ಕರಿಯನ ಸಮಾಧಿ

ಚರಣ ಹಳ್ಳಿಯಲ್ಲೇ ಹುಟ್ಟಿ ಬೆಳೆದ ಹುಡುಗ. ಅವರ ತೋಟದ ಮನೆಯಲ್ಲಿನ ಕರಿಯನೆಂಬ ನಾಯಿ ಇವನಿಗೆ ಅಚ್ಚುಮೆಚ್ಚು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ನಗರಕ್ಕೆ ಹೋದರೂ ಕರಿಯನ ನೆರಳು ಇವನನ್ನು ಕಾಡುತ್ತಿತ್ತು. ಅದರ ಸಲುವಾಗಿಯೇ ಆದಷ್ಟು ಬಿಡುವು ಮಾಡಿಕೊಂಡು ಬಂದು ಕರಿಯನೊಡನೆ ಆಟವಾಡಿ ಹಿಂದಿರುಗುತ್ತಿದ್ದ. ಉನ್ನತ ಶಿಕ್ಷಣದ ನಂತರ ವಿದೇಶದ ಸಾಫ್ಟ್ವೇರ್ ವೃತ್ತಿ ಕೈಬೀಸಿ ಕರೆಯಲು ತನ್ನ ಕರಿಯನನ್ನು ಬಿಟ್ಟು ಮನಸ್ಸಿಲ್ಲದ ಮನಸ್ಸಿನಿಂದ ತನ್ನ ಜೀವನದ ಉನ್ನತಿಗಾಗಿ ವಿಮಾನ ಏರಿದ. ದೇಸಿಯಾ ಕರಿಯ ಹೊರದೇಶದ ತಳಿಯ ನಾಯಿಗಳಲ್ಲೂ ಕಾಣಿಸಿ ನೋವನ್ನು ತರುತ್ತಿತ್ತು. ನೋಡುವ ಕುತೂಹಲವಿದ್ದರೂ ಸಾಧ್ಯವಿಲ್ಲವಲ್ಲ. ಕೆಲವು ವರುಷಗಳು ಕರಿಯನ ನೆನಪಲ್ಲೆ ಕಳೆದ. ತನ್ನೊಂದಿಗೆ ತಂದಿದ್ದ ಕರಿಯ ಫೋಟೋವನ್ನು ನೋಡುತ್ತಿದ್ದ. ಅಮ್ಮನಿಗೆ ಫೋನ್ ಮಾಡಿದಾಗೆಲ್ಲ ಕರಿಯನೊಂದಿಗೆ ಕೂಡ ಮಾತನಾಡುತ್ತಿದ್ದ. ಅದು ಕೂಡ ಚರಣನೊಂದಿಗೆ ಕುಂಯ್ ಕುಂಯ್ ಎಂದು ತನ್ನದೇ ಭಾಷೆಯಲ್ಲಿ ಮಾತನಾಡುತ್ತಿತ್ತು. ಒಮ್ಮೆ ಅಪ್ಪಯ್ಯನಿಂದ ಫೋನ್ ಬಂತು. ಅದು ಚರಣನ ಮನಸ್ಸಿಗೆ ಆಘಾತ ತರುವ ವಿಷಯವಾಗಿತ್ತು. ಕರಿಯ ಸತ್ತು ಶಿವನ ಪಾದ ಸೇರಿತ್ತು. ಮೊದಲೇ ನೆಚ್ಚಿನ ನಾಯಿಯಿಂದ ದೂರವಾದ ನೋವು ಮನದಲ್ಲಿರುವಾಗ ಈ ಸುದ್ದಿ ಇನ್ನಷ್ಟು ನೋವನ್ನು ಸುರಿಸಿತು. ದೂರದ ಊರು ಕೆಲಸದ ಒತ್ತಡಗಳ ಸಂದಿಗ್ಧದಲ್ಲಿ ಊರಿಗೆ ಹೋಗಿ ಕೊನೆಯ ಸಲದ ಮುಖದರ್ಶನ ಮಾಡಲಾಗಲೇ ಇಲ್ಲ. ನೋವು ಮಡುಗಟ್ಟುತ್ತಲೇ ಇತ್ತು. ಹಲವು ತಿಂಗಳ ನಂತರ ರಜ ಪಡೆದು ತನ್ನೂರಿಗೆ ಪ್ರಯಾಣ ಬೆಳೆಸಿದ. ಮನೆಗೂ ಹೋಗದೆ ತೋಟದಲ್ಲಿದ್ದ ತನ್ನ ಮುದ್ದು ಕರಿಯನ ಸಮಾಧಿ ಇದ್ದಲ್ಲಿಗೆ ಹೋಗಿ ಅತ್ತು ಕರೆದ. ತಾನು ತಂದಿದ್ದ ವಿದೇಶದ ನಾಯಿ ಬಿಸ್ಕತ್ಗಳನ್ನು ಸಮಾಧಿಯ ಮೇಲಿರಿಸಿದ. ನಂತರ ಅಲ್ಲೇ ಗಿಡದಲ್ಲಿ ನಳನಳಿಸಿ ನಗುತ್ತಿದ್ದ ಸುಂದರ ಗುಲಾಬಿಯ ಗೋಣು ಮುರಿದು ಕರಿಯನ ಸಮಾಧಿಯ ಮೇಲಿಟ್ಟ. ಸತ್ತವರ ಆತ್ಮಕ್ಕೆ ಸಂತೋಷ ಸಿಗಲಿ ಎಂದು ನಗುನಗುತ್ತಿದ್ದ ಗುಲಾಬಿಯ ಗೋಣು ಮುರಿದಾಗ ಆ ಗಿಡಕ್ಕೆ ಮತ್ತು ಗುಲಾಬಿಗೆ ಆದ ನೋವು ಚರಣನ ಗಮನಕ್ಕೆ ಬರಲೇ ಇಲ್ಲ.
-ದತ್ತಾ ಹುರಿಗಾಳ್, ನೇಗಲಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


