ಬೈಟುಕಾಫಿ

ಇತಿ ನಿಮ್ಮ ಶಿಷ್ಯ

ಇತಿ ನಿಮ್ಮ ಶಿಷ್ಯ
Published On :

ಪ್ರಿಯ ಮೇಸ್ಟ್ರೇ...
ಇಂದು ನಿಮ್ಮ ದಿನ ಎಂದು ನೆನಪಿಸಿಕೊಳ್ಳುತ್ತೇನೆ. ಪ್ರತಿ ದಿನವೂ ನಿಮ್ಮ ದಿನವೇ ಎಂದು ಮನಸ್ಸಿಗೆ ಹೊಳೆಯುತ್ತಿದೆ. ನೀವು ಪುಟ್ಟ ಕೈಬೆರಳುಗಳನ್ನು ಹಿಡಿದು ನಡೆಸಿದ, ದೀಪ ಎತ್ತಿ ಹಿಡಿದು ದಾರಿಯನ್ನು ಬೆಳಗಿದ ಚಿತ್ರಗಳು ನೆನಪಾಗುತ್ತವೆ.
ನೀವು ತರಗತಿಯಲ್ಲಿ ಹೇಳಿಕೊಟ್ಟ ಪಾಠಗಳು ಕಡಿಮೆ. ಅದರಿಂದಾಚೆಗೆ ಕಲಿಸಿಕೊಟ್ಟುದೇ ಅನಂತ. ಜ್ವರ ಬಂದು ವಾರಗಟ್ಟಲೆ ಮಲಗಿದಾಗ ಆತಂಕದಿಂದ ಮನೆಗೇ ಧಾವಿಸಿ ಬಂದು ವಿಚಾರಿಸಿಕೊಂಡ ನಿಮ್ಮ ನೋಟ ಕಣ್ಣಿಗೆ ಕಟ್ಟುತ್ತದೆ. ಮನೆಗೆ ಸಾಗುವ ದಾರಿಯ ಪಕ್ಕದಲ್ಲಿ ನೀವು ತೋರಿಸಿ ವಿವರಿಸುತ್ತಿದ್ದ ಮರಗಿಡಗಳ ಜಾತಿ, ವೈವಿಧ್ಯ, ಗುಣ, ಉಪಯೋಗಗಳು ಇಂದೂ ಮರೆತುಹೋಗಿಲ್ಲ. ಮನೆಯಲ್ಲಿ ರಾಶಿಬಿದ್ದ ಪುಸ್ತಕಗಳನ್ನು ತೋರಿಸಿ 'ಬೇಕಾದ್ದು ತಗೋ, ಓದು' ಎಂದು ನೀವು ಹೇಳಿದ ನಂತರ ನನ್ನ ಪಾಲಿಗೆ ತೆರೆದುಕೊಂಡ ಹೊಸ ವಿಶ್ವದ ಬಗ್ಗೆ ಏನು ಹೇಳಲಿ?
ನನ್ನ ಓರಗೆಯವರು ನಿಮ್ಮ ಬಗ್ಗೆ ಹೇಳುವುದನ್ನು ಕೇಳಿದ್ದೇನೆ- ನೀವೊಬ್ಬರು ಇಲ್ಲದೆ ಹೋಗಿದ್ದರೆ ನಾವು ಹಟ್ಟಿಯ ಸಗಣಿ ಬಾಚಬೇಕಾಗಿತ್ತು ಅಂತ. ಮನೆ, ಹೊಲ, ತೋಟ, ಕಾಡು, ಅಪ್ಪ, ಅಮ್ಮ ಎಂದಷ್ಟೇ ಇದ್ದ ಜೀವಗಳಿಗೆ ನೀವು  ಹೊಸ ಲೋಕದ ನೋಟಗಳನ್ನು ತೆರೆಸಿದಿರಿ. ಪಬ್ಲಿಕ್ ಪರೀಕ್ಷೆಗೆ ನಗರಕ್ಕೆ ಕರೆದೊಯ್ದವರು ಅವಕಾಶಗಳ ಬಾಗಿಲಿಗೇ ನಮ್ಮನ್ನು ಕರೆದೊಯ್ದು ಬಿಟ್ಟಿರಿ.
ಯಾವ್ಯಾವ ರೂಪದಲ್ಲಿದ್ದೀರಿ ನೀವು! ಮಗುವೊಂದು ಅಮಾಯಕ ನಗೆಯನ್ನು ಚೆಲ್ಲುವುದನ್ನು, ಮರೆತುಹೋದ ಪರ್ಸ್ ಹಿಂದಿರುಗಿಸುವ ಆಟೋ ಚಾಲಕ ಪ್ರಾಮಾಣಿಕತೆಯನ್ನು, ದಾರಿ ತಪ್ಪಿದ ಮಗುವನ್ನು ಮನೆ ತಲುಪಿಸುವ ಆಯಾ ನಿಸ್ವಾರ್ಥ ವಾತ್ಸಲ್ಯವನ್ನು, ಮಾರ್ಗದಲ್ಲೇ ನಿಲ್ಲಿಸಿಕೊಂಡು ತಿಳಿಹೇಳುವ ಯಾರೋ ಗುರುತಿಲ್ಲದ ಹಿರಿಯರು ಸದ್ವರ್ತನೆಯನ್ನು ಹೇಳದೆಯೂ ಕಲಿಸಿಕೊಡುವ ಗುರುಗಳ ರೂಪದಲ್ಲೇ ಇದ್ದಾರಲ್ಲವೆ?
ನಮ್ಮ ನಾಡು ಪುಣ್ಯ ಮಾಡಿದೆಯೆಂದೇ ಹೇಳಬೇಕು. ಎಂತೆಂಥ ಗುರುಗಳನ್ನು ಕಂಡಿದ್ದೇವೆ ನಾವು! ಸಕಲ ಕನ್ನಡಿಗರಿಗೆ ಎಚ್.ನರಸಿಂಹಯ್ಯ, ರೈತರಿಗೆ ನಂಜುಂಡಸ್ವಾಮಿ, ಕವಿಗಳಿಗೆ ಬೇಂದ್ರೆ ಮಾಸ್ತರು, ಸಾಹಿತಿಗಳಿಗೆ ತೀನಂಶ್ರೀ, ಬಿಎಂಶ್ರೀ, ಕುವೆಂಪು, ಸಿನೆಮಾದವರಿಗೆ ಚಾಮಯ್ಯ ಮೇಸ್ಟ್ರು, ಹೊಸ ಪೀಳಿಗೆಯ ಬರಹಗಾರರಿಗೆ ಕಿ.ರಂ., ಲಂಕೇಶ್, ಯುಆರ್‌ಎ, ಪತ್ರಕರ್ತರಿಗೆ ವೈಎನ್ಕೆ, ಟಿಎಸ್ಸಾರ್, ಖಾದ್ರಿ... ನೂರಾರು ಹೆಸರುಗಳು. ಇನ್ನು ಹೆಸರಾಗದ, ಹೆಸರು ಬೇಕಾಗಿಲ್ಲದ ಸಾವಿರಾರು ಗುರುಗಳ ಬಗ್ಗೆ ಏನು ಹೇಳಲಿ? ನಿಮ್ಮ ಹೆಸರೇ ಹೇಳದೆ ತುಟಿಯ ಕಚ್ಚಿಕೊಳ್ಳಲೆ!
ಮೇಸ್ಟ್ರೇ, ಇಂದು ನೀವು ಇಲ್ಲದಿರಬಹುದು. ಆದರೆ ನೀವು ಕಲಿಸಿಕೊಟ್ಟ ಪಾಠಗಳು ನಮ್ಮಲ್ಲಿ, ನಮ್ಮ ಮೂಲಕ ನಮ್ಮ ಮಕ್ಕಳಲ್ಲಿ ಬೆಳೆಯುತ್ತಿವೆ. ನಿಮ್ಮ ಪರಂಪರೆ ಮುಂದುವರಿಯುತ್ತಿದೆ. ಇದು ನಿಮಗೆ, ನಿಮ್ಮಂತಿರುವ ಸಾವಿರಾರು ಗುರುಗಳಿಗೆ ಅರ್ಪಣೆ.
- ಇತಿ ನಿಮ್ಮ ಶಿಷ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.