ಬೈಟುಕಾಫಿ

ರಾಯಣ್ಣ ಬಾರಣ್ಣ

ಅವರವರ ಭಾವಕ್ಕೆ ಅವರವರ ಭಕುತಿಗೆ ಎಂದು ಇದೇ ಕಾರಣಕ್ಕೆ ಹೇಳಿರಲಿಕ್ಕೆ ಸಾಕು. ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳವೀಗ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ. ...

ರಾಯಣ್ಣ ಬಾರಣ್ಣ
Published On :

ಅವರವರ ಭಾವಕ್ಕೆ ಅವರವರ ಭಕುತಿಗೆ ಎಂದು ಇದೇ ಕಾರಣಕ್ಕೆ ಹೇಳಿರಲಿಕ್ಕೆ ಸಾಕು. ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳವೀಗ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.
ಬ್ರಿಟಿಷರ ವಿರುದ್ಧ ಹೋರಾಡಿದ ಚೆನ್ನಮ್ಮಳ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ವೀರಗಾಥೆ ತಿಳಿದಿಲ್ಲ ಎನ್ನುವವರೇ ಇಲ್ಲ. ಬ್ರಿಟಿಷರ ಪಾಲಿಗೆ ರಾಯಣ್ಣ ಸಿಂಹಸ್ವಪ್ನವಾಗಿದ್ದ. ಬ್ರಿಟಿಷರ ಮೋಸತಂತ್ರದಿಂದ ರಾಯಣ್ಣ ಬಂಧನಕ್ಕೊಳಗಾಗುತ್ತಾನೆ. ಒಂದು ವೇಳೆ ರಾಯಣ್ಣ ಜೀವಂತವಾಗಿದ್ದರೆ ತಮ್ಮ ಆಟ ನಡೆಯುವುದಿಲ್ಲ ಎಂದು ಬ್ರಿಟಿಷರು ರಾಯಣ್ಣನನ್ನು ಬೆಳಗಾವಿ ಸಮೀಪದ ನಂದಗಡದ ಆಲದ ಮರವೊಂದಕ್ಕೆ 1831ರಲ್ಲಿ ಸಾರ್ವಜನಿಕವಾಗಿ ಗಲ್ಲಿಗೇರಿಸಿದರು ಎನ್ನುತ್ತದೆ ಇತಿಹಾಸ. ಆತನ ಸಾಹಸ ಗಾಥೆ ಮಾತ್ರ ಎಂದೆಂದಿಗೂ ಅಮರ.
ರಾಯಣ್ಣನನ್ನು ಗಲ್ಲಿಗೇರಿಸಿರುವ ಸ್ಥಳವೀಗ ಪೂಜನೀಯ ಸ್ಥಾನವಾಗಿ, ಶಕ್ತಿ ಕೇಂದ್ರವಾಗಿ ಜನರ ಮನಸ್ಸಲ್ಲಿ ಮನೆ ಮಾಡಿದೆ. ದೇವಸ್ಥಾನಕ್ಕೆ ಹೋಗಿ ದೇವರನ್ನು ಕೈ ಮುಗಿಯುವಂತೆ ಸ್ಥಳೀಯರು ಈ ಸ್ಥಳಕ್ಕೆ ಬಂದು ರಾಯಣ್ಣನ ಭಾವಚಿತ್ರಕ್ಕೆ ನಿತ್ಯ ಪೂಜೆ ಸಲ್ಲಿಸುತ್ತಾರೆ. ಸಂಗೊಳ್ಳಿ ರಾಯಣ್ಣನಂತಹ ಶಕ್ತಿ, ಯುಕ್ತಿ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ.
ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಗರ್ಭೀಣಿಯರು ರಾಯಣ್ಣನನ್ನು ಗಲ್ಲಿಗೇರಿಸಿದ ಆಲದ ಮರಕ್ಕೆ ತೆಂಗಿನಕಾಯಿಯನ್ನು ಕಟ್ಟುವ ಮೂಲಕ, 'ರಾಯಣ್ಣನಂತಹ ಶಕ್ತಿಶಾಲಿ, ದೇಶಭಕ್ತ ಮಕ್ಕಳು ಜನಿಸಲಿ' ಎಂದು ವರ ಬೇಡುತ್ತಾರೆ. ಕಾಕತಾಳಿಯವೋ ಎನ್ನುವಂತೆ ಗಲ್ಲಿಗೇರಿಸುವ ಕಾಲಕ್ಕೆ ರಾಯಣ್ಣ, 'ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ, ಈ ಪುಣ್ಯ ಭೂಮಿಯಿಂದ ಬ್ರಿಟಿಷರ ವಿರುದ್ಧ ಹೋರಾಟ ಮುಂದುವರೆಸುವೆ. ಬ್ರಿಟಿಷರ ವಿರುದ್ಧ ಹೋರಾಡಲು ಮನೆಗೊಬ್ಬ ರಾಯಣ್ಣ ಹುಟ್ಟಲಿ' ಎಂದಿದ್ದರು. ಹೀಗಾಗಿಯೇ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳಕ್ಕೆ ಹೋಗಿ ರಾಯಣ್ಣನಂತ ಮಗ ಹುಟ್ಟಲಿ ಎಂದು ಕೇಳಿಕೊಳ್ಳುವ ಸಂಪ್ರದಾಯ ಇಲ್ಲೀಗ ನಡೆದು ಬಂದಿದೆ.
ಇಂಥ ಸಂಪ್ರದಾಯ ಶುರುವಾದದ್ದು ಹೇಗೆ ಎನ್ನುವುದಕ್ಕೆ ಸ್ಥಳೀಯರಿಂದಲೂ ಸ್ಪಷ್ಟ ಉತ್ತರ ಸಿಗುವುದಿಲ್ಲ. ಆದರೆ, ರಾಯಣ್ಣನ ಕುರಿತಾದ ಸಿನಿಮಾ ಒಂದು ವರ್ಷ ಓಡಿದೆ. ಇಲ್ಲಿ ಆತನನ್ನು ನೇಣಿಗೆ ಏರಿಸಿದ ಮರ ಪೂಜನೀಯವಾಗಿದೆ. ಸಂಗೊಳ್ಳಿ ರಾಯಣ್ಣ ಜನರ ಮನೆ,ಮನಗಳಲ್ಲಿ ಹೇಗೆ ನೆಲೆಯೂರಿದ್ದಾನೆ ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆ ಬೇಕಿಲ್ಲ.

- ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.