ಬೈಟುಕಾಫಿ

ಸಂತಸ ಹುಡುಕಿ ಬರಲಿ

Published On :

ನಮಗೊಮ್ಮೊಮ್ಮೆ ಅತೀವ ಸಂತಸವಾಗಿಬಿಡುತ್ತದೆ. ಮನ ಹಗುರಾಗಿ ತೇಲುತ್ತಿರುತ್ತದೆ. ಅಂಥ ಸಂತಸಕ್ಕೆ ಕಾರಣವಾದರೂ ಏನು?  ಅಷ್ಟಕ್ಕೂ ಖುಷಿಯಾಗುವುದು, ಸಂತಸವಾಗುವುದು ಅಂದರೇನು?  ಇದು ಎಲ್ಲರಿಗೂ ಸಮಾನವಾಗಿರುವುದಿಲ್ಲವೇಕೆ?  ಹಣವೊಂದಿದ್ದರೆ ಯಾವಾಗಲೂ ಸುಖ- ಸಂತೋಷದಿಂದಿರಲು ಸಾಧ್ಯವೇ?  ಇಂಥ ಹತ್ತು ಹಲವು ಪ್ರಶ್ನೆಗಳು ಯಾವತ್ತಿಗೂ ಎಲ್ಲರ ಮನವನ್ನು ಕಾಡುತ್ತಲೇ ಇವೆ. ಕೇಳಿ ನೋಡಿ. ನೀವು ಇಷ್ಟೊಂದು ಸಂತಸವಾಗಿದ್ದೀರಲ್ಲಾ ಕಾರಣವೇನು ಎಂದರೆ ಗಂಡು ಮಗು ಆಯಿತು ಅಂತಲೋ, ಪ್ರಮೋಷನ್ ಸಿಕ್ಕಿತು ಅಂತಲೋ, ಮದುವೆಯಾಯಿತು, ಲಾಟರಿ ಹೊಡೆಯಿತು, ಮನೆ ಸಿಕ್ಕಿತು, ಆಸ್ತಿ ನನ್ನದಾಯಿತು, ಕೋಟರ್ ಕೇಸ್ ನನ್ನ ಕಡೆಗಾಗಿದೆ... ಹೀಗೆ ಏನಾದರೊಂದು ಹೇಳುತ್ತಾರೆ. ವಿಶೇಷವೆಂದರೆ ಅದೆಲ್ಲವನ್ನೂ ಅವರು ಬಯಸಿದ್ದರು. ಹಾಗಾಗಲೆಂದು ಬಯಸಿದ್ದರಿಂದಲೇ ಅದು ಸಿಕ್ಕಿದಾಗ ಅವರಿಗೆ ಸಂತಸವಾಗಿರುತ್ತದೆ. ಅಂದರೆ ಸಂತಸವೆಂದರೆ ನಾವು ಏನನ್ನು ಬಯಸಿದ್ದೆವೋ ಅದು ಸಿಕ್ಕುವ ಕ್ಷಣ ಎನ್ನಬಹುದೇ? ಒಂದೊಮ್ಮೆ ಅದೇ ಆಗಿದ್ದರೆ ಒಮ್ಮೆ ನಾವು ಬಯಸಿದ್ದು ಸಿಕ್ಕಿದರೆ ಮುಗಿಯಿತು, ಕೊನೆಯವರೆಗೂ ನಾವು ಸಂತಸದಿಂದಲೇ ಇರಬೇಕಿತ್ತು. ಆದರೆ ಹಾಗಾಗುವುದೇ ಇಲ್ಲ. ನಮಗಾದ ಸಂತಸ ಹೆಚ್ಚು ಹೊತ್ತು ಇರುವುದೇ ಇಲ್ಲ. ಹಾಗೆನ್ನುವುದಕ್ಕಿಂತ ನಮ್ಮ ಬಯಕೆ ಈಡೇರಿದ ನಂತರ ಇನ್ನೊಂದು ಮೊಳೆಯುತ್ತದೆ. ಅತ್ತ ಪ್ರಯತ್ನಮುಖಿಯಾಗುತ್ತಿದ್ದಂತೆಯೇ ನಾವು ಹಿಂದೆ ಪಡೆದದ್ದರ ಸಂತಸ ಮರೆಯಾಗಿ ಹೋಗುತ್ತದೆ. ನಂತರ ಪಡೆಯಲಾಗದಿದ್ದರೆ ಮತ್ತೆ ನೋವು, ಅಸಮಾಧಾನ, ಹತಾಶೆ... ಇಂಥವೆಲ್ಲವೂ ಮುಕ್ಕರಿಸಿಕೊಳ್ಳುತ್ತವೆ. ನಿಜವಾದ ಸಂತಸವೆನ್ನುವುದು ಇನ್ನಾವುದೋ ಕಾರಣಕ್ಕಾಗಿ ಮರೆಯಾಗಿ ಹೋಗಲು ಸಾಧ್ಯವೇ ಇಲ್ಲ. ಅದೊಂದು ಉದಾತ್ತತೆ. ಅದು ವಾಸ್ತವದ ಸ್ಥಿತಿಯಲ್ಲಿ ಅರಳಬೇಕು. ಅದು ಜಾಗೃತ ಸ್ಥಿತಿಯಲ್ಲಿ ಅನುಭವಜನ್ಯವಾಗಬೇಕು. ಹಾಗೆ ಅನುಭವಕ್ಕೆ ದಕ್ಕಿದ್ದು ಮತ್ತೆ ನೆನಪಿನಾಳಕ್ಕೆ ಇಳಿಯದೇ ಸದಾ ಪ್ರಸ್ತುತವೇ ಆಗಿರಬೇಕು. ಹಾಗಾಗಬೇಕೆಂದರೆ ನಾವೇ ಸಂತಸದ ಬೆನ್ನು ಹತ್ತಿ ಹೋಗುವ ಬದಲು ಅದೇ ನಮ್ಮನ್ನು ಹುಡುಕಿಕೊಂಡು ಬರಬೇಕು.

-ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.