ನಾವು ಪಡೆದದ್ದು ಉಪಯೋಗಕ್ಕೆ ಬಾರದು!
ಜೀವನದಲ್ಲಿ ಅದೆಷ್ಟೋ ಒಳಿತು-ಕೆಡುಕಿನ ಘಟನೆಗಳು ಘಟಿಸುತ್ತಲೇ ಇರುತ್ತವೆ. ಆದರೆ ಅವೆಲ್ಲವೂ ನಮಗೆ ಅರಿವಿಲ್ಲದೇ ನಡೆದಾಗ ನಮಗೆ ಯಾವುದೇ ರೀತಿಯ ನೋವುಂಟಾಗುವುದಿಲ್ಲ. ಆದರೆ ಆ ಘಟನೆಗಳು ನಮ್ಮ ಗ್ರಹಿಕೆಗೆ ಬಂದಾಗ ನಾವು ಉದ್ವೇಗಕ್ಕೆ ಒಳಗಾಗುತ್ತೇವೆ, ಬೇಸರಪಡುತ್ತೇವೆ. ನಾವು ಉಪಯೋಗಿಸದೇ ಇರುವ ವಸ್ತುಗಳು ಆ ಕ್ಷಣದಲ್ಲಿ ನಮ್ಮ ಬಳಿ ಇರುವುದಿಲ್ಲ, ಆದರೆ ಮನಸ್ಸಿನಲ್ಲಿ ಅದರ ಬಗ್ಗೆ ಒಂದು ರೂಪುರೇಷೆಯನ್ನು ನಿರ್ಮಿಸಿಕೊಂಡಿರುತ್ತೇವೆ. ಆದ್ದರಿಂದಲೇ ಒಂದು ವಸ್ತು ಅಥವಾ ವಿಷಯದ ಬಗ್ಗೆ ಪ್ರತಿಯೊಬ್ಬರ ನಿಲುವೂ ಬೇರೆ ಬೇರೆಯದ್ದಾಗಿರುತ್ತದೆ. ಹಾಗೆಯೇ ವಸ್ತುಸ್ಥಿತಿ ಮನಸ್ಸಿನ ಗ್ರಹಿಕೆಗೆ ಬಾರದಿದ್ದರೆ ನಮಗೆ ಬೇಸರವಾಗುವುದಿಲ್ಲ. ನಾವು ನಮಗೆ ಬೇಕಾದದ್ದು, ಬೇಡವಾದದ್ದು ಎಲ್ಲವನ್ನೂ ಪಡೆಯುತ್ತೇವೆ. ಅದು ಪ್ರಕೃತಿಯ ನಿಯಮ.
ನಾವು ಒಂದು ವಿಷಯದ ಬಗ್ಗೆ ಒಂದು ನಿಲುವು ತಾಳಿ, ಅದು ನಾವು ಬಯಸಿದಂತೆ ಆಗಬೇಕೆಂದು ಆಸೆ ಪಡುತ್ತೇವೆ. ಆ ನಮ್ಮ ಕನಸಿನೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತೇವೆ. ಆದರೆ ಅದು ನಮ್ಮ ಎಣಿಕೆಯಂತೆ ಆಗದಿದ್ದಾಗ ನಾವು ದುರ್ಬಲರಾಗುತ್ತೇವೆ, ಆತಂಕಗೊಳ್ಳುತ್ತೇವೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂದು ತಿಳಿದೂ ತಿಳಿದೂ ಎಲ್ಲವೂ ಶಾಶ್ವತ ಎಂಬಂತೆಯೇ ಅದಕ್ಕೆ ಅಂಟಿಕೊಂಡಿರುತ್ತೇವೆ. ಸತ್ಯವೆಂದರೆ, ನಾವು ಯಾವುದನ್ನು ಪಡೆದಿರುತ್ತೇವೆಯೋ ಮತ್ತು ಯಾವುದನ್ನು ಪಡೆಯಬೇಕೆಂದಿರುತ್ತೇವೆಯೋ ಅದು ನಿಜವಾಗಿ ನಮಗೆ ಉಪಯೋಗಕ್ಕೆ ಬರುವುದು ವಿರಳ.
ನಿದ್ರಾವಸ್ಥೆಯಲ್ಲಾಗಲೀ, ಸ್ವಪ್ನಾವಸ್ಥೆಯಲ್ಲಾಗಲೀ, ಲೋಕದ ಆಗು-ಹೋಗುಗಳು, ದುಃಖ-ದುಮ್ಮಾನಗಳು ನಮ್ಮ ನೆಮ್ಮದಿ ಕೆಡಿಸುವುದಿಲ್ಲ. ಆದರೆ ಜಾಗೃತಾವಸ್ಥೆಯಲ್ಲಿ ಇರುವಾಗ ಕಷ್ಟ-ನಷ್ಟಗಳು ನಮ್ಮನ್ನು ಹಿಂಸಿಸುತ್ತವೆ. ಗಾಢ ನಿದ್ರೆಯಲ್ಲಿರುವಾಗ ಯಾರೂ ಯಾವುದೇ ರೀತಿಯ ತೊಂದರೆಯನ್ನೋ-ನೋವನ್ನೋ ಅನುಭವಿಸುವುದಿಲ್ಲ, ಆರೋಗ್ಯದ ತೊಂದರೆ ಒಂದನ್ನು ಬಿಟ್ಟು. ಜಾಗೃತಾವಸ್ಥೆಯಲ್ಲಿಯೂ ನಾವು ಲಾಭ-ನಷ್ಟದ ಕಡೆಗೆ ಹೆಚ್ಚು ಯೋಚಿಸದೇ ಮನದಲ್ಲಿ ಬಂದು ಹೋಗುವ ಯೋಚನೆಗಳಿಗೆ ಹೆಚ್ಚಿನ ಗಮನ ಕೊಡದೇ ಇರುವುದನ್ನು ರೂಢಿಸಿಕೊಂಡರೆ ನಾವು ಗಲಿಬಿಲಿಗೊಳಗಾಗುವುದಿಲ್ಲ. ನಮಗೆ ದೈಹಿಕವಾಗಿ ತೊಂದರೆ ಕೊಡದ ನಷ್ಟವನ್ನು ನಾವು ಒಂದು ಯೋಚನೆಗೆ ಹೋಲಿಸಬಹುದು. ಅವು ಬರುತ್ತಿರುತ್ತವೆ, ಹೋಗುತ್ತಿರುತ್ತವೆ. ಅದು ಅದರ ಗುಣಧರ್ಮ. ಯಾವುದೇ ಯೋಚನೆ ಕೂಡ ಶಾಶ್ವತವಲ್ಲ. ನಾವು ಯೋಚನೆಯನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳುವುದನ್ನು ರೂಢಿಸಿಕೊಂಡರೆ, ಜೀವನದ ಯಾವುದೇ ಘಟನೆಯನ್ನು ಸ್ಥೈರ್ಯದಿಂದ ಎದುರಿಸಲು ಸಿದ್ಧರಾಗುತ್ತೇವೆ. ಆಗ ನಮಗೆ ಜೀವನದಲ್ಲಿ ದೈಹಿಕವಾದ ತೊಂದರೆಯೊಂದನ್ನು ಬಿಟ್ಟು ಇನ್ಯಾವುದೇ ತೊಂದರೆ ಇಲ್ಲವೆಂಬುದರ ಅರಿವಾಗುತ್ತದೆ. ನಮ್ಮ ಗುರಿಯನ್ನು ಮನಸ್ಸಿನಲ್ಲಿ ಹಾದು ಹೋಗುವ ಯೋಚನೆಗಳಿಗಷ್ಟೇ ಸೀಮಿತವಾಗಿಡದೆ, ಅದರ ಪರಿಧಿಯ ಹೊರಗೆ ಕೊಂಡೊಯ್ದರೆ, ನೆಮ್ಮದಿಯ ಜೀವನ ನಡೆಸಬಹುದು.
(ಮುಂದುವರಿಯುವುದು)
- ಕಿರಣ್ ಉಪಾಧ್ಯಾಯ
keyrun1970@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

