ಅಧಿಕ ನಾರು ತಿಂದು ಯಡವಟ್ಟು ಮಾಡಿಕೊಂಡ!

ಆತ 34ರ ತರುಣ. ಮಲಬದ್ಧತೆಯ ಅತಿರೇಕದ ಸ್ಥಿತಿ ತಲುಪಿದ್ದ. ವಾರಕ್ಕೆ ಮೂರು ದಿನವಲ್ಲ, ಒಂದು ದಿನವೂ ಜೈವಿಕ ತ್ಯಾಜ್ಯ ವಿಸರ್ಜನೆ ಕಷ್ಟವಾಗುತ್ತಿತ್ತು. ನಾರಿನ ಅಂಶದ ಕೊರತೆಯಿಂದ ಹೀಗಾಗಿದೆ ಎಂದು ತೀರ್ಮಾನಕ್ಕೆ ಬಂದ ವೈದ್ಯರು, ದಿನಕ್ಕೆ ಎರಡು ಔನ್ಸ್‌ನಷ್ಟು ಅಂದರೆ ಅಜಮಾಸು ಮಧ್ಯಮ ಗಾತ್ರದ ಬೌಲ್‌ನಲ್ಲಿ ಮೂರನೇ ಎರಡರಷ್ಟು ಭಾಗ ಗೋಧಿ ಹಿಟ್ಟು ತಿಂದರೆ ಸಾಕಷ್ಟು ಪ್ರಮಾಣದ ನಾರು ಲಭಿಸುತ್ತದೆ ಎನ್ನುವ ಸಲಹೆ ನೀಡಿದರು. ಅದನ್ನು ಈ ಮಹಾಶಯ ಸರಿಯಾಗಿ ಪಾಲಿಸಿದ. ದಿನವೂ ತಪ್ಪದೇ ವೈದ್ಯರು ಹೇಳಿದಷ್ಟು ಅಥವಾ ಅದಕ್ಕಿಂತ ತುಸು ಹೆಚ್ಚೇ ಗೋಧಿ ಹಿಟ್ಟಿನ ಪದಾರ್ಥಗಳನ್ನು ಸೇವಿಸುತ್ತಿದ್ದ. ಮ್ಯಾಜಿಕ್ ನೋಡಿ. ಒಂದೆರಡು ದಿನಗಳಲ್ಲೇ ಮಲಬದ್ಧತೆ ಕಡಿಮೆಯೂ ಆಯಿತು. ಆದರೆ ಎರಡು ವಾರ ಕಳೆದಿರಬಹುದು. ಇದ್ದಕ್ಕಿದ್ದಂತೆ ಮಲವಿಸರ್ಜನೆಯಲ್ಲಿ ಮತ್ತೆ ಸಮಸ್ಯೆ ಶುರುವಾಯಿತು. ಜತೆಗೆ ಸಹಿಸಲು ಸಾಧ್ಯವಾಗದ ಹೊಟ್ಟೆನೋವು. ಸ್ಕ್ಯಾನ್ ಮಾಡಿದಾಗ ಕರುಳಿನ ಭಾಗದಲ್ಲಿ ನಾರಿನ ಅಂಶ ಸಂಗ್ರಹವಾಗಿ ಗಡ್ಡೆಯಂತಾಗಿದೆ ಎನ್ನುವುದು ಪತ್ತೆಯಾಯಿತು. ಅದನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆ ಬಿಟ್ಟು ಬೇರೆ ಮಾರ್ಗ ಇರಲಿಲ್ಲ. ಆಪರೇಷನ್ ಮಾಡಿದ ವೈದ್ಯರು ಮೂಕವಿಸ್ಮಿತರಾದರು. ಅವರು ಅಂದುಕೊಂಡಿದ್ದಕ್ಕಿಂತ ದೊಡ್ಡ ಗಡ್ಡೆ ಅದಾಗಿತ್ತು.
ವೈದ್ಯರ ಶಿಫಾರಸ್ಸಿನಂತೆ ಆತ ದಿನವೂ ಗೋಧಿ ಹಿಟ್ಟು ತಿನ್ನಲಾರಂಭಿಸಿದ್ದ. ಅದಕ್ಕೆ ತಕ್ಕಂತೆ ನೀರು ಜಾಸ್ತಿ ಕುಡಿಯಬೇಕಿತ್ತು. ಯುವಕ ಜಾಸ್ತಿ ನೀರು ಕುಡಿಯುತ್ತಿರಲಿಲ್ಲ. ಏಕಾಏಕಿ ಅಧಿಕ ಪ್ರಮಾಣದ ನಾರಿನ ಅಂಶ ದೇಹ ಸೇರಿದ್ದು ಮತ್ತು ಜಾಸ್ತಿ ನೀರು ಕುಡಿಯದೇ ಇರುವುದು ಎರಡೂ ಸೇರಿಕೊಂಡು ಸಮಸ್ಯೆ ಬಿಗಡಾಯಿಸಿತ್ತು. ಕರುಳಿನ ಭಾಗದಲ್ಲಿ ಮಲದ ಚಲನೆ ಜಾಸ್ತಿಯಾಗುವುದನ್ನು ಉತ್ತೇಜಿಸಬೇಕಿದ್ದ ನಾರೇ ಶೇಖರಗೊಂಡು ಕುಳಿತಿತ್ತು. ತಪ್ಪು ವೈದ್ಯರದ್ದೊ, ಯುವಕನದ್ದೊ ಎನ್ನುವುದು ಬೇರೆ ಪ್ರಶ್ನೆ. ವೈದ್ಯರು ಹಂತಹಂತವಾಗಿ ನಾರಿನ ಅಂಶದ ಆಹಾರ ಸೇವನೆ ಹೆಚ್ಚಿಸುವಂತೆ ತಿಳಿಸಿ ಹೇಳಬೇಕಿತ್ತು. ಅಧಿಕ ಪ್ರಮಾಣದಲ್ಲಿ ನೀರು ಕುಡಿಯುವಂತೆಯೂ ಸಲಹೆ ಮಾಡಬೇಕಿತ್ತು. ಯುವಕ ಕೂಡ ದೇಹಸ್ಥಿತಿಯಲ್ಲಿ ಏರಿಳಿತ ಆಗುತ್ತಿದ್ದಂತೆ ವೈದ್ಯರನ್ನು ಸಂಪರ್ಕಿಸಬೇಕಿತ್ತು.
ಇದು ಅಮೆರಿಕದಲ್ಲಿ ನಡೆದ ಘಟನೆ. ಆದರೆ ಮಲಬದ್ಧತೆ ಕುರಿತು ಮಾತನಾಡುವಾಗ ಬಹುತೇಕ ಎಲ್ಲ ತಜ್ಞರೂ ಈ ಪ್ರಕರಣವನ್ನು ಉಲ್ಲೇಖಿಸುತ್ತಾರೆ. ಏಕೆಂದರೆ ಶರೀರಕ್ಕೆ ಹೊಂದಿಕೊಳ್ಳಲು ಆಸ್ಪದವೇ ಸಿಗದಂತೆ ಒಮ್ಮೆಲೇ ನಾರಿನ ಪದಾರ್ಥ ಸೇವನೆ ಅಧಿಕಗೊಳಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಸಿಗಲಿಕ್ಕಿಲ್ಲ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


