ಆಲ ಬಚಾವೋ
ಆಧುನಿಕರಣದ ನೆಪದಲ್ಲಿ ನಿತ್ಯ ನೆಲಕ್ಕೆ ಉರುಳುತ್ತಿರುವ ಗಿಡ-ಮರಗಳ ಸಂಖ್ಯೆ ಕಮ್ಮಿ ಏನಿಲ್ಲ. ಈ ಪೈಕಿ ರಸ್ತೆಗಳ ಅಗಲೀಕರಣಕ್ಕೆ ಹೆಚ್ಚು ಬಲಿಯಾಗುತ್ತಿರುವುದು ಆಲದ ಮರ....

ಆಧುನಿಕರಣದ ನೆಪದಲ್ಲಿ ನಿತ್ಯ ನೆಲಕ್ಕೆ ಉರುಳುತ್ತಿರುವ ಗಿಡ-ಮರಗಳ ಸಂಖ್ಯೆ ಕಮ್ಮಿ ಏನಿಲ್ಲ. ಈ ಪೈಕಿ ರಸ್ತೆಗಳ ಅಗಲೀಕರಣಕ್ಕೆ ಹೆಚ್ಚು ಬಲಿಯಾಗುತ್ತಿರುವುದು ಆಲದ ಮರ.
ನಮ್ಮ ಪೂರ್ವಜರು ಪರಿಸರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ನೀಡುವ, ಹೆಚ್ಚಿನ ನೆರಳು ಒದಗಿಸುವ ಹಾಗೂ ಹತ್ತಾರು ವರ್ಷ ಬದುಕಬಲ್ಲ ಆಲದ ಮರಗಳನ್ನೇ ಉದ್ದೇಶಪೂರ್ವಕವಾಗಿ ರಸ್ತೆ ಬದಿ ನೆಡುತ್ತಿದ್ದರು. ಆದರೆ, ನಗರಗಳಲ್ಲಿ ಇತ್ತೀಚೆಗೆ ರಸ್ತೆಗಳ ಅಗಲದ ನೆಪದಲ್ಲಿ ದಶಕಗಳಿಂದ ನೆಲೆಯೂರಿದ್ದ ಆಲದ ಮರಗಳು ತಮ್ಮ ಜೀವ ಒಪ್ಪಿಸುತ್ತಿವೆ. ಮರಗಳಷ್ಟೇ ಅಲ್ಲ, ಅದರಲ್ಲಿ ವಾಸಿಸುತ್ತಿದ್ದ ಪ್ರಾಣಿ- ಪಕ್ಷಿಗಳು ಸಹ ನೆಲೆ ಕಳೆದುಕೊಳ್ಳುತ್ತಿವೆ.
ಈ ಹಿನ್ನೆಲೆಯಲ್ಲಿ ಧಾರವಾಡದ ಗ್ರೀನ್ ಆರ್ಮಿ ಸಂಸ್ಥೆ 'ಆಲ ಬಚಾವೋ' ಎಂಬ ವಿಶೇಷ ಆಂದೋಲನ ಹಮ್ಮಿಕೊಂಡಿದ್ದು, ಆಲದ ಮರಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಪ್ರಾಯೋಗಿಕವಾಗಿ ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿನ ಪುರಾತನ ಆಲದ ಮರದ ನೇತಾಡುವ ಬೇರಿನ (ಬಿಳಲು) ಗುಂಪುಗಳನ್ನು ಮಣ್ಣಿನಿಂದ ಮುಚ್ಚಿ, ಅವುಗಳಿಗೆ ಮುಳ್ಳಿನ ಕವಚದಿಂದ ರಕ್ಷಿಸಲಾಗಿದೆ. ಈ ರೀತಿ ಮಾಡಿದರೆ ಅಲ್ಲಿ ಮತ್ತೊಂದು ಆಲ ಹುಟ್ಟಿಕೊಳ್ಳುತ್ತದೆ. ಈ ಪ್ರಯೋಗ ಯಶಸ್ವಿಯಾದರೆ ಹುಬ್ಬಳ್ಳಿ-ಧಾರವಾಡದ ಎಲ್ಲ ಆಲದ ಮರಗಳನ್ನು ಇದೇ ರೀತಿ ರಕ್ಷಿಸಲಾಗುವುದು ಎನ್ನುತ್ತಾರೆ ಗ್ರೀನ್ ಆರ್ಮಿ ಸಂಸ್ಥೆ ಅಧ್ಯಕ್ಷ ಪ್ರಕಾಶ ಗೌಡರ.
ಹು-ಧಾ ಅವಳಿನಗರದಲ್ಲಿಯೇ ಸಾವಿರಾರು ಆಲದ ಮರಗಳಿದ್ದು, ಇತ್ತೀಚೆಗೆ ಕಾಂಕ್ರಿಟ್ ರಸ್ತೆ ಹೆಸರಿನಲ್ಲಿ ನೂರಾರು ವರ್ಷಗಳ ಮರಗಳನ್ನು ಉರುಳಿಸಿದರು. ಉಳಿದ ಮರಗಳನ್ನು ಉಳಿಸುವ ದೃಷ್ಟಿಯಿಂದ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳ ಸಹಕಾರದಿಂದ ಆಲ ಬಚಾವೋ ಆಂದೋಲನ ಹಮ್ಮಿಕೊಳ್ಳುತ್ತಿದ್ದೇವೆ. ಒಂದು ಆಲದ ಮರ ನಿತ್ಯ 300 ಜನರಿಗೆ ಆಮ್ಲಜನಕ ಒದಗಿಸುತ್ತದೆ. ಪರಿಸರದಲ್ಲಿನ ಕಾರ್ಬನ್ ಡೈಆಕ್ಸೈಡ್ ಹೀರಿಕೊಳ್ಳುತ್ತದೆ. ಹೀಗೆ ಹತ್ತಾರು ವರ್ಷ ಅದೆಷ್ಟು ಆಮ್ಲಜನಕ ನಮಗೆ ನೀಡಿತು ಎಂದು ಜನ ತುಸು ಯೋಚಿಸಬೇಕು. ಈ ಮರ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎನ್ನುವುದು ಪ್ರಕಾಶ ಗೌಡರ ಪ್ರತಿಪಾದನೆ.
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


