ಕನ್ನಡ ಆಟೋಟ

ನವೆಂಬರ್ ಮಾಸದಲ್ಲಿ ಮಾತ್ರ ಕನ್ನಡ ಹಬ್ಬ ಆಚರಿಸಿ ನಂತರ ಇನ್ನೊಂದು ನವೆಂಬರ್ಗೆ ಕಾಯುವ ಹಲವರಿಗಿಂತ ಭಿನ್ನವಾಗಿ, ಎಲ್ಲ ಮಾಸದಲ್ಲೂ ಕನ್ನಡ ಮಾಸದಿರಲಿ ಎನ್ನುವ ಕನ್ನಡ ಅಭಿಮಾನಿಯೊಬ್ಬರ ಆಟೋ ಬೆಂಗಳೂರಿನ ರಸ್ತೆಯುದ್ದಕ್ಕೂ ಚಲಿಸುತ್ತಿದ್ದರೆ ಎಲ್ಲರ ಗಮನ ಅದರತ್ತ ಸಾಗುತ್ತದೆ.
ಎಲ್ಲ ಒಂದೇ ರೀತಿ ಕಾಣುವ ಬೆಂಗಳೂರಿನ ಸುಮಾರು ಒಂದು ಲಕ್ಷ ಆಟೋಗಳಲ್ಲಿ ಕೆಲವು ಮಾತ್ರ ಎಲ್ಲರ ಲಕ್ಷ್ಯ ಸೆಳೆಯುತ್ತವೆ. ಅದರಲ್ಲಿ ತನ್ನ ಕಾಯದ ಸುತ್ತಲೂ ಕನ್ನಡದ ಗಣ್ಯರ ಭಾವಚಿತ್ರ ಬೆಸೆದುಕೊಂಡು ನವಂಬರ್ 1ಕ್ಕೆಂದೇ ಕಾಯದೆ ನಿತ್ಯ ಕನ್ನಡ ಕಾಯಕದಲ್ಲಿ ತೊಡಗಿರುವ ಆಟೋ ಸಹ ಒಂದು.
1997ರಿಂದಲೂ ಆಟೋ ಓಡಿಸುತ್ತಿರುವ ಜವರೇಗೌಡ ನಗರದ ಗೋವಿಂದರಾಜು ಅಪ್ಪಟ ಕನ್ನಡ ಅಭಿಮಾನಿ. ನಾಲ್ಕನೆ ತರಗತಿ ಓದಿದ ಗೋವಿಂದರಾಜು ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುವುದರ ಜೊತೆ ಡಾಕ್ಟರ್ ರಾಜ್ ಅವರ ಅಭಿಮಾನಿಯೂ ಹೌದು.
ಎದುರಿನಲ್ಲಿ ಕನ್ನಡಾಂಬೆ, ಡಾ. ರಾಜ್, ಶಂಕರ್ನಾಗ್, ವಿಷ್ಣುವರ್ಧನ್, ಜ್ಞಾನಪೀಠ ಪುರಸ್ಕೃತರು, ಸರ್ ಎಂವಿ, ಡಾ.ಜಿಎಸ್ಎಸ್, ಸಿ. ಅಶ್ವತ್ಥ್, ಗೋಪಾಲಕೃಷ್ಣ ಅಡಿಗ, ಕುಮಾರವ್ಯಾಸ, ಕೆಂಪೇಗೌಡ, ಗಾಂಧೀಜಿ, ನೇತಾಜಿಯವರ ಭಾವಚಿತ್ರ ಬೆಸುಗೆ ಮಾಡಿಸಿಕೊಂಡಿದೆ ಆ ಆಟೋ. ಹಿಂಭಾಗದಲ್ಲಿ ಟಿ.ಪಿ.ಕೈಲಾಸಂ, ನಿಸಾರ್ ಅಹಮದ್, ಜಯಚಾಮರಾಜೇಂದ್ರ ಒಡೆಯರ್, ಸಂಗೊಳ್ಳಿ ರಾಯಣ್ಣ, ಬಸವಣ್ಣ, ಮದಕರಿ ನಾಯಕರಿದ್ದಾರೆ. ಡಾ. ರಾಜ್ ಮತ್ತವರ ಪುತ್ರರು ನಟಿಸಿರುವ ಬಹುತೇಕ ಎಲ್ಲ ಚಿತ್ರಗಳ 870ಕ್ಕೂ ಹೆಚ್ಚು ಹಾಡುಗಳು ಅವರ ಸ್ಟೀರಿಯೋದಲ್ಲಿ ಮೊಳಗುತ್ತಿರುತ್ತವೆ. ಆಟೋ ಓಡಿಸಿ ಬರುವ ಸ್ವಲ್ಪ ಆದಾಯದಲ್ಲೂ ಕನ್ನಡ ಸೇವೆ ಮಾಡುತ್ತಿರುವ ಗೋವಿಂದರಾಜು, ಕನ್ನಡ ಪತ್ರಿಕೆಗಳನ್ನು ಚಾಲಕನ ಹಿಂಭಾಗದ ಸರಳಿನ ಮೇಲೆ ನೇತು ಹಾಕಿ ಸಂಚಾರಿ ಲೈಬ್ರರಿ ಮಾಡುವ ಉದ್ದೇಶವನ್ನೂ ಇಟ್ಟುಕೊಂಡಿದ್ದಾರೆ.
- ಬಿ.ಎಸ್.ವೆಂಕಟಾಚಲ ಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


