಿದಂತೆ ದುಡಿಯಲು ಮಾತ್ರವೇ ನಾವು, ಲಾಭ ಯಾರಿಗೋ...' ಇಂಥವೆಲ್ಲ ಕೇವಲ ಹಳಹಳಿಯೇ ವಿನಾ ಸತ್ಯವಲ್ಲ. ಅಂದರೆ ಅದರರ್ಥ ನಿಮ್ಮ ಕೆಲಸದ ಬಗ್ಗೆ ನಿಮಗೆ ಗೌರವ, ಪ್ರೀತಿ, ನಂಬಿಕೆಗಳಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಬೇರೆಯವರಿಗೆ ಯಶಸ್ಸು ಸಿಗುತ್ತಿದೆ ಎಂದರೆ ಅವರ ಪರಿಶ್ರಮ ನಿಮಗೆ ಕಾಣದೇ ಹೋಗಿರಬಹುದು. ಅದೂ ಅಲ್ಲದಿದ್ದರೆ ಹಿಂದೆ ಅವರು ಪಟ್ಟ ಪರಿಶ್ರಮಕ್ಕೆ ಈಗ ಫಲ ದೊರಕುತ್ತಿರಬಹುದು. ಹಾಗೂ ಅಲ್ಲವೆಂದಾದರೆ ಅಂಥ ಯಶಸ್ಸು ಕೇವಲ ಭ್ರಮೆಯಾಗಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಬೇರೆಯವರು ಸುಲಭದಲ್ಲಿ ಗಳಿಸುತ್ತಿದ್ದಾರೆ ಎಂಬ ಮಾತ್ರಕ್ಕೆ ನೀವೂ ಹಾಗೆಯೇ ಇರಬೇಕೆಂದು ಬಯಸುತ್ತಿದ್ದೀರೆಂದರೆ ನಿಮ್ಮ ನೈತಿಕತೆ, ಮನೋಭಾವದ ಬಗ್ಗೆ ಮತ್ತೊಮ್ಮೆ ಯೋಚಿಸಿಕೊಳ್ಳಿ...

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.