ಬೈಟುಕಾಫಿ

ನಿರೀಕ್ಷೆಯ ಬದಲು ಪ್ರಯತ್ನ ಹೆಚ್ಚಿಸಿ

Published On :

ಯಾರಿಗೆ ಗೊತ್ತಿಲ್ಲ ಹೇಳಿ? ಬಹುತೇಕ ಎಲ್ಲರಿಗೂ ಗೊತ್ತಿರುವ ಸಂಗತಿಯೇ ಇದು. ನಮ್ಮೆಲ್ಲ ಸಂತೋಷಗಳಿಗೆ ಕೊಳ್ಳಿ ಇಡುವುದೇ ನಮ್ಮೊಳಗಿನ ಅತೀ ನಿರೀಕ್ಷೆಗಳು. ನಮ್ಮ ಉದ್ಯೋಗ, ನಮ್ಮ ಕುಟುಂಬ, ನಮ್ಮ ಕಾರ್ಯಕ್ಷೇತ್ರ, ಸಂಬಂಧಿಗಳು, ಪ್ರೀತಿಪಾತ್ರರು, ಬಂಧುಗಳು, ಸ್ನೇಹಿತರು, ಮಕ್ಕಳು, ನಮ್ಮ ಕಂಪನಿ, ನಾವು ಪಾಲ್ಗೊಳ್ಳುವ ಕಾರ್ಯಕ್ರಮ, ಸ್ಪರ್ಧೆ ಹೀಗೆ ಪ್ರತಿಯೊಂದರಲ್ಲೂ ನಮ್ಮ ನಿರೀಕ್ಷೆ ಯಾವತ್ತಿಗೂ ಸಾಮರ್ಥ್ಯಕ್ಕಿಂತ ಹೆಚ್ಚೇ ಇರುತ್ತದೆ. ವಿಶೇಷವೆಂದರೆ ಅಂಥ ನಿರೀಕ್ಷೆಗಳು ಬಹಳಷ್ಟು ಸಂದರ್ಭದಲ್ಲಿ ಹುಸಿಯಾಗಿರುತ್ತವೆ ಎಂಬುದೂ ನಮಗೆ ಗೊತ್ತಿರುತ್ತದೆ. ನಾನು ನಿರ್ವಹಿಸುವ ಹುದ್ದೆ, ನನ್ನ ವಿದ್ಯಾರ್ಹತೆ, ನನ್ನ ಸಾಮರ್ಥ್ಯ ಹೀಗೆ ಯಾವುದೇ ದೃಷ್ಟಿಯಿಂದ ನೋಡಿದರೂ ನಮಗೆ ಸಿಗುತ್ತಿರುವ ಸಂಬಳ ಇದಕ್ಕಿಂತ ಹೆಚ್ಚಾಗಲು ಸಾಧ್ಯವೇ ಇಲ್ಲ ಎಂಬುದು ಗೊತ್ತಿದ್ದರೂ ಮುಂದಿನ ವೇತನ ಹೆಚ್ಚಳ ಸಂದರ್ಭದಲ್ಲಿ ಯಾವುದಾದರೂ ಮ್ಯಾಜಿಕ್ ನಡೆದು ಎಲ್ಲರಿಗಿಂತ ಹೆಚ್ಚಿನ ಸಂಬಳ ಸಿಗುವಂತಾಗಲಿ ಎಂದು ನಿರೀಕ್ಷಿಸುತ್ತೇವೆ. ಹೆಂಡತಿ ನನ್ನನ್ನೇ ಪ್ರೀತಿಸುತ್ತಿದ್ದಾಳೆ ಎಂಬುದು ಗೊತ್ತಿದ್ದರೂ ನನ್ನ ಆದೇಶದಂತೆಯೇ ಎಲ್ಲವೂ ನಡೆಯಬೇಕೆಂದು ಬಯಸುತ್ತೇವೆ. ಮಕ್ಕಳು ಪ್ರತಿಭಾವಂತರಾಗಿದ್ದರೂ ನೂರಕ್ಕೆ ನೂರು ಅಂಕವನ್ನೂ ಗಳಿಸಿ ಎಲ್ಲದರಲ್ಲೂ ಮೊದಲ ಸ್ಥಾನವನ್ನೇ ಗಳಿಸಲಿ ಎಂದುಕೊಳ್ಳುತ್ತೇವೆ. ಹೀಗೆ ಪ್ರತಿಯೊಂದರಲ್ಲೂ ಏನಾದರೊಂದು ಪವಾಡ ನಡೆದು ಏನು ಆಗಬಹುದೋ, ಆಗಬಲ್ಲುದೋ ಅದಕ್ಕಿಂತ ಹೆಚ್ಚಿನದ್ದೇ ಆಗಲೆಂದುಕೊಳ್ಳುತ್ತೇವೆ. ಮಹತ್ವಾಕಾಂಕ್ಷೆ ತಪ್ಪಲ್ಲ. ಆದರೆ ಅಂಥ ಆಕಾಂಕ್ಷೆಯ ಸಂದರ್ಭದಲ್ಲಿ ನಮ್ಮ ಕರ್ತವ್ಯ, ಪ್ರಯತ್ನದ ಪಾಲು ಎಷ್ಟಿರುತ್ತದೆ ಎಂಬುದನ್ನು ನೆನಪಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಪ್ರತಿಯೊಬ್ಬರಿಗೂ, ಪ್ರತಿಯೊಂದಕ್ಕೂ ಒಂದು ಮಿತಿ ಎಂಬುದು ಇದ್ದೇ ಇರುತ್ತದೆ ಎಂಬುದನ್ನು ನಾವು ಮರೆತು ವರ್ತಿಸುವುದರಿಂದಲೇ ಬಹಳಷ್ಟು ಬಾರಿ ನಮ್ಮನ್ನು ನಿರಾಸೆ ಕಾಡುವುದು. ಆಗ ಸಹಜವಾಗಿ ಅಸಹನೆ, ಕೋಪ, ದುಃಖದ ಕೂಪಕ್ಕೆ ಬೀಳುತ್ತೇವೆ. ದುಗುಡ ಹೆಚ್ಚುತ್ತಾ ಹೋಗುತ್ತದೆ. ಮುಂದಿನ ಸಾಧನೆಯ ಹಾದಿ ಮಂಕಾಗುವುದೇ ಇದರಿಂದ. ನಿರಾಸೆಯ ಮನಸ್ಥಿತಿಯಲ್ಲಿ ನಾವು ಏನನ್ನೂ ಸಾಧಿಸಲಾಗುವುದಿಲ್ಲ. ಆಶಾವಾದವನ್ನು ಕಳೆದುಕೊಂಡ ಮನುಷ್ಯನಿಂದ ಯಾವ ಕೆಲಸವನ್ನೂ ಮಾಡಲಾಗುವುದೇ ಇಲ್ಲ. ಇದಕ್ಕಿರುವ ಪರಿಹಾರ ಏಕೈಕ. ಅದೆಂದರೆ ನಿರೀಕ್ಷೆಗಳನ್ನು ಆದಷ್ಟು ಕಡಿಮೆಗೊಳಿಸಿಕೊಂಡು, ಪ್ರಯತ್ನವನ್ನು ಹೆಚ್ಚಿಸುತ್ತಾ ಹೋಗುವುದು. ಮಕ್ಕಳು ಮಕ್ಕಳಾಗಿಯೇ ಇರಬೇಕೆಂದು ಬಯಸಿದರೆ ಅವರ ಪ್ರತಿಭೆ ನಮಗೆ ಯಾವತ್ತಿಗೂ ಕಡಿಮೆ ಎನ್ನಿಸುವುದೇ ಇಲ್ಲ. ಹಾಗೆಯೇ ಎಲ್ಲ ವಿಚಾರದಲ್ಲೂ. ಧನಾತ್ಮಕವಾಗಿ ಎಲ್ಲವನ್ನು ಸ್ವೀಕರಿಸುತ್ತಾ ಹೋಗುವುದರಿಂದ ಮಾತ್ರ ಫಲಿತಾಂಶವನ್ನು ಬದಲಿಸಲು ನಮ್ಮಿಂದ ಸಾಧ್ಯ ಎಂಬುದನ್ನು ಮರೆಯಬೇಡಿ.

-ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.