ಕೊರತೆ ನೀಗುವ ಮಾತ್ರೆಗಳು ಬಂದಿವೆ!

ನಿಮ್ಮಲ್ಲಿ ಉದರ ಸಂಬಂಧಿ ತೊಂದರೆಗಳು ಪದೇಪದೇ ಕಾಣಿಸಿಕೊಳ್ಳುತ್ತಿದ್ದರೆ ಲ್ಯಾಕ್ಟೋಸ್ ಅಲರ್ಜಿ ಇದೆಯೇ ಎನ್ನುವುದನ್ನು ಪತ್ತೆ ಮಾಡಿಕೊಳ್ಳುವುದು ಒಳ್ಳೆಯದು. ಮಾಮೂಲಿ ವಿಧಾನ ಇದ್ದೇ ಇದೆಯಲ್ಲ. ಎರಡು ವಾರ ಕಟ್ಟುನಿಟ್ಟಾಗಿ ಹಾಲು ಮತ್ತು ಡೈರಿ ಉತ್ಪನ್ನಗಳನ್ನು ವರ್ಜಿಸಿ. ಚಹಾ ಮತ್ತು ಕಾಫಿಯಲ್ಲೂ ಹಾಲು ಹಾಕಿಕೊಳ್ಳಬೇಡಿ. ಈ ಅವಧಿಯಲ್ಲಿ ನಿಮಗೆ ಏನಾದರೂ ತೊಂದರೆ ಆಯಿತೇ ಎನ್ನುವುದನ್ನು ಬರೆದಿಟ್ಟುಕೊಳ್ಳಿ. ಸಮಸ್ಯೆ ಕಡಿಮೆ ಆಗಿದ್ದರೂ ದಾಖಲಿಸಿಕೊಳ್ಳಿ. ಆ ನಂತರ ರಿವರ್ಸ್ ವಿಧಾನ ಅನುಸರಿಸಿ. ಸಾಕೆನಿಸುವಷ್ಟು ಹಾಲು ಕುಡಿಯಿರಿ; ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಐಸ್ಕ್ರೀಂ ಇತ್ಯಾದಿಗಳನ್ನು ಧಾರಾಳವಾಗಿ ಸೇವಿಸಿ. ಎರಡೂ ಸಂದರ್ಭಗಳಲ್ಲಿನ ವ್ಯತ್ಯಾಸ ನಿಮಗೇ ಗೊತ್ತಾಗುತ್ತದೆ. ಇನ್ನು ನಿಮ್ಮ ವೈದ್ಯರಿಗೆ ಲ್ಯಾಕ್ಟೋಸ್ ಅಲರ್ಜಿ ಬಗ್ಗೆ ಅನುಮಾನ ಬಂದರೆ ದೃಢಪಡಿಸಿಕೊಳ್ಳಲು ಹೈಡ್ರೊಜನ್ ಬ್ರೀಥಿಂಗ್ ಟೆಸ್ಟ್, ರಕ್ತಪರೀಕ್ಷೆಗೆ ಸಲಹೆ ಮಾಡಬಹುದು. ಬಹಳಷ್ಟು ಜನರಲ್ಲಿ ಇದನ್ನು ಶಾಶ್ವತವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ತಕ್ಕಮಟ್ಟಿಗೆ ನಿಯಂತ್ರಿಸಬಹುದು.
ಈಗ ಬಹುಶಃ ನೀವೇ ಅಂದುಕೊಳ್ಳಬಹುದು, ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆಯನ್ನು ನಿಧಾನವಾಗಿ ಕಡಿಮೆ ಮಾಡುವುದೇ ಲ್ಯಾಕ್ಟೋಸ್ ಅಲರ್ಜಿಗೆ ಇರುವ ಪರಿಹಾರ ಎಂದು. ಅದು ನಿಜ. ಕೆಲವರು ಹಾಲಿಗೆ ಪರ್ಯಾಯವಾಗಿ ಸೋಯಾ ಹಾಲು, ಸೋಯಾ ಚೀಸ್ ಅನ್ನು ಬಳಸುತ್ತಾರೆ. ಲ್ಯಾಕ್ಟೇಸ್ ಕೊರತೆ ಇರುವವರೂ ಯೋಗರ್ಟ್ ತಿಂದರೆ ಅಡ್ಡಿಯಿಲ್ಲ. ಆ ಕುರಿತು ಇನ್ನೊಮ್ಮೆ ವಿವರವಾಗಿ ಹೇಳುತ್ತೇನೆ. 'ಕೆಲವರಲ್ಲಿ ಕ್ಯಾಲ್ಶಿಯಂ ಕೊರತೆ ಇರುತ್ತದೆ. ಅವರಿಗೆ ಹಾಲು ಜಾಸ್ತಿ ಕುಡಿಯಲು ವೈದ್ಯರು ಸಲಹೆ ಮಾಡುತ್ತಾರೆ. ಅಂಥವರು ಏನು ಮಾಡಬೇಕು' ಎಂದು ನೀವು ಪ್ರಶ್ನಿಸಬಹುದು. ಅದಕ್ಕೆ ಪರಿಹಾರ ಎಂದರೆ ಕ್ಯಾಲ್ಶಿಯಂ ಜಾಸ್ತಿ ಇರುವ ತರಕಾರಿ, ಆಹಾರಗಳನ್ನು ಹೆಚ್ಚೆಚ್ಚು ಸೇವಿಸುವುದು. ಬ್ರಕೋಲಿ, ಕ್ಯಾಬೇಜ್, ಬೆಂಡೆಕಾಯಿ, ಸೊಪ್ಪುಗಳು, ಧಾನ್ಯಗಳು, ಸೋಯಾಬೀನ್, ಸೋಯಾ ಹಾಲು, ಬಾದಾಮಿ ಇತ್ಯಾದಿಗಳಲ್ಲೂ ಕ್ಯಾಲ್ಶಿಯಂ ಹೇರಳವಾಗಿರುತ್ತದೆ. ನಮ್ಮ ಕೆಸುವಿನಲ್ಲೂ ಅತ್ಯಧಿಕ ಪ್ರಮಾಣದ ಕ್ಯಾಲ್ಶಿಯಂ ಇರುತ್ತದೆ. ಸೇಬು, ಬ್ಲೂಬೆರ್ರಿ, ಕಿತ್ತಳೆ, ದಾಳಿಂಬೆ, ಪೇರಳೆ, ಹುಣಸೆ, ಖರ್ಜೂರ, ದ್ರಾಕ್ಷಿ ಹಣ್ಣುಗಳೂ ನಮ್ಮ ದೇಹದ ಕ್ಯಾಲ್ಶಿಯಂ ಅಗತ್ಯಗಳನ್ನು ಪೂರೈಸಬಲ್ಲವು. ಹಾಲು ಮತ್ತು ಹಾಲಿನ ಉತ್ಪನ್ನಗಳ ಬಗ್ಗೆ ಅತಿಯಾದ ಮೋಹ ಹೊಂದಿರುವವರು 'ಲ್ಯಾಕ್ಟೇಸ್ ಸಪ್ಲಿಮೆಂಟ್ಸ್'ಗಳನ್ನು ಸೇವಿಸಬಹುದು. ಇವು ಮಾತ್ರೆ ಅಥವಾ ಚ್ಯೂಯಿಂಗ್ಗಮ್ ರೂಪದಲ್ಲಿದ್ದು, ಲ್ಯಾಕ್ಟೇಸ್ ಅನ್ನು ಹೊಂದಿರುತ್ತವೆ. ಅವುಗಳ ಸೇವನೆಯಿಂದ ಲ್ಯಾಕ್ಟೋಸ್ ಜೀರ್ಣವಾಗುವಂತೆ ನೋಡಿಕೊಳ್ಳಬಹುದು. ಆದರೆ, ಅವುಗಳ ಅತಿಯಾದ ಸೇವನೆ ಒಳ್ಳೆಯದಲ್ಲ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


