ಬೈಟುಕಾಫಿ

ಜಗತ್ತಿನ ಸುರಕ್ಷಿತ ಆಹಾರ ಬಾಳೆಹಣ್ಣು

ಜಗತ್ತಿನ ಸುರಕ್ಷಿತ ಆಹಾರ ಬಾಳೆಹಣ್ಣು
Published On :

'ದಿನಕ್ಕೊಂದು ಸೇಬು ತಿಂದು ಡಾಕ್ಟರ್‌ರಿಂದ ದೂರವಿರಿ' ಎನ್ನುವ ಮಾತು ವೈದ್ಯಕೀಯ ಲೋಕದಲ್ಲಿ ಜನಜನಿತವಾದದ್ದು. ಈಗ ಬಾಳೆಹಣ್ಣು ಕೂಡ ಇಂಥ ಹೆಗ್ಗಳಿಕೆಗೆ ಪಾತ್ರವಾಗಿದೆ. ಸೇಬು ಹಣ್ಣಿಗೆ ಹೋಲಿಸಿದರೆ ಅದರಲ್ಲಿ ಇರುವುದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಪ್ರೊಟೀನ್, ಎರಡು ಪಟ್ಟು ಅಧಿಕ ಕಾರ್ಬೊಹೈಡ್ರೇಟ್‌ಗಳು, ಮೂರು ಪಟ್ಟು ಜಾಸ್ತಿ ಪಾಸ್ಫರಸ್, ಐದು ಪಟ್ಟು ಅಧಿಕ ವಿಟಮಿನ್ ಎ ಮತ್ತು ಕಬ್ಬಿಣ ಇರುತ್ತವೆ. ಉಳಿದ ಖನಿಜಾಂಶಗಳು ಮತ್ತು ವಿಟಮಿನ್‌ಗಳು ಕೂಡ ದುಪ್ಪಟ್ಟು ಪ್ರಮಾಣದಲ್ಲಿರುತ್ತವೆ. ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಪೊಟ್ಯಾಷಿಯಂನ ಶ್ರೀಮಂತ ನಿಕ್ಷೇಪ ಎಂದರೆ ಬಾಳೆಹಣ್ಣು.
ಉದರ ಸಂಬಂಧಿ ತೊಂದರೆಗಳಿಂದ ಬಳಲುವವರಿಗೆ ಬಾಳೆಹಣ್ಣಿಗಿಂತ ಉತ್ತಮ ಆಹಾರ ಮತ್ತೊಂದಿಲ್ಲ. ಜೀರ್ಣಾಂಗಕ್ಕೆ ಸಂಬಂಧಪಟ್ಟ ತೊಂದರೆಗಳು ಮಾತ್ರವಲ್ಲ, ಅನೇಕ ಕಾಯಿಲೆಗಳಿಗೆ ಇದು ಉತ್ತಮ ಆಹಾರ. 'ಜಗತ್ತಿನ ಅತ್ಯಂತ ಸುರಕ್ಷಿತ ಆಹಾರ' ಎನ್ನುವ ಕೀರ್ತಿಯನ್ನು ಹೊಂದಿರುವ ಬಾಳೆಹಣ್ಣು ಪೌಷ್ಟಿಕಾಂಶಗಳ ಆಗರ ಕೂಡ. ಇದರಲ್ಲಿರುವಷ್ಟು ಪೌಷ್ಟಿಕಾಂಶಗಳು ಬೇರೆ ಯಾವ ಹಣ್ಣಿನಲ್ಲಿಯೂ ಸಿಗುವುದಿಲ್ಲ ಎಂದು ನಿಸ್ಸಂದೇಹವಾಗಿ ಹೇಳಬಹುದು. ನಾರಿನ ಅಂಶದ ಜೊತೆಯಲ್ಲೇ ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲುಕೋಸ್‌ಗಳ ಸಂಯೋಜನೆ ಹೊಂದಿರುವ ವಿಶಿಷ್ಟ ಹಣ್ಣು ಕೂಡ ಹೌದು.
ಮಲಬದ್ಧತೆ ಆಗಿದೆ ಎಂದಿಟ್ಟುಕೊಳ್ಳಿ. ಬಾಳೆಹಣ್ಣು ತಿಂದು ನೀರು ಕುಡಿಯಿರಿ. 10ರಿಂದ 15 ನಿಮಿಷಗಳ ಒಳಗೆ ಪರಿಣಾಮ ಕಾಣದಿದ್ದರೆ ಹೇಳಿ. ಅತಿಯಾದ ಆಯಾಸ ಆಗಿದೆ. ಒಂದೇಒಂದು ಬಾಳೆಹಣ್ಣು ತಿಂದರೂ ಸಾಕು, ಸುಸ್ತೆಲ್ಲ ಮಾಯ. ಅದರಲ್ಲಿರುವ ಗ್ಲುಕೋಸ್ ಇನಸ್ಟಂಟ್ ಎನರ್ಜಿ ನೀಡುತ್ತದೆ. ಇದರಲ್ಲಿನ ಬಿ6 ವಿಟಮಿನ್ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಸಮಸ್ಥಿತಿಯಲ್ಲಿ ಇರಿಸುತ್ತದೆ. ಗ್ಯಾಸ್ಟ್ರಿಕ್, ಅಲ್ಸರ್‌ನಂಥ ಸಮಸ್ಯೆಗಳಿಗೆ ನಮ್ಮ ಹಿರಿಯರು ಬಳಸುತ್ತಿದ್ದ ಮದ್ದು ಎಂದರೆ ಬಾಳೆಹಣ್ಣು. ಅತಿಸಾರ ನಿಲ್ಲಿಸಲು ಕೂಡ ಬಾಳೆಹಣ್ಣು ತಿನ್ನಿಸುವ ವದ್ಧತಿ ಕೆಲವು ಕಡೆಗಳಲ್ಲಿ ಇದೆಯಂತೆ. ಔಷಧ ರೂಪದಲ್ಲಿ ಬಾಳೆಹಣ್ಣಿನ ಪೌಡರ್ ಕೂಡ ಸಿಗುತ್ತಿದೆ ಎಂದರೆ ಇದಕ್ಕಿರುವ ಮಹತ್ವವನ್ನು ಅರ್ಥ ಮಾಡಿಕೊಳ್ಳಬಹುದು. ಮಾತ್ರೆ ಅಥವಾ ಇತರ ಮನೆಮದ್ದುಗಳಿಗೆ ಹೋಲಿಸಿದರೆ ಉದರ ಶೂಲೆಗಳಲ್ಲಿ ಬಾಳೆಹಣ್ಣು ನಾಲ್ಕು ಪಟ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ದಿನಕ್ಕೆ ಎರಡು ಬಾಳೆಹಣ್ಣು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಒಳ್ಳೆಯದು ಎನ್ನುತ್ತಾರೆ ವೈದ್ಯರು. ಅದರಲ್ಲೂ ಊಟದ ನಡುವೆ ಬಾಳೆಹಣ್ಣು ಸೇವಿಸುವ ಅಭ್ಯಾಸ ಇನ್ನೂ ಉತ್ತಮ. ರಾತ್ರಿ ಮಲಗುವಾಗ ಒಂದು ಬಾಳೆಹಣ್ಣು ತಿಂದರೆ ಜೀರ್ಣಾಂಗದ ಬಹಳಷ್ಟು ತೊಂದರೆಗಳು ಕಡಿಮೆಯಾಗುತ್ತವೆ ಎನ್ನುತ್ತಾರೆ ಆಹಾರ ತಜ್ಞರು. ಆದರೆ ಬಾಳೆಹಣ್ಣು ಎಲ್ಲರಿಗೂ ಆಗಿಬರುತ್ತದೆ ಅಂತಲ್ಲ. ಅಪರೂಪಕ್ಕೆ ಕೆಲವರಲ್ಲಿ ಇದು ಅಲರ್ಜಿ ಉಂಟುಮಾಡಬಲ್ಲದು. ಅಂಥವರು ಬಾಳೆಹಣ್ಣಿನಿಂದ ದೂರ ಇರುವುದು ಒಳ್ಳೆಯದು.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.