ಬೈಟುಕಾಫಿ

ತ್ವಚೆ ಕ್ಯಾನ್ಸರ್‌ಗೆ ಸುರಕ್ಷಿತ ಆಹಾರ

Published On :

ಭಾರತದಲ್ಲಿ ಕಂಡುಬರುವ ಅಪರೂಪದ ಕ್ಯಾನ್ಸರ್‌ಗಳಲ್ಲಿ ಚರ್ಮ ಕ್ಯಾನ್ಸರ್ ಸಹ ಒಂದು. ಮೆಲನೊವಾ ಎಂದು ವೈದ್ಯಕೀಯ ಪರಿಭಾಷೆಯಲ್ಲಿ ಹೇಳಲಾಗುವ ಈ ಕ್ಯಾನ್ಸರ್ ಅಮೆರಿಕದಲ್ಲಿ ಹೆಚ್ಚು. ಅದಕ್ಕೆ ಕಾರಣಗಳನ್ನೇನೂ ಹೇಳಬೇಕಾಗಿಲ್ಲ. ಏಕೆಂದರೆ ಅವರ ಆಹಾರ ಪದ್ಧತಿ ಮತ್ತು ಜೀವನಶೈಲಿ ಎಲ್ಲರಿಗೂ ಗೊತ್ತಿರುವಂಥದ್ದೇ ಆಗಿದೆ. ತ್ವಚೆ ಕ್ಯಾನ್ಸರ್ ಬಿಸಿಲು ಅಥವಾ ಬೇರಾವುದೇ ಕಾರಣದಿಂದ ಬರುವಂಥದ್ದಲ್ಲ. ಕೊಬ್ಬಿನ ಅಂಶ ಇರುವ ಆ್ಯಸಿಡ್‌ಗಳಿಂದ ಬರುವಂಥದ್ದು. ಕೊಬ್ಬಿನ ಪ್ರಮಾಣದಲ್ಲಿ ಏರಿಳಿತ ವಿಪರೀತವಾದಾಗ, ಸಮತೋಲನ ತಪ್ಪಿದಾಗ ತ್ವಚೆ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.
ಕೊಬ್ಬಿನ ಕುರಿತು ಹಿಂದೊಮ್ಮೆ ವಿವರವಾಗಿ ಚರ್ಚಿಸಿದ್ದೆವು. ಒಮೆಗಾ-6 ಮತ್ತು ಒಮೆಗಾ-3 ಎನ್ನುವ ಎರಡು ರೀತಿಯ ಕೊಬ್ಬುಗಳಿರುತ್ತವೆ. ಆ ಪೈಕಿ ಒಮೆಗಾ-6 ಅಪಾಯಕಾರಿ. ಶರೀರಕ್ಕೆ ಎರಡೂ ತೆರನಾದ ಕೊಬ್ಬು ಬೇಕು. ಆದರೆ ಒಮೆಗಾ-6 ಅನ್ನು ಅತಿಯಾಗಿ ಸೇವಿಸುತ್ತಿದ್ದರೆ ಆರೋಗ್ಯಕ್ಕೆ ಕಂಟಕ ಎನ್ನುವುದು ನಮಗೆ ಗೊತ್ತೇ ಇದೆ. ಕೋಶಗಳಿಗೆ ಒಮೆಗಾ-6 ವಿಪರೀತವಾಗಿ ಸರಬರಾಜಾಗುತ್ತಿದ್ದು, ಶರೀರದಲ್ಲಿ ಒಮೆಗಾ-3 ಕೊರತೆ ಬಾಧಿಸಿದರೆ ಮರ್ಚಗಳಲ್ಲಿ ಗಡ್ಡೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲಿಯೇ ಕ್ಯಾನ್ಸರ್‌ಕಾರಕ ಕೋಶಗಳು ಸೇರಿಕೊಂಡು ತ್ವಚೆ ಕ್ಯಾನ್ಸರ್ ಆಗಿ ಪರಿವರ್ತನೆಯಾಗುತ್ತದೆ. ಒಮೆಗಾ-6 ಮತ್ತು ಒಮೆಗಾ-3 ಕೊಬ್ಬುಗಳ ನಡುವಿನ ಸಮತೋಲನ ತ್ವಚೆ ಕ್ಯಾನ್ಸರ್ ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ. ಬಹುತೇಕವಾಗಿ ಭಾರತೀಯರ ಆಹಾರ ಶೈಲಿಯಲ್ಲಿ ಇವೆರಡರ ನಡುವೆ ಸಮತೋಲನ ಇದ್ದೇ ಇರುತ್ತದೆ. ಹೀಗಾಗಿ ನಮ್ಮಲ್ಲಿ ತ್ವಚೆ ಕ್ಯಾನ್ಸರ್ ಸಾಧ್ಯತೆ ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಬಹಳ ಕಡಿಮೆ.
ಕಾರ್ನ್ ಆಯಿಲ್, ಆಲಿವ್ ಆಯಿಲ್‌ಗಳಲ್ಲಿ ಒಮೆಗಾ-6 ಇರುತ್ತದೆ. ಪ್ರಾಣಿಜನ್ಯ ಕೊಬ್ಬುಗಳಲ್ಲಿ ಅತ್ಯಧಿಕವಾಗಿ ಇರುವುದು ಒಮೆಗಾ-6. ಹೀಗಾಗಿ ಸಾಧ್ಯವಾದಷ್ಟೂ ಶಾಖಾಹಾರ ರೂಢಿಸಿಕೊಳ್ಳುವುದು ಉತ್ತಮ. ಒಮೆಗಾ-6ಗಿಂತ ಒಮೆಗಾ-3 ಜಾಸ್ತಿ ಇರುವಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಆ್ಯಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿರುವ ಹಣ್ಣು, ತರಕಾರಿಗಳನ್ನು ಧಾರಾಳವಾಗಿ ಸೇವಿಸಬೇಕು. ಈರುಳ್ಳಿ, ಬೆಳ್ಳುಳ್ಳಿಗಳಲ್ಲಿ ಸಹ ತ್ವಚೆ ಕ್ಯಾನ್ಸರ್ ತಡೆಯುವ ಗುಣ ಇದೆ. ಇನ್ನು 1989ರಲ್ಲಿ ನಡೆದ ತ್ವಚೆ ಕ್ಯಾನ್ಸರ್ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನವೊಂದು ತ್ವಚೆ ಕ್ಯಾನ್ಸರ್‌ನಿಂದ ದೂರ ಇರಲು ಮೊಸರು ಸುರಕ್ಷಿತ ಆಹಾರ ಎಂದು ಘೋಷಿಸಿದೆ. ಎರಡೂ ರೀತಿಯ ಕೊಬ್ಬುಗಳ ನಡುವೆ ಸಮತೋಲನ ಸಾಧಿಸುವ ಗುಣ ಮೊಸರಿನಲ್ಲಿ ಇದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಸ್ತ್ರೀಯರನ್ನು ವಿಶೇಷವಾಗಿ ಕಾಡುವ ಕ್ಯಾನ್ಸರ್‌ನಿಂದ ದೂರ ಇರುವುದು ಹೇಗೆ? ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.ಟಿ


-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.