ಅಪರಿಚಿತ ಊರಿನಲ್ಲಿ ಗೈಡ್ ಎಂಬ ಆಪ್ತ ಸಖ

ಕೇಪ್ಟೌನ್ ಬಹುಬೇಗ ಆಪ್ತವಾಯಿತು. ಐದು ದಿನಗಳಲ್ಲಿ ನೋಡಬೇಕಾದ ಎಲ್ಲ ತಾಣಗಳನ್ನು ನೋಡಿದ್ದೆವು. ಅಲ್ಲಿನ ಬೀದಿಗಳು ಅಂಗೈ ಮೇಲಿನ ಗೆರೆಗಳಷ್ಟು ಪರಿಚಿತವಾಗಿದ್ದವು. ನಾವು ಉಳಿದುಕೊಂಡಿದ್ದ `ಗ್ರ್ಯಾಂಡ್ ಡ್ಯಾಡಿ ಹೋಟೆಲ್' ಒಂಥರಾ ಮಾವನ ಮನೆಯ ಸುಖ, ಆತಿಥ್ಯ, ಆಪ್ತತೆಯನ್ನು ಕೊಟ್ಟಿತ್ತು. ಆ ಹೋಟೆಲ್ನ ನೂರಾ ನಲವತ್ತು ವರ್ಷಗಳ ಲಿಫ್ಟ್, ಬಾಲ್ಯದ ಹಳೆಯ ಕಾಲದ ಫನರ್ಿಚರ್ನಂತೆ ತೋರುತ್ತಿತ್ತು. ಅಲ್ಲಿನ ಉಪಾಹಾರ ಬೇಸರ ತರಿಸದಿದ್ದರೂ, ಮರುದಿನ ಯಾವ ಯಾವ ಐಟೆಮ್ಗಳು ಟೇಬಲ್ ಮೇಲೆ ಇರುತ್ತದೆ ಎಂಬುದನ್ನು ಊಹಿಸುವಷ್ಟು ನಾವು ಆ ಹೋಟೆಲ್ಗೆ ಹೊಂದಿಕೊಂಡಿದ್ದೆವು. ನಗರದ ಮಧ್ಯಭಾಗ, ವಾಣಿಜ್ಯಮಳಿಗೆ, ಮಾಲ್ಗಳಿಂದ ಒಳರಸ್ತೆಯಲ್ಲಿ (ಶಾಟರ್್ ಕಟ್) ಹೋಟೆಲ್ಗೆ ಬರುವಷ್ಟು ಸ್ವತಂತ್ರರೂ, ಸ್ವಾವಲಂಬಿಗಳೂ, ಪರಿಜ್ಞಾನವುಳ್ಳವರೂ ಆಗಿದ್ದೆವು. ಇನ್ನೆರಡು ದಿನ ಅಲ್ಲಿ ಉಳಿದಿದ್ದರೆ ಅಕ್ಕಪಕ್ಕದವರು, ದಾರಿಹೋಕರು, ನಮ್ಮನ್ನು ಕಂಡು ಹಲ್ಕಿರಿಯು ತ್ತಿದ್ದರೇನೋ? ಅಷ್ಟರಮಟ್ಟಿಗೆ ಕೇಪ್ಟೌನ್ನ ಪ್ರಮುಖ ರಸ್ತೆ ಲಾಂಗ್ಸ್ಟ್ರೀಟ್ಗೆ ಪರಿಚಿತರಾಗಿದ್ದೆವು. ನಾವು ಸ್ಥಳೀಯರೆಂದು ಭಾವಿಸಿ ಯಾರಾದರೂ ನಮ್ಮ ಬಳಿ ಬಂದು ದಾರಿ ಕೇಳಿದರೆ, ತೋರಿಸುವಷ್ಟು ಲಾಂಗ್ಸ್ಟ್ರೀಟ್ ನಮ್ಮ ಮುಂದೆ ತೆರೆದುಕೊಂಡಿತ್ತು.
ಕೇಪ್ಟೌನ್ ನನಗೆ ಹೆಚ್ಚು ಪರಿಚಿತವಾಗಲು, ಅರ್ಥವಾಗಲು, ಆಪ್ತವಾಗಲು ಹಾಗೂ ಅದರ ಬಗ್ಗೆ ಹೆಚ್ಚು ತಿಳಿಯುವಂತೆ ಆಸಕ್ತಿ ಕೆರಳಿಸಲು ಕಾರಣ ನಮ್ಮ ಟೂರ್ ಗೈಡ್ ಅಬ್ದುಲ್ ಕ್ಲಕರ್್. ಈತ ನಮ್ಮ ವಾಹನದ ಡ್ರೈವರ್ ಸಹ. ಈ ಕೆಲಸಕ್ಕೆ ಹೇಳಿ ಮಾಡಿಸಿದ ವ್ಯಕ್ತಿ. ಕಳೆದ ಇಪ್ಪತ್ತೆಂಟು ವರ್ಷಗಳಿಂದ ಈ ವೃತ್ತಿಯಲ್ಲಿದ್ದಾನೆ. ದೇಶ ವಿದೇಶಗಳಿಂದ ಪ್ರತಿನಿತ್ಯ ಕೇಪ್ಟೌನ್ಗೆ ಆಗಮಿಸುವ ಅದೆಷ್ಟು ಪ್ರವಾಸಿಗರನ್ನು ತನ್ನ ಸವರ್ೀಸ್ನಲ್ಲಿ ಕಂಡಿದ್ದಾನೋ ಏನೋ? ಇಂಥ ಆಸಾಮಿಗೆ ಜನರನ್ನು ನಿಭಾಯಿಸುವ ಕಲೆಯನ್ನು ಯಾರೂ ಹೇಳಿಕೊಡಬೇಕಿಲ್ಲ. ಅವನ ವೃತ್ತಿ ಅವನಿಗೆ ಜೀವನಪಾಠವನ್ನು ಹೇಳಿಕೊಟ್ಟಿದೆ. ಆ ವೃತ್ತಿಗೆ ಅಗ್ದಿ ಹೇಳಿ ಮಾಡಿಸಿದ ವ್ಯಕ್ತಿ.
ಅಬ್ದುಲ್ ನನಗೆ ಬಹಳ ಬೇಗ ಹತ್ತಿರನಾದ. ಅದಕ್ಕೆ ಕಾರಣ ಆತ ಹೆಜ್ಜೆ ಹೆಜ್ಜೆಗೆ ಕೊಡುತ್ತಿದ್ದ ಮಾಹಿತಿ, ಹೇಳುವ ಕ್ರಮ, ಧಾಟಿ, ಭಾಷೆ, ಹಾಗೂ ತನ್ನ ಟೀಮನ್ನು ನಡೆಸಿಕೊಳ್ಳುವ ರೀತಿ. ಈ ವಿಷಯದಲ್ಲಿ ಅಬ್ದುಲ್ ಪಂಟರ್. ನಾನು ನಲವತ್ತೇಳು ದೇಶಗಳನ್ನು ಸುತ್ತಿದ್ದರೂ, ಹತ್ತಕ್ಕೂ ಹೆಚ್ಚು ದೇಶಗಳಿಗೆ ಐದಕ್ಕಿಂತ ಹೆಚ್ಚು ಸಲ ಹೋದರೂ, ಅಬ್ದುಲ್ನಂಥ ಗೈಡ್ನನ್ನು ನೋಡಿಲ್ಲ ಅಂತ ಹೇಳಿದರೆ ಅತಿಶಯೋಕ್ತಿಯಲ್ಲ.
ಹೊರದೇಶವೊಂದೇ ಅಲ್ಲ, ಬಾದಾಮಿ, ಐಹೊಳೆ, ಹಂಪಿ, ಶ್ರವಣ ಬೆಳಗೊಳ, ಬೇಲೂರು, ಜೋಗ ಜಲಪಾತ, ಮುರುಡೇಶ್ವರಕ್ಕೆ ಹೋದಾ ಗಲೂ ನಾನು ಗೈಡ್ ಇಲ್ಲದೇ ಸುತ್ತಾಡುವುದಿಲ್ಲ. ಹಂಪಿಯಂಥ ಊರಿಗೆ ಹೋದಾಗ ಗೈಡ್ಗಳು ಹತ್ತಿರ ಬಂದು ನಿಮ್ಮ ಜತೆ ಬರಲಾ ಎಂದು ಕೇಳಿದಾಗ, ಅವರಿಗೆ ನೂರೋ, ಇನ್ನೂರೋ ರೂಪಾಯಿ ಕೊಡಬೇಕಾ ಗುತ್ತದೆಂದು ಅನೇಕರು ಅವರ ಸಹಾಯ ಪಡೆಯದೇ, ತಮ್ಮ ಪಾಡಿಗೆ ತಾವು ಸುತ್ತಾಡಿಕೊಂಡು ಬರುತ್ತಾರೆ. ತಾವು ವೀಕ್ಷಿಸುವಾಗ ಪಕ್ಕದಲ್ಲಿನ ಪ್ರವಾಸಿ ತಂಡಕ್ಕೆ ಗೈಡ್ ವಿವರಿಸುತ್ತಿದ್ದರೆ ಕದ್ದು ಕೇಳುತ್ತಾರೆ ಇಲ್ಲವೇ ಹಿಂದೆ ಹಿಂದೆ ಹೋಗಿ ಅಷ್ಟು ಹಣ ಉಳಿಸಿದೆ ಎಂದು ಒಂಥರಾ ವಿಕೃತ ಸಂತಸಪಡುತ್ತಾರೆ. ಅಂಥವರಿಗೆ ತಮ್ಮ ಇಡೀ ಪ್ರವಾಸವೇ ವ್ಯರ್ಥ ಎಂಬುದು ಗೊತ್ತಾಗುವುದಿಲ್ಲ. ಸಾವಿರಾರು ರೂಪಾಯಿ ಖಚರ್ು ಮಾಡಿ ಕೊಂಡು ಹಂಪಿಗೆ ಹೋಗಿ, ಗೈಡ್ ಸಂಭಾವನೆ ಉಳಿಸಿ ವಾಪಸ್ ಬಂದರೆ ಹಾನಿ ಯಾರಿಗೆ ಎಂಬುದನ್ನೂ ಯೋಚಿಸುವುದಿಲ್ಲ. ಹಂಪಿ, ಬಾದಾಮಿ, ಬೇಲೂರಿನಂಥ ತಾಣಗಳನ್ನು ಬಿಡಿ, ಯಾವುದೇ ಪ್ರವಾಸಿ ಸ್ಥಳವನ್ನೇ ಆಗಲಿ ಗೈಡ್ ಇಲ್ಲದೇ ನೋಡಿದರೆ, ಆಕಾಶದಲ್ಲಿ ನಕ್ಷತ್ರಗಳನ್ನು ನೋಡಿದಂತೆ. ನಿಮಗೆ ಆಕಾಶ ಸುಂದರವಾಗಿ ಕಾಣಬಹುದು, ಅದರಿಂದ ನೀವು ಪುಳಕಗೊಳ್ಳಬಹುದು, ಆದರೆ, ನಿಮಗೆ ಅದು ಅರ್ಥವೇ ಆಗುವುದಿಲ್ಲ. ಪಠ್ಯಪುಸ್ತಕಗಳಿದ್ದರೂ ನಮಗೆ ತಿಳಿಸಿ ಅರ್ಥವಾಗುವಂತೆ ಹೇಳಲು ಮೇಷ್ಟ್ರು ಇರುವಂತೆ, ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಪುಸ್ತಕಗಳಿದ್ದರೂ, ಕೈಹಿಡಿದು ಕರೆದುಕೊಂಡು ಹೋಗಿ, ಸುತ್ತಾಡಿಸಿ, ಸ್ಥಳ ಮಹಾತ್ಮೆಯನ್ನು ಹೇಳಲು ಒಬ್ಬ ಗೈಡ್ ಬೇಕೇ ಬೇಕು. ಗೈಡ್ಗೆ ಕೊಡುವ ಹಣ ವ್ಯರ್ಥ ಅಲ್ಲ. ಗೈಡ್ ನೆರವಿಲ್ಲದಿದ್ದರೆ ಪ್ರವಾಸವೇ ವ್ಯರ್ಥ. ಅಪರಿಚಿತರಾಗಿ ಅಪರಿಚಿತ ಸ್ಥಳವನ್ನು ಎಂಜಾಯ್ ಮಾಡುವವರು ಹನಿಮೂನ್ಗೆ ಹೋಗುವ ನವದಂಪತಿಗಳು ಮಾತ್ರ. ಅವರ ಜತೆ ಗೈಡ್ ಇದ್ದರೆ ಠಿಡಿತಚಿಛಿಥಿಗೆ ಧಕ್ಕೆಯಾಗಬಹುದಷ್ಟೆ.
ನಾಲ್ಕು ವರ್ಷಗಳ ಹಿಂದೆ ನಾನು ಬಾಸರ್ಿಲೋನಾಕ್ಕೆ ಹೋಗಿದ್ದೆ. ಅಲ್ಲೊಂದು ವಿಶಿಷ್ಟ ಗೈಡ್ ಸೇವೆಯಿತ್ತು. ಕಾಲ್ನಡಿಗೆಯಲ್ಲಿ ಹತ್ತೆಂಟು ಕಿ.ಮೀ. ನಡೆಸಿ, ನಾಲ್ಕೈದು ತಾಸು ಸುತ್ತಾಡಿಸಿ, ಇಡೀ ನಗರವನ್ನು ಪರಿಚಯಿಸುವ ಗೈಡ್ಗಳು ಸಿಗುತ್ತಾರೆ, ಬಹಳ ಚೆನ್ನಾಗಿರುತ್ತದೆಂದು ಹೋಟೆಲ್ ಮ್ಯಾನೇಜರ್ ಹೇಳಿದ. ಬೆಳಗ್ಗೆ ಐದು ಗಂಟೆಗೆ ಎದ್ದು ಆ ಗೈಡ್ ಜತೆಗೆ ಹೆಜ್ಜೆ ಹಾಕಲಾರಂಭಿಸಿದೆ. ಏನಿಲ್ಲವೆಂದರೂ ಸುಮಾರು ಏಳೆಂಟು ಕಿ.ಮೀ. ನಡೆದಿರಬಹುದು. ಬಾಸರ್ಿಲೋನಾ ನಗರದ ಪ್ರಮುಖ ಬೀದಿ, ಒಳರಸ್ತೆ, ವತರ್ುಲ, ಕಟ್ಟಡಗಳನ್ನೆಲ್ಲ ತೋರಿಸಿದ. ಪ್ರತಿ ಕಟ್ಟಡ, ಪ್ರತಿಮೆ, ಸರ್ಕಲ್, ಗೋಪುರ, ಉದ್ಯಾನವನ, ಕಾರಂಜಿಗಳ ಹಿಂದಿನ ಕತೆ, ಉಪಕತೆ, ದಂತಕತೆಯನ್ನೆಲ್ಲ ವಿವರಿಸಿದ. ನಿಜಕ್ಕೂ ಅದು ರನ್ನಿಂಗ್ ಕಾಮೆಂಟರಿ. ಆ ಗೈಡ್ ಬೇರೆ ಒಳ್ಳೆಯ ಫೋಟೊಗ್ರಾಫರ್. ಪ್ರತಿ ಕಟ್ಟಡದ ಮುಂದೆ ನಿಲ್ಲಿಸಿ ಫೋಟೊ ತೆಗೆಯುತ್ತಿದ್ದ. ನನ್ನ ನಡಿಗೆ ನಿಧಾನವಾದಾಗ ಅವನೇ ನನ್ನ ಮಣಭಾರದ ಕ್ಯಾಮೆರಾ ಬ್ಯಾಗನ್ನು ಹೊತ್ತುಕೊಂಡ. ಗಂಟೆ ಗಂಟೆಗೆ ಒಳ್ಳೆಯ ಕಾಫಿ ಕೆಫೆಗೆ ಕರೆದುಕೊಂಡು ಹೋಗಿ ಕಾಫಿ ಕುಡಿಸುತ್ತಿದ್ದ. ಅವನೇ ಹಣ ಕೊಡುತ್ತಿದ್ದ. ಅವನ ಜತೆ ಎರಡು ಕಿ.ಮೀ. ನಡೆಯುವಷ್ಟರಲ್ಲಿ ತನ್ನ ಕತೆಯನ್ನೆಲ್ಲ ಹೇಳಿ ಮುಗಿಸಿದ್ದ. ಸ್ಪೇನ್ ದೇಶದ ಇತಿಹಾಸ, ರಾಜಕೀಯ, ಸಂಸ್ಕೃತಿ, ಆಚರಣೆ, ಸಿನಿಮಾ... ಹೀಗೆ ಎಲ್ಲ ಸಂಗತಿಗಳ ಬಗ್ಗೆ ಕೂಡ ವಿವರಿಸಿದ್ದ.
ಇಂದಿಗೂ ಬಾಸರ್ಿಲೋನಾ ಅಂದ್ರೆ ಸಾಕು ಆ ಬೆಳಗ್ಗೆ ಸುತ್ತಿದ್ದ ಬೀದಿ ಬೀದಿಗಳೆಲ್ಲ ಕಣ್ಮುಂದೆ ಬರುತ್ತವೆ. ಮಧ್ಯಾಹ್ನ ಹನ್ನೊಂದುವರೆ ಹೊತ್ತಿಗೆ ಹೋಟೆಲ್ಗೆ ಮರಳುವಷ್ಟರಲ್ಲಿ ನನಗೆ ಆ ಊರಿನಲ್ಲಿ ಒಬ್ಬ ಕೊರಳ ಗೆಳೆಯನಷ್ಟು ಪರಿಚಿತನಾಗಿದ್ದ. ನಾನು ಅವನಿಗೊಂದಷ್ಟು ಹಣ ಕೊಟ್ಟೆ. ಅದನ್ನು ಎಣಿಸಿದ ಬಳಿಕ, ನನ್ನ ಕೆಲಸಕ್ಕೆ ನೀವು ನೀಡಿದ್ದು ಜಾಸ್ತಿಯಾಯಿತು ಎಂದು ಇಪ್ಪತ್ತೈದು ಡಾಲರ್ ವಾಪಸ್ ಕೊಟ್ಟ. ಅವನ ನಡವಳಿಕೆಗೆ ಮಾರು ಹೋಗಿ ಆ ಹಣವನ್ನು ಪಡೆಯಲು ಮನಸ್ಸಾಗಲಿಲ್ಲ. ಆದರೆ, ಆತ ಹೆಚ್ಚಿನದನ್ನು ನನ್ನ ಕಿಸೆಯಲ್ಲಿ ತುರುಕಿ ಹೋದ. ಎರಡು-ಮೂರು ತಿಂಗಳಿ ಗೊಮ್ಮೆ ಈಗಲೂ ನಾವು ಇಮೇಲ್ ವಿನಿಮಯ ಮಾಡಿಕೊಳ್ಳುತ್ತೇವೆ.
ಅಬ್ದುಲ್ ಬಹಳ ಕರಾರುವಾಕ್ಕು, ಸಮಯಪ್ರಜ್ಞೆಯುಳ್ಳ, ಶಿಸ್ತಿನ ಮನುಷ್ಯ ಎಂಬುದು ಮೊದಲ ದಿನವೇ ಮನವರಿಕೆಯಾಯಿತು. ಆಯಾ ದಿನದ ಕಾರ್ಯಕ್ರಮವನ್ನೆಲ್ಲ ಮೊದಲೇ ನೀಟಾಗಿ ಒಪ್ಪಿಸುತ್ತಿದ್ದ. ಒಂದು ತಾಣ ಮುಗಿಸಿದ ಬಳಿಕ ಮುಂದಿನದರ ಬಗ್ಗೆ ವಿವರ ನೀಡುತ್ತಿದ್ದ. ಆತನ ರನ್ನಿಂಗ್ ಕಾಮೆಂಟರಿಗೆ ಬ್ರೇಕ್ ಇರಲಿಲ್ಲ. ಹಾಗೆಂದು ತಲೆಚಿಟ್ಟು ಹಿಡಿಸುವಷ್ಟು ಮಾತಾಡುತ್ತಿರಲಿಲ್ಲ. ಸುದೀರ್ಘ ವಿವರ ಕೊಟ್ಟು ಹಿಂಡುತ್ತಿರಲಿಲ್ಲ. ಪ್ರತಿ ವಿಷಯವನ್ನು ಸ್ವಾರಸ್ಯವಾಗಿ ಹೇಳುವ ಕಲೆ ಅಬ್ದುಲ್ಗೆ ಕರಗತವಾಗಿತ್ತು. ಅವನಿಗೆ ಮನವೊಲಿಸುವ ದನಿಯಿತ್ತು. ಸುಂದರವಾದ ಇಂಗ್ಲಿಷ್ ಒಲಿದಿತ್ತು. ಅದನ್ನು ರಾಗಬದ್ಧವಾಗಿ ಹೇಳುತ್ತಿದ್ದ. ಅದಕ್ಕಿಂತ ಹೆಚ್ಚಾಗಿ ತನ್ನ ತಂಡ ಹೇಗಿದೆ, ಅವರ ಮಟ್ಟವೇನು, ಅವರಿಗೆ ಎಷ್ಟು ಹೇಳಬೇಕು ಎಂಬುದು ಅಬ್ದುಲ್ಗೆ ಚೆನ್ನಾಗಿ ಗೊತ್ತಿತ್ತು. ನಾವಾಗಿಯೇ ಪ್ರಶ್ನೆ ಕೇಳಿದರೆ ವಿವರಗಳನ್ನು ನೀಡುತ್ತಿದ್ದ.
ನನಗೆ ಆತ ಆಪ್ತವಾಗುತ್ತಿದ್ದುದು ಆತನ ಸಮಯಾವಧಾನಕ್ಕೆ. ಸಮುದ್ರದಲ್ಲಿನ ನೀರ್ ಪ್ರಾಣಿಗಳನ್ನು ಕಂಡ ಕೂಡಲೇ ಅವುಗಳ ಪ್ರಭೇದದಿಂದ ಶುರು ಹಚ್ಚಿಕೊಂಡು ಅವುಗಳ ಅವನತಿಯ ಅಪಾಯ ದವರೆಗೆ ವಿವರ ಒಪ್ಪಿಸುತ್ತಿದ್ದ. ಕೇಪ್ ಆಫ್ ಗುಡ್ ಹೋಪ್ನಲ್ಲಿ ವಾಸ್ಕೋಡಗಾಮನಿಗಾದ ವಿಲಕ್ಷಣ ಅನುಭವಗಳನ್ನು ಹೇಳುವಾಗ ನನಗೆ ನೋಟ್ ಮಾಡಿಕೊಳ್ಳಲು ಆಗಲಿಲ್ಲ. `ಈ ವಿವರಗಳೆಲ್ಲ ಯಾವ ಪುಸ್ತಕದಲ್ಲಿ ಸಿಗಬಹುದು?' ಎಂದು ಕೇಳಿದೆ. `ನಾಳೆ ಸಾಧ್ಯವಾದರೆ ನಿಮ್ಮನ್ನು ಪುಸ್ತಕದಂಗಡಿಗೆ ಕರೆದುಕೊಂಡು ಹೋಗುತ್ತೇನೆ' ಎಂದು ಹೇಳಿದ. ಮರುದಿನ ಪುಸ್ತಕದಂಗಡಿಗೆ ಕರೆದುಕೊಂಡು ಹೋಗಿ ಆ ಪುಸ್ತಕವನ್ನು ಕೊಡಿಸಿದ. ಇತಿಹಾಸದ ಬಗ್ಗೆ ಅವನ ತಿಳಿವಳಿಕೆ ಕಂಠಪಾಠಕ್ಕೆ ಸೀಮಿತವಾಗಿಲ್ಲ ಎಂಬುದು ಹಲವು ಸಲ ಮನವರಿಕೆಯಾಯಿತು.
ಅಬ್ದುಲ್ಗೆ ನವಿರಾದ ಹಾಸ್ಯಪ್ರಜ್ಞೆಯಿತ್ತು. ನಾವು ವಾಹನದಲ್ಲಿ ಹೋಗುವಾಗ ಎದುರಿಗಿರುವ ಕಟ್ಟಡದ ಕಡೆ ನೋಡುತ್ತಾ, `ಅದೋ ಅಮೆರಿಕನ್ ರಾಯಭಾರ ಕಚೇರಿ' ಎಂದು ಹೇಳಿದ. ಅತ್ತ ನೋಡಿದರೆ ಮ್ಯಾಕ್ಡೊನಾಲ್ಡ್ ಬರ್ಗರ್ ಶಾಪ್!
ಮೊದಲ ದಿನ ತನ್ನನ್ನು ಪರಿಚಯಿಸಿಕೊಳ್ಳುವಾಗ `ಮುಂದಿನ ಐದು ದಿನ ನಾನೇ ನಿಮ್ಮ ಟೀಮ್ನ ಲೀಡರ್, ನನ್ನ ಮಾತೇ ಅಂತಿಮ' ಎಂದು ಖಡಕ್ಕಾಗಿ ಹೇಳಿದ್ದ ಅಬ್ದುಲ್. ಆದರೆ, ಶಿಸ್ತು, ಸಮಯಪಾಲನೆಗಷ್ಟೇ ಈ ಮಾತು ಸೀಮಿತವಾಗಿತ್ತು. ನಾವೆಲ್ಲ ಒಂದೇ ಡೈನಿಂಗ್ ಟೇಬಲ್ನಲ್ಲಿ ಕುಳಿತಿದ್ದರೆ ಆತ ಪಕ್ಕದ ಬೇರೆಯ ಟೇಬಲ್ಗೆ ಹೋಗಿ ಕುಳಿತುಕೊಳ್ಳುತ್ತಿದ್ದ. ಆತನ ಡ್ರೈವರ್ ಪ್ರಜ್ಞೆ ಜಾಗೃತವಾಗುತ್ತಿತ್ತೇನೋ? ಮೂನರ್ಾಲ್ಕು ಸಂದರ್ಭಗಳಲ್ಲಿ ನಾನೇ ಹತ್ತಿರ ಹೋಗಿ ಕರೆದರೂ ಕೋರಿಕೆಯನ್ನು ನಯವಾಗಿ ತಿರಸ್ಕರಿಸುತ್ತಿದ್ದ.
ಒಮ್ಮೆ ಆತನೊಂದಿಗೆ ಮಾತಾಡುವಾಗ, `ಅಬ್ದುಲ್, ಇಷ್ಟೆಲ್ಲ ವಿಷಯಗಳನ್ನು ಹೇಗೆ ತಿಳಿದುಕೊಂಡಿದ್ದೀರಿ?' ಎಂದು ಕೇಳಿದೆ. `ನಾನು ಓದುತ್ತೇನೆ, ಪ್ರತಿದಿನ ನಾನು ಭೇಟಿ ಮಾಡುವ ಹತ್ತಾರು ವಿದೇಶಿ ಪ್ರವಾಸಿಗರಿಂದ ನಾನು ಕಲಿಯುತ್ತೇನೆ. ಅದಕ್ಕಿಂತ ಮಿಗಿಲಾದ ಕಲಿಕೆ ಯಾವುದಿದೆ?' ಎಂದು ಅಬ್ದುಲ್ ಹೇಳಿದಾಗ ಆತ ತನ್ನ ವೃತ್ತಿಯನ್ನು ಸ್ವೀಕರಿಸಿರುವ ಹಾಗೂ ನೋಡಿರುವ ಬಗೆಗೆ ಖುಷಿಯಾಯಿತು. ಪ್ರವಾಸಿ ಗೈಡ್ಗಳ ತಾಕತ್ತೇ ಇದು. ಅವರು ಯಾವ ದೇಶದ, ಎಂಥಾ ಜನರೊಂದಿಗೆ ಬೇಕಾದರೂ ಬೆರೆಯುತ್ತಾರೆ, ಮೋಡಿ ಮಾಡುತ್ತಾರೆ. ಆ ದೇಶದ ಬಗೆಗಿನ ವೈವಿಧ್ಯಮಯ, ಕುತೂಹಲಕಾರಿ ಮಾಹಿತಿ ನೀಡಿ ನಮ್ಮನ್ನು ಶ್ರೀಮಂತಗೊಳಿಸುತ್ತಾರೆ. ಅಷ್ಟೇ ಅಲ್ಲ, ನಮ್ಮ ಒಟ್ಟಾರೆ ಪ್ರವಾಸವನ್ನು ಸಾರ್ಥಕಗೊಳಿಸುತ್ತಾರೆ, ಸ್ಮರಣೀಯವಾಗಿಸುತ್ತಾರೆ.
`ಅಬ್ದುಲ್, ನೆಲ್ಸನ್ ಮಂಡೇಲಾ ಬಗ್ಗೆ ಹೇಳಿ' ಅಂದೆ. ನಿರರ್ಗಳವಾಗಿ ಮಂಡೇಲಾ ಬಗ್ಗೆ ಒಂದು ತಾಸು ಮಾತಾಡಿದ. ಅವರ ಖಾಸಗಿ ಜೀವನದ ಬಗ್ಗೆ ಕೇಳಿದೆ. ಆ ವಿವರ ನೀಡಲು ತನಗೆ ಮನಸ್ಸಿಲ್ಲವೆಂಬುದನ್ನು ಮನವರಿಕೆ ಮಾಡಿಕೊಡುತ್ತಲೇ ನನ್ನನ್ನೂ ಬೇಸರಪಡಿಸದೇ ಕೆಲವು ಸಂಗತಿಗಳನ್ನಷ್ಟೇ ಹೇಳಿದ. ಕೇಪ್ಟೌನ್ನಲ್ಲಿ ಮಾತ್ರ ನಮ್ಮ ಜತೆಗಿದ್ದ ಆತ ಬರೀ ಗೈಡ್ ಅಷ್ಟೇ ಅಲ್ಲ, ಫಿಲಾಸಫರ್ ಕೂಡ ಹೌದು ಎಂದು ಈಗ ಅನಿಸುತ್ತಿದೆ. ದಕ್ಷಿಣ ಆಫ್ರಿಕಾದ ಡರ್ಬನ್, ಜೋಹಾನೆಸ್ಬಗರ್್ನಲ್ಲಿ ಅಬ್ದುಲ್ ಇಲ್ಲದೇ ತಿರುಗಾಡಿದಾಗ ಅವನ ಅನುಪಸ್ಥಿತಿ ಗಾಢವಾಗಿ ಕಾಡಿತು .
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


