ಎರಡು ಜೀವನದೃಷ್ಟಿ

ಒಮ್ಮೆ ಗಣಪತಿಗೂ ಷಣ್ಮುಖನಿಗೂ ಸ್ಪರ್ಧೆ ಏರ್ಪಟ್ಟಿತಂತೆ. ಯಾರು ಹೆಚ್ಚು ಜಾಣರು ಎಂಬುದೇ ಚರ್ಚೆಯ ತಿರುಳು. ಫಲಿತಾಂಶಕ್ಕಾಗಿ ಭೂಮಿಯನ್ನು ಸುತ್ತಿ ಬರುವುದೆಂದಾಯ್ತು. ಷಣ್ಮುಖ ನವಿಲು ಏರಿ ಸುತ್ತಲು ಹೊರಟ. ಗಣಪತಿ ಹೆತ್ತವರಿಗೇ ಪ್ರದಕ್ಷಿಣೆ ಬಂದು 'ಇದೇ ನನ್ನ ಭೂಮಿ' ಎಂದ. ಇದು ನೀವೂ ಕೇಳಿದ ಕತೆ. ಗಣಪತಿಯೇ ಹೆಚ್ಚು ಜಾಣ, ಬುದ್ಧಿವಂತ ಎಂಬುದು ಇದರ ನೀತಿ ಎಂದು ನಮ್ಮ ಹಿರಿಯರು ಹಿಂದಿನಿಂದ ಹೇಳುತ್ತಲೇ ಬಂದಿದ್ದಾರೆ.
ಆದರೆ ಒಂದು ಕ್ಷಣ ಯೋಚಿಸಿ. ಷಣ್ಮುಖನೂ ಭೂಮಿಯನ್ನು ಸುತ್ತಿ ಬಂದದ್ದು ಸುಳ್ಳಲ್ಲವಲ್ಲ? ಆ ದೃಷ್ಟಿಯಿಂದ ನೋಡಿದರೆ, ಅವನೂ ಬುದ್ಧಿವಂತನೇ ಆಗಿರಬೇಕು. ಇಲ್ಲಿ ನೀತಿ ಯಾರು ಹೆಚ್ಚು ಬುದ್ಧಿವಂತರು ಎಂಬುದಲ್ಲ. ಈ ಕತೆ ಎರಡು ವಿಭಿನ್ನ ಜೀವನದೃಷ್ಟಿಗಳನ್ನು ಪ್ರತಿಪಾದಿಸುತ್ತದೆ.
ಪ್ರಪಂಚದಲ್ಲಿ ಎರಡು ಥರದ ಜನರಿರುತ್ತಾರೆ. ಕೆಲವರು ಸುತ್ತುವ ಸ್ವಭಾವದವರು. ಊರಿನಿಂದ ಊರಿಗೆ, ಕೆಲಸದಿಂದ ಕೆಲಸಕ್ಕೆ, ಸಂಬಂಧಗಳಿಂದ ಸಂಬಂಧಗಳಿಗೆ ಇವರು ಜಿಗಿಯುತ್ತಲೇ ಇರುತ್ತಾರೆ. ಹಾಗೆ ಸುತ್ತಾಟದಿಂದಲೇ ತಮಗೆ ಬೇಕಾದ ಜೀವನಾನುಭವ, ಲೋಕದೃಷ್ಟಿ ಎಲ್ಲವನ್ನೂ ಪಡೆಯುತ್ತಾರೆ. ಇವರು ಸುಬ್ರಹ್ಮಣ್ಯನ ಹಾಗೆ.
ಇನ್ನು ಕೆಲವರು ಗಣಪನ ಥರ. ಇವರು ದೂರಕ್ಕೆಲ್ಲೂ ಸುತ್ತಾಡುವವರಲ್ಲ. ಒಂದು ಕೆಲಸವನ್ನು ಹಿಡಿದರೆ ಮಾಡಿ ಮುಗಿಸದೆ ಬಿಡರು. ಜೀವನವಿಡೀ ಒಂದೇ ಉದ್ದೇಶಕ್ಕಾಗಿ ದುಡಿದು ತೇದು ಮಡಿಯಬಲ್ಲರು. ತಮಗೆ ಬೇಕಾದ ಜೀವನಾನುಭವವನ್ನೂ ಲೋಕದೃಷ್ಟಿಯನ್ನೂ ತಾವಿದ್ದಲ್ಲೇ, ತಮ್ಮ ಸುತ್ತಮುತ್ತಲಿನವರನ್ನು ಅಧ್ಯಯನ ಮಾಡುವ ಮೂಲಕವೇ ಹುಟ್ಟಿಸಿಕೊಳ್ಳಬಲ್ಲರು. ತಾವಿದ್ದಲ್ಲೇ ಇವರು ಇನ್ನೊಂದು ಲೋಕವನ್ನು ಸೃಷ್ಟಿಸಿಕೊಳ್ಳುತ್ತಾರೆ. ತಮ್ಮಿಂದಲೇ ಸೃಷ್ಟಿಯಾದ ಲೋಕವನ್ನು ಇತರರಿಗೆ ಮಾದರಿಯಾಗಿ ತೋರಿಸುತ್ತಾರೆ.
ಯಾರನ್ನು ಹೆಚ್ಚು ಸರಿ ಎನ್ನುತ್ತೀರಿ? ಮೊದಲೇ ಹೇಳಿದಂತೆ, ಇದು ಸರಿ ತಪ್ಪುಗಳ ಪ್ರಶ್ನೆಯಲ್ಲ. ಷಣ್ಮುಖನಾಗಲೀ, ಬೆನಕನಾಗಲೀ ತಮಗೆ ಬೇಕಾದ ವಿಶ್ವವನ್ನೂ ಸೃಷ್ಟಿಸಿಕೊಂಡರು, ಇತರರಿಗೂ ಮಾದರಿಯಾದರು. ನಾವು ಇವರಲ್ಲಿ ಯಾರಂತೆ ಎಂದು ನೋಡಿಕೊಳ್ಳುವುದೇ ಸಮರ್ಪಕವಾದ ನೀತಿ.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


