ಸಂಸದಲ್ಲಿ ಸರಿಗಮ

ಅದು ಚಂದ್ರನ ಬೆಳಕಿನಡಿಯಲ್ಲಿ ಲಾಂದ್ರ ಬೆಳಗುವ ಹೊತ್ತು. ಇದೇ ನವೆಂಬರ್ ಇಪ್ಪತ್ತೆರಡರ ಸಂಜೆ ಆರೂವರೆಗೆ ರವೀಂದ್ರ ಕಲಾಕ್ಷೇತ್ರದ ಹಿಂಬದಿಯ ಸಂಸ ಬಯಲು ರಂಗಮಂದಿರ, ಪ್ರೇಮಗೀತೆಗಳ ಘಮ ಪಸರಿಸಲು ಸಜ್ಜಾಗಿದೆ. ಅದು ಕೆ.ವೈ.ನಾರಾಯಣಸ್ವಾಮಿ ಅವರ ಸಾಹಿತ್ಯವಿರುವ ಪ್ರೇಮಗೀತೆಗಳ 'ಕೈಲ್ಯಾಂಪು' ಧ್ವನಿಸುರುಳಿಯ ಲೋಕಾರ್ಪಣೆಯ ಸಮಯ.
ಕಣ್ತಂಪೆನಿಸುವ ವಿನ್ಯಾಸ ಹೊಂದಿರುವ ಇನ್ ಲೇ ಕಾರ್ಡಿನೊಂದಿಗೆ ಹೊರಬರಲಿರುವ ಈ ಧ್ವನಿಸುರುಳಿ ಹಲವು ವಿಶೇಷಗಳನ್ನು ಒಳಗೊಂಡಿದೆ. ಜುಗಾರಿ ಚಿತ್ರ ನಿರ್ದೇಶಿಸಿ ವಿಮರ್ಶಕರ ಹಾಗೂ ಪ್ರೇಕ್ಷಕರ ಮೆಚ್ಚುಗೆ ಪಡೆದು ಭರವಸೆ ಮೂಡಿಸಿದ್ದ ಹಾಸ್ಯಚಕ್ರವರ್ತಿ ನರಸಿಂಹ ರಾಜು ಅವರ ಮೊಮ್ಮಗ ಎಸ್.ಡಿ.ಅರವಿಂದ್ ಈಗ ಸಂಗೀತದಲ್ಲೂ ಒಂದು ಕೈ ನೋಡೋಣವೆಂದು ಈ ಹೊಸ ಥರದ ಆಲ್ಬಮ್ಮಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಹುದಿನಗಳ ನಂತರ ನಾದಬ್ರಹ್ಮ ಹಂಸಲೇಖ, ಹಾಡೊಂದಕ್ಕೆ ತಮ್ಮ ದನಿ ನೀಡಿದ್ದಾರೆ ಎಂಬುದು ಧ್ವನಿಸುರುಳಿಯ ಇನ್ನೊಂದು ವಿಶೇಷ. ಮಿಕ್ಕಂತೆ ನಮ್ಮವರೇ ಆದ ರಾಜೇಶ್ಕೃಷ್ಣನ್, ಅಜಯ್ ವಾರಿಯರ್, ಅನುರಾಧಾ ಭಟ್, ಹೇಮಂತ್ ಮುಂತಾದವರ ಮಧುರ ಶಾರೀರ ಹೊಂದಿರುವ ಹಾಡುಗಳ ಈ ಆಲ್ಬಮ್ಮಿನಲ್ಲಿ ಹಿಂದೂಸ್ತಾನಿ, ಘಜಲ್, ಜಾನಪದ ಹೀಗೆ ಎಲ್ಲಾ ಪ್ರಾಕಾರಗಳನ್ನೂ ಬಳಸಿಕೊಳ್ಳಲಾಗಿದೆಯಂತೆ. ಕನ್ನಡ ಹಾಡುಗಳ ಆಲ್ಬಮ್ಮಿನ ಇತಿಹಾಸದಲ್ಲೇ ಮೊದಲ ಬಾರಿಗೆ, ಸಿಡಿಯಲ್ಲಿ ಹಾಡುಗಳ ಭಾವಕ್ಕೆ ತಕ್ಕಂತೆ ಪ್ರತಿ ಪುಟದಲ್ಲಿಯೂ ಸುಭಾಷ್ ಕಮ್ಮಾರ್ ಅವರ ಕುಂಚದಿಂದ ಮೂಡಿಬಂದ ಚಿತ್ರಗಳನ್ನು ಬಳಸಿಕೊಂಡಿದ್ದಾರಂತೆ. ಇಡೀ ಆಲ್ಬಮ್ ಒಂದು ಸುಂದರ ಚಿತ್ರ ಸಂಗೀತ ಕವನ ಸಂಕಲನದಂತೆ ಭಾಸವಾಗುವುದರಲ್ಲಿ ಸಂದೇಹವಿಲ್ಲ ಎಂಬುದು ತಂಡದ ಅಭಿಮತ.
ಇಂಡಿಯನ್ ಎಕ್ಸ್ಪ್ರೆಸ್ ಸುದ್ದಿ ವಿಭಾಗದ ಮುಖ್ಯಸ್ಥರಾದ ರಾಜಶೇಖರ್ ಮತ್ತು ಉದ್ಯಮಿ ವೃಷಭೇಂದ್ರ ಅವರ ಸಹಯೋಗದ 'ಸ್ಕೈ ಲ್ಯಾಂಪ್' ವೆಂಚರ್ಸ್ ಈ ಆಲ್ಬಮ್ ಹೊರತರುತ್ತಿದೆ. ಈ ಧ್ವನಿಸುರುಳಿಯಿಂದ ಬರಲಿರುವ ಆದಾಯವನ್ನು ಕ್ಯಾನ್ಸರ್ ಸಂತ್ರಸ್ತರ ಶುಶ್ರೂಷೆಗಾಗಿ ವಿನಿಯೋಗಿಸಲಾಗುತ್ತದೆ ಎಂಬುದು ಪ್ರಶಂಸಾರ್ಹ ಸಂಗತಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


