ಬೈಟುಕಾಫಿ

ಹಾಸಿಗೆ ಪಕ್ಕವೇ ಹಾಥಿ ಹಿಂಡು

ಹಾಸಿಗೆ ಪಕ್ಕವೇ ಹಾಥಿ ಹಿಂಡು
Published On :

ಡರ್ಬನ್ನಿಂದ ಸುಮಾರು ಮುನ್ನೂರು ಕಿ.ಮೀ. ದೂರವನ್ನು ಮೂರುವರೆ ಗಂಟೆಯಲ್ಲಿ ಕ್ರಮಿಸಿ ಥಂಡಾ ಪ್ರೈವೇಟ್ ಗೇಮ್ ರಿಸವರ್್ ಹಾಗೂ ರೆಸಾರ್ಟನ್ನು ತಲುಪಿದಾಗ ಸಾಯಂಕಾಲ ನಾಲ್ಕೂವರೆ ಗಂಟೆ. ದಕ್ಷಿಣ ಆಫ್ರಿಕಾದ ಝುಲು ಲ್ಯಾಂಡ್ನ ಮಧ್ಯ ಭಾಗದಲ್ಲಿರುವ ಈ ಗೇಮ್ ಸಾಂಕ್ಚುವರಿ ಖಾಸಗಿಯವರದ್ದು. ಝುಲು ಭಾಷೆಯಲ್ಲಿ ಥಂಡಾ ಅಂದ್ರೆ ಪ್ರೀತಿ (ಲವ್) ಎಂದರ್ಥ. ದಕ್ಷಿಣ ಆಫ್ರಿಕಾದ ಕ್ವಾಝುಲು-ನಟಾಲ್ ಪ್ರಾಂತದಲ್ಲಿರುವ ಈ ಗೇಮ್ ರಿಸವರ್್ ಭೌಗೋಳಿಕವಾಗಿ ಎಂಥ ಜಾಗದಲ್ಲಿದೆಯೆಂದರೆ ಇದರ ಸನಿಹದಲ್ಲಿಯೇ ಹಿಂದೂ ಮಹಾಸಾಗರವಿದೆ. ನಿಸರ್ಗದ ಎಲ್ಲ ಚೆಲುವನ್ನು ಸೂರೆಗೊಂಡು ಮೈದಳೆದಿರುವ ಈ ಗೇಮ್ ರಿಸವರ್್ ಅಥವಾ ಜಂಗಲ್ ಲಾಡ್ಜ್ ಹದಿನಾಲ್ಕು ಸಾವಿರ ಎಕರೆ ಪ್ರದೇಶಗಳಲ್ಲಿ ಹರಡಿಕೊಂಡಿದೆ. ಈ ವ್ಯಾಪ್ತಿಯ ಪ್ರದೇಶಕ್ಕೆಲ್ಲ ಲಘು ಶಾಕ್ ನೀಡುವ ತಂತಿಬೇಲಿಯನ್ನು ಹಾಕಲಾಗಿದೆ. ಒಳಗಡೆ ಪ್ರಾಣಿಗಳ ಲೋಕ!
ಇಷ್ಟೊಂದು ವಿಶಾಲ ಅರಣ್ಯಪ್ರದೇಶದಲ್ಲಿ ಬರೀ ಹದಿನಾಲ್ಕು ಟೆಂಟ್ ಹೌಸ್, ಡೈನಿಂಗ್ ರೂಮ್, ಈಜುಕೊಳ ಬಿಟ್ಟರೆ ಬೇರಾವ ಕಟ್ಟಡಗಳಿಲ್ಲ. ಅಂದರೆ ಅರಣ್ಯದ ಮಧ್ಯಭಾಗದಲ್ಲಿ ಅಲ್ಲಲ್ಲಿ ಟೆಂಟ್ ಹೌಸ್ನಲ್ಲಿರುವ ಜನರನ್ನು ಬಿಟ್ಟರೆ, ಇಡೀ ಪ್ರದೇಶದಲ್ಲಿ ನೀರವ ಮೌನ. ಇಲ್ಲಿ ಮೊಬೈಲ್ ತರಂಗಗಳಿಲ್ಲ. ಗುಡ್ಡದ ನೆತ್ತಿಯ ಮೇಲೆ ಹೋದರೂ ಮೊಬೈಲ್ನಲ್ಲಿ ಸಿಗ್ನಲ್ ಕಡ್ಡಿಗಳು ಮೂಡುವುದಿಲ್ಲ. ಕರೆಂಟು ಸಹ ಇಲ್ಲ. ಹೀಗಾಗಿ ಟಿವಿ, ಲ್ಯಾಂಡ್ಲೈನ್ ಫೋನ್ಗಳೂ ಇಲ್ಲ. ಮೊಬೈಲು ಕೆಲಸ ಮಾಡದಿರುವುದರಿಂದ ದಿಕ್ಕು, ನಕಾಶೆ ಸಹ ಗೊತ್ತಾಗುವುದಿಲ್ಲ. ಟೈಮು ಎಷ್ಟಾಯಿತೆಂಬುದನ್ನು ಬಿಟ್ಟರೆ, ಬೇರೇನೂ ಗೊತ್ತಾಗುವುದಿಲ್ಲ. ನೀವು ವಿಶ್ವದ ಯಾವ ದೇಶ, ಯಾವ ದೆಸೆಯಲ್ಲಿದ್ದೀರೆಂಬುದು ತಿಳಿ ಯುವುದಿಲ್ಲ. Really time stops here ಅಂತಾರಲ್ಲ, ಈ ಮಾತಿನ ಅರ್ಥದ ಅನುಭವವಾಗುತ್ತದೆ.
ಹಾಗಂತ ನೀವು ಯಾವುದೇ ಸೌಲಭ್ಯಗಳಿಲ್ಲದ ಗುಡ್ಡ, ಬೆಟ್ಟದಲ್ಲಿದ್ದೀರಿ ಎಂದು ಭಾವಿಸಬೇಕಿಲ್ಲ.
ಇಂಥ ಪರಿಸರದಲ್ಲಿ ಪಂಚತಾರಾ ಹೋಟೆಲ್ ಇದ್ದರೆ ಹೇಗಿರುತ್ತೋ ಅಂಥ ಜಾಗ! ವನ್ಯಜೀವಿ ಸಾಮ್ರಾಜ್ಯದ ಲ್ಲೊಂದು ಲಕ್ಸುರಿ ಟೆಂಟ್ಹೌಸ್ ವಾಸ್ತವ್ಯದ ಪಂಚತಾರಾ ಸೌಲಭ್ಯ. ಬೆಳಗಿನ ಸೂರ್ಯನ ಕಿರಣಗಳನ್ನೇ ಹಿಡಿದಿಟ್ಟು ಕೊಂಡು (ಸೋಲಾರ್ ಲೈಟ್) ರಾತ್ರಿ ಉರಿಯುತ್ತದೆ. ಬಿಸಿ ನೀರಿಗೂ ಅದೇ. ಆ ಕಾಡಿನಲ್ಲಿ ಕರೆಂಟು ತಂತಿ ಗಳನ್ನು ಎಳೆದು ತರುವುದಾದರೂ ಹೇಗೆ? ಪೇಪರ್, ಮೊಬೈಲ್, ಟಿವಿ, ಕಂಪ್ಯೂಟರ್, ವೈಫೈ... ಇವ್ಯಾವುವೂ ಇಲ್ಲದಿರುವುದೇ ಇಲ್ಲಿನ ವೈಶಿಷ್ಟ್ಯ. ಹೊರ ಜಗತ್ತಿನ ಯಾವ ದಢಕಿಗಳೂ ಗೊತ್ತಾಗಲು ಸಾಧ್ಯವೇ ಇಲ್ಲದಂಥ ನಿಗೂಢ ಪ್ರದೇಶ. ಇಲ್ಲಿನ ಟೆಂಟ್ ಹೌಸ್ಗಳಲ್ಲಿ ಸೋಲಾರ್ ಲಾಟೀನು ಬೆಳಗಿದರೆ ಬೆಳಕು ಇಲ್ಲದಿದ್ದರೆ ಕಾಡೇ ಕಗ್ಗತ್ತಲು. ಈ ಕತ್ತಲೆಗೆ ಸಾಥಿಯಾಗಿ ಕಾಡುಪ್ರಾಣಿಗಳ ಸಂಚಾರ, ಮೊರೆತ. `ಬೆಟ್ಟದ ಮೇಲೊಂದು ಮನೆ ಮಾಡಿ ಮೃಗಗಳಿಗೆ ಅಂಜಿ ದೊಡೆಂತಯ್ಯ ಎಂಬ ಸಾಲುಗಳನ್ನು ನೆನಪು ಮಾಡಿಕೊಂಡು, ಇದ್ದಬಿದ್ದ ಧೈರ್ಯವನ್ನೆಲ್ಲ ಗುಡಿಸಿ ಎದೆಯೊಳಗೆ ಇಟ್ಟುಕೊಂಡರೆ ಬಚಾವು. ಆದರೂ ಈ ಮೌನ, ಅದರ ಭಯಾನಕ ಹೊಡೆತ, ಜೋರಾಗಿ ಬೀಸುವ ಗಾಳಿ, ಟೆಂಟಿನ ಹತ್ತಿರ ಕಾಡು ಪ್ರಾಣಿಯೇನಾದರೂ ಅಡಗಿ ಕುಳಿತಿರಬಹುದಾ ಎಂಬ ನಿರಂತರ ಸಂದೇಹ, ಅದೇ ಭಯವಾಗಿ ಕಾಡುವ ಮಾನಸಿಕ ತುಮುಲ, ನಮ್ಮಲ್ಲೊಂದು ಹೇಳಲಾಗದ ವಿಚಿತ್ರ ಭಾವವನ್ನು ಸೃಷ್ಟಿಸಿರುತ್ತದೆ.
ಇಲ್ಲಿನ ಟೆಂಟ್ಗಳಲ್ಲಿ ಏಕಾಂಗಿ ಮಲಗಲು ಎಂಟೆದೆಯೇ ಬೇಕು. ಅದರಲ್ಲೂ ದೆವ್ವ-ಭೂತಗಳಿಗೆ ಅಂಜುವವರು, ಜಿರಳೆ, ಹಲ್ಲಿಗಳಿಗೆ ಕಿರುಚುವವರು ಒಬ್ಬರೇ ಈ ಟೆಂಟ್ಗಳಲ್ಲಿ ಒಂದು ರಾತ್ರಿ ಕಳೆಯುವುದೆಂದರೆ, ಜಾಗರಣೆ ಮಾಡಿದ ಹಾಗೆ. ಹಾಗೆಂದು ಟೆಂಟಿನಲ್ಲಿಟ್ಟ ಬೆಲ್ಸ್ವಿಚ್ ಅದುಮಿದರೆ ಸಹಾಯಕರು ತಕ್ಷಣ ಓಡೋಡಿ ಬರುತ್ತಾರೆ. ಕಾಡು ಪ್ರಾಣಿಗಳನ್ನು ಟೆಂಟ್ನಿಂದ ಐದಡಿ ದೂರದಲ್ಲಿಡಲು ಲಘು ಶಾಕ್ ತಂತಿ ಬೇಲಿ ನಿಮರ್ಿಸಿದ್ದರೂ, ಆ ರಾತ್ರಿಯಲ್ಲಿ ಆನೆಗಳಿಗೆ ತಂತಿ ಬೇಲಿ ಕಾಣದೇ ಅವನ್ನೇ ತುಳಿದು ಧ್ವಂಸ ಮಾಡಿ ಒಳನುಗ್ಗಿದರೆ ಕತೆ ಏನು? ತಂತಿಬೇಲಿಯಿಂದ ಆಚೆಯೇ ನಿಂತು ಜಿರಾಫೆಗಳು ಟೆಂಟ್ಗೆ ಕತ್ತನ್ನು ತೂರಿಸುವುದಿಲ್ಲವೆನ್ನಲು ಗ್ಯಾರಂಟಿ ಯೇನು? ಐದಡಿ ಎತ್ತರದ ಬೇಲಿಯನ್ನು ಚಿರತೆಗಳೂ ಹಾರಿ ಒಳಬಂದರೆ? ಹಾವುಗಳೇನಾದರೂ ಟೆಂಟ್ ಒಳಗೆ ತೂರಿ ನಮ್ಮ ಸ್ವಾಗತಕ್ಕೆ ಬಂದಿರಬಹುದಾ?
ಈ ಕಾಡು ಪ್ರಾಣಿಗಳಾವುವೂ ಬರುವುದಿಲ್ಲ ಎಂಬುದು ಗೊತ್ತು. ಆದರೆ, ಅವು ಬಂದು ಬಿಟ್ಟರೆ... ಎಂಬ ಯೋಚನೆಗಳು ಪದೇಪದೆ ಬರುತ್ತವಲ್ಲ? ಅದಕ್ಕೆ ತಂತಿಬೇಲಿ ಹಾಕುವುದು ಹೇಗೆ? ಮೊದಲ ದಿನ ಆ ರಾತ್ರಿ ನನ್ನ ಟೆಂಟ್ ಒಳಗೆ ಕೆಲಹೊತ್ತು ಈ ಯೋಚನೆಗಳು ಸುಳಿದಾಡಿದ್ದು ಸುಳ್ಳಲ್ಲ. ಇದಕ್ಕೆ ಕಾರಣವೂ ಇತ್ತು. ನಾಲ್ಕು ತಿಂಗಳ ಹಿಂದೆ ಕೀನ್ಯಾದ ಮಸೈಮರಾ ಕಾಡಿಗೆ ಹೋಗಿದ್ದಾಗ ಅಲ್ಲಿನ ಕರೆನ್ ಬ್ಲಿಕ್ಸನ್ ಕ್ಯಾಂಪ್ನ ಟೆಂಟ್ನಲ್ಲಿ ಉಳಿದುಕೊಂಡಿದ್ದೆ. ಈ ಕ್ಯಾಂಪ್ ಕಾಡು ಪ್ರಾಣಿಗಳ ಮಧ್ಯದಲ್ಲಿಯೇ ಇರುವ ತಾಣ. ಒಂದು ಕಡೆ ಮಸೈ ನದಿ. ಆ ನದಿಯ ತಟದಲ್ಲಿಯೇ ನಮ್ಮ ಟೆಂಟ್. ಆ ನದಿಯಲ್ಲಿ ಹತ್ತಾರು ನೀರಾನೆ(ಹಿಪೋಪಟಮಸ್)ಗಳು. ಮಧ್ಯರಾತ್ರಿ ಕಳೆಯುತ್ತಲೇ ಈ ನೀರಾನೆಗಳು ನೀರಿನಿಂದ ಮೇಲೆದ್ದು ಟೆಂಟ್ ಪಕ್ಕದಲ್ಲಿಯೇ ಬಂದು ಮಲಗುತ್ತಿದ್ದವು. ಅವುಗಳ ಪಾಡಿಗೆ ಮಲಗಿದ್ದರೆ ನನಗೆ ಗೊತ್ತೂ ಆಗುತ್ತಿರಲಿಲ್ಲ. ಆದರೆ, ಇವು ರಾತ್ರಿಯೆಲ್ಲ ಘೀಳಿಡುತ್ತಿದ್ದವು. ನಮ್ಮ ಟೆಂಟ್ನಿಂದ ಹತ್ತಿರದಲ್ಲೇ ಹೋದರೂ, ಸವರಿಕೊಂಡು ಹೋದ ಅನುಭವವಾ ಗುತ್ತಿತ್ತು. `ಈ ನೀರಾನೆಗಳೇ ನಾದರೂ ಟೆಂಟ್ನೊಳಗೆ ನುಗ್ಗಬಹುದಾ? ಎಂದು ಅಮಾಯಕನಂತೆ ಅಲ್ಲಿನ ಗಾಡರ್್ಗೆ ಕೇಳಿದಾಗ, `ಇಲ್ಲಿ ತನಕ ನುಗ್ಗಿಲ್ಲ. ಆದರೆ ನುಗ್ಗೋದಿಲ್ಲ ಎಂದು ಹೇಳಲಾಗದು ಎಂದು ಹೇಳಿ ನಕ್ಕಿದ್ದ. ಅವನ ತಮಾಷೆ ನನ್ನ ಆ ರಾತ್ರಿಯ ನಿದ್ದೆಯನ್ನೆಲ್ಲ ಕಸಿದುಕೊಂಡಿತ್ತು.
ಅಷ್ಟೇ ಅಲ್ಲ, ಆ ಗಾಡರ್್ಗೆ ಮಾಲೀಕ ಸಂಬಳ ತಡವಾಗಿ ಕೊಟ್ಟಿದ್ದನೋ ಏನೋ? `ರಾತ್ರಿ ಟೆಂಟ್ಗೆ ಹೋಗುವಾಗ ಸಿಂಹವೇನಾದರೂ ಎದುರಾದರೆ ಗಾಬರಿಯಾಗಬೇಡಿ, ಹೆದರಿ ಕಿರುಚಿಕೊಳ್ಳಬೇಡಿ, ಜೇಮ್ಸ್ ಎಂದು ಕರೆಯಿರಿ, ನಾನು ಓಡಿ ಬರುತ್ತೇನೆ ಎಂದು ಕಿಸಕ್ಕನೆ ನಕ್ಕಿದ್ದ. ಆತನ ಕಟ್ಟುಮಸ್ತಾದ ಶರೀರ ನೋಡಿ ಸುಮ್ಮನಾಗಿದ್ದೆ. ಇಲ್ಲದಿದ್ದರೆ ಎರಡು ಬಾರಿಸೋಣ ಅಂತೆನಿಸಿತ್ತು. ರಾತ್ರಿ ಸಿಂಹ ಎದುರಿಗೆ ಬಂದರೆ ಗಾಬರಿಯಾಗಬೇಡಿ ಅಂತಾನಲ್ಲ, ಹೆದರಿ ಕಿರುಚಿಕೊಳ್ಳಬೇಡಿ ಅಂತಾನಲ್ಲ ಬಡ್ಡೀಮಗ... ನಾನು ಜೇಮ್ಸ್ ಎಂದು ಕೂಗಿ ಆತ ಓಡಿ ಬರುವುದರೊಳಗೆ ಆ ಸಿಂಹ ನನ್ನನ್ನು ನೋಡುತ್ತಾ ನಿಂತಿರುತ್ತದಾ? ತೀನ್ ಚಾರ್ ತುಕಡಾ ಮಾಡದೇ ಬಿಡುತ್ತಾ? ಅವೆಲ್ಲ ಹೋಗಲಿ, ಎದುರಿಗೆ ನಿಂತು ದಿಟ್ಟಿಸಿ ನೋಡಿದರೆ ಸಾಕು, `ಜಯದೇವಾ... ಮಂಜುನಾಥ... ಎನ್ನುವಷ್ಟರಲ್ಲಿ ನನ್ನ ಹೃದಯ ಬಡಿತ ನಿಂತಿರುವುದಿಲ್ಲವಾ?
ಕಳೆದ ವರ್ಷ ಶಿರಸಿಯ ಸನಿಹದ ಸ್ನೇಹಿತರ ಮನೆಗೆ ಹೋದಾಗ ಅವರ ಮನೆಯ ನಾಯಿ ಏಕಾಏಕಿ ಎಗರಿ ಬಂದಿತು. ನಾನು ತುಸು ಗಾಬರಿಯಾದೆ. ಅಲ್ಲಿಯೇ ನಿಂತಿದ್ದ ಮನೆಯ ಕೆಲಸಗಾರ, `ಗಾಬರಿಯಾಗಬೇಡಿ, ನಮ್ಮ ನಾಯಿ ಕಚ್ಚೋದಿಲ್ಲ ಎಂದು ನಾಯಿಯನ್ನು ಹಿಡಿದು, `ಇದು ಸುಮ್ಮನೆ ಕಚ್ಚೋದಿಲ್ಲ. ಹಸಿವಾದಾಗ ಮಾತ್ರ ಕಚ್ಚುತ್ತದೆ ಎಂದಿದ್ದ. `ಅಲ್ಲ ಮಾರಾಯ, ನಿನಗೆ ಹಿಡಿದು ಬಡಿಯಾ. ನಾಯಿಗೆ ಹಸಿವಾಗಿದೆಯೋ, ಇಲ್ಲವೋ ಎಂಬುದು ಗೊತ್ತಾಗುವುದು ಹೇಗೆ? ಅದೇನಾದರೂ ನನಗಾಗಲಿ, ನಿನಗಾಗಲಿ ಬಂದು ಹೇಳುತ್ತಾ? ಎಂದು ಕೇಳಿದಾಗ ಮುಗ್ಧವಾಗಿ ಹಲ್ಕಿರಿದಿದ್ದ. ಜೇಮ್ಸ್ ಮಾತುಗಳನ್ನು ಕೇಳಿದಾಗ ಈ ಘಟನೆಯೂ ನೆನಪಾಯಿತು. ಥಂಡಾ ಗೇಮ್ ರಿಸವರ್್ನ ಟೆಂಟ್ನೊಳಗೆ ಈ ಎಲ್ಲ ಘಟನೆಗಳು ಹೊಕ್ಕು ನನ್ನನ್ನು ಆವರಿಸಿಕೊಂಡಾಗ ಸಣ್ಣ ಸದ್ದಾದರೂ ಸಾಕು, ಬಿದ್ದ ಎಲೆಗಳು ಗಾಳಿಗೆ ಸರಬರ ಸದ್ದು ಮಾಡಿದರೂ ಸಾಕು, ಹಾವೋ, ಹರಣೆಯೋ, ಮುಳ್ಳು ಹಂದಿಯೋ, ಮುಂಗುಸಿಯೋ ಒಳ ನುಗ್ಗಿರಬಹುದಾ ಎಂಬ ಸಂಶಯ ನಿದ್ದೆಯನ್ನು ಕಟ್ಟಿಹಾಕಿ ಕಣ್ಣೊಳಗೆ ಜಾರಲು ಬಿಡುತ್ತಿರಲಿಲ್ಲ.
ಈ ಏಕಾಂತವನ್ನು ಅನುಭವಿಸಬೇಕು. ದಿಂಬಿಗೆ ಗೋಣು ಚೆಲ್ಲಿದ ಎರಡು ನಿಮಿಷದ ಬಳಿಕ ಕೈಯನ್ನೋ ಕಾಲನ್ನೋ ಕತ್ತರಿಸಿಕೊಂಡು ಹೋದರೂ ಗೊತ್ತಾಗದಂತೆ ನಿರುಮ್ಮಳ ಮಲಗುವ ನನ್ನೊಳಗೆ, ನಿದ್ದೆ ಹತ್ತಿರ ಸುಳಿಯುವ ಸೂಚನೆಗಳಿರಲಿಲ್ಲ. ಈ ಮಧ್ಯೆ, ಮಧ್ಯರಾತ್ರಿ ಮಗ್ಗುಲು ಬದಲಿಸಿರಬಹುದು, ಆನೆಗಳ ಹಿಂಡೊಂದು ಪಲ್ಲಕ್ಕಿ ಹೊತ್ತವರು ಓಡುತ್ತಾರಲ್ಲ, ಆ ಥರ ಶ್ವಾಸ ತೆಗೆಯುತ್ತಾ ಟೆಂಟ್ನ ಹತ್ತಿರವೇ ಓಡಿ ಹೋಯಿತು. ನನ್ನ ಧೈರ್ಯ, ದೇವರ ಮೇಲಿನ ನಂಬಿಕೆಗಳೆಲ್ಲವನ್ನೂ ಆ ಲಘು ಶಾಕ್ ತಂತಿಬೇಲಿಯ ಮೇಲೆ ಜಮಾ ಮಾಡಿ ಇಟ್ಟಿದ್ದೆ. ಐದು ನಿಮಿಷಗಳ ಬಳಿಕ ಸದ್ದು ನಿಂತಿತು. `ಬದುಕಿದೆ ಮಗನೆ ಅಂದುಕೊಂಡೆ. ಯಾವುದೋ ಅಪರಿಚಿತ ನಾಡಿನಲ್ಲಿ, ಗೊತ್ತುಪರಿಚಯವಿಲ್ಲದ ಜನರ ಮಧ್ಯೆ, ಅದ್ಯಾವುದೋ ನಿಗೂಢ ಕಾಡಿನಲ್ಲಿ, ಮೃಗಗಳ ನಡುವೆ ಆ ಕಗ್ಗತ್ತಲ ರಾತ್ರಿಯಲ್ಲಿ ಮಲಗಿದಾಗ, ಕರೆದಾಗ ಬರಲು ನಿದ್ದೆಯೇನು ಸಾಕಿದ ನಾಯಿಯಾ?
ಬಸವಳಿದ ಕಣ್ಣುಗಳಲ್ಲಿ ತೂರಿಕೊಂಡು ನಿದ್ದೆ ಇಳಿಯಲು ಹರಸಾಹಸ ಮಾಡುತ್ತಿದ್ದಾಗ ನ್ಯಾಷನಲ್ ಜಿಯಾಗ್ರಾಫಿಕ್ ಚಾನೆಲ್ನ ರಮ್ಸೆಲ್ ಡೆವಿಡ್ಸನ್ನಿಗಾದ ಅನುಭವ ಕಣ್ಣು ಮುಂದೆ ಹಾದು ಹೋದಾಗ ಆ ಚಳಿಯಲ್ಲೂ ಬೆವರ ಸಾಲುಗಳು ಟಿಸಿಲೊಡೆದಿದ್ದವು.
ಮಧ್ಯರಾತ್ರಿಯಲ್ಲಿ ಮದವೇರಿದ ಮೂರು ಆನೆಗಳು ತಂತಿಬೇಲಿಯನ್ನು ಕಿತ್ತೆಸೆದು ಕ್ಯಾಂಪಿನೊಳಗೆ ಬಂದು ಮೂರು ಟೆಂಟ್ಗಳನ್ನು ಧ್ವಂಸ ಮಾಡಿ ಹತ್ತು ನಿಮಿಷದಲ್ಲಿ ಭಯಾನಕ ವಾತಾವರಣ ಸೃಷ್ಟಿಸಿ ಕೋಲಾಹಲವೆಬ್ಬಿಸಿದ ಡೇವಿಡ್ಸನ್ನ ಮೈನವಿರೇಳಿಸುವ ಕಥನ ನೆನಪಾಗಿ ನಿದ್ದೆಭಾಗ್ಯವಿಲ್ಲದೇ ಪರಿತಪಿಸುತ್ತಿದ್ದೆ. ಇದು ನನ್ನಂಥ ಸಾವಿರಾರು ಮಂದಿಯ ಅನುಭವ. ಇನ್ನೂ ಕೆಲವರು ನಿದ್ದೆ ಹೋಗಿ ಮಧ್ಯರಾತ್ರಿ ಎಚ್ಚರವಾಗಿ ಬೆಳಗು ಹಾಯಿಸುತ್ತಾರೆ. ಹಾಗಂತ ಇದು ಯಾತನೆ ಅಲ್ಲ, ಇದೊಂದು ದಿವ್ಯ ಅನುಭವ. ಆ ರಾತ್ರಿಯ ನಿಡುಸುಯ್ಯುವಿಕೆಯಲ್ಲಿ ಅಪೂರ್ವ ಹೊಳಹುಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.
ಝುಲು ಭಾಷೆಯಲ್ಲಿ ಪ್ರೀತಿಯಾಗಿ, ಹಿಂದಿ ಭಾಷೆಯಲ್ಲಿ ಚಳಿಯಾಗಿ ಹಿತವಾಗಿ ಕಾಡುವ ಥಂಡಾ ಜಂಗಲ್ಲಾಡ್ಜ್ ಹಾಗೂ ಗೇಮ್ ರಿಸವರ್್ನಲ್ಲಿ ಮುಂದಿನ ಎರಡು ರಾತ್ರಿಗಳ ಮೇಲೆ ಹೊಳೆವ ನಕ್ಷತ್ರಗಳ ಚಾಪೆಯಂತೆ ಹರಡಿಕೊಂಡಿದ್ದವು. ಕಾಡಿನ ನಿಗೂಢತೆ, ನೀರವತೆ ಮಾತ್ರ ಅರ್ಥವಾಗುತ್ತಿರಲಿಲ್ಲ

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.