ದನಿಯ ಪ್ರತಿಧ್ವನಿ
ಕರಿಯ ಎಂದಿನಂತೆ ಎದ್ದು ಬೆಳಗಿನ ಕಾರ್ಯಗಳನ್ನು ಮುಗಿಸಿ ಮಡದಿ ಕೆಂಪಿಯನ್ನು ಕರೆದುಕೊಂಡು ಮತಗಟ್ಟೆಯ ಹತ್ತಿರ ಬಂದ. ಅಲ್ಲಿ ಜನ ಕಡಿಮೆ ಇದ್ದರೂ ಏಜೆಂಟರುಗಳಂತಿದ್ದ ದಾಂಡಿಗರು ಕರಿಯನನ್ನು ಕೆಕ್ಕರಿಸಿಕೊಂಡು ನೋಡುತ್ತಿದ್ದರು. ಕೆಲವರಂತೂ ಇವನತ್ತ ತಿರುಗಿ 'ಓ.. ಇವನೇನು ಮಹಾ ಸಾಚಾ ಅಂದುಕೊಂಡು ಇದ್ದಾನೋ ಏನೋ.. ತಿನ್ನೋಕೆ ಹಿಟ್ಟು ಇಲ್ದಿದ್ದರೂ ಜೋರೇನೂ ಕಮ್ಮಿ ಇಲ್ಲಾ...' ಎಂದು ಬೈದುಕೊಳ್ತಿದ್ದರು. ಏನೂ ಕೇಳಿಸಿಕೊಳ್ಳದವನಂತೆ ಕರಿಯ ಮಡದಿ ಜತೆ ಮತ ಹಾಕೋಕೆ ಕ್ಯೂನಲ್ಲಿ ನಿಂತು ಹಿಂದಿನ ರಾತ್ರಿ ನಡೆದ ಘಟನೆಯನ್ನು ನೆನಸಿಕೊಂಡ.
ಕರಿಯನ ಸ್ಲಂನಲ್ಲಿ ಎಲ್ಲರೂ ನಿದ್ದೆಗೆ ಜಾರುವುದರಲ್ಲಿದ್ದಾಗ ಹೊರಗೆ ಜನರ ಗುಸು ಗುಸು ಕೇಳಿಸಿತು. ವೋಟು, ಮತ, ದುಡ್ಡು, ಎಣ್ಣೆ, ಪ್ಯಾಕೆಟು ಎಂಬೆಲ್ಲ ಮಾತುಗಳು. ಅದನ್ನು ಕೇಳಿ ಕರಿಯ ಎದ್ದು ಗುಡಿಸಿಲಿನಿಂದ ಹೊರಬಂದು ನೋಡುತ್ತಾನೆ, ಅಲ್ಲಿ ಮತ ಕೊಳ್ಳಲು ದೊಡ್ಡ ದಂಡೇ ಬಂದಿತ್ತು. ಕೆಲವರು ಏನೇನೋ ಪ್ಯಾಕೆಟ್ ಕೊಡುತ್ತಿದ್ದರು. ಕೆಲವರು ದುಡ್ಡು ಹಂಚುತ್ತಿದ್ದರು. ಇದನ್ನೆಲ್ಲ ಪ್ರತಿ ಚುನಾವಣೆಯಲ್ಲಿ ನೋಡಿ ನೋಡಿ ಬೇಸತ್ತಿದ್ದ ಕರಿಯನಿಗೆ ಕೋಪ ಉಕ್ಕಿ ಬಂತು. ದೊಡ್ಡ ದನಿಯಲ್ಲಿ ಕೂಗುತ್ತಾ 'ಲೇ, ನಿಜಕ್ಕೂ ನಿಮ್ಮ ಪಕ್ಷ ಏನಾದ್ರೂ ಕೆಲ್ಸ ಮಾಡಿದ್ರೆ ನಾವೇ ವೋಟು ಹಾಕ್ತೀವಿ. ಅಷ್ಟಕ್ಕೂ ಬೇಕು ಅಂದ್ರೆ ಯಾರಿಗೆ ವೋಟು ಹಾಕಬೇಕು ಅಂತ ಹೇಳಿ ಜಾಗ ಖಾಲಿ ಮಾಡಿ, ಅದು ಬಿಟ್ಟು ಎಣ್ಣೆ ಪ್ಯಾಕೆಟ್ಟು, ಸೀರೆ, ದುಡ್ಡು ಅಂತೇನಾದ್ರೂ ಹಂಚಿದ್ರೆ ಚೆನ್ನಾಗಿರೊಲ್ಲ. ಇಲ್ಲಿಂದ ಹೊರಡ್ರೋ' ಎಂದು ಅರಚಿದ. ಅಷ್ಟರಲ್ಲಿ ಪುಂಡರ ಗುಂಪು ಕರಿಯನ ಮೇಲೆ ನುಗ್ಗಿ ಹಿಗ್ಗಾಮುಗ್ಗಾ ಚಚ್ಚಿತು. ಹಿಂದೆಯೇ ಸ್ಥಳೀಯರು ಕರಿಯನಿಗೆ ಹೊಡೆಯುತ್ತಿದ್ದ ಪುಂಡರಿಗೆ ಥಳಿಸಿ ಹೊರಗಟ್ಟಿತ್ತು. ಅನ್ಯಾಯದ ವಿರುದ್ಧ ದನಿಯೆತ್ತಿದ್ದಕ್ಕೆ ತನ್ನ ಜನರಿಂದ ಸಿಕ್ಕ ಬೆಂಬಲದಲ್ಲಿ ತನಗೆ ಬಿದ್ದ ನೋವನ್ನು ಮರೆತಿದ್ದ.
ರಾತ್ರಿ ಗೂಸಾ ತಿಂದಿದ್ದ ಪುಂಡರೇ ಅಲ್ಲಿನ ಮತಗಟ್ಟೆಯ ಹತ್ತಿರವಿದ್ದದ್ದು. ಕರಿಯ ಮಾತ್ರ ನಿರ್ಭಯದಿಂದ ನಿಂತಿದ್ದ. ತಾನು ಅನ್ಯಾಯದ ವಿರುದ್ಧ ಕೂಗಿದ ಕೂಗಿಗೆ ತನ್ನ ಜನ ಕೊಟ್ಟ ಬೆಂಬಲ ಹೆಮ್ಮೆ ತಂದಿತ್ತು. ಸಾಮಾನ್ಯನೊಬ್ಬನು ನ್ಯಾಯದ ಪರ ನಿಂತು ದನಿ ಎತ್ತಿದರೆ ಅದು ಮರಗಳಿಗೆಯಲ್ಲೇ ನೂರು ದನಿಗಳಾಗಿ ಪ್ರತಿಧ್ವನಿಸುತ್ತವೆ ಎಂಬುದು ಅಲ್ಲಿ ಸಾಬೀತಾಗಿತ್ತು.ಟಿ
-ಚಿತ್ತಾ ಆರಿದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

