ಅವೆರಡೂ ನಮ್ಮೊಳಗಿನ ಸಹಜ ಕ್ರಿಯೆಗಳು!

ಸಾವಿಲ್ಲದ ಮನೆಯಿಂದ ಸಾಸಿವೆ ತರುವುದು ಹೇಗೆ ಸಾಧ್ಯವಿಲ್ಲವೊ ಹಾಗೆಯೇ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲದೇ ಇರುವವರನ್ನು ಪತ್ತೆ ಮಾಡುವುದೂ ಕಷ್ಟ. ಕೆಲವರಿಗೆ ಅತಿಶಯೋಕ್ತಿ ಅನ್ನಿಸಬಹುದು, ಕ್ಲೀಶೆ ಅನ್ನಿಸಬಹುದು. ಆದರೆ, ಇದು ಸತ್ಯ. ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ಬಾರಿ ಗ್ಯಾಸ್ಟ್ರಿಕ್ನಿಂದ ಬಳಲುತ್ತಾರೆ. ಮೂಲತಃ ಎಲ್ಲರ ಶರೀರದಲ್ಲಿಯೂ ಗ್ಯಾಸ್ ಉತ್ಪತ್ತಿ ಆಗುತ್ತದೆ. ಒಬ್ಬ ಆರೋಗ್ಯವಂತ ವ್ಯಕ್ತಿ ದಿನಕ್ಕೆ ಸರಾಸರಿ 14 ಬಾರಿ ತನ್ನ ದೇಹದಿಂದ ಗ್ಯಾಸ್ ಅನ್ನು ಹೊರದೂಡುತ್ತಾನೆ. ಹೊರಹೋಗುವ ಮಾರ್ಗ ಮತ್ತು ತೀವ್ರತೆಯ ಸ್ವರೂಪ ಬೇರೆಬೇರೆ ರೀತಿ ಇರಬಹುದು ಅಷ್ಟೆ. ಕೆಲವರಲ್ಲಿ ನಡೆಯುವ ಈ ಪ್ರಕ್ರಿಯೆ ಅಕ್ಕಪಕ್ಕ ಇದ್ದವರಿಗೆ ಮಾತ್ರ, ಈರವರಿಗೆಲ್ಲ ಕೇಳಬಹುದು! ಇನ್ನು ಕೆಲವರಲ್ಲಿ ಅವರಿಗೇ ಗೊತ್ತಿಲ್ಲದಂತೆ ಇದು ನಡೆಯಬಹುದು! ಒಂದಂತೂ ನಿಜ, ದಿನದಲ್ಲಿ ಒಮ್ಮೆಯೂ ಗ್ಯಾಸ್ ದೇಹದಿಂದ ಹೊರಹೋಗಿಲ್ಲ ಎಂದರೆ ಆತ ಜೀವಂತವಾಗಿಲ್ಲ ಎಂದೇ ಲೆಕ್ಕ. ಕರುಳಿನ ಭಾಗದಲ್ಲಿ ಅತಿಯಾದ ಗ್ಯಾಸ್ ಶೇಖರವಾಗುವುದು ಅಥವಾ ವಾಯು ತುಂಬುವುದು ಇಂದು ನಿನ್ನೆಯ ಸಮಸ್ಯೆ ಅಲ್ಲ. ಬಹಳ ಪುರಾತನ ಕಾಲದಿಂದಲೂ ಬಹಳ ಸಾಮಾನ್ಯವಾದ ಆರೋಗ್ಯ ತೊಂದರೆ ಇದು. ಹಾಗೆಯೇ ಅತಿಯಾದ ವಾಯುವನ್ನು ದೇಹದಿಂದ ಹೊರದಬ್ಬಲು ನಮ್ಮ ಹಿಂದಿನವರು ಅದಕ್ಕೆ ತಮ್ಮದೇ ಆದ ಔಷಧಗಳನ್ನು ಕಂಡುಹಿಡಿದುಕೊಂಡಿದ್ದರು ಕೂಡ.
ಸಾಮಾನ್ಯವಾಗಿ ಕೆಲವು ಆಹಾರಗಳಿಂದ ಗ್ಯಾಸ್ ಉತ್ಪತ್ತಿ ಆಗುತ್ತಿರುತ್ತದೆ. ಕೆಲವು ತಿನಿಸುಗಳನ್ನು ತಿಂದಾಗ ತೇಗು ಬರುವುದಿಲ್ಲವೆ? ಹೊಟ್ಟೆ ಉಬ್ಬರಿಸಿದಂತೆ ಆಗುವುದಿಲ್ಲವೆ? ಇದೆಲ್ಲ ಆ ಪದಾರ್ಥ ಉದರ ಸೇರಿದಾಗ ಗ್ಯಾಸ್ ಉತ್ಪತ್ತಿ ಆರಂಭಿಸಿದೆ ಎಂಬುದನ್ನು ಸೂಚಿಸುತ್ತದೆ. ಹೀಗೆ ಸಹಜಾತಿಸಹಜ ಕ್ರಿಯೆ ಎನ್ನುವಂತೆ ನಡೆಯುವ ಈ ಅನಿಲ ಉತ್ಪತ್ತಿಯಷ್ಟೇ ಸ್ವಾಭಾವಿಕವಾಗಿ ಅದನ್ನು ಹೊರದೂಡುವ ಪ್ರಕ್ರಿಯೆಯೂ ನಡೆಯುತ್ತಿರುತ್ತದೆ. ಅಲ್ಪಸ್ವಲ್ಪ ದೇಹದಲ್ಲೇ ಉಳಿದುಕೊಳ್ಳಲೂಬಹುದು. ಹೀಗೆ ಅಲ್ಲೇ ಉಳಿದುಕೊಳ್ಳುವ ಪ್ರಮಾಣ ಜಾಸ್ತಿಯಾದರೆ ಅದು ಅನಾರೋಗ್ಯದ ಮೂಲ. ಕಿರಿಕಿರಿ, ನೋವು ಉಂಟು ಮಾಡುವುದಷ್ಟೇ ಅಲ್ಲ. ಅನೇಕ ಸಲ ಸಾಮಾಜಿಕವಾಗಿಯೂ ಮುಜುಗರಕ್ಕೆ ಒಳಗಾಗುವಂತಾಗುತ್ತದೆ. ವಾಯುವನ್ನು ಹೊರದೂಡದೇ ಹಿಡಿದಿಟ್ಟುಕೊಳ್ಳುವುದು ಅಥವಾ ಅದಕ್ಕೆ ಪ್ರಯತ್ನಿಸುವುದು ಇನ್ನೂ ಅಪಾಯಕಾರಿ.
ಈ ಸಮಸ್ಯೆಗೆ ಪರಿಹಾರ ಇಲ್ಲವೆ? ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮ್ಮತವಾಗಿರುವ ಸುಲಭ ಪರಿಹಾರ ಇದೆ. ಅದೆಂದರೆ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು. ಅಂದರೆ ನಮ್ಮ ದೇಹಕ್ಕೆ ಒಗ್ಗುವ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದು!
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್ಎಂಎಸ್ಗೆ ಮಾತ್ರ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


