ಉತ್ತರ ಧ್ರುವಕೂ...

ಬೆಂಗಳೂರಿನಲ್ಲಿ ಈಗ ರಿಯಲ್ ಎಸ್ಟೇಟ್ ಚಟುವಟಿಕೆ ಬಿರುಸಾಗಿರುವುದು ಎಲ್ಲಿ? ಉದ್ಯಮದಲ್ಲಿರುವವರು ನಿಮ್ಮ ಪ್ರಶ್ನೆ ಪೂರ್ಣಗೊಳ್ಳುವ ಮುನ್ನವೇ ಹೇಳುವ ಉತ್ತರವೂ- 'ಉತ್ತರ'ವೇ.
ಹೌದು. ಉತ್ತರ ಬೆಂಗಳೂರು ಈಗ ರಿಯಲ್ ಎಸ್ಟೇಟ್ ಹಬ್ ಆಗುತ್ತಿದೆ. ಬೆಂಗಳೂರು ಸಿಲಿಕಾನ್ ಸಿಟಿ ಎನ್ನುವ ಕ್ಯಾಪ್ ಧರಿಸಿದಾಗಿನಿಂದ ಎಲೆಕ್ಟ್ರಾನಿಕ್ ಸಿಟಿ, ವೈಟ್ಫೀಲ್ಡ್, ಸರ್ಜಾಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಹಳೇ ಮದ್ರಾಸ್ ರಸ್ತೆ, ಮಾರತ್ತಹಳ್ಳಿ, ಕೋರಮಂಗಲ ಸೇರಿದಂತೆ ಹೀಗೆ ದಕ್ಷಿಣ, ಪೂರ್ವ, ಪಶ್ಚಿಮ ಭಾಗಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಿರೀಕ್ಷೆಗೂ ಮೀರಿದ ಭರ್ಜರಿ ಬೆಳವಣಿಗೆ ಕಂಡಿತು. ಅದೇಕೋ ಉತ್ತರ ಭಾಗದಲ್ಲಿ ಈ ವಿಚಾರದಲ್ಲಿ ತೀರಾ ಎಂದರೆ ತೀರಾ ಹಿಂದುಳಿದಿತ್ತು. ಇಲ್ಲಿ ಮೂಲಸೌಕರ್ಯಗಳು ಹಾಗೂ ಸಂಪರ್ಕ ರಸ್ತೆಗಳು ಸುಧಾರಣೆ ಕಾಣುತ್ತಿದ್ದಂತೆ ಈ ಭಾಗದಲ್ಲಿಯೂ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಮೂರು ವರ್ಷದ ಹಿಂದೆ ಚದರ ಅಡಿಗೆ 900 ರುಪಾಯಿಗಿಂತ ಕಡಿಮೆ ಇದ್ದದ್ದು ಈಗ 2000 ರುಪಾಯಿ ದಾಟಿದೆ.
ಅದಕ್ಕೆ ಕಾರಣಗಳು ಹಲವಾರು. ತುಮಕೂರು ರಸ್ತೆಯ ಸುತ್ತಮುತ್ತ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು, ನೆಲಮಂಗಲದವರೆಗೆ ಪೂರ್ಣಗೊಂಡಿರುವ ರೈಲು ಮಾರ್ಗ, ಮೇಲ್ದರ್ಜೆಗೇರಿರುವ ಸಂಪರ್ಕ ರಸ್ತೆಗಳು, ಗೊರಗುಂಟೆಪಾಳ್ಯದಿಂದ ನೆಲಮಂಗಲಕ್ಕೆ ಅಷ್ಟಪಥ ಮೇಲುರಸ್ತೆ, ಇದೀಗ ಸುದ್ದಿಯಲ್ಲಿರುವ 188 ಕಿ.ಮೀ ಉದ್ದದ ವರ್ತುಲ ರಸ್ತೆ ಇವೆಲ್ಲವೂ ಬೆಂಗಳೂರು ಉತ್ತರ ಭಾಗದಲ್ಲಿ ರಿಯಲ್ ಎಸ್ಟೇಟ್ ಗರಿಗೆದರಲು ಕಾರಣಗಳಾಗಿವೆ. ಇದುವರೆಗೆ ನೆಲಮಂಗಲ ದೂರ ಎನ್ನುತ್ತಿದ್ದವರು ಈಗ ಚೆಂದದ ರಸ್ತೆಗಳಿಂದಾಗಿ ನೆಲಮಂಗಲ ಸುತ್ತಮುತ್ತಲು ನಿವೇಶನ ಕೊಳ್ಳಲು ಉತ್ಸಾಹ ತೋರುತ್ತಿದ್ದಾರೆ.
ಮೊದಲು ನೆಲಮಂಗಲದಿಂದ ಬೆಂಗಳೂರಿಗೆ ಬರುವುದೇ ಒಂದು ಸಾಹಸವಾಗಿತ್ತು. ಕನಿಷ್ಠ ಎಂದರೂ 2 ತಾಸು ಹಿಡಿಯುತ್ತಿತ್ತು. ಎಲಿವೇಟೆಡ್ ಹೈವೆಯಿಂದಾಗಿ ಟ್ರಾಫಿಕ್ ಕಿರಿಕಿರಿ ಇಲ್ಲದೆ ಕೇವಲ ಒಂದು ಗಂಟೆಯಲ್ಲಿ ಸುಲಭವಾಗಿ ಬೆಂಗಳೂರು ತಲುಪಬಹುದು. ಇನ್ನು ನೈಸ್ ರಿಂಗ್ ರೋಡ್, ಜೊತೆಗೆ ಅಂಚೆಪಾಳ್ಯದವರೆಗೆ ಮೆಟ್ರೋ ಮಾರ್ಗ ವಿಸ್ತರಣೆಗೊಂಡಿರುವುದು ಕೂಡ ಸಂಚಾರವನ್ನು ಸುಗಮಗೊಳಿಸಿದೆ. ಹಾಗೆಯೇ ಈ ಭಾಗದಲ್ಲಿ ಮಲ್ಟಿ ಸ್ಟೆಷಾಲಿಟಿ ಅಪಾರ್ಟ್ಮೆಂಟ್ಗಳು, ಹಾಸ್ಟಿಟಲ್, ಸ್ಕೂಲ್, ಕಾಲೇಜ್, ಮಾಲ್, ಹೋಟೆಲ್ಗಳೂ ತಲೆಯೆತ್ತಿವೆ. ಇದೆಲ್ಲದರ ಪರಿಣಾಮ ಟಿ. ದಾಸರಹಳ್ಳಿ, ಚಿಕ್ಕಬಿದರಕಲ್ಲು, ಅಂಚೆಪಾಳ್ಯ, ಮಾದಾವರ, ಮಾದನಾಯಕನಹಳ್ಳಿ, ಅರಿಶಿನಕುಂಟೆ ಮೊದಲಾದ ನೆಲಮಂಗಲದ ಆಸುಪಾಸಿನಲ್ಲಿರುವ ಭೂಮಿಗೆ ಭಾರಿ ಬೇಡಿಕೆ ಬಂದಿದೆ. ಮೇಲಾಗಿ ಕೈಗಾರಿಕೆ ಹಬ್ ಆಗಿ ಪರಿವರ್ತನೆಗೊಳ್ಳುತ್ತಿರುವ ಡಾಬಸ್ಪೇಟೆ, ನೆಲಮಂಗಲದಿಂದ ಕೇವಲ 20 ಕಿ.ಮೀ. ದೂರದಲ್ಲಿದೆ. ಹೀಗಾಗಿ ತುಮಕೂರು ರಸ್ತೆ, ಅಂಚೆಪಾಳ್ಯ, ಮಾದಾವರ, ಮಾದನಾಯಕನಹಳ್ಳಿ, ಅರಶಿನಕುಂಟೆ, ನೆಲಮಂಗಲ, ಡಾಬಸ್ಪೇಟೆ ಸುತ್ತಮುತ್ತ ವಸತಿ ಬಡಾವಣೆಗಳು ತಲೆ ಎತ್ತಿವೆ. ಮೂಲ ಸೌಕರ್ಯಗಳೂ ಅಭಿವೃದ್ಧಿಗೊಳ್ಳುತ್ತಿದೆ. ಭೂಪರಿವರ್ತನೆಯಾದ ಮತ್ತು ಬಿಎಂಆರ್ಡಿಎ ಪರವಾನಗಿ ಪಡೆದಿರುವ ಬಡಾವಣೆಗಳು, ನಿವೇಶನಗಳಿಗಂತೂ ಡಿಮ್ಯಾಂಡಪ್ಪೊ ಡಿಮ್ಯಾಂಡು.
ಜನಸಾಮಾನ್ಯರ ಮಾತು ಬಿಡಿ. ಇಲ್ಲಿ ಹಣ ಹೂಡುವುದು ಲಾಭದಾಯಕ ಎಂದು ಗೊತ್ತಾಗುತ್ತಿದ್ದಂತೆ ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಕಂಪನಿಗಳೂ ಇತ್ತ ಮುಖ ಮಾಡಿವೆ. ರಾಷ್ಟ್ರ ಮಟ್ಟದ ಡೆವಲಪರ್ಸ್ಗಳು ಇವೆಲ್ಲದರ ಲಾಭ ಪಡೆಯಲು ನಾ ಮುಂದು ತಾ ಮುಂದು ಎಂದು ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಗೋದ್ರೆಜ್ ಪ್ರಾಪರ್ಟಿಸ್, ಚಿತ್ರನಟ ಫರ್ದೀನ್ ಖಾನ್ ಜೊತೆಗೂಡಿ ಈಗಾಗಲೇ ಉತ್ಕೃಷ್ಟ ಮಟ್ಟದ ಐಷಾರಾಮಿ ವಸತಿ ವಿಲ್ಲಾ ನಿರ್ಮಾಣದ ಯೋಜನೆಗೆ ಚಾಲನೆ ನೀಡಿದೆ.
188 ಕಿ.ಮೀ. ಉದ್ದದ ತಟ್ಟೆಕೆರೆ, ಹಾರೋಹಳ್ಳಿ, ಬಿಡದಿ, ತಿಪ್ಪಗೊಂಡನಹಳ್ಳಿ, ನೆಲಮಂಗಲ, ದೇವನಹಳ್ಳಿ, ನಲ್ಲೂರು, ಹೊಸಕೋಟೆ ಹಾಗೂ ಸರ್ಜಾಪುರಕ್ಕೆ ಸಂಪರ್ಕ ಕಲ್ಪಿಸುವ ವರ್ತುಲ ರಸ್ತೆ.
284 ಕಿ.ಮೀ. ಉದ್ದದ ಗುಡೇಮಾರನಹಳ್ಳಿ, ಡಾಬಸ್ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ, ಸರ್ಜಾಪುರ, ಅತ್ತಿಬೆಲೆ, ತಟ್ಟೇಕೆರೆ, ಕನಕಪುರ, ರಾಮನಗರ ಹಾಗೂ ಮಾಗಡಿಗೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆ.
- ಶಿವಕುಮಾರ್ ಆರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


