ಹಾಲು ಕುಡಿದಾಗ ನಿದ್ದೆ ಬರುವುದೇ?
ಫುಡ್ ಅಲರ್ಜಿ ನಿಜಕ್ಕೂ ನಿಗೂಢ ಎನ್ನಬಹುದಾದ ಮತ್ತು ವ್ಯಕ್ತಿಯನ್ನು ವಿಪರೀತ ನಿತ್ರಾಣಗೊಳಿಸುವ ಆರೋಗ್ಯ ತೊಂದರೆ. ಇದರ ಆಳಕ್ಕೆ ಇಳಿದಷ್ಟೂ, ಬಗೆದಷ್ಟೂ ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತಲೇ ಇವೆ. ಡಾ.ಜಾನ್ ಅವರು 'ಇದು ನೇರವಾಗಿ ಕರುಳಿಗೆ ಸಂಬಂಧಿಸಿದ್ದೇ ವಿನಾ ರಕ್ತ ಅಥವಾ ರೋಗ ನಿರೋಧಕ ಶಕ್ತಿಗೆ ಸಂಬಂಧಪಟ್ಟಿದ್ದಲ್ಲ' ಎಂದು ಘೋಷಿಸಿದ ತರುವಾಯು ಅನೇಕರು ಇದೇ ಜಾಡಿನಲ್ಲಿ ಸಂಶೋಧನೆ ಮುಂದುವರಿಸಿದರು. ಪ್ರತಿ ಸಂಶೋಧನೆಯೂ ಒಂದೊಂದು ಸಂಗತಿಯನ್ನು ಹೊರಗೆಳೆಯುತ್ತಲೇ ಇದೆ. ಹಾಗಂತ ಎಲ್ಲವನ್ನೂ ಸಾರ್ವತ್ರೀಕರಣಗೊಳಿಸಲೂ ಸಾಧ್ಯವಿಲ್ಲ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುವುದರಿಂದ ರೋಗಪತ್ತೆ ಸಂದರ್ಭ ಆ ಸಾಧ್ಯತೆಗಳನ್ನೂ ಪರಿಗಣಿಸಬಹುದಷ್ಟೆ.
ಫುಡ್ ಅಲರ್ಜಿ ಸಾಧ್ಯತೆ ಕುರಿತು ಹುಟ್ಟಿಕೊಂಡಿರುವ ಮತ್ತೊಂದು ಸಿದ್ಧಾಂತ ಎಂದರೆ ಕೆಲವರಲ್ಲಿ ಇದ್ದಿರಬಹುದಾದ ಕರುಳಿನ ತೊಂದರೆ ಈ ಸಮಸ್ಯೆಯನ್ನೂ ಸೃಷ್ಟಿಸುತ್ತದೆ ಎನ್ನುವುದು. ಅಂದರೆ ಕರುಳಿನಲ್ಲಿ ಸ್ರಾವವಾಗುತ್ತಿದ್ದರೆ, ಅಂಥ ಸಂದರ್ಭದಲ್ಲಿ ಜೀರ್ಣವಾಗದೇ ಉಳಿದ ಆಹಾರ ನೇರವಾಗಿ ರಕ್ತನಾಳ ಸೇರಬಹುದು. ಆಗ ರೋಗ ನಿರೋಧಕ ವ್ಯವಸ್ಥೆ ಅವನ್ನು ಬಾಹ್ಯ ಅಥವಾ ವಿದೇಶಿ ಆಕ್ರಮಣಕಾರ ಎಂಬುದಾಗಿ ಭಾವಿಸಿಕೊಂಡು ರಾಸಾಯನಿಕ ಪ್ರತಿಕ್ರಿಯೆಗಳನ್ನು ಶುರು ಮಾಡಬಹುದು. ಅದು ಅಲರ್ಜಿ ಲಕ್ಷಣಗಳ ರೂಪದಲ್ಲಿ ಪ್ರಚುರಗೊಳ್ಳಬಹುದು.
ಇನ್ನೊಂದು ವಾದವೂ ಇದೆ. ಆಹಾರದಲ್ಲಿರುವ ಕೆಲವು ಪದಾರ್ಥಗಳೇ ನೇರವಾಗಿ ಅಲರ್ಜಿ ಲಕ್ಷಣಗಳನ್ನು ಪ್ರಚೋದಿಸುತ್ತವೆ ಎಂಬುದು ಇದರ ಸಾರಾಂಶ. ಉದಾಹರಣೆಗೆ ಕಾಫಿ, ವೈನ್ ಅಂಶವಿರುವ ಕೆಲವು ಹಣ್ಣುಗಳು, ನೈಸರ್ಗಿಕ ರಾಸಾಯನಿಕಗಳುಳ್ಳ ಆಹಾರ ಇತ್ಯಾದಿಗಳನ್ನು ಚಯಾಪಚಯ ಕ್ರಿಯೆ ಸಂದರ್ಭದಲ್ಲಿ ಕಿಣ್ವಗಳು ನಿಷ್ಕ್ರಿಯಗೊಳಿಸುತ್ತವೆ. ಚಯಾಪಚಯ ಕ್ರಿಯೆ ವೇಳೆ ಆಹಾರದಲ್ಲಿರುವ ಫಿನಾಲ್ಗಳು (ಶುದ್ಧೀಕರಣ ದ್ರವ ಎಂತಲೂ ಹೇಳಬಹುದು) ಕ್ರಿಯಾಶೀಲಗೊಳ್ಳದಿದ್ದಾಗಲೂ ಅಲರ್ಜಿಯಂಥ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎನ್ನುವುದು ಈ ವಾದವನ್ನು ಮುಂದಿಡುವವರ ವಿವರಣೆ.
ವೈನ್ ಅಂಶವುಳ್ಳ, ಸಿಟ್ರಸ್ ಜಾತಿಯ ಹಣ್ಣುಗಳು ತಲೆನೋವಿಗೆ ಪ್ರಮುಖ ಕಾರಣ ಎನ್ನುವುದು ಈಗಾಗಲೇ ದೃಢಪಟ್ಟಿರುವ ವಿಚಾರ. ಹಾಲನ್ನು ಹಲವು ಬಗೆಯ ತಪಾಸಣೆಗೆ ಒಳಪಡಿಸಿದಾಗ ಅದರಲ್ಲಿ ಅನೇಕ ಅಲರ್ಜಿಗಳಿಗೆ ಕಾರಣವಾಗುವ ಹಿಸ್ಟಮಿನ್ಗಳಿರುವುದು ಪತ್ತೆಯಾಗಿದೆ. ಹಾಲು ಹಾಗೂ ಗೋಧಿಯಲ್ಲಿ ನಿದ್ರೆ ಬರಿಸುವ, ಮಾರ್ಫಿನ್ನಂಥ ಅಂಶಗಳಿವೆ ಎಂಬುದೂ ಸಾಬೀತಾಗಿದೆ. ಇವು ಮೆದುಳಿನ ಕೋಶಗಳ ಮೇಲೆ ಪ್ರಭಾವ ಬೀರಿ ನಮ್ಮ ಮೂಡ್ ಬದಲಿಸಬಲ್ಲವು. ನಮ್ಮ ಮಾನಸಿಕ ಸ್ಥಿತಿಗತಿಯನ್ನೂ ನಿಯಂತ್ರಿಸಬಲ್ಲವು.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

