ದೇಶ ಒಂದು ರಾಜಧಾನಿ ಮೂರು

ಮಾವನ ಮನೆಗೋ, ಅತ್ತೆ ಮನೆಗೋ ಹೋಗುತ್ತಾರಲ್ಲ, ಹಾಗೆ ಹೋಗದೇ...
ದೇಶ ಒಂದು ರಾಜಧಾನಿ ಮೂರು
Updated on: 

ಮಾವನ ಮನೆಗೋ, ಅತ್ತೆ ಮನೆಗೋ ಹೋಗುತ್ತಾರಲ್ಲ, ಹಾಗೆ ಹೋಗದೇ, ನಾವು ಹೋಗುವ ದೇಶದ ಬಗ್ಗೆ ಮೊದಲೇ ಒಂದಷ್ಟು ಓದಿಕೊಂಡು, ಕೇಳಿಕೊಂಡು ತಿಳಿದುಕೊಂಡರೆ, ಅಲ್ಲಿನ ನಮ್ಮ ನೋಟ, ಗ್ರಹಿಕೆಗಳಲ್ಲಿ ಸ್ಪಷ್ಟತೆ, ಕುತೂಹಲವಿರುತ್ತದೆ. ಹಾಗಂತ ನಂಬಿದವನು ನಾನು. ಹೀಗಾಗಿ ಪ್ರವಾಸ ಹೊರಡುವ ಮುನ್ನ ದಕ್ಷಿಣ ಆಫ್ರಿಕಾ ಕುರಿತು ಲಭ್ಯವಿರುವ ಪುಸ್ತಕ, ಸಾಹಿತ್ಯಗಳನ್ನು ತಂದು ಹರವಿಕೊಂಡೆ. 'ಲೋನ್ಲಿ ಪ್ಲಾನೆಟ್‌' ಪತ್ರಿಕೆ ಪ್ರಕಟಿಸಿರುವ ಪುಸ್ತಕ ಚೆನ್ನಾಗಿದೆ, ಆಫ್ರಿಕಾದ ಬಗ್ಗೆ ಸಮಗ್ರ ಮಾಹಿತಿಯಿದೆ ಎಂದು ವರ್ಷಕ್ಕೆ ಎರಡು ಸಲ ವೈಲ್ಡ್ ಲೈಫ್ ಫೋಟೊಗ್ರಫಿಗೆಂದು ಆಫ್ರಿಕಾಗೆ ಹೋಗುವ ಸ್ನೇಹಿತ ರಘುರಾಮ್ ರಮೇಶ್ ಹೇಳಿದಾಗ, ಆ ಕೃತಿಯನ್ನೂ ಕೊಂಡು ತಂದೆ.

ಆ ಎಲ್ಲ ಪುಸ್ತಕಗಳಲ್ಲೂ ದಕ್ಷಿಣ ಆಫ್ರಿಕಾದ ಪರಿಚಯದಲ್ಲಿ ಆರಂಭದಲ್ಲಿ 'ಗ್ಟ್ಠಿಟಜ ್ಝಟಿ ್ಟಟಿಜ ಈ್ಟ್ಡಟಿಡ್ಠಿಣ' ಎಂಬ ಬಣ್ಣನೆಯಿತ್ತು. ದಕ್ಷಿಣ ಆಫ್ರಿಕಾ ಅಂದ್ರೆ ಒಂದು ದೇಶದಲ್ಲಿ ನೋಡಬಹುದಾದ ಪ್ರಪಂಚ! ಖ್ಯಾತ ಪ್ರವಾಸ ಲೇಖಕ ರಿಚರ್ಡ್ ಮೂರ್ ಸಹ ಒಂದೆರಡು ವಾಕ್ಯಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಬಣ್ಣಿಸಿದ್ದಾನೆ. 'ನಾನು ಹದಿನೆಂಟು ಬಾರಿ ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದೇನೆ. ಅಷ್ಟು ಸಲ ಹೋದರೂ, ಪ್ರತಿ ಬಾರಿ ಹಿಂದಿರುಗುವಾಗಲೂ ಹೊಸ ಅನುಭವವಾಗಿದೆ. ಒಂದರ್ಥದಲ್ಲಿ ನನಗೆ ಹದಿನೆಂಟು ಬಾರಿ ವಿಶ್ವ ಪರ್ಯಟನೆ ಮಾಡಿದ ಸಮಾಧಾನ ಸಿಕ್ಕಿದೆ. ಅಲ್ಲಿನ ವೈವಿಧ್ಯತೆಯನ್ನು ನಾನು ಕಂಡ ಇನ್ನೊಂದು ದೇಶವೆಂದರೆ ಭಾರತ  ಎಂದು ಮೂರ್ ಹೇಳಿದ್ದಾನೆ.

ದಕ್ಷಿಣ ಆಫ್ರಿಕಾದ ಬಗ್ಗೆ ಓದುವಾಗ ಎಲ್ಲ ಕೃತಿಗಳಲ್ಲೂ ಕಂಡ ಇನ್ನೊಂದು ಸಾಮಾನ್ಯ ವಾಕ್ಯವೆಂದರೆ, 'ಬರುವಾಗ ಅಪರಿಚತರಂತೆ ಬಂದು, ಹೋಗುವಾಗ ಜೀವಮಾನದ ಸ್ನೇಹಿತರಂತೆ ಪರಿವರ್ತನೆಯಾಗುವುದು ದಕ್ಷಿಣ ಆಫ್ರಿಕಾದಲ್ಲಿ ಮಾತ್ರ  ಎಂಬುದು. ಹಾಗೆ ಇನ್ನೊಂದು ಮಾತು 'ದಕ್ಷಿಣ ಆಫ್ರಿಕಾ ತಟ್ಟನೆ ಮೊದಲ ನೋಟದಲ್ಲಿ ಪ್ರೇಮಾಕುರವಾಗುವ ಪ್ರೇಯಸಿಯಲ್ಲ. ಪದೇ ಪದೆ ಹತ್ತಿರವಾಗುತ್ತಾ ಅರ್ಥವಾದೆಂತೆಲ್ಲ ಆಪ್ತವಾಗುವ, ಆಪ್ತತೆಯಲ್ಲಿ ಆಪ್ಯಾಯವಾಗುವ ಜೀವ ಸಂಗಾತಿ. ದಕ್ಷಿಣ ಆಫ್ರಿಕಾ ಸಹ ಜೀವಮಾನವಿಡೀ ನಿಮ್ಮೊಂದಿಗಿರುವ ಮರೆಯಲಾರದ ನೆನಪು.

ಇಷ್ಟೆಲ್ಲ ಒಂದು ದೇಶವನ್ನು ಮಾರ್ಕೆಟ್ ಮಾಡುವಾಗ, ಷೋಕೇಸ್ ಮಾಡುವಾಗ ಬಳಸುವ ಬ್ರೋಷರ್ ಬರಹಗಳಿದ್ದಿರಬಹುದೆಂಬ ಗುಮಾನಿ ಇದ್ದೇ ಇತ್ತು. ಎಲ್ಲ ಇಂಗ್ಲಿಷ್ ಪುಸ್ತಕಗಳ ಹೊದಿಕೆ ಮೇಲಿರುವ 'ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್‌' ಎಂಬ ಘೋಷವಾಕ್ಯದಂತಿರುವ ಪದಪುಂಜಗಳೆಂದು ಅವನ್ನೆಲ್ಲ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಈ ಎಲ್ಲ ಮಾತುಗಳೂ ದಕ್ಷಿಣ ಆಫ್ರಿಕಾದಲ್ಲಿ ಓಡಾಡುವಾಗ ನೆಲಬಳ್ಳಿಯಂತೆ ಹೆಜ್ಜೆಹೆಜ್ಜೆಗೆ ಸುತ್ತಿಕೊಂಡವು.

ದಕ್ಷಿಣ ಆಫ್ರಿಕಾದ ಪ್ಲಸ್ ಪಾಯಿಂಟ್ ಅಂದ್ರೆ ಅಲ್ಲಿನ ಪ್ರಾಕೃತಿಕ ಸಂಪತ್ತು. ವೈವಿಧ್ಯಮಯ ನಿಸರ್ಗ ಸಿರಿ ಹಾಗೂ ಹವಾಮಾನ. ಗುಡ್ಡ, ಬೆಟ್ಟ, ಅರಣ್ಯ, ಹುಲ್ಲುಗಾವಲು, ಕೆರೆ, ಕೊಳ್ಳ, ಝರಿ, ಜಲಪಾತ, ಸರೋವರ, ಅಣೆಕಟ್ಟು, ಹಿನ್ನೀರು, ದ್ವೀಪ, ಸಮುದ್ರ, ಬಿಳಿಮರಳಿನ ಕಡಲಕಿನಾರೆ, ವನ್ಯಧಾಮ, ವನ್ಯಜೀವಿ ಸಂಕುಲ, ಬುಡಕಟ್ಟು ಜನಾಂಗ, ಮಿಥ್ಯ ಆಚರಣೆ, ಸಂಪ್ರದಾಯ, ಶ್ರೀಮಂತ ಸಂಸ್ಕೃತಿ, ಜನಪದ ವೈಭವ, ಆಧುನಿಕತೆಯ ಸ್ಪರ್ಶ, ಜಾಗತಿಕ ಮುನ್ನೋಟ... ತನ್ನ ಗರ್ಭದೊಳಗೆ ಅದು ಎಲ್ಲ ವೈವಿಧ್ಯ, ವೈಶಿಷ್ಟ್ಯ ಹಾಗೂ ವೈಭವಗಳನ್ನು ಅಡಗಿಸಿಟ್ಟುಕೊಂಡಿದೆ.

'ಒಬ್ಬ ಪ್ರವಾಸಿಗ ಬಯಸುವ ಎಲ್ಲ ಅಚ್ಚರಿ, ಸ್ಮರಣೀಯ ಅನುಭವಗಳನ್ನು ದಕ್ಷಿಣ ಆಫ್ರಿಕಾ ಉಣಬಡಿಸುತ್ತದೆ. ಅಲ್ಲಿ ನೀರಸ ಕ್ಷಣ ಎಂಬುದಿಲ್ಲ. ಒಂದು ಏಕಾಂಗಿ ಅನುಭವವೂ ನೆನಪಿನಲ್ಲಿ ಉಳಿಯುವ ದಿವ್ಯತೆ ಪಡೆಯುತ್ತದೆ. ಇಷ್ಟು ವರ್ಷಗಳ ಕಾಲ ಜಾಗತಿಕ ಪ್ರವಾಸಿಗನ ಕಣ್ಣಿನಿಂದ ದೂರವುಳಿದಿದ್ದು ಒಳ್ಳೆಯದೇ ಆಯಿತು  ಅಂತಾನೆ ಮೂರ್.

ಅಂದು ಬೆಳಗಿನ ಜಾವ ಎರಡುಗಂಟೆ ಇಪ್ಪತ್ತು ನಿಮಿಷಕ್ಕೆ ಸೌತ್ ಆಫ್ರಿಕಾ ಏರ್ ಲೈನ್ಸ್ ವಿಮಾನ ಮುಂಬೈ 'ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದಾಗ, ಆ ದೇಶದ ಕುರಿತಾದ ಜಿಛ್ಛಡಿಝಜಜಡಿ ಗಳ ಮೇಲೆ ಸುಮ್ಮನೆ ಕಣ್ಣಾಡಿಸುತ್ತಿದ್ದೆ. ನಮ್ಮ ವಿಮಾನ ಸುಮಾರು ಮೂವತ್ತೈದು ಸಾವಿರ ಅಡಿ ಎತ್ತರದಲ್ಲಿ ಹಿಂದೂ ಮಹಾಸಾಗರದ ಮೇಲೆ ಹಾರುತ್ತಿತ್ತು. ಮುಂಬೈಯಿಂದ ಜೋಹಾನೆಸ್‌ಬರ್ಗ್‌ಗೆ ಒಂಬತ್ತು ತಾಸುಗಳ ಪ್ರಯಾಣ. ನಾವು ಅಲ್ಲಿಗೆ ತಲುಪಿದಾಗ ಭಾರತದಲ್ಲಿ ಬೆಳಗ್ಗೆ ಹನ್ನೊಂದು ಕಾಲು ಗಂಟೆ. ಆದರೆ, ನಮಗಿಂತ ದಕ್ಷಿಣ ಆಫ್ರಿಕಾ ಮೂರುವರೆ ಗಂಟೆ ಹಿಂದಿರುವುದರಿಂದ ಬೆಳಗ್ಗೆ ಏಳು ಮುಕ್ಕಾಲು ಆಗಿತ್ತು. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಎರಡೂವರೆ ಗಂಟೆಗಿಂತ ಹೆಚ್ಚು ಸಮಯ ವ್ಯತ್ಯಾಸವಿದ್ದರೆ ಜೆಟ್‌ಲ್ಯಾಗ್ ಉಂಟಾಗುತ್ತದೆ. ಹೊತ್ತಲ್ಲದ ಹೊತ್ತಲ್ಲಿ, ಕುಳಿತಲ್ಲೆಲ್ಲ ತೂಕಡಿಕೆ, ನಿಂತಲ್ಲೆಲ್ಲ ಆಕಳಿಕೆ ಬರುತ್ತಿರುತ್ತದೆ. ಹಸಿವು, ನಿದ್ದೆ ಸಮತೋಲನಕ್ಕೆ ಬರಲು ಕನಿಷ್ಠ ಮೂವತ್ತಾರು ಗಂಟೆಗಳಾದರೂ ಬೇಕು. ಏಳೇಳು ತಾಸು ಸಮಯ ವ್ಯತ್ಯಾಸಗಳ ದೇಶವಿದ್ದಲ್ಲಿ ಪಯಣಿಸುವಾಗ ಈ ಜೆಟ್ ಲ್ಯಾಗ್ ತೀವ್ರತೆ ಹೆಚ್ಚು. ಇರಲಿ.

ಆಫ್ರಿಕಾ ಖಂಡದ ಭೂಪಟದಲ್ಲಿ ದಕ್ಷಿಣ ಆಫ್ರಿಕಾ ಕುಳಿತಿರುವ ಜಾಗವಿದೆಯಲ್ಲ, ಅದೇ ವಿಶೇಷ. ಆ ಖಂಡದ ದಕ್ಷಿಣಕ್ಕೆ ತುತ್ತತುದಿಯಲ್ಲಿರುವ ಈ ದೇಶ ಸುಮಾರು ಮೂರು ಸಾವಿರ ಕಿ.ಮಿ. ಉದ್ದಕ್ಕೆ, ಮೂರು ದಿಕ್ಕುಗಳಲ್ಲಿ ಸಮುದ್ರ ತೀರವನ್ನು ಹೊಂದಿದೆ. ಪೂರ್ವಕ್ಕೆ ಹಿಂದೂ ಮಹಾಸಾಗರ, ದಕ್ಷಿಣಕ್ಕೆ ಅಟ್ಲಾಂಟಿಕ್ ಮಹಾಸಾಗರ. ಈ ಎರಡೂ ಮಹಾಸಾಗರಗಳು ಸೇರಿ ಒಂದರೊಳಗೊಂದು ಅಂತರ್ಗತವಾಗುವುದು ಸಹ ದಕ್ಷಿಣ ಆಫ್ರಿಕಾಕ್ಕೆ ಸಾಕ್ಷಿಯಾಗಿಯೇ. ಸಾಮಾನ್ಯವಾಗಿ ಯಾವುದೇ ದೇಶದ ಒಂದು ದಿಕ್ಕಿಗೆ ಒಂದು, ಹೆಚ್ಚೆಂದರೆ ಎರಡು ದೇಶಗಳು ಗಡಿಯನ್ನು ಹಂಚಿಕೊಳ್ಳುವುದು ಸಾಮಾನ್ಯ.

ಆದರೆ, ದಕ್ಷಿಣ ಆಫ್ರಿಕಾದ ವಿಷಯದಲ್ಲಿ ಇಲ್ಲೂ ಒಂದು ವಿಶೇಷ. ಅದೇನೆಂದರೆ ಉತ್ತರದಲ್ಲಿ ನಮಿಬಿಯಾ, ಬೋಟ್ಸವಾನ, ಜಿಂಬಾಬ್ವೆ ಹಾಗೂ ಮೊಝಾಂಬಿಕ್. ಹೀಗೆ ನಾಲ್ಕು ದೇಶಗಳು ಗಡಿ ಹಂಚಿಕೊಂಡು ನೆರೆಹೊರೆಯವರಾಗಿದ್ದಾರೆ. ದಕ್ಷಿಣ ಆಫ್ರಿಕಾದ ನಕಾಶೆಯನ್ನು ಗಮನಿಸಿದರೆ ಮತ್ತೊಂದು ಪುಟ್ಟ ಅಚ್ಚರಿ ನೋಡಬಹುದು. ಲೆಸೆಥೋ (ರಾಜಧಾನಿ ಮಸೆರು) ಹಾಗೂ ಸ್ವಾಝಿಲ್ಯಾಂಡ್ (ರಾಜಧಾನಿ ಲಾಬಾಂಬಾ ಹಾಗೂ ಮಬಾನೆ) ಎಂಬ ಎರಡು ದೇಶಗಳು ಕೂಡ ದಕ್ಷಿಣ ಆಫ್ರಿಕಾದೊಳಗೇ ಇವೆ. ಒಂದು ವೇಳೆ ಭಾರತದೊಳಗೆ ಮಹಾರಾಷ್ಟ್ರ ಹಾಗೂ ಬಿಹಾರ ಪ್ರತ್ಯೇಕ 'ದೇಶ'ಗಳೆಂದು ಕರೆದರೆ ಹೇಗಿರುತ್ತದೋ ಹಾಗೆ.  ಒಂದು ದೇಶದೊಳಗೆ ಎರಡೆರಡು ದೇಶಗಳು ಮನೆ ಮಾಡಿರುವುದು ತೀರಾ ಅಪರೂಪ.
ದೇಶಕ್ಕೆ ಒಂದು ರಾಜಧಾನಿಯಿದ್ದರೆ, ದಕ್ಷಿಣ ಆಫ್ರಿಕಾಕ್ಕೆ ಮೂರು ರಾಜಧಾನಿ ಶಾಸಕಾಂಗಕ್ಕೆ ಸಂಬಂಧಿಸಿದಂತೆ ಕೇಪ್‌ಟೌನ್, ಆಡಳಿತಕ್ಕೆ ಪ್ರಿಟೋರಿಯಾ ಹಾಗೂ ನ್ಯಾಯಾಂಗಕ್ಕೆ ಬ್ಲೂಮ್‌ಫೌಂಟೇನ್ ರಾಜಧಾನಿ. ಹಾಗಾದರೆ ಜೋಹಾನೆಸ್‌ಬರ್ಗ್? ಬಹಳ ಜನ ದಕ್ಷಿಣ ಆಫ್ರಿಕಾದ ರಾಜಧಾನಿ ಜೋಹಾನೆಸ್‌ಬರ್ಗ್ ಎಂದೇ ಭಾವಿಸಿದ್ದಾರೆ. ಆದರೆ, ಅದು ರಾಜಧಾನಿ ಅಲ್ಲ. ಆ ದೇಶದ ಅತಿದೊಡ್ಡ ನಗರವಾಗಿದ್ದರೂ ರಾಜಧಾನಿಯಾಗುವ ಭಾಗ್ಯ ಸಿಕ್ಕಿಲ್ಲ.
ಭೂ ವಿಸ್ತೀರ್ಣದ ಲೆಕ್ಕಾಚಾರದ ಪ್ರಕಾರ, ದಕ್ಷಿಣ ಆಫ್ರಿಕಾ ಜಗತ್ತಿನ ಇಪ್ಪತ್ತೈದನೆ ಅತಿ ದೊಡ್ಡ ದೇಶ. ಆದರೆ, ಜನಸಂಖ್ಯೆ ಬರೀ ಐದು ಕೋಟಿ ಮೂವತ್ತು ಲಕ್ಷ. ಅಂದರೆ ನಮ್ಮ ಕರ್ನಾಟಕದ ಜನಸಂಖ್ಯೆಗಿಂತ ಒಂದೂಕಾಲು ಕೋಟಿ ಕಡಿಮೆ. ಭಾರತದಂತೆ ದಕ್ಷಿಣ ಆಫ್ರಿಕಾವೂ ಬಹುಭಾಷಾ ನಾಡು. ಅಲ್ಲಿನ ಸಂವಿಧಾನ ಹನ್ನೊಂದು ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಿದೆ. ಅತಿ ಹೆಚ್ಚು ಜನ ಮಾತಾಡುವುದು ಇಲಝಲು ಭಾಷೆಯಲ್ಲಿ. ಗ್ರಾಮೀಣ ಪ್ರದೇಶಗಳಲ್ಲಿ ಇದೇ ಹೆಚ್ಚು ಜನಪ್ರಿಯ. ಬಹುಸಂಖ್ಯಾತರಿಗೆ ಇಂಗ್ಲಿಷ್ ಅರ್ಥವಾಗುವ ಹಾಗೂ ಎರಡನೆಯ ಭಾಷೆಯೂ ಹೌದು. ಈ ದೇಶದ ಹನ್ನೊಂದು ಭಾಷೆಗಳ ಪೈಕಿ ಎರಡು - ಇಂಗ್ಲಿಷ್ ಹಾಗೂ ಆಫ್ರಿಕಾನ್ಸ್  ಯುರೋಪಿನ ಮೂಲವನ್ನು ಹೊಂದಿದೆ. ಆಫ್ರಿಕಾನ್ಸ್ ಡಚ್ ಭಾಷೆಗೆ ಹತ್ತಿರವಾದ,ಅದರಿಂದ ಹುಟ್ಟಿದ ಭಾಷೆ. ದಕ್ಷಿಣ ಆಫ್ರಿಕಾದಲ್ಲಿರುವ ಬಿಳಿಯರಿಗೆ ಇದು ಪ್ರಿಯವಾದುದು. ಇಂಗ್ಲಿಷ್ ಗೊತ್ತಿದ್ದರೆ ಬದುಕು ಸಲೀಸು.

ದಕ್ಷಿಣ ಆಫ್ರಿಕಾದ ಶೇ.80ರಷ್ಟು ಮಂದಿ ಕರಿಯರು. ಇವರಲ್ಲಿ ಹಲವಾರು ಜಾತಿಗಳಿವೆ. ಇವರು ಒಂಬತ್ತು ಬೇರೆ ಬೇರೆ ರೀತಿಯ ಬಂಟು ಭಾಷೆಯಲ್ಲಿ ಮಾತಾಡುತ್ತಾರೆ. ಅವೆಲ್ಲ ಅಧಿಕೃತ ಭಾಷೆಗಳೆಂದೇ ಮಾನ್ಯತೆ ಪಡೆದಿವೆ. ಶೇ.8ರಷ್ಟು ಬಿಳಿಯರಿರುವ ಈ ದೇಶದಲ್ಲಿ ಬೇರೆ ವರ್ಣದ ಶೇ.9ರಷ್ಟು (್ಛ್ಟಟ್ಟ್ಡ್ಠಜಜ) ಮಂದಿಯಿದ್ದಾರೆ. ಭಾರತೀಯರು ಅಥವಾ ಏಷಿಯನ್‌ರು ಶೇ.3ರಷ್ಟು.

ದಕ್ಷಿಣ ಆಫ್ರಿಕಾದ ಶೇ.80ರಷ್ಟು ಮಂದಿ ಕ್ರಿಶ್ಚಿಯನ್   ಧರ್ಮದಲ್ಲಿ ನಂಬಿಕೆ ಹೊಂದಿದವರು. ಉಳಿದವರು ಹಿಂದುಗಳು, ಮುಸ್ಲಿಮರು, ಯಹೂದಿಗಳು, ಬೌದ್ಧಧರ್ಮದವರು. ಎಲ್ಲ ಕೋಮು, ಧರ್ಮದವರಿಗೂ ಪ್ರಜಾಪ್ರಭುತ್ವ ಆಡಳಿತವಿರುವ ಸಂಸತ್ತಿನಲ್ಲಿ ಪ್ರಾತಿನಿಧ್ಯ ಕಲ್ಪಿಸಲಾಗಿದೆ. ವರ್ಣಭೇದ ನೀತಿ ಆಡಳಿತ ಅಂತ್ಯವಾಗಿ ಪ್ರಜಾಸತ್ತಾತ್ಮಕ, ಗಣರಾಜ್ಯ ವ್ಯವಸ್ಥೆ ಜಾರಿಗೆ ಬಂದ ನಂತರ, ದಕ್ಷಿಣ ಆಫ್ರಿಕಾ ಹೊಂದಿರುವ ವೈವಿಧ್ಯಮಯ ಅಂಶಗಳನ್ನು ಗಮನಿಸಿ 'ಕಾಮನಬಿಲ್ಲಿನ ದೇಶ'  ಎಂದು ಕರೆಯುವುದುಂಟು. ಇಲ್ಲಿ ಎಲ್ಲ ಅಭಿರುಚಿಯವರಿಗೂ ಸ್ವಾದಕ್ಕೆ ಆಸ್ಪದವಿದೆ.

(ಪ್ರದಕ್ಷಿಣೆ ಮುಂದುವರಿಯುವುದು)

- ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com