ಬೈಟುಕಾಫಿ

ಕಲ್ಲು ಕ್ಯಾಲೆಂಡರ್

ಕಲ್ಲು ಕ್ಯಾಲೆಂಡರ್
Published On :

ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಿಂದ 1 ಕಿಮೀ ದೂರದಲ್ಲಿ ವಿಭೂತಿಹಳ್ಳಿ ಗ್ರಾಮವಿದೆ. ರಸ್ತೆಯಿಂದಲೇ ಹುಣಸೆಮರಗಳ ತೋಪು ಕಣ್ಣಿಗೆ ಬೀಳುತ್ತದೆ. ಎಲ್ಲಾ ಮರಗಳ ಕೆಳಗೆ ಕಲ್ಲು ಬಂಡೆಗಳನ್ನು ಸಮಾನ ಅಂತರದಲ್ಲಿ ಹಾಗೂ ಯಾವುದೇ ದಿಕ್ಕಿನಿಂದ ನೋಡಿದರೂ ನೇರವಾಗಿ ಕಾಣುವಂತೆ ಜೋಡಿಸಿಟ್ಟದ್ದನ್ನು ಕಾಣಬಹುದು. ಏನಿದು?
ಇದೇನು ಎಂದು ತಿಳಿಯಲು ನಾವು ಸುಮಾರು 3400ರಿಂದ 3800 ವರ್ಷ ಹಿಂದಡಿ ಇಡಬೇಕು! 20x20 ಅಂತರದಲ್ಲಿಟ್ಟಿರುವ ಸುಮಾರು 400 ಕಲ್ಲುಬಂಡೆಗಳು ಆಯನ ಸಂಕ್ರಾಂತಿ ಹಾಗೂ ವಿಷುವತ್ಸಂಕ್ರಾಂತಿ ಮುಖ್ಯ ಕಾಲಮಾನವನ್ನು ತಿಳಿಯಲು ನಮ್ಮ ಪೂರ್ವಜರು ಜೋಡಿಸಿಟ್ಟಿದ್ದು ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇದರ ಕಾಲಮಾನ ಕ್ರಿಪೂ 1800ರಿಂದ 1400ರ ಮಧ್ಯಭಾಗ.
ಹಳ್ಳಿಮೂಲೆಯಲ್ಲಿ ಹಡಿಲುಬಿದ್ದ ಜಾಗದಂತೆ ಕಾಣುವ ಈ ಸ್ಥಳ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸಂರಕ್ಷಿತ ತಾಣವೆಂದು ಘೋಷಿಸಲ್ಪಟ್ಟಿದೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಬ್ರಿಟಿಷ್ ಅಧಿಕಾರಿ ಕ್ಯಾಪ್ಟನ್ ಮೆಡೋಸ್ ಟೇಲರ್ 1850ರಲ್ಲಿ ಈ ಕುತೂಹಲಕಾರಿ ಸ್ಥಳವನ್ನು ಪತ್ತೆ ಹಚ್ಚಿದ್ದ. ನಂತರ ಈ ಕುರಿತು ಅನೇಕ ಸಂಶೋಧನೆಗಳು ನಡೆದಿವೆ.
ಮಾರ್ಚ್ 21 (ಮೇಷ ಸಂಕ್ರಾಂತಿ) ಅಥವಾ ಸೆಪ್ಟೆಂಬರ್ 21ರ ವಿಷುವತ್ಸಂಕ್ರಾಂತಿ ದಿನ ಮುಂಜಾನೆ ಇಲ್ಲಿ ಜೋಡಿಸಿರುವ ಕಲ್ಲುಬಂಡೆಗಳ ಹಿಂಭಾಗದಲ್ಲಿ ಪೂರ್ವಾಭಿಮುಖವಾಗಿ ನೇರವಾಗಿ ನಿಲ್ಲಬೇಕು. ಆಗ ಸೂರ್ಯೋದಯದ ಸ್ಥಳವನ್ನು ಅಲ್ಲಿಂದ ನೇರವಾಗಿ ಕಾಣಬಹುದು. ವಿಷುವತ್ಸಂಕ್ರಾಂತಿ ದಿನ ಮುಸ್ಸಂಜೆ ವೇಳೆ ಪಶ್ಚಿಮದತ್ತ ನೋಡಿದರೆ ವಿಭೂತಿಹಳ್ಳಿಯ ರಸ್ತೆ ಪಕ್ಕದಲ್ಲಿರುವ ಗುಡ್ಡಗಳ ನಡುವೆ ನೇರವಾಗಿ ಸೂರ್ಯಾಸ್ತಮಾನ ಆಗುವುದನ್ನು ನೋಡಬಹುದು. ಸಾಲಾಗಿ ಜೋಡಿಸಿದ ಕಲ್ಲುಗಳು ಹಾಗೂ ಸೂರ್ಯ ಒಂದೇ ನೇರದಲ್ಲಿ ಬಂದ ಸಂದರ್ಭವನ್ನು ಪರಿಗಣಿಸಿ ಅಂದಿನ ಜನ ದಿನವನ್ನು ನಿರ್ಧರಿಸುತ್ತಿದ್ದರು.  ಅಂದಿನ  ಕಾಲದ ಜನ ಋತುಮಾನಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮುಖ್ಯವಾಗಿ ಕೃಷಿ, ಬೇಟೆ, ಬಿತ್ತನೆ, ಕೊಯ್ಲು, ಪಶುಪಾಲನೆಗಳಿಗೆ ಕಾಲನಿರ್ಧಾರ ಮಾಡಲು ಮಹಾಶಿಲಾ ಯುಗದ ಜನರು ಈ ಕಲ್ಲಿನ ಕ್ಯಾಲೆಂಡರ್ ಮಾಡಿಕೊಂಡಿದ್ದರು ಎಂದು ಸಂಶೋಧನೆಗಳು ಹೇಳುತ್ತವೆ. ಭಾರತದಲ್ಲಿ ಇಂಥ ಕಲ್ಲು ಹಂದರಗಳು ಉತ್ತರ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಮಾತ್ರ ಕಾಣಸಿಗುತ್ತವೆ. ವಿಭೂತಿಹಳ್ಳಿಯ ಈ ಅಭೂತಪೂರ್ವ ಕಲ್ಲಿನ ಜೋಡಣಾ ತಾಣವು ಬೃಹತ್ ಹಾಗೂ ಸಂರಕ್ಷಿತ ಸ್ಥಳವಾಗಿದೆ.
ಆದರೆ, ಅರಣ್ಯ ಇಲಾಖೆ ಇಲ್ಲಿ ಕಲ್ಲುಬಂಡೆಗಳ ಎಡೆಯಲ್ಲಿ ನೂರಾರು ಹುಣಸೆ ಗಿಡಗಳನ್ನು ನೆಟ್ಟು, ಸೂರ್ಯನ ದಿಕ್ಕು ಗುರುತಿಸಲು ಅಡ್ಡವಾಗುವಂತೆ ಮಾಡಿವೆ. ಈ ಪುರಾತನ ತಾಣದ ಮಹತ್ವ ಅರಿಯದ ಸ್ಥಳೀಯರು ಕೆಲ ಕಲ್ಲುಗಳನ್ನು ಸರಿಸಿದ್ದಾರೆ. ಆದರೂ, ನಮ್ಮ ಯೋಚನಾ ಲಹರಿಯನ್ನು ಸಾವಿರಾರು ವರ್ಷಗಳ ಹಿಂದಕ್ಕೆ ಕರೆದೊಯ್ಯುವ ಈ ತಾಣ ವೀಕ್ಷಣಾರ್ಹ.

- ಚಿತ್ರ-ಲೇಖನ: ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.