ಮನಸ್ಸಿಗೂ, ಉದರಕ್ಕೂ ಇದೆ ನೇರ ನಂಟು!

ತಲೆ ನೋವು, ಹೊಟ್ಟೆ ನೋವಿನಿಂದ ಬಳಲುವವರನ್ನು ಕೊಂಚ ಹಗುರಾಗಿಸಲು 'ತಲೆ ಇದ್ದವರಿಗೆ ತಲೆ ನೋವು ಬರುತ್ತೆ', 'ಹೊಟ್ಟೆ ಇದ್ದವರಿಗೆ ಹೊಟ್ಟೆ ನೋವು ಬರುತ್ತೆ' ಎಂದು ತಮಾಷೆ ಮಾಡುತ್ತೇವೆ. ಬಹುಶಃ ಎಲ್ಲರೂ ಇಂಥ ಹಾಸ್ಯ ಮಾಡಿರುತ್ತಾರೆ. ಅವರ ಉದ್ದೇಶ ಆ ಕ್ಷಣದಲ್ಲಿ ಗಮನ ಬೇರೆಡೆ ಸೆಳೆದು ನೋವಿನ ತೀವ್ರತೆಯನ್ನು ಸ್ವಲ್ಪವಾದರೂ ಕಡಿಮೆ ಮಾಡುವುದು. ತಲೆ ನೋವು ಎಷ್ಟು ಕಾಮನ್ ಸಮಸ್ಯೆಯೋ, ಉದರ ಶೂಲೆ ಕೂಡ ಅಷ್ಟೇ ಸಾಮಾನ್ಯ. ಪ್ರತಿಯೊಬ್ಬರೂ ಒಂದಿಲ್ಲೊಂದು ಸಂದರ್ಭದಲ್ಲಿ ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳಿಂದ ಬಳಲುತ್ತಾರೆ. ತಲೆ ನೋವಿಗೆ ಹೇಗೆ ಹೊತ್ತುಗೊತ್ತು ಇಲ್ಲವೊ ಹಾಗೆಯೇ ಉದರ ಶೂಲೆಗೂ. ಖುಷಿಯಾದಾಗ ಕುಟುಂಬದೊಂದಿಗೆ ಹೋಟೆಲ್ ಹೋಗಿ ಸಿಕ್ಕಾಪಟ್ಟೆ ತಿಂದು ಬರುತ್ತೇವೆ ಎಂದಿಟ್ಟುಕೊಳ್ಳಿ. ಆವತ್ತೇ ಮನೆಮಂದಿಗೆಲ್ಲ ಹೊಟ್ಟೆ ನೋವು, ಎದೆ ಉರಿ ಇತ್ಯಾದಿ ತೊಂದರೆ ಶುರು. ಸಂಭ್ರಮ, ಖುಷಿ ಎಲ್ಲ ಮಾಯ. ಅತಿಯಾಗಿ ತಿಂದರೂ ಕಷ್ಟ, ಏನೂ ತಿನ್ನದೇ ಇದ್ದರೂ ಕಷ್ಟ. ರುಚಿ ಎಂದು ಸ್ವಲ್ಪವೇ ಸ್ವಲ್ಪ ಜಾಸ್ತಿ ತಿಂದರೂ ಸಮಸ್ಯೆಯೇ. ಕೆಲವರು ಬಿಡಿ, ಎಷ್ಟು ತಿಂದರೂ, ಏನು ತಿಂದರೂ ಜೀರ್ಣಿಸಿಕೊಂಡಾರು. ಇನ್ನು ಕೆಲವವರಿರುತ್ತಾರೆ. ಅವರದು ಅತಿಸೂಕ್ಷ್ಮ ಉದರ (ಸೆನ್ಸೆಟಿವ್ ಸ್ಟೊಮಕ್). ಆಹಾರದಲ್ಲಿ ಕೊಂಚ ಏರುಪೇರಾದರೂ ಹೊಟ್ಟೆ ಕೆಡುತ್ತದೆ.
ಉದರ ಸಂಬಂಧಿ ತೊಂದರೆಗಳಲ್ಲಿ ಎರಡು ವಿಧ. ಒಂದು ದೀರ್ಘಕಾಲದಿಂದ ಕಾಡುತ್ತಿರುವಂಥದ್ದು. ಅದು ಗಂಭೀರವಾದದ್ದು ಕೂಡ. ಅದನ್ನು ಕಡೆಗಣಿಸಕೂಡದು. ವೈದ್ಯೋಪಚಾರದ ವಿನಾ ಬೇರೆ ಮದ್ದಿಲ್ಲ. ಇನ್ನೊಂದು ಸಮಸ್ಯೆ ತಾತ್ಕಾಲಿಕವಾದದ್ದು. ಅದು ಅಷ್ಟೇನೂ ಗಂಭೀರ ಸ್ವರೂಪದ್ದಲ್ಲ. ಆ ಕ್ಷಣದಲ್ಲಿ ಭಾರಿ ಉಪದ್ರವ ಕೊಡುತ್ತದೆ ಅಂತ ಅನ್ನಿಸಿದರೂ ಹೆಚ್ಚು ಸಮಯ ಇರುವುದಿಲ್ಲ. ಅದಕ್ಕೆ ಮನೆಮದ್ದು ಮಾಡಿಕೊಳ್ಳಬಹುದು. ಆಹಾರ ಶೈಲಿಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳುವ ಮೂಲಕವೂ ಇಂಥ ತಾತ್ಕಾಲಿಕ ತೊಂದರೆಗಳನ್ನು ಪರಿಹರಿಸಿಕೊಳ್ಳಬಹುದು.
ನಿಮಗೆ ಗೊತ್ತಿರಲಿ. ಆತಂಕದಿಂದ ಬಳಲುವವರಲ್ಲಿ ಉದರ ಶೂಲೆ ಹೆಚ್ಚು ಎನ್ನುವುದನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಮನಸ್ಸು ಮತ್ತು ಕರುಳಿಗೆ ನೇರ ಸಂಬಂಧವಿದೆ. ಒಂದೇ ರೀತಿಯ ಹಾರ್ಮೋನುಗಳು ಮತ್ತು ನರಪ್ರೇಕ್ಷಕಗಳು ಇವೆರಡನ್ನೂ ನಿಯಂತ್ರಿಸುತ್ತವೆ. ಇವೆರಡೂ ಒತ್ತಡ ಮತ್ತು ರಾಸಾಯನಿಕ ಬದಲಾವಣೆಗಳ ವಿಚಾರದಲ್ಲಿ ಅತ್ಯಂತ ಸೂಕ್ಷ್ಮಸಂವೇದಿಯಾಗಿರುತ್ತವೆ. ಆತಂಕದಿಂದ ಬಳಲುವಾಗ ಹೊಟ್ಟೆಯಲ್ಲಿ ತಳಮಳ, ತೊಂದರೆಗಳು ಕಾಣಿಸಿಕೊಳ್ಳಲು ಇದೇ ಮುಖ್ಯ ಕಾರಣ. ಅತಿಯಾದ ಭಯವಾಗಿದೆ ಅಂತಿಟ್ಟುಕೊಳ್ಳಿ. ಅಥವಾ ಅನಿರೀಕ್ಷಿತವಾಗಿ ಅವಘಡವೊಂದಕ್ಕೆ ಸಾಕ್ಷಿಯಾಗಿದ್ದೀರಿ. ಆಗ ನಡುಕ ಶುರುವಾಗುವುದು ಎಲ್ಲಿಂದ? ಹೊಟ್ಟೆಯ ಭಾಗದಿಂದಲೇ ಅಲ್ಲವೆ? ಅಜೀರ್ಣ, ಹೊಟ್ಟೆ ಉಬ್ಬುವುದು, ವಾಕರಿಕೆ, ಗ್ಯಾಸ್ಟ್ರಿಕ್ ಇವೆಲ್ಲವೂ ಆತಂಕದಿಂದಲೂ ಉಂಟಾಗಬಹುದು. ಮನಸ್ಸಿಗೆ ಸಂಬಂಧಿಸಿದ ವಿಚಾರಗಳನ್ನು ಬಿಟ್ಟು, ಆಹಾರ ಸೇವನೆಯಲ್ಲಿ ಏರುಪೇರಾದಾಗ ಉದರ ಶೂಲೆ ಕಾಣಿಸಿಕೊಂಡರೆ ಮನೆಯಲ್ಲೇ ಏನು ಪರಿಹಾರವಿದೆ ಎನ್ನುವುದರ ಕುರಿತು ಮುಂದಿನ ಸಂಚಿಕೆಗಳಲ್ಲಿ ಚರ್ಚಿಸೋಣ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


