ಬೈಟುಕಾಫಿ

ಆಸ್ಫೋಟ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗೆ ತೀವ್ರವಾದ ಹೊಡೆತ ಬೀಳುವುದರಲ್ಲಿತ್ತು. ಆದರೆ ಅಂದುಕೊಂಡಂತೆ ಆಗಲಿಲ್ಲ, ಬದಲಿಗೆ ಎಲ್ಲವೂ ....

ಆಸ್ಫೋಟ
Published On :

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗೆ ತೀವ್ರವಾದ ಹೊಡೆತ ಬೀಳುವುದರಲ್ಲಿತ್ತು. ಆದರೆ ಅಂದುಕೊಂಡಂತೆ ಆಗಲಿಲ್ಲ, ಬದಲಿಗೆ ಎಲ್ಲವೂ ಅಯೋವುಯವಾಯಿತು. ಇಷ್ಟಕ್ಕೂ ಆಗಿದ್ದೇನು ಗೊತ್ತಾ? ಕೋಳಿಪಂದ್ಯ ಆಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಸಬ್‌ಇನ್ಸ್‌ಪೆಕ್ಟರ್‌ರನ್ನು ಹೊಡೆಯಬೇಕು ಎಂದೇ ನಿರ್ಧರಿಸಿದ್ದರು ರಾಮಲಿಂಗಾರೆಡ್ಡಿ. ಅದೇ ಕಾರಣಕ್ಕೆ ಸುತ್ತಮುತ್ತಲ ಗ್ರಾಮಗಳ ಕೋಳಿಪಂದ್ಯದ ಆಟಗಾರರಿಗೆ ಮಾಹಿತಿ ಕಳುಹಿಸಿ ದೊಡ್ಡಮಟ್ಟದಲ್ಲಿ ಅಂಕ ಆಯೋಜಿಸಲಾಗಿತ್ತು. ಇನ್ನೂರಕ್ಕೂ ಹೆಚ್ಚು ಜೂಜುಕೋರರು ಹಾಜರಾಗಿದ್ದರೆ ಮೇಲಿನ ಪಂದ್ಯ ಕಟ್ಟುವವರು, ನೋಡುವ ಕುತೂಹಲದಿಂದ ಬಂದವರು ಸಾವಿರ ಸಮೀಪಿಸಿತ್ತು.
ಅದೊಂದು ಬೃಹತ್ ಮಾವಿನ ಮರ. ಊರಿನಿಂದ ಹೊರಗಿರುವ ಕೆರೆಯ ಕೆಳಭಾಗದಲ್ಲಿತ್ತು. ಅಲ್ಲಿಂದ ಸುತ್ತಮುತ್ತಲ ಪ್ರದೇಶ ತೀವ್ರ ಜೌಗಿನಿಂದ ಕೂಡಿದ್ದು, ಮರಗಿಡಗಳು ಬೆಳೆದು ನಿಂತಿವೆ. ಕೆರೆ ಏರಿಯ ಮೇಲೆ ರಸ್ತೆ ಇದ್ದು, ಯಾವುದೇ ವಾಹನ ಅಥವಾ ಮನುಷ್ಯ ಆ ದಾರಿಯಲ್ಲಿ ಬಂದರೆ ಕಾಣಿಸುತ್ತದೆ. ಅದು ಸುಮಾರು ಒಂದು ಕಿಲೋಮೀಟರ್ ದೂರ ಇರುವುದರಿಂದ ಪೊಲೀಸರನ್ನು ಮೊದಲೇ ಕಂಡು ಪರಾರಿಯಾಗಲು ಪ್ರಶಸ್ತವಾಗಿತ್ತು.
ಆದರೆ ಅಂದು ಅಲ್ಲಿ ಅಂಕ ಕಟ್ಟಿರುವುದು ಪೊಲೀಸರನ್ನು ಕಂಡು ಪರಾರಿಯಾಗಲಲ್ಲ. ಬದಲಿಗೆ ಪೊಲೀಸರನ್ನೇ ಪತ್ತೆ ಇಲ್ಲದಂತೆ ಮಾಡಲು ಎಂಬುದು ವಿಶೇಷ. ಅಂದು ಅಲ್ಲಿ ಬೃಹತ್ ಕೋಳಿ ಪಂದ್ಯ ಇಡಲಾಗಿದೆ ಎಂದು ಆಯೋಜನೆ ಮಾಡಿದ ರಾಮಲಿಂಗಾರೆಡ್ಡಿಯೇ ಸ್ವತಃ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದ.
-
ಈ ರಾಮಲಿಂಗಾರೆಡ್ಡಿ ಎಂಬವರು ಸಡ್ಲವಾರಿಪಲ್ಲಿಯ ಮುಖಂಡ. 80ರ ದಶಕದಲ್ಲಿ ಇನ್ನೂ ಉಳಿದಿದ್ದ ಊಳಿಗಮಾನ್ಯ ಪದ್ಧತಿಯ ವಾರಸುದಾರರಾಗಿ ಪಾಳೆಗಾರಿಕೆಯ ಪಳೆಯುಳಿಕೆಯಾಗಿದ್ದ ಅವರು ಹೇಳಿದ್ದೇ ತೀರ್ಪು. ಅಂತಹ ವ್ಯಕ್ತಿಯ ಮೇಲೆ ಕೋಳಿ ಪಂದ್ಯದ ಪ್ರಕರಣ ದಾಖಲಿಸಿದ್ದರು ಎಸ್‌ಐ. ಅವರ ಮೇಲೆ ಸೇಡು ತೀರಿಸಿಕೊಳ್ಳಲು ರೆಡ್ಡಿ ಈ ಕ್ರಮಕ್ಕೆ ಮುಂದಾಗಿದ್ದ. ಅವರು ಕೇವಲ ಕೋಳಿ ಪಂದ್ಯ ಆಯೋಜಿಸಿರಲಿಲ್ಲ. ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಪ್ರಕರಣದಿಂದ ತಪ್ಪಿಸಿಕೊಳ್ಳಲು ಮತ್ತೊಂದು ಯೋಜನೆ ರೂಪಿಸಿದ್ದರು. ಅದೇ ಅವರ ಜೀವಕ್ಕೆ ಎರವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ಕೋಳಿ ಪಂದ್ಯ ನಡೆಯುವ ಸ್ಥಳದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಒಂದು ಬಾವಿ ಇತ್ತು. ಅಂತರ್ಜಲ ಮಟ್ಟ ಕುಸಿಯಲು ಆರಂಭಿಸಿದ್ದ ಕಾರಣ ಬಾವಿಯಲ್ಲೂ ನೀರಿಗೆ ಬರ ಬಂದಿತ್ತು. ಈಗಿನಂತೆ ಆಗ ಇನ್ನೂ  ಕೊಳವೆ ಬಾವಿಗಳು ಬಂದಿರಲಿಲ್ಲ. ಬಾವಿಯಲ್ಲೇ ಕೊರೆಯುವ ಕೊಳವೆ ಬಾವಿಗಳಿದ್ದವು. ರಾಮಲಿಂಗಾ ರೆಡ್ಡಿಯವರ ಬಾವಿಯಲ್ಲಿ ನಾಲ್ಕೈದು ಕೊಳವೆ ಬಾವಿ ಕೊರೆಸಲಾಗಿತ್ತು. ಆದರೆ ಅದರಲ್ಲಿ ನೀರಿರಲಿಲ್ಲ.
ಅದಕ್ಕೆ ಅವರೊಂದು ಉಪಾಯ ಮಾಡಿದರು. 50 ಡೈನಮೈಟ್‌ಗಳನ್ನು ಒಟ್ಟಿಗೆ ಒಂದು ಹಗ್ಗಕ್ಕೆ ಕಟ್ಟುವುದು. ಆ ಹಗ್ಗವನ್ನು ಬಾವಿಯೊಳಗಿರುವ ಕೊಳವೆ ಬಾವಿಯ ಒಳಗೆ ಬಿಡುವುದು. 150 ಅಡಿ ಆಳವಿರುವ ಆ ಕೊಳವೆ ಬಾವಿಯ ತಳಕ್ಕೆ ಜೋಡಿಸಿದ ಡೈನಮೈಟ್‌ಗಳನ್ನು ಇಳಿ ಬಿಟ್ಟು ಕೊಳವೆ ಬಾವಿಯನ್ನು ಮರಳಿನಿಂದ ತುಂಬುವುದು. ನಂತರ ಅದಕ್ಕೆ ಜೋಡಿಸಿದ ವೈರ್‌ಗಳಿಂದ ವಿದ್ಯುತ್ ಹರಿಸುವುದು. ವಿದ್ಯುತ್ ಹರಿದ ಕೂಡಲೇ 50 ಡೈನಮೈಟ್ ಒಟ್ಟಿಗೆ ಸಿಡಿಯುತ್ತವೆ. ಸಿಡಿದ ರಭಸಕ್ಕೆ 150 ಅಡಿ ಆಳದಲ್ಲಿ ಬಿರುಕು ಉಂಟಾಗುತ್ತದೆ. ಆ ಬಿರುಕಿನಲ್ಲಿ ಅಕ್ಕಪಕ್ಕದಲ್ಲಿ ಹರಿಯುತ್ತಿರುವ ನೀರು ತನ್ನ ಬಾವಿಗೆ ಹರಿದು ಬರುತ್ತದೆ. ಇದು ಅವರ ಪ್ಲಾನ್.
ಅವರ ಯೋಜನೆಗೆ ಅನುಗುಣವಾಗಿ ಎಲ್ಲವೂ ಸಿದ್ಧವಾಗಿದೆ. ಆಗಲೇ ಕೋಳಿ ಪಂದ್ಯ ಮಾವಿನ ಮರದ ಕೆಳಗೆ ಆರಂಭವಾಗಿದೆ. ಇನ್ನೇನು ಈಗಲೋ ಆಗಲೋ ಪೊಲೀಸರು ಬರುವ ಸೂಚನೆ ಇದೆ. ಪೊಲೀಸರು ಬಂದು ಹೊಡೆತ ತಿಂದು ಹೋಗಿ ಪ್ರಕರಣ ದಾಖಲಿಸಿದರೆ ತಾನು ಬಾವಿಯಲ್ಲಿ ಡೈನಮೈಟ್ ಸಿಡಿಸುವ ಕಾಯಕದಲ್ಲಿದ್ದೆ ಎನ್ನಲು ಸಾಕ್ಷ್ಯಗಳು ಸಿದ್ಧವಾಗಿವೆ. ಮಧ್ಯಾಹ್ನ 2 ಗಂಟೆ ಸಮೀಪಿಸುತ್ತಿದೆ. ಬೇಗ ಡೈನಮೈಟ್ ಸಿಡಿಸಿ ಕೋಳಿ ಅಂಕದತ್ತ ಸಾಗಲು ರಾಮಲಿಂಗಾರೆಡ್ಡಿ ಬಾವಿಗೆ ಇಳಿದರು.
ಮೊದಲೇ ಎಲ್ಲವನ್ನೂ ಪರೀಕ್ಷೆ ಮಾಡಿ ಖಚಿತಪಡಿಸಿಕೊಳ್ಳಲಾಗಿತ್ತು. ಹಗ್ಗಕ್ಕೆ ಸರಣಿಯಾಗಿ ಬಿಗಿದ ಡೈನಮೈಟ್‌ಗಳು ಮತ್ತು ಅವುಗಳಿಗೆ ಸಂಪರ್ಕ ನೀಡಿದ್ದ ವೈರುಗಳನ್ನು ಬೋರ್‌ವೆಲ್‌ನೊಳಗೆ ಇಳಿಬಿಡುವುದು ಬಾಕಿ ಇತ್ತು. ಇಂತಹ ಕೆಲಸ ಮಾಡಲು ಪಳಗಿದ ವ್ಯಕ್ತಿಗಳೇ ಇರುತ್ತಾರೆ. ಇವರು ಯಾವುದೇ ಅಪಾಯವಾಗದಂತೆ ಮುನ್ನೆಚ್ಚರಿಕೆ ಕೈಗೊಂಡು ಸ್ಪೋಟಕ ಸಿಡಿಸುತ್ತಾರೆ. ಆದರೆ ಮೇಲೆ ಮಾತ್ರ ಸ್ಪೋಟಕ ಸಿಡಿಸುವುದು ಗೊತ್ತಿದ್ದ ನಿಪುಣರಿಗೆ, ಬೋರ್‌ವೆಲ್‌ನಲ್ಲಿ ಅದೂ ಒಟ್ಟಿಗೆ 50 ಸ್ಪೋಟಕ ಸಿಡಿಸುವುದು ಹೆದರಿಕೆ ಹುಟ್ಟಿಸಿತ್ತು. ಅನಾಹುತ ಊಹಿಸಿ ಅವರು ಇದಕ್ಕೆ ನಿರಾಕರಿಸಿದ್ದರು.
ಅವರು ನಿರಾಕರಿಸಿದರೇನು ತಾನೇ ಆ ಕಾರ್ಯ ಮಾಡಿ ಮುಗಿಸುವುದಾಗಿ ರಾಮಲಿಂಗಾರೆಡ್ಡಿ ಪಣ ತೊಟ್ಟಿದ್ದ. ಮೊದಲಿನಿಂದಲೂ ಹಠವಾದಿ. ಅದೇ ಹಠಮಾರಿತನದಿಂದ ಹಲವು ಕಳ್ಳತನ ಮಾಡಿಸಿದ ಆರೋಪಗಳು ಆತನ ಮೇಲಿದ್ದವು. ಜತೆಗೆ ಬೆಲೆ ಬಾಳುವ ಮರಗಳನ್ನು ಕತ್ತರಿಸಿ ಮಾರುತ್ತಾನೆ ಎಂಬ ಆರೋಪವನ್ನು ಅರಣ್ಯ ಇಲಾಖೆ ಮಾಡಿತ್ತು. ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋಣವೆಂದರೆ, ಅವನಿಗೆ ಅಪಾರ ಜನಬೆಂಬಲವಿತ್ತು. ಆತನ ವಿರುದ್ಧ ಬಲವಾದ ಸಾಕ್ಷ್ಯಗಳಿಲ್ಲದೆ ಕ್ರಮಕ್ಕೆ ಮುಂದಾಗಲು ಅರಣ್ಯ ಮತ್ತು ಪೊಲೀಸ್ ಇಲಾಖೆ ಹಿಂಜರಿಯುತ್ತಿದ್ದವು. ಅದನ್ನೇ ಇಲಾಖೆಗಳ ಬಲಹೀನತೆ ಎಂದು ಭಾವಿಸಿದ್ದ ಆತ. ಸ್ಪೋಟಕ ವಿಚಾರದಲ್ಲಿ ಪರಿಣಿತರು ಹೇಳಿದ ಮಾತುಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿ ತಾನೇ ಸಾಹಸ ಮಾಡಲು ಮುಂದಾಗಿದ್ದ.

ರಾಮಲಿಂಗಾರೆಡ್ಡಿ ಬಾವಿಯ ಒಳಗೆ ಕುಳಿತು, ಬೋರ್‌ವೆಲ್ ಒಳಗೆ ಇಳಿಬಿಡುವ ಮುನ್ನ ಐವತ್ತೂ ಸ್ಪೋಟಕಗಳಿಗೆ ವೈರಿನ ಸಂಪರ್ಕ ಸರಿಯಾಗಿದೆಯೇ ಎಂದು ಪರೀಕ್ಷೆ ಮಾಡುತ್ತಿದ್ದ. ಅದೇ ಸಮಯಕ್ಕೆ ಆತನ ಅಣ್ಣನ ಮಗ ಸದಾಶಿವರೆಡ್ಡಿ, ಕೋಳಿಪಂದ್ಯ ಆರಂಭವಾಗಿದೆ ಎಂದು ಹೇಳಲು ಅಲ್ಲಿಗೆ ಬಂದ. ಬಾವಿಯೊಳಗೆ ತನ್ನ ದೊಡ್ಡಪ್ಪ ಯಾವುದೋ ಕೆಲಸದಲ್ಲಿ ಮುಳುಗಿರುವುದನ್ನು ಕಂಡು ಬಾವಿಯ ದಡದಲ್ಲಿ ನಿಂತುಕೊಂಡು ಗಮನಿಸತೊಡಗಿದ.
ಸದಾಶಿವರೆಡ್ಡಿ ನಿಂತಿದ್ದ ಜಾಗದಿಂದ ಕೆಲವೇ ಅಡಿಗಳ ದೂರದಲ್ಲಿ ನಾಲ್ಕು ಎವರೆಡಿ ಶೆಲ್‌ಗಳು ಬಿದ್ದಿದ್ದವು. ಬ್ಯಾಟರಿ ಶೆಲ್ ಇಲ್ಯಾಕೆ ಬಿದ್ದಿದೆ ಎಂಬ ಅನುಮಾನದಿಂದ ಹತ್ತಿರ ಹೋಗಿ ನೋಡಿದ. ಅದರ ಪಕ್ಕದಲ್ಲೇ ಯಾವುದೋ ಎರಡು ವೈರುಗಳು ಹಾದುಹೋಗಿದ್ದವು. ಅವುಗಳನ್ನು ನೋಡಿ ಒಂದರ ಮೇಲೊಂದು ನಾಲ್ಕೂ ಶೆಲ್‌ಗಳನ್ನು ಜೋಡಿಸಿ, ಅಲ್ಲಿಯೇ ಬಿದ್ದಿದ್ದ ಎರಡೂ ವೈರುಗಳನ್ನು ತೆಗೆದುಕೊಂಡು ಒಂದು ಕೆಳಗೆ ಮತ್ತೊಂದು ಮೇಲೆ ಸಂಪರ್ಕ ಸಿಗುವಂತೆ ಜೋಡಿಸಿದ ಅಷ್ಟೇ....

ದೂರದ ಮಾವಿನ ಮರದ ಕೆಳಗೆ ಕೋಳಿ ಪಂದ್ಯ ಆಡುವುದರಲ್ಲಿ ಮಗ್ನರಾಗಿದ್ದ ಜುಗಾರಿಗಳು ಆಸ್ಫೋಟ ಕೇಳಿ ಭಯಭೀತರಾಗಿದ್ದರು. ಅಂತಹ ಭಯಾನಕ ಶಬ್ಧ ಅವರ ಜೀವಮಾನದಲ್ಲೇ ಕೇಳಿರಲಿಲ್ಲ. ಕಿವಿಗಳು ಕೆಲ ಸಮಯ ಯಾವುದೇ ಶಬ್ಧವನ್ನು ಗ್ರಹಿಸದಾದವು. ಸ್ಫೋಟ ಸಂಭವಿಸಿದ ಜಾಗದಲ್ಲಿ ವಿಪರೀತವಾದ ಧೂಳು ಮುಗಿಲು ಮುಟ್ಟಿತ್ತು. ಅಷ್ಟು ಬಿಟ್ಟರೆ ಬೇರೆ ಯಾವುದೇ ಅನಾಹುತದ ಅರಿವು ಯಾರಿಗೂ ಬರಲಿಲ್ಲ.
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಬರುವ ವೇಳೆ ಬಾವಿಯಲ್ಲಿ ಡೈನಮೈಟ್ ಸ್ಫೋಟಗೊಳ್ಳಬೇಕು ಎಂದು ಪೂರ್ವನಿರ್ಧಾರವಾಗಿತ್ತು. ಆ ವಿಚಾರ ರಾಮಲಿಂಗಾರೆಡ್ಡಿಯ ಆಪ್ತರಿಗೆ ಮಾತ್ರ ಗೊತ್ತಿತ್ತು. ಹಾಗೆ ಪ್ಲಾನ್ ಮಾಡಿಕೊಂಡು ಈಗ ಪೊಲೀಸರು ಬರುವುದಕ್ಕೂ ಮೊದಲೇ ಸ್ಫೋಟ ನಡೆಯಲು ಕಾರಣವೇನು ಎಂಬುದು ಅವರಲ್ಲಿ ಅನುಮಾನ ಮೂಡಿಸಿತು. ಜತೆಗೆ ಸದಾಶಿವರೆಡ್ಡಿ, ರಾಮಲಿಂಗಾರೆಡ್ಡಿಯರ ನಾಪತ್ತೆ ಕೂಡ. ಕೂಡಲೇ ಎಲ್ಲರೂ ವಾಸ್ತವಕ್ಕೆ ಬಂದವರಂತೆ ಬಾವಿಯ ಕಡೆ ಓಡಿದರು.
ಬಾವಿಯ ಸಮೀಪ ಹೋದಾಗಲೇ ಅವರಿಗೆ ನಡೆದ ವಿಚಾರ ಅರ್ಥವಾಗಿದ್ದು. ಹುಡುಗಾಟಿಕೆಯಿಂದ ಸದಾಶಿವರೆಡ್ಡಿ ಶೆಲ್‌ಗಳಿಗೆ ಜೋಡಿಸಿದ ವೈರ್‌ಗಳಿಂದ ಏಕಾಏಕಿ 50 ಡೈನಮೈಟ್‌ಗಳು ಒಮ್ಮೆಲೇ ಸ್ಫೋಟಗೊಂಡಿದ್ದವು. ಕೈಯಲ್ಲಿ ಹಿಡಿದಿರುವಾಗಲೇ ಸ್ಫೋಟ ನಡೆದ ಕಾರಣ ರಾಮಲಿಂಗಾರೆಡ್ಡಿಯ ಅಂಗಾಂಗಗಳು ಛಿದ್ರವಾಗಿ  ಚೆಲ್ಲಾಪಿಲ್ಲಿಯಾಗಿದ್ದವು. ಅಷ್ಟು ಭೀಕರವಾಗಿತ್ತು ಸ್ಫೋಟ. ಇನ್ನು ದಡದ ಮೇಲೆ ಕುಳಿತು ಸಂಪರ್ಕ ಕಲ್ಪಿಸಿದ್ದ ಸದಾಶಿವರೆಡ್ಡಿಯ ಪಾಡೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಆದರೆ ಅವರ ದೇಹದ ಭಾಗಗಳು ಹಾಗೇ ಇದ್ದವು ಎಂಬುದಷ್ಟೆ ವ್ಯತ್ಯಾಸ.

ಸ್ಫೋಟ ನಡೆದು ಇಬ್ಬರು ಸತ್ತದ್ದು ಗೊತ್ತಾದ ಕೂಡಲೇ ಕೋಳಿ ಪಂದ್ಯಕ್ಕೆ ಬಂದಿದ್ದ ಜನರೆಲ್ಲಾ ನಾಪತ್ತೆಯಾದರು. ಕೋಳಿ ಪಂದ್ಯದ ಜೂಜುಕೋರರನ್ನು ಬಂಧಿಸಲು ಬಂದ ಪೊಲೀಸರಿಗೆ ಶವಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳುವ ಕೆಲಸ ಬಿತ್ತು. ರಾಮಲಿಂಗಾರೆಡ್ಡಿಯ ದೇಹ ಶವಪರೀಕ್ಷೆ ನಡೆಸಲೂ ಉಳಿದಿರಲಿಲ್ಲ ಎಂದರೆ ಸ್ಫೋಟದ ತೀವ್ರತೆ ಎಷ್ಟಿರಬಹುದು ಎಂಬುದನ್ನು ಊಹಿಸಬಹುದು.
ಶವಸಂಸ್ಕಾರಕ್ಕೆ ಬಂದ ರಾಮಲಿಂಗಾರೆಡ್ಡಿಯ ಸಂಬಂಧಿ ಶಿವಾರೆಡ್ಡಿ ಅಂದು ಹೇಳಿದ ಮಾತು ಅಲ್ಲಿ ನೆರೆದಿದ್ದವರ ಮನದಲ್ಲಿ ನಾಟಿದ್ದಂತೂ ಸತ್ಯ. 'ಮನುಷ್ಯ ಸತ್ತ ಮೇಲೆ ಹೂಳುವುದು ತಪ್ಪು. ಅಪರೂಪವಾದ ಮಾನವನ ಮಾಂಸ ಹಾಳು ಮಾಡುವುದಕ್ಕಿಂತ ಕಾಗೆ ಹದ್ದುಗಳಿಗೆ ಆಹಾರವಾಗಿ ಬಿಡುವುದೇ ಒಳಿತು ಎಂದು ಹೇಳುತ್ತಿದ್ದ ಹಾಗೆಯೇ ಆತ ಕಾಗೆ ಹದ್ದುಗಳಿಗೆ ಆಹಾರವಾದ' ಎಂದು ಹೇಳಿದ.
ಆದರೆ ಆ ಮಾತು ರಾಮಲಿಂಗಾರೆಡ್ಡಿಯ ಮೂರುದಿನಗಳ ಕಾರ್ಯದ ದಿನ ನಿಜವಾಗಿತ್ತು. ಬಾವಿಯಲ್ಲಿ ಆಸ್ಫೋಟ ನಡೆದ ರಭಸಕ್ಕೆ ರಾಮಲಿಂಗಾರೆಡ್ಡಿಯ ಒಂದು ಕಾಲು ಎಗರಿ ಬಂದು ದಡದಲ್ಲಿದ್ದ ತೆಂಗಿನ ಮರದಲ್ಲಿ ಸಿಕ್ಕಿಕೊಂಡಿತ್ತು. ಬಾವಿಯಲ್ಲಿ ಬಿದ್ದಿದ್ದ ಮಾಂಸವನ್ನು ಆರಿಸಿ ಚೀಲಕ್ಕೆ ತುಂಬಿ ದಫನ್ ಮಾಡಿದ ಸಂಬಂಧಿಕರಿಗೆ ತೆಂಗಿನ ಮರದಲ್ಲಿ ಒಂದು ಕಾಲು ನೇತಾಡುತ್ತಿದೆ ಎಂಬುದು ತಿಳಿಯಲೇ ಇಲ್ಲ. ಮೂರನೇ ದಿನದ ಕಾರ್ಯಕ್ಕಾಗಿ ಎಲ್ಲರೂ ಕಾಗೆಗೆ ಕೂಳು ಹಾಕುವಾಗ ದುರ್ವಾಸನೆ ಬೀರುತ್ತಿರುವುದನ್ನು ಗಮನಿಸಿ ಮರದಲ್ಲಿ ಪರಿಶೀಲಿಸಿದಾಗ ಒಂದು ಕಾಲು ನೇತಾಡುತ್ತಿರುವುದನ್ನು ಕಂಡು ದಂಗು ಬಡಿದಿದ್ದರು. ಪೊಲೀಸರನ್ನು ಹೊಡೆಯುವ ಯೋಜನೆಯಲ್ಲಿದ್ದ ರಾಮಲಿಂಗಾರೆಡ್ಡಿ ಮತ್ತೆಂದೂ ಬಾರದ ದೂರದ ಲೋಕಕ್ಕೆ ಪಯಣ ಬೆಳೆಸಿದ್ದ.

- ಅಶ್ವತ್ಥನಾರಾಯಣ್ ಎಲ್.
sathyajns@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.