ಬೈಟುಕಾಫಿ

ಹೆಮ್ಮಾರಿ

ಹೆಮ್ಮಾರಿ
Published On :

ಹಿಂದೆ ಮಹಿಳೆಯನ್ನು ಸೀತೆ, ಸಾವಿತ್ರಿಯಂಥ ಪತಿವ್ರತಾ ಶಿರೋಮಣಿಗಳಿಗೆ ಹೋಲಿಸುತ್ತಿದ್ದರು. ಈಗ ಐಶ್ವರ್ಯ ರೈ, ಪ್ರಿಯಾಂಕಾ ಚೋಪ್ರಾ... ಹೀಗೆ ನಟೀಮಣಿಗಳಿಗೆ ಹೋಲಿಸುತ್ತಾರೆ. ಮದುವೆಯ ಸ್ವರೂಪಗಳು ಬದಲಾಗಿದೆ, ವಿಚ್ಛೇದನಗಳು ಹೆಚ್ಚಾಗಿದೆ. ವರದಕ್ಷಿಣೆ ಸಾವುಗಳ ಜತೆಗೆ ಪತ್ನಿ ಕಿರುಕುಳಗಳು ಹೆಚ್ಚಾಗಿ ಪತ್ನಿ ಪೀಡಿತ ಸಂಘಗಳೂ ಉದಯಿಸಿವೆ. ಮಹಿಳೆ ಸ್ವಭಾವ ಮತ್ತು ಗುಣಗಳಲ್ಲಿ ಬದಲಾಗಿದ್ದಾಳೆ.

ಇಂಥ ಮಹಿಳೆಯೊಬ್ಬಳು ಭಾರತೀಯ ಸೇನೆಯ ಸೈನಿಕರನ್ನೇ ಗಡಗಡ ನಡುಗಿಸಿದ ಪ್ರಕರಣವೊಂದು ಬೆಂಗಳೂರು ನಗರದಲ್ಲಿ ನಡೆದಿತ್ತು. ಅದಕ್ಕೆ ಸಾಕ್ಷಿಯಾಗಿದ್ದು ಅಂದಿನ ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಗೋವಿಂದರಾಜು.
=
ಅದು ಬೆಂಗಳೂರು ನಗರದ ವಿಮಾನ ನಿಲ್ದಾಣ ಪೋಲಿಸ್ ಠಾಣೆ. (ಹಿಂದೆ ಎಚ್‌ಎಎಲ್ ವಿಮಾನ ನಿಲ್ದಾಣವಾಗಿತ್ತು.) ಇದೇ ಠಾಣೆ ವ್ಯಾಪ್ತಿಯಲ್ಲಿದೆ ಮುರುಗೇಶ್ ಪಾಳ್ಯ ಎಂಬ ಮಧ್ಯಮವರ್ಗ ವಾಸಿಸುವ ಪ್ರದೇಶ. ಇಲ್ಲೇ ಭಾರತೀಯ ಭೂಸೇನೆಯ ಸ್ಥಾವರವೂ (ಮಿಲಿಟರಿ ಕ್ಯಾಂಪ್) ಇದೆ. ಇದೇ ಕ್ಯಾಂಪಸ್‌ನಲ್ಲಿ ಭೂಸೇನೆಯ ಸೈನಿಕರಿಗೆ ವಸತಿ ಗೃಹಗಳನ್ನು ನೀಡಲಾಗುತ್ತದೆ.

ಆದರೆ ಗೃಹಗಳು ಕಡಿಮೆ ಇದ್ದು ಸೈನಿಕರ ಸಂಖ್ಯೆ ಹೆಚ್ಚಾಗಿದ್ದ ಕಾರಣ ವಸತಿ ಗೃಹಗಳು ತುಂಬಿ ಹೆಚ್ಚುವರಿ ಸೈನಿಕರನ್ನು ಹೊರಗೆ ಬಾಡಿಗೆ ಮನೆಗಳನ್ನು ನೋಡಿಕೊಳ್ಳಲು ಹೇಳಲಾಗಿತ್ತು. ಇದಕ್ಕೆ ಬಾಡಿಗೆ ಭಾರತೀಯ ಸೇನೆಯೇ ಭರಿಸುತ್ತಿತ್ತು. 12 ಜನ ಸೈನಿಕರು ಮಧ್ಯಮ ವರ್ಗದ ಕುಟುಂಬಗಳೇ ವಾಸಿಸುವ ಒಂದು ವಠಾರದಲ್ಲಿ ಒಟ್ಟಿಗೆ ಮನೆಗಳನ್ನು ಮಾಡಿಕೊಂಡಿದ್ದರು.
ಇಲ್ಲಿ ವಾಸವಿದ್ದ 12 ಸೈನಿಕರು ಬಂದು ಪೊಲೀಸ್ ಇನ್ಸ್‌ಪೆಕ್ಟರ್‌ಗಾಗಿ ಗಂಟೆಗಟ್ಟಲೆ ಕಾದು ಕುಳಿತಿದ್ದಾರೆ ಎಂಬ ಸುದ್ದಿ ತಿಳಿದು ಇನ್ಸ್‌ಪೆಕ್ಟರ್ ಎಲ್ಲ ಕೆಲಸ ಪಕ್ಕಕ್ಕಿಟ್ಟು ಅವರನ್ನು ಕರೆದು ವಿಚಾರಿಸಿದರು. ಬಂದಿದ್ದವರು ಇನ್ಸ್‌ಪೆಕ್ಟರ್ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಾ 'ನಾವು 12 ಸಹೋದ್ಯೋಗಿಗಳೂ ಒಂದೇ ವಠಾರದಲ್ಲಿ ಬಾಡಿಗೆ ಮನೆ ಪಡೆದಿದ್ದು ಅಷ್ಟೂ ಮನೆಗಳ ಯಜಮಾನ ಒಬ್ಬನೇ. ಇಡೀ ವಠಾರಕ್ಕೆ ಇರುವುದು ಒಂದೇ ನಲ್ಲಿ. ಅದರಲ್ಲಿ ಪ್ರತಿದಿನ ನೀರು ಬರುವುದು ಎರಡು ಗಂಟೆ ಮಾತ್ರ. ಆ ಸಮಯದಲ್ಲಿ ನೀರು ಹಿಡಿಯದಿದ್ದರೆ ಇಡೀ ದಿನ ಯಾವುದೇ ಕೆಲಸಕ್ಕೆ ನೀರಿಲ್ಲದೆ ಪರದಾಡಬೇಕಾಗುತ್ತದೆ. ಎಲ್ಲರೂ ಸಾಲಿನಲ್ಲಿ ನಿಂತು ನೀರು ಹಿಡಿದುಕೊಳ್ಳುತ್ತಾರೆ. ಆದರೆ ಮನೆ ಯಜಮಾನನ ಹೆಂಡತಿಯೂ ಅಲ್ಲೇ ನೀರು ಹಿಡಿಯಬೇಕಿದ್ದು, ಆಕೆ ಅಲ್ಲಿ ಬಂದ ಕೂಡಲೇ ಸಮಸ್ಯೆ ಆರಂಭವಾಗುತ್ತದೆ. ಬಂದವಳು ನಲ್ಲಿಯ ಕೆಳಗಿರುವ ಕೊಡವನ್ನು ಕಾಲಿನಿಂದ ಜಾಡಿಸಿ ಒದ್ದು, ಆಕೆ ನೀರು ಹಿಡಿಯುತ್ತಾಳೆ. ಪ್ರಶ್ನಿಸಿದರೆ ಅಶ್ಲೀಲ ಪದಗಳಿಂದ ನಿಂದಿಸುತ್ತಾಳೆ. ಏನು ಮಾಡುವುದು ಎಂದು ತೋಚದೆ ಠಾಣೆಗೆ ಬಂದಿರುವುದಾಗಿ' ಜವಾನರು ತಿಳಿಸಿದರು.
ಆಕೆಯ ಯಜಮಾನನಿಗೆ ವಿಷಯ ತಿಳಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಲ್ಲ ಎಂಬ ಇನ್ಸ್‌ಪೆಕ್ಟರ್ ಪ್ರಶ್ನೆಗೆ ಆತ ಕೈಗೆ ಸಿಗುವುದೇ ಇಲ್ಲ, ಬಾಣಸವಾಡಿಯಲ್ಲಿ ಬಾರ್ ನಡೆಸುತ್ತಿರುವ ಆತ ತಡರಾತ್ರಿ ಮನೆಗೆ ಬಂದು ಬೆಳಗಾಗುವ ಒಳಗೆ ಮನೆ ಬಿಟ್ಟು ಹೋಗುತ್ತಾನೆ. ಆಕೆ ಆತನ ಎರಡನೇ ಸಂಬಂಧವಾಗಿರುವುದರಿಂದ ಹೆಚ್ಚಿಗೆ ಇಲ್ಲಿಗೆ ಬರುವುದಿಲ್ಲ ಎಂದರು. ಅಂದು ವಿಐಪಿಯೊಬ್ಬರ ಬಂದೋಬಸ್ತ್ ಇದ್ದ ಕಾರಣ ಒಂದೆರಡು ದಿನ ಬಿಟ್ಟು ಬರುವಂತೆ ಇನ್ಸ್‌ಪೆಕ್ಟರ್ ಸೂಚಿಸಿದರು.
ಎರಡು ದಿನ ಬಿಟ್ಟು ಬಂದ ಜವಾನರು ಮತ್ತೆ ಎರಡು ಗಂಟೆ ಶಿಸ್ತಿನಿಂದ ಇನ್ಸ್‌ಪೆಕ್ಟರ್‌ಗಾಗಿ ಕಾದರು. ದೇಶ ಕಾಯುವ ಜವಾನರು ತನಗಾಗಿ ಗಂಟೆಗಟ್ಟಲೆ ಕಾದ ಕೊರಗು ಇನ್ಸ್‌ಪೆಕ್ಟರ್ ಮನದಲ್ಲಿ ಮೂಡಿತು. ಕೂಡಲೇ ನಡೆಯಿರಿ, ಸ್ಥಳಕ್ಕೆ ಬಂದು ಸಮಸ್ಯೆ ಆಲಿಸುತ್ತೇನೆ ಎಂದು ಹೊರಟರು. ವಠಾರದೊಳಗೆ ಪೊಲೀಸರು ಬಂದಿದ್ದಾರೆ ಎಂಬ ಸುದ್ದಿ ತಿಳಿದ ಕೂಡಲೇ ಮನೆಯ ಯಮಾನಿತಿ ಬಾಗಿಲು ಭದ್ರಪಡಿಸಿದಳು.
ಇನ್ಸ್‌ಪೆಕ್ಟರ್ ಬಾಗಿಲು ತೆಗಿಯುವಂತೆ ಮಾಡಿದ ಮನವಿಗೆ ಪ್ರತಿಯಾಗಿ ಆಕೆ ಅವಾಚ್ಯ ಶಬ್ದಗಳಿಂದ ಇನ್ಸ್‌ಪೆಕ್ಟರ್‌ರನ್ನೇ ನಿಂದಿಸತೊಡಗಿದಳು. ಇದರಿಂದ ಸಹನೆ ಕಳೆದುಕೊಂಡ ಇನ್ಸ್‌ಪೆಕ್ಟರ್ ಕೂಡಾ ಬಾಯಿಗೆ ಬಂದಂತೆ ಪೊಲೀಸ್ ಭಾಷೆ ಪ್ರಯೋಗ ಮಾಡಿ ಬೆಳಗ್ಗೆ ಬಂದು ನೋಡುವುದಾಗಿ ಹೇಳಿ ಅಲ್ಲಿಂದ ವಾಪಸ್ ಬಂದರು.

ಮರುದಿನ ಇನ್ಸ್‌ಪೆಕ್ಟರ್ ತನ್ನ ಕರ್ತವ್ಯದಲ್ಲಿ ಮಗ್ನರಾಗಿದ್ದರು. ಮಧ್ಯವಯಸ್ಸಿನ ವ್ಯಕ್ತಿಯೊಬ್ಬರು ಕೈಯಲ್ಲಿ ಒಂದು ಕವರ್ ಹಿಡಿದು ಠಾಣೆಗೆ ಬಂದರು. ಬಂದವರು 'ಸಾರ್ ನನ್ನ ಹೆಸರು ರಾಮಸ್ವಾಮಿ. ಮುರುಗೇಶ್ ಪಾಳ್ಯದ ನನ್ನ ಮನೆಗೆ ರಾತ್ರಿ ನೀವು ಬಂದು ಒಂಟಿಯಾಗಿದ್ದ ನನ್ನ ಹೆಂಡತಿ ಮೇಲೆ ಮಿಸ್‌ಬಿಹೇವ್ (ದುರ್ನಡತೆ) ಮಾಡಿರುವುದಾಗಿ ನನ್ನ ಹೆಂಡತಿ ಹೇಳಿದ್ದಾಳೆ. ಹಾಗಾಗಿ ನಿಮ್ಮ ವಿರುದ್ಧ ಡಿಸಿಪಿಯವರಿಗೆ ದೂರು ಸಿದ್ಧಪಡಿಸಿಕೊಂಡು ನೀಡಲು ಹೋಗುತ್ತಿದ್ದೇನೆ' ಎಂದು ಹೇಳಿದರು. ಇನ್ಸ್‌ಪೆಕ್ಟರ್‌ಗೆ ಪೀಕಲಾಟ ಶುರುವಾಯಿತು. ಸೈನಿಕರಿಗೆ ಸಹಾಯ ಮಾಡುವುದು ಅವರ ಉದ್ದೇಶವಾಗಿತ್ತು. ಡಿಸಿಪಿಗೆ ದೂರು ಹೋದರೆ ಸುಖಾಸುಮ್ಮನೆ ವಿಚಾರಣೆ ಎದುರಿಸಬೇಕಾಗುತ್ತದೆ ಎಂಬ ಆತಂಕ ಅವರಲ್ಲಿ ಮನೆ ಮಾಡಿತು. ಆದರೆ ಅದನ್ನು ತೋರ್ಪಡಿಸಿದೆ ಪೊಲೀಸ್ ಬುದ್ಧಿ ಉಪಯೋಗಿಸಿದರು. 'ನೋಡಿ ನಿಮ್ಮ ಮನೆಯಲ್ಲಿ ಬಾಡಿಗೆಗೆ ಇರುವವರು ಜವಾಬ್ದಾರಿಯುತ ಸೈನಿಕರು. ಅವರೇನು ನಿರ್ಗತಿಕರಾಗಿ ನಿಮ್ಮ ಮನೆಗೆ ಬಂದಿಲ್ಲ. ಬಾಡಿಗೆ ಪಡೆಯುವ ನೀವು ಬಾಡಿಗೆದಾರರಿಗೆ ಅಗತ್ಯ ಸೌಲಭ್ಯ ಒದಗಿಸುವುದು ನಿಮ್ಮ ಕರ್ತವ್ಯ. ಆದರೆ ನಿಮ್ಮ ಹೆಂಡತಿ ಬಾಡಿಗೆದಾರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸೈನಿಕರು ದೂರು ನೀಡಿದ್ದಾರೆ. ಅದರ ವಿಚಾರಣೆಗಾಗಿ ನಾನು ನಿಮ್ಮ ಮನೆಗೆ ಬಂದಾಗ ನೀವಿರಲಿಲ್ಲ. ಹಾಗಾಗಿ ವಾಪಸ್ ಬಂದಿದ್ದೀನಿ. ಇಷ್ಟಕ್ಕೂ ಬಾಡಿಗೆಗೆ ಇರುವ ಸೈನಿಕರು ನಿಮ್ಮ ಬಗ್ಗೆ ಒಳ್ಳೆಯ ಗೌರವ ಇಟ್ಟುಕೊಂಡಿದ್ದಾರೆ. ನಿಮ್ಮ ಪತ್ನಿಯ ನಡವಳಿಕೆ ಅವರಿಗೆ ಬೇಸರ ತರಿಸಿದೆ. ನಿಮ್ಮ ಪತ್ನಿ ಹೇಳುವ ಇಲ್ಲಸಲ್ಲದ ಮಾತುಗಳಿಂದ ನೀವು ನಿಮ್ಮ ಗೌರವ ಹಾಳು ಮಾಡಿಕೊಳ್ಳಲು ಸಿದ್ಧರಿರುವುದಾದರೆ ಅದಕ್ಕೆ ನನ್ನ ವಿರೋಧವಿಲ್ಲ' ಎಂದು ಹೇಳಿದರು. ಸಾವಧಾನವಾಗಿ ಕೇಳಿದ ರಾಮಸ್ವಾಮಿ, ಸರಿ ಸಾರ್ ಇಂದೇ ಈ ಸಮಸ್ಯೆಗೊಂದು ಪರಿಹಾರ ನೀಡುತ್ತೇನೆ ಎಂದು ಎದ್ದು ಹೊರಟರು.
=
ಎರಡು ದಿನ ನಂತರ ಇಬ್ಬರು ಸೈನಿಕರು ಕೈಯಲ್ಲಿ ಹೂಗುಚ್ಛ ಹಿಡಿದು ಬಂದು ಇನ್ಸ್‌ಪೆಕ್ಟರ್‌ಗೆ ನೀಡಿ 'ಸಾರ್ ನಿಮ್ಮಿಂದ ನಮಗೆ ತುಂಬಾ ಉಪಕಾರವಾಯಿತು. ಇಂದು ನಿಮಗಾಗಿ ಮಿಲಿಟರಿ ಕ್ಯಾಂಪಸ್‌ನಲ್ಲಿ ಒಂದು ಔತಣಕೂಟ ಏರ್ಪಡಿಸಿದ್ದೇವೆ. ದಯವಿಟ್ಟು ನೀವು ಬರಬೇಕು' ಎಂದು ಬೇಡಿದರು. ಇನ್ಸ್‌ಪೆಕ್ಟರ್‌ಗೆ ಆಶ್ಚರ್ಯ. ಸಮಸ್ಯೆ ಬಗೆ ಹರಿದಿದೆ ಎಂಬ ತೃಪ್ತಿಯಿಂದ ಅಂದು ರಾತ್ರಿ ಮಿಲಿಟರಿ ಕ್ಯಾಂಪಸ್‌ಗೆ ಡಿನ್ನರ್‌ಗೆ ಹೋದರು. ಔತಣ ಕೂಟದಲ್ಲಿ ಸೇನೆಯ ಅಧಿಕಾರಿಗಳೂ ಭಾಗವಹಿಸಿದ್ದರು. ಊಟ ಮಾಡುತ್ತಲೆ ವಠಾರದಲ್ಲಿ ಬಾಡಿಗೆಗೆ ಇದ್ದ ಸೈನಿಕರ ಪೈಕಿ ಒಬ್ಬರು 'ಏನ್ ಮಾಡಿದಿರಿ ಸಾರ್, ಮನೆ ಯಜಮಾನ ಬಂದು ಹೆಂಡತಿಯನ್ನು ಹಿಗ್ಗಾಮುಗ್ಗಾ ಬಾರಿಸಿದ, ನಿನ್ನಿಂದಾಗಿ ನನ್ನ ಗೌರವ ಎಲ್ಲ ಹಾಳಾಯಿತು ಎಂದು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲು ಹೋದ. ನಾವು ಅವರನ್ನು ತಡೆಯಬೇಕಾದರೆ ಸಾಕು ಸಾಕಾಯಿತು' ಎಂದು ವಿವರಿಸಿದರು. ಇನ್ಸ್‌ಪೆಕ್ಟರ್ ಠಾಣೆಯಲ್ಲಿ ನಡೆದ ವಿಚಾರ ಹೇಳಿದರು.
ಸೈನಿಕರೇ ಒಬ್ಬ ಸಾಮಾನ್ಯ ಮಹಿಳೆಗೆ ಹೆದರಿದ್ದರೆ, ಇನ್ನು ಸಾಮಾನ್ಯ ಗಂಡಸರ ಪರಿಸ್ಥಿತಿ ಹೇಳುವುದೇನು!

- ಅಶ್ವತ್ಥನಾರಾಯಣ್ ಎಲ್.
sathyajns@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.