ಹೊಟ್ಟೆಕಿಚ್ಚಿನ ಪಯಣಕ್ಕೆ ಕೊನೆ ಇಲ್ಲ
ಕೇವಲ ಹಣದ ಬಗ್ಗೆ ಯೋಚಿಸುವ ವ್ಯಕ್ತಿ ಕಾಗದದ ಮೇಲಿನ ಅಂಕಿ-ಅಂಶಗಳ ಕುರಿತಷ್ಟೇ ಯೋಚಿಸುತ್ತಿರುತ್ತಾನೆ. ಆದರೆ, ಕಾಗದ-ಪತ್ರಗಳನ್ನು ಅವಲಂಬಿಸುವುದನ್ನು ನಿಲ್ಲಿಸಿದಾಗ ಮನಸ್ಸು ತಾನಾಗಿಯೇ ನೆಮ್ಮದಿಯಿಂದ ಇರಬಹುದಾದ ಇತರ ದ್ವಾರದತ್ತ ಮುಖ ಮಾಡುತ್ತದೆ. ಭದ್ರತೆ ಅಥವಾ ಭಯದ ಬಗ್ಗೆ ಚಿಂತಿಸದೇ ಜೀವನದಲ್ಲಿ ಬೇರೆ ಮಾರ್ಗದ ಅಭಿವೃದ್ಧಿಯೆಡೆಗೆ ಗಮನ ಕೊಡುತ್ತದೆ.
ಈ ಲೋಕದಲ್ಲಿ ಯಾವುದೂ ಸುರಕ್ಷಿತವಾದುದಲ್ಲ ಎಂಬ ಸತ್ಯ ತಿಳಿದರೆ, ಭಯ ತಾನಾಗಿಯೇ ನಮ್ಮಿಂದ ದೂರವಾಗುತ್ತದೆ. ನಮ್ಮ ಭವಿಷ್ಯಕ್ಕಾಗಿ ಕೂಡಿಸಿ ಇಡಲೇಬಾರದೆಂದೇನೂ ಅಲ್ಲ. ಆದರೆ, ಏನು, ಎಷ್ಟು ಎಂಬುದರ ನಿರ್ಣಯ ಹೇಗೆ ನಾವು ನಮ್ಮ ಕಳೆದುಹೋದ ದಿನಗಳ ಅನುಭವ ಮತ್ತು ಮಂದಿನ ದಿನಗಳ ನಿರೀಕ್ಷೆಯಲ್ಲಿ ಕೂಡಿಸಿಡುತ್ತೇವೆ. ಆದರೆ, ಎಷ್ಟೇ ಅನುಭವವಿದ್ದರೂ ಭವಿಷ್ಯವೆಂಬುದು ಅನಿಶ್ಚಿತವಾದದ್ದು, ಊಹೆಗೆ ನಿಲುಕದ್ದು. ಖಚಿತವಲ್ಲದ ಭವಿಷ್ಯವನ್ನು ಬಲಪಡಿಸುವುದಕ್ಕೋಸ್ಕರ ವರ್ತಮಾನದ ನೆಮ್ಮದಿಯನ್ನು ಬಲಿಗೊಡುವುದರಲ್ಲಿ ಏನು ಅರ್ಥ? ಅದೊಂದು ರೀತಿಯ ವಿಮೆ ಇದ್ದಂತೆ. ಶ್ರೀಮಂತರಾಗಿ ಸಾಯಬೇಕೆಂದು ಬದುಕಿರುವಾಗ ವ್ಯವಸೆ ಮಾಡಿಕೊಂಡಂತೆ. ಭವಿಷ್ಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಚಿಂತಿಸದೆ ಜೀವನವನ್ನು ಬಂದಂತೆ ಸ್ವೀಕರಿಸುವುದೇ ಭಯ ನಿವಾರಣೆಯ ಸುಲಭ ವಿಧಾನ.
ಕೆಲವರು ಸ್ಪರ್ಧಾತ್ಮಕ ಮನೋಭಾವದಿಂದ ಅಥವಾ ತಮ್ಮನ್ನು ಇನ್ನೊಬ್ಬರೊಂದಿಗೆ ತುಲನೆ ಮಾಡಿಕೊಳ್ಳುವುದಕ್ಕೋಸ್ಕರ ಕಷ್ಟಪಟ್ಟು ದುಡಿಯುತ್ತಾರೆ. ಅವರಿಗೆ ಯಾವುದೇ ರೀತಿಯ ಭಯವಾಗಲೀ ಅಥವಾ ಹೆದರಿಕೆಯಾಗಲೀ ಇರುವುದಿಲ್ಲ. ತಮ್ಮ ನೆರೆ ಹೊರೆಯವರಿಗಿಂತಲೋ, ತಾವು ಬದುಕಿದ ಸಮಾಜದ ಇತರರಿಗಿಂತಲೋ ತಾವು ಧನವಂತರಾಗಿದ್ದೇವೆಂದು ಹಿಗ್ಗುತ್ತಾರೆ. ಆದರೆ ಕಾರು, ಮನೆ, ಟಿವಿ, ಫ್ರಿಜ್, ಇಂಟರ್ನೆಟ್, ಕಂಪ್ಯೂಟರ್ ಇತ್ಯಾದಿ ನಮ್ಮ ಬಳಿ ಇದೆಯಾದರೆ ಅದು ಇನ್ನೂ ಹಲವರ ಬಳಿ ಇದೆ. ನಮ್ಮ ಪರಿಸರದಲ್ಲಿ ನಾವೇ ಮಿಗಿಲಾದರೂ ಜಗತ್ತಿನ ಯಾವ ಮೂಲೆಯಲ್ಲಾದರೂ ತುಲನೆಯಲ್ಲಿ ನಮಗಿಂತ ಶ್ರೀಮಂತರು ಇದ್ದೇ ಇರುತ್ತಾರೆ. ಕೇವಲ ಹೊಟ್ಟೆಕಿಚ್ಚಿನ ಅಥವಾ ತುಲನೆಯ ದೋಣಿ ಹತ್ತಿದರೆ ಅದು ಯಾವ ದಡವನ್ನೂ ಸೇರುವುದಿಲ್ಲ. ಇನ್ನೊಬ್ಬರೊಂದಿಗೆ ನಮ್ಮನ್ನು ತುಲನೆ ಮಾಡುವುದಕ್ಕೋಸ್ಕರ ದುಡಿಯುವುದಾದರೆ ಅದು ಕೊನೆ ಕಾಣದ ಪಯಣವಾಗುತ್ತದೆ.
(ಮುಂದುವರಿಯುವುದು)
- ಕಿರಣ್ ಉಪಾಧ್ಯಾಯ
keyrun1970@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

