ಕಪ್ಪು ಚಹಾ, ಗ್ರೀನ್ ಟೀ, ಜಾಣ ಆಯ್ಕೆ ಯಾವುದು?

ಇಂಥದ್ದೊಂದು ಜಿಜ್ಞಾಸೆ ಪಾಶ್ಚಾತ್ಯ ವಿಜ್ಞಾನಿಗಳು, ಸಂಶೋಧಕರನ್ನು ಕಾಡಿದ್ದುಂಟು. ಆಹಾರದ ಮೂಲಕ ಶ್ವಾಸಕೋಶ ಕ್ಯಾನ್ಸರ್ ಸಂಭವನೀಯತೆಯನ್ನು ಹೇಗೆ ಕಡಿಮೆ ಮಾಡಬಹುದು? ಅದರ ತೀವ್ರತೆಯನ್ನು ಯಾವ ರೀತಿ ನಿಯಂತ್ರಿಸಬಹುದು? ಇತ್ಯಾದಿ ಸಂಗತಿಗಳನ್ನು ಬಹಿರಂಗಪಡಿಸಬೇಕೆ, ಬೇಡವೆ? ಬಹಿರಂಗಪಡಿಸಿದರೆ ಅದು ಧೂಮಪಾನಿಗಳು, ತಂಬಾಕು ಜಗಿಯುವವರಲ್ಲಿ ಚಟ ಇನ್ನಷ್ಟು ಹೆಚ್ಚಲು ಕಾರಣ ಆಗುವುದಿಲ್ಲವೆ? 'ಹಣ್ಣು, ತರಕಾರಿ ತಿನ್ನುತ್ತೇನೆ. ತಂಬಾಕು ಸೇವನೆ ಮುಂದುವರಿಸುತ್ತೇನೆ' ಎನ್ನುವ ಹುಂಬ ಭಾವನೆಯನ್ನು ಅವರಲ್ಲಿ ಮೂಡಿಸಿದಂತಾಗುವುದಿಲ್ಲವೆ? ಕೆಲವು ಓದುಗರು ಎಸ್ಸೆಮ್ಮೆಸ್ ಮೂಲಕ ಇಂಥ ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ಶ್ವಾಸಕೋಶ ಕ್ಯಾನ್ಸರ್ ಕುರಿತು ಬರೆಯಲು ಆರಂಭಿಸುವಾಗ ನನ್ನನ್ನೂ ಇಂಥ ತಾಕಲಾಟ ಕಾಡಿದೆ. ಆದರೆ ಯಾವುದೇ ಸಂಶೋಧನೆಯ ಮೂಲ ಉದ್ದೇಶ ಜನರ ಕಲ್ಯಾಣ ಮತ್ತು ಕೆಟ್ಟದ್ದರ ವಿರುದ್ಧ ಅವರಲ್ಲಿ ಅರಿವು ಮೂಡಿಸುವುದೇ ಆಗಿರುತ್ತದೆ ಅಲ್ಲವೆ?
ಶ್ವಾಸಕೋಶ ಕ್ಯಾನ್ಸರ್‌ನಿಂದ ಪಾರಾಗುವ ಮೊದಲ ಮತ್ತು 'ಅತೀ ಕಷ್ಟ'ದ (ಹಾಗಂತ ಅವರು ಭಾವಿಸಿಕೊಳ್ಳುವುದು!) ದಾರಿ ಎಂದರೆ ಧೂಮಪಾನ, ತಂಬಾಕು ಸೇವನೆಯನ್ನು ತೊರೆದುಬಿಡುವುದು! ಆಹಾರ ನಂತರದ ಆದ್ಯತೆ. ತಂಬಾಕಿನ ತೀವ್ರತೆ ಆಹಾರಕ್ಕಿಂತ ಹೆಚ್ಚು ಎನ್ನುವುದನ್ನು ಮರೆಯಬಾರದು. ನೀವು ಎಷ್ಟೇ ಹಣ್ಣು, ತರಕಾರಿ, ಸೊಪ್ಪುಗಳನ್ನು ಸೇವಿಸಿದರೂ, ತಂಬಾಕಿನಿಂದ ಮುಕ್ತರಾಗಿಲ್ಲ ಅಂತಾದರೆ ಅದರಲ್ಲಿನ ಕಾರ್ಸಿನೊಜೆನ್ ಶ್ವಾಸಕೋಶಗಳಿಗೆ ಹಾನಿ ಉಂಟುಮಾಡುವುದು ನಿಲ್ಲುವುದಿಲ್ಲ. ಅದು ಪ್ರಕಟಗೊಳ್ಳುವ ಅವಧಿ ಸ್ವಲ್ಪ ಮುಂದಕ್ಕೆ ಹೋಗಬಹುದು ಅಷ್ಟೆ. ಅದೇ ನೀವು ತಂಬಾಕಿನಿಂದ ಸಂಪೂರ್ಣ ಮುಕ್ತರಾಗಿ, ಆಹಾರದಲ್ಲಿ ಹಣ್ಣು, ತರಕಾರಿ, ಸೊಪ್ಪುಗಳಿಗೆ ಪ್ರಾಮುಖ್ಯತೆ ನೀಡಿದ್ದೀರಿ ಅಂತಾದರೆ, ನೀವು ಶ್ವಾಸಕೋಶ ಕ್ಯಾನ್ಸರ್‌ನಿಂದ ಸುರಕ್ಷಿತ ವಲಯದಲ್ಲಿ ಇದ್ದೀರಿ ಎಂದು ಧೈರ್ಯದಿಂದ ಹೇಳಬಹುದು.
ಕ್ಯಾರೆಟ್ ಮತ್ತಿತರ ಬೀಟಾ ಕೆರೋಟಿನ್‌ನಿಂದ ಸಮೃದ್ಧವಾಗಿರುವ ತರಕಾರಿಗಳು, ಹಸಿರು ಸೊಪ್ಪು, ಗಾಢ ಹಸಿರು ತರಕಾರಿಗಳು, ಹಣ್ಣುಗಳು ಶ್ವಾಸಕೋಶ ಕ್ಯಾನ್ಸರ್ ವಿರುದ್ಧದ 'ರಹಸ್ಯ ಅಸ್ತ್ರ'ಗಳು ಎಂದೇ ಪರಿಗಣಿತವಾಗಿವೆ. ಇವುಗಳ ಜತೆಗೆ ಗ್ರೀನ್ ಟೀ ಸಹ ಶ್ವಾಸಕೋಶ ಕ್ಯಾನ್ಸರ್ ವಿರುದ್ಧ ಸೆಣಸುವ ಶಕ್ತಿಯನ್ನು ಶರೀರಕ್ಕೆ ನೀಡುತ್ತದೆ. ಮಾಮೂಲು ಬ್ಲ್ಯಾಕ್ ಚಹಾಕ್ಕಿಂತ ಹಸಿರು ಚಹಾ ಒಳ್ಳೆಯದು. ಕಪ್ಪು ಚಹಾದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ಇರುತ್ತದೆ. ಆದರೆ ಹಸಿರು ಚಹಾದಷ್ಟು ಅಲ್ಲ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


