ಸಿರಿವಂತರ ಸೊತ್ತು!
ನಮ್ಮ ಭಾರತವು ಅನೇಕ ಸಂಪ್ರದಾಯಗಳ ತವರೂರು. ಈ ವಾಸ್ತು ಹಾಗೂ ವಾಸ್ತು ಶಾಸ್ತ್ರ ಎನ್ನುವುದು ಕೂಡ ನಮ್ಮ ಪೂರ್ವಜರು ಮಾಡಿರುವ ಹಲವು ಸಂಪ್ರದಾಯಗಳಲ್ಲಿ ಒಂದು. ಈ ವಾಸ್ತು ನಂಬಿ ಅದೆಷ್ಟೋ ಜನ ತಮ್ಮ ಸಂಸಾರ ಹಾಗೂ ಉತ್ತಮ ಬದುಕನ್ನು ಕಳೆದುಕೊಂಡ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಬೆಳೆಯುತ್ತಿರುವ ತಾಂತ್ರಿಕ ಯುಗದಲ್ಲಿ ದೇವರ ಮನೆ ಈ ಕಡೆ, ಅಡುಗೆ ಮನೆ ಈ ದಿಕ್ಕಿಗೆ, ನಿಮ್ಮ ಕುರ್ಚಿ ಈ ದಿಕ್ಕಿಗೆ ಇರಬೇಕು ಎನ್ನುವ ಗೊಡ್ಡು ನಂಬಿಕೆಗಳೆಲ್ಲ ಶುದ್ಧ ಸುಳ್ಳು. ನಮ್ಮ ಹಳ್ಳಿ ಜನ, ಹೇಗೆ ಜಾಗ ಸಿಗುತ್ತದೆಯೊ ಹಾಗೆ ಮನೆ, ಗುಡಿಸಲು ಕಟ್ಟಿಕೊಂಡಿರುತ್ತಾರೆ. ವಾಸ್ತು ನೋಡುವ ಕೆಲಸ ಏನಿದ್ದರೂ ಶ್ರೀಮಂತರು ಮಾತ್ರ. ವಾಸ್ತು ಹೇಳುವ 'ವೃತ್ತಿ'ಪರರ ಬೆಳೆಸುತ್ತಿರುವುದೂ ಶ್ರೀಮಂತ ಸಮುದಾಯವೇ. ಈಗ ವಾಸ್ತುಶಾಸ್ತ್ರ ಎನ್ನುವುದು ಬಿಸಿನೆಸ್ ಆಗಿ ಬೆಳೆಯುತ್ತಿದೆ. ಅದರಿಂದ ಬಡಪಾಯಿ ವಾಸ್ತುಶಾಸ್ತ್ರಜ್ಞನ ಹೊಟ್ಟೆ ತುಂಬುತ್ತದೆಯೇ ವಿನಾ ಸಮಾಜಕ್ಕೆ ಯಾವುದೇ ಲಾಭವಿಲ್ಲ ಎನ್ನುವ ಸತ್ಯವನ್ನು ಜನ ಅರಿಯಬೇಕಿದೆ.
-ಕೆ.ಎಂ.ವಿಶ್ವನಾಥ(ಮಂಕವಿ), ಮರತೂರ
ವೈಜ್ಞಾನಿಕ ನೆಲೆಗಟ್ಟಿದೆ
ಮನೆ, ಮಂದಿರ ಅಥವಾ ಯಾವುದೇ ಕಟ್ಟಡ ಕಟ್ಟಬೇಕಾದರೆ ನಾವು ಮೊದಲು ಯೋಚಿಸುವುದು ವಾಸ್ತು ಬಗ್ಗೆ. ಅನಾದಿ ಕಾಲದಿಂದಲೂ ನಮ್ಮ ಹಿರಿಯರು ವಾಸ್ತು ಪ್ರಕಾರವೇ ಮನೆ ಕಟ್ಟುತ್ತಿದ್ದರು. ಹೀಗಾಗಿ ನಾವು ಕೂಡ ಅದನ್ನೇ ಅನುಸರಿಸಿಕೊಂಡು ಬಂದಿದ್ದೇವೆ. ವಾಸ್ತುಶಾಸ್ತ್ರದಲ್ಲಿಯೂ ಪರಿಣಾಮಕಾರಿ ಅಂಶಗಳು ಇರುವುದನ್ನು ಅಲ್ಲಗಳೆಯಬಾರದು. ಪ್ರತಿ ವಾಸ್ತು ಒಂದಿಲ್ಲೊಂದು ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ. ಅದು ಹೇಗೆಂದರೆ ಗಾಳಿ, ಬೆಳಕು ಬರಲು ಕಿಟಕಿ, ಬಾಗಿಲುಗಳನ್ನು ಹಾಗೂ ಪರಿಶುದ್ಧತೆಗಾಗಿ ಅಡುಗೆಮನೆಯನ್ನು ಹಾಗೂ ಶುಚಿತ್ವಕ್ಕಾಗಿ ಶೌಚಾಲಯಗಳನ್ನು ನಿರ್ಧಿಷ್ಟ ಸ್ಥಳದಲ್ಲಿ ಕಟ್ಟಿಸುವುದರಲ್ಲಿ ವೈಜ್ಞಾನಿಕ ಅಂಶ ಅಡಗಿದೆ. ವಾಸ್ತುವನ್ನು ನಂಬಿರುವ ಜನತೆ ಕೇವಲ ಮೌಢ್ಯರಾಗದೆ ಅದರ ಹಿಂದಿರುವ ಮೂಲ ವಿಜ್ಞಾನವನ್ನು ಅರ್ಥೈಸಿಕೊಳ್ಳುವಂತಾಗಬೇಕು.
-ಮಲ್ಲಪ್ಪ. ಸಿ., ಖೊದ್ನಾಪೂರ
ಜೀವನದ ಅಂಗ
'ಬೆಚ್ಚನೆಯ ಮನೆ ಇರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಚೆಯನರಿತು ನಡೆವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ' ಸರ್ವಜ್ಞ ಕವಿ ಹೇಳಿದ ಈ ಮೂರರಲ್ಲಿ ಮನುಷ್ಯನಿಗೆ ಯಾವುದೇ ತೊಂದರೆಯಾದರೆ ಸಾಕು, ಇದಕ್ಕೆಲ್ಲಾ ಕಾರಣ ಮನೆಯ ವಾಸ್ತು ದೋಷವೆಂದು ತಕ್ಷಣ ತೀರ್ಮಾನಕ್ಕೆ ಬಂದು ಬಿಡುತ್ತಾರೆ. ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವನ್ನು ಪಡೆದ ವಾಸ್ತು ಯಾವುದೇ ಜನಾಂಗಕ್ಕೆ ಸೀಮಿತವಾಗಿರದೆ ಎಲ್ಲಾ ಜನಾಂಗದಿಂದಲೂ ಮನ್ನಣೆಯನ್ನು ಗಳಿಸಿಕೊಂಡು ಬಂದಿದೆ. ನಾವು ವಾಸಿಸುವ ಸ್ಥಳದಲ್ಲಿ ಶುಭಕರವಾದ ಶಕ್ತಿಗಳನ್ನು ವೃದ್ಧಿಸಿ, ಅಶುಭಕರಶಕ್ತಿಗಳನ್ನು ನಾಶಪಡಿಸುತ್ತದೆ. ಕೆಲವರು ಮೂಢನಂಬಿಕೆಯೆಂದು ಕರೆದರೆ, ಇನ್ನು ಕೆಲವರು ಇದನ್ನು ದೃಢವಾಗಿ ನಂಬಿ ಅದರಂತೆ ನಡೆದು ಸುಖಮಯ ಬದುಕು ಸಾಗಿಸುತ್ತಿರುವುದನ್ನು ನೋಡಿದ್ದೇವೆ. ಆದ್ದರಿಂದ ಮನುಷ್ಯನಿಗೆ ವಾಸ್ತು ಬೇಕೇ ಬೇಕು.
-ವೀರೇಶ್.ಕೆ.ಟಿ, ಮಾಡ್ಲಾಕನಹಳ್ಳಿ
'ಜಗುಲಿ'ಯಲ್ಲಿ ಈ ವಾರದ ವಿಷಯ 'ವಾಸ್ತು ಬೇಕೆ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

