ಎದೆ ಉರಿ ಬಂದರೆ ಹೃದ್ರೋಗದ ಸೂಚನೆಯಾ?

ನಾನು ಡಾಕ್ಟರ್ ಹೌದು. ಆದರೆ ವೈದ್ಯನಲ್ಲ. ನನಗೆ ಸಿಕ್ಕಿದ್ದು ಗೌರವ ಡಾಕ್ಟರೇಟ್. ಆದರೆ ನಾನು ಎಲ್ಲೇ ಹೋಗಲಿ, ಜನ ನನ್ನನ್ನು ವೈದ್ಯನಾಗಿ ಕಾಣಲು ಇಷ್ಟಪಡುತ್ತಾರೆ. 'ನಾನು ಆಹಾರೋದ್ಯಮಿ' ಎಂದೇ ಗುರುತಿಸಿಕೊಂಡರೂ, ಆರೋಗ್ಯ ಮತ್ತು ಆಹಾರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಎದುರಿಸುವುದು ಅಭ್ಯಾಸವಾಗಿ ಹೋಗಿದೆ. ನನಗೆ ಇತ್ತೀಚೆಗೆ ಎದುರಾಗುತ್ತಿರುವ ಪ್ರಶ್ನೆಗಳಲ್ಲಿ ಸಾಮಾನ್ಯವಾದದ್ದು ಎದೆ ಉರಿ ಬಗ್ಗೆ. ಅದರಲ್ಲೂ ಯುವಪೀಳಿಗೆ, 20ರಿಂದ 40 ವರ್ಷ ವಯೋವಾನದ ಒಳಗಿನವರು ಈ ಕುರಿತು ತಮ್ಮ ತೊಂದರೆಯನ್ನು ಹೇಳಿಕೊಳ್ಳುತ್ತಾರೆ. ಅಂದರೆ ಈ ವಯೋವಾನದವರಲ್ಲಿಯೇ ಎದೆ ಉರಿಯ ಸಮಸ್ಯೆ ಹೆಚ್ಚು ಅಂತಾಯಿತು. 'ಹಾರ್ಟ್ ಅಟ್ಯಾಕ್ ಆಗುವಾಗಲೂ ಎದೆ ಉರಿ ಆಗುತ್ತದೆ ಎನ್ನುತ್ತಾರೆ. ಎದೆ ಉರಿ ಹೃದ್ರೋಗದ ಸೂಚನೆಯಾ' ಎಂದು ಆತಂಕದಿಂದ ಕೇಳುವವರೂ ಇದ್ದಾರೆ. ಹಾಗೆ ನೋಡಿದರೆ ಎದೆ ಉರಿಗೂ (ಹಾರ್ಟ್ಬರ್ನ್), ಹೃದಯಕ್ಕೂ (ಹಾರ್ಟ್) ಯಾವುದೇ ಸಂಬಂಧ ಇಲ್ಲ. ಉರಿಯ ಅನುಭವ ಎದೆಯ ಭಾಗದಲ್ಲಿ (ಕಿಬ್ಬೊಟ್ಟೆಗಿಂತ ಸ್ವಲ್ಪ ಮೇಲ್ಭಾಗದಲ್ಲಿ, ಸ್ತನ ಮೂಳೆಗಳ ಬಳಿ) ಶುರುವಾಗಿ, ನಿಧಾನವಾಗಿ ಕತ್ತಿನವರೆಗೆ ತಲುಪಿ, ಅಲ್ಲಿಂದ ಗಂಟಲಿಗೆ ವ್ಯಾಪಿಸಿ, ದವಡೆಗಳವರೆಗೂ ಕ್ರಮಿಸುತ್ತದೆ. ಅದರ ಹಿಂದೆಯೇ ತೇಗು ಬರುವುದೂ ಸಾಮಾನ್ಯ. ಈ ಉರಿ ಹೇಗಿರುತ್ತದೆ ಎಂದರೆ ಅಲೆಗಳ ರೂಪದಲ್ಲಿ ಇರುತ್ತದೆ. ಒಂದರ ಹಿಂದೆ ಒಂದರಂತೆ ಬರುತ್ತಲೇ ಇರುತ್ತದೆ.
ಬಹುಶಃ ಎದೆ ಭಾಗದಲ್ಲಿ ಉರಿ ಶುರುವಾಗುವುದರಿಂದ ಇದನ್ನು ಎದೆ ಉರಿ ಅಥವಾ ಹಾರ್ಟ್ಬರ್ನ್ ಎಂದು ಕರೆಯುವುದು ರೂಢಿಯಾಗಿರಬೇಕು. ವೈದ್ಯಕೀಯ ಪರಿಭಾಷೆಯಲ್ಲಿ ಇದಕ್ಕೆ ಬೇರೆಯದೇ ಹೆಸರು ಇದೆ. ಆಮ್ಲ ಅಜೀರ್ಣ, ಜಠರ ವ್ಯಾಧಿ, ಪೈರೋಸಿಸ್, ಕಾರ್ಡಿಯಾಲ್ಜಿಯಾ ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತಾರೆ. ಜನರಿಗೆ ಇಂಥ ಪಾರಿಭಾಷಿಕ ಶಬ್ದಗಳು ಹೇಗೆ ಅರ್ಥವಾಗಲು ಸಾಧ್ಯ? ಆದ್ದರಿಂದ ಸರಳವಾಗಿ ಎದೆ ಉರಿ ಎನ್ನುವುದನ್ನೇ ವೈದ್ಯರೂ ಬಳಸಲು ಆರಂಭಿಸಿರಬೇಕು. ಏನೇ ಇರಲಿ. ರಕ್ತ ಕೊರತೆಯಿಂದ ಉಂಟಾಗುವ ಹೃದ್ರೋಗಗಳಲ್ಲೂ ಎದೆ ಉರಿ ಕಾಣಿಸಿಕೊಳ್ಳುವುದುಂಟು. ಆದರೆ ಉರಿ ಈ ರೀತಿ ಅಲೆಗಳ ಸ್ವರೂಪದಲ್ಲಿ ಇರುವುದಿಲ್ಲ.
ಕೆಲವರು ಅಗ್ನಿಮಾಂದ್ಯವನ್ನೇ ಎದೆ ಉರಿ ಎಂದು ತಪ್ಪಾಗಿ ವ್ಯಾಖ್ಯಾನಿಸುತ್ತಾರೆ. ಎದೆ ಉರಿ ಅಪ್ಪಟವಾಗಿ ಜಠರ ವ್ಯಾಧಿಯೇ. ಆ್ಯಸಿಡ್ ಅಥವಾ ಆಮ್ಲ ಹಿನ್ಸರಿತವೇ ಇದಕ್ಕೆ ಮೂಲ ಕಾರಣ. ಅಪರೂಪಕ್ಕೆ ಒಮ್ಮೆ ಎದೆ ಉರಿ ಕಾಣಿಸಿಕೊಂಡರೆ ತೊಂದರೆ ಏನೂ ಇಲ್ಲ. ಆದರೆ ಪದೇಪದೇ ಕಾಣಿಸಿಕೊಂಡರೆ, ನಿಮ್ಮ ದೈನಂದಿನ ವ್ಯವಹಾರಗಳಿಗೆ ಅಡ್ಡಿ ಉಂಟುಮಾಡುತ್ತಿದ್ದರೆ, ಸಿಕ್ಕಾಪಟ್ಟೆ ಕಿರಿಕಿರಿ ಆಗುತ್ತಿದ್ದರೆ ಆಗ ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಮತ್ತು ವೈದ್ಯರನ್ನು ಸಂಪರ್ಕಿಸಲೇಬೇಕು.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
- ಮೊ. 9900113699 (ಎಸ್ಎಂಎಸ್ ಗೆ ಮಾತ್ರ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


