ಬೈಟುಕಾಫಿ

ಹಾಲಿನಿಂದಲೂ ಅಲರ್ಜಿ ಆಗುವುದು ನಿಜವೆ?

ಹಾಲಿನಿಂದಲೂ ಅಲರ್ಜಿ ಆಗುವುದು ನಿಜವೆ?
Published On :

ಹಸುಳೆಗಳಿಂದ ಹಿಡಿದು ವೃದ್ಧವರೆಗೆ ಎಲ್ಲ ವಯೋವಾನದವರಲ್ಲೂ ಅತಿಸಾರಕ್ಕೆ ಕೆಲವೊಮ್ಮೆ ಹಾಲು ಕೂಡ ಕಾರಣವಾಗುತ್ತದೆ. ಅಂದರೆ ಯಾರಿಗೆ ಹಾಲಿನ ಅಲರ್ಜಿ ಇರುತ್ತದೆಯೊ ಅಂಥವರಲ್ಲಿ ಅತಿಸಾರ ಕಾಣಿಸಿಕೊಳ್ಳುವ ಸಂಭವವೂ ಇರುತ್ತದೆ. ಹಾಲಿನಲ್ಲಿ ಸಕ್ಕರೆ ಅಂಶ ಇರುತ್ತದೆ. ಅದನ್ನೇ ಲ್ಯೋಕ್ಟೋಸ್ ಅನ್ನುತ್ತಾರೆ. ಕೆಲವರಲ್ಲಿ ಈ ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ ಅದನ್ನು 'ಲ್ಯಾಕ್ಟೋಸ್ ಇನ್‌ಟಾಲರೆನ್ಸ್‌' ಅಂತಲೂ ಹೇಳುತ್ತಾರೆ. ಇದರೊಂದಿಗೆ ಹಾಲಿನಲ್ಲಿರುವ ಕೆಲವು ಪ್ರೊಟೀನ್‌ಗಳು ಕೂಡ ಅತಿಸಾರಕ್ಕೆ ಕಾರಣ ಆಗಬಲ್ಲವು. ಹಾಲು ತ್ಯಜಿಸಿದ್ದರೂ, ಯೋಗರ್ಟ್ ಸೇರಿದಂತೆ ಹಾಲಿನ ಉತ್ಪನ್ನಗಳನ್ನು ಅತಿಯಾಗಿ ತಿನ್ನುತ್ತಿದ್ದರೂ ಅತಿಸಾರ ಶುರುವಾಗಬಹುದು. ಹಾಲಿನಿಂದಲೇ ಭೇದಿ ಉಂಟಾಗುತ್ತಿದೆ ಎನ್ನುವ ಅನುಮಾನ ಬಂದರೆ ಒಂದು ವಾರ ಕಾಲ ಹಾಲು ಮತ್ತು ಅದರ ಉತ್ಪನ್ನಗಳನ್ನು ಸಂಪೂರ್ಣ ತ್ಯಜಿಸಿ. ಆ ಅವಧಿಯಲ್ಲಿ ಸುಧಾರಣೆ ಕಾಣಲಿಲ್ಲ ಅಂತಾದರೆ ಹಾಲಿನಿಂದ ನಿಮಗೆ ತೊಂದರೆ ಇಲ್ಲ ಎಂದು ಭಾವಿಸಿಕೊಳ್ಳಬಹುದು. ಅತಿಸಾರ ನಿಂತಿದ್ದರೆ ಹಾಲಿನಿಂದ ದೂರವಾಗುವ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಆಕಳ ಹಾಲಿಗೆ ಹೋಲಿಸಿದರೆ ಎಮ್ಮೆ ಅಥವಾ ಆಡಿನ ಹಾಲಿನಿಂದ ಅಲರ್ಜಿ ಆಗುವ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಾರೆ ಸಂಶೋಧಕರು. ಪಾಕೆಟ್ ಹಾಲುಗಳಲ್ಲಿ ಆಕಳು ಮತ್ತು ಎಮ್ಮೆ ಹಾಲುಗಳೆರಡೂ ಮಿಶ್ರವಾಗಿರುವುದರಿಂದ ಅಲರ್ಜಿ ಸಂಭವ ಇದ್ದೇ ಇರುತ್ತದೆ.  
ಬಾಟಲಿ ಹಾಲು ಕುಡಿಯುವ ಶಿಶುಗಳಲ್ಲಿಯೂ ಹಾಲಿನ ಅಲರ್ಜಿ ಕಂಡುಬರಬಹುದು. ಅಂಥ ಮಕ್ಕಳಲ್ಲಿ ಅತಿಸಾರದ ಜತೆಗೆ ಗ್ಯಾಸ್ಟ್ರಿಕ್, ಉಸಿರಾಟದ ತೊಂದರೆ, ಚರ್ಮದ ಮೇಲೆ ಗುಳ್ಳೆಗಳು ಏಳುವುದು ಮೊದಲಾದ ತೊಂದರೆಗಳೂ ಕಾಣಿಸಿಕೊಳ್ಳಬಹುದು. ಆಗ ಶಿಶುವಿಗೆ ಬಾಟಲಿ ಹಾಲು ನಿಲ್ಲಿಸಿ ಎದೆ ಹಾಲು ಕುಡಿಸುವುದೇ ಸೂಕ್ತ. ವೈದ್ಯರನ್ನು ಸಂಪರ್ಕಿಸಿದರೆ ಹಾಲಿನ ಕೆಲವು ಪ್ರೊಟೀನ್‌ಗಳನ್ನು ತಟಸ್ಥಗೊಳಿಸುವ ಪದಾರ್ಥಗಳನ್ನು ಶಿಫಾರಸು ಮಾಡುತ್ತಾರೆ.

ತೀರಾ ಅಂದರೆ ತೀರಾ ಅಪರೂಪಕ್ಕೆ ಕೆಲವರಲ್ಲಿ ಕಾಫಿ ಅತಿಸಾರಕ್ಕೆ ಕಾರಣವಾಗಬಲ್ಲದು. ಕೆಫಿನೇಟೆಡ್ ಅಥವಾ ನಾನ್‌ಕೆಫಿನೇಟೆಡ್ ಕಾಫಿ ಕುಡಿದರೂ ಅತಿಸಾರ ಆಗುವುದುಂಟು. ಅಂಥ ವ್ಯಕ್ತಿಗಳ ಕರುಳು ಅತ್ಯಂತ ಸೂಕ್ಷ್ಮವಾಗಿರುತ್ತದೆ. ಅರ್ಧ ಕಪ್‌ನಷ್ಟು ಕಾಫಿ ಕುಡಿದರೂ ಕರುಳಿನ ಭಾಗದಲ್ಲಿ ಮಾಂಸಖಂಡಗಳು ಸಡಿಲಗೊಂಡು ಜೈವಿಕ ತ್ಯಾಜ್ಯದ ಸಂಚಾರವನ್ನು ತೀವ್ರಗೊಳಿಸುವುದರಿಂದ ಅತಿಸಾರ ಉಂಟಾಗುತ್ತದೆ. ಕೆಫೀನ್ ಮೂತ್ರ ವಿಸರ್ಜನೆಗೆ ಉತ್ತೇಜನ ನೀಡುತ್ತದೆ. ಅತಿಸಾರ ಆದಾಗ ದೇಹಕ್ಕೆ ನೀರಿನ ಅಗತ್ಯ ಹೆಚ್ಚಾಗಿರುತ್ತದೆ. ಹೀಗಾಗಿ ದೇಹದಲ್ಲಿ ನೀರಿನ ಅಂಶ ಕಡಿಮೆ ಕೆಫೀನ್ ಅನ್ನು ಅತಿಸಾರವಾದಾಗ ಸೇವಿಸದಿರುವುದೇ ಒಳ್ಳೆಯದು.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.