ಬೈಟುಕಾಫಿ

ತಾಕತ್ತಿದ್ದವರೇ ಗೆಲ್ಲುತ್ತಾರೆ!

ತಾಕತ್ತಿದ್ದವರೇ ಗೆಲ್ಲುತ್ತಾರೆ!
Published On :

ಒಂದೇ ಆಹಾರ. ಅದರಲ್ಲಿನ ಎರಡು ರಾಸಾಯನಿಕಗಳು. ಒಂದು ಮಾನಸಿಕವಾಗಿ ನಮ್ಮನ್ನು ಆಲಸಿಯನ್ನಾಗಿಸಿದರೆ, ಮತ್ತೊಂದು ಬಲಶಾಲಿಯಾಗಿಸುತ್ತದೆ. ಡಾ. ರಿಚರ್ಡ್ ರುತ್‌ಮನ್ ಇದಕ್ಕೆ ನೀಡುವ ವಿವರಣೆ ಎಂದರೆ, ಅಮಿನೊ ಆಮ್ಲಗಳಲ್ಲಿನ ರಾಸಾಯನಿಕಗಳು ನೇರವಾಗಿ ಮೆದುಳಿಗೆ ಪೂರೈಕೆ ಆಗುವುದಿಲ್ಲ. ಆಯಾ ರಾಸಾಯನಿಕಗಳ ಗಾತ್ರ, ಪರಿಮಾಣ, ರಕ್ತದಲ್ಲಿ ಅವುಗಳ ಸಾಂದ್ರತೆ ಇವೆಲ್ಲ ಅಂಶಗಳೂ ಇಲ್ಲಿ ಪರಿಗಣಿತವಾಗುತ್ತವೆ. ಮೆದುಳನ್ನು ತಲುಪಲು ಅವುಗಳಲ್ಲಿಯೂ ಭಾರಿ ಪೈಪೋಟಿ ಏರ್ಪಡುತ್ತದೆ. ಪ್ರಬಲರು ಮತ್ತು ದುರ್ಬಲರ ನಡುವೆ ಸ್ಪರ್ಧೆ ಏರ್ಪಟ್ಟಾಗ ಏನಾಗುತ್ತದೆ ಹೇಳಿ? ತಾಕತ್ತಿದ್ದವರು ಗೆಲ್ಲುತ್ತಾರೆ. ಅದು ಸಹಜ. ಇಲ್ಲಿ ಆಗುವುದೂ ಅದೇ ರೀತಿ. ಹೆಚ್ಚಿನ ಕಣ (ಮಾಲಿಕ್ಯೂಲ್)ಗಳನ್ನು ಹೊಂದಿರುವ ರಾಸಾಯನಿಕಗಳು ಮೆದುಳಿಗೆ ದಾಂಗುಡಿ ಇಡುತ್ತವೆ. ಅವುಗಳ ಸ್ವಭಾವಕ್ಕೆ ಅನುಗುಣವಾದ ಪರಿಣಾಮವನ್ನು ಬೀರುತ್ತವೆ. ಅಮಿನೊ ಆಮ್ಲದಲ್ಲಿ ಟ್ರೈಪ್ಟೊಫಾನ್ ಕಣಗಳು ಜಾಸ್ತಿ ಇದ್ದರೆ ಅವು ಬೇಗ ಮೆದುಳನ್ನು ತಲುಪಿ, ಮೆದುಳು ಶಾಂತವಾಗುತ್ತದೆ. ಟೈರೊಸಿನ್ ಕಣಗಳು ಹೆಚ್ಚಿದ್ದರೆ ಅವು ಪೈಪೋಟಿಯಲ್ಲಿ ಜಯ ಸಾಧಿಸುತ್ತವೆ, ಮೆದುಳು ಕ್ರಿಯಾಶೀಲವಾಗುತ್ತದೆ.
ಹಾಲಿನಲ್ಲಿ ಟ್ರೈಪ್ಟೊಫಾನ್ ಇರುತ್ತದೆ. ಹಾಲು ಕುಡಿದಾಗ ಅವು ಮೆದುಳನ್ನು ಸೇರಿ ಮನಸ್ಸು ಶಾಂತವಾಗಬೇಕು ಅಲ್ಲವೆ? ಆದರೆ ಹಾಗಾಗುವುದಿಲ್ಲ. ಕಾರಣ ಇಷ್ಟೆ, ಹಾಲಿನಲ್ಲಿ ಟ್ರೈಪ್ಟೊಫಾನ್‌ಗಿಂತಲೂ ಇತರ ಅಮಿನೊ ಆಮ್ಲಗಳು ಜಾಸ್ತಿ ಇರುತ್ತದೆ. ಹೀಗಾಗಿ ಹಾಲು ಕುಡಿದಾಕ್ಷಣ ಮೆದುಳು ಜಡವಾಗುವುದಿಲ್ಲ. ಟ್ರೈಪ್ಟೊಫಾನ್‌ಗಳಿಲ್ಲದ, ಕಾರ್ಬೊಹೈಡ್ರೇಟ್‌ಗಳು ಹೇರಳವಾಗಿರುವ ತಿನಿಸುಗಳನ್ನು ಸೇವಿಸಿದಾಗಲೂ ಕೆಲವರಲ್ಲಿ ಮೆದುಳು ಜಡತ್ವಕ್ಕೆ ಜಾರುವುದುಂಟು. ಏಕೆಂದರೆ ಶರೀರದಲ್ಲಿ ಇರುವ ಟ್ರೈಪ್ಟೊಫಾನ್‌ಗಳನ್ನು ಇವು ಕ್ರಿಯಾಶೀಲಗೊಳಿಸಬಲ್ಲವು ಎಂದು ತಮ್ಮ ವಾದ ಮುಂದಿಡುತ್ತಾರೆ ರಿಚರ್ಡ್ ರುತ್‌ಮನ್.
ಮೆದುಳಿನ ಕೆಮಿಸ್ಟ್ರಿ ಕುರಿತಾಗಿ ರುತ್‌ಮನ್ ವಾದ ವಿಜ್ಞಾನ ಲೋಕದಲ್ಲಿ ಸರ್ವಸಮ್ಮತ ಎಂದಲ್ಲ. ಕೆಲವು ವಿಜ್ಞಾನಿಗಳು ಈ ಕುರಿತು ತಮ್ಮ ಶಂಕೆ, ಅನುಮಾನಗಳನ್ನು ವ್ಯಕ್ತಪಡಿಸಿರುವುದೂ ಉಂಟು. ಆದರೆ ಕಾರ್ಬೊಹೈಡ್ರೇಟ್‌ಗಳು ಮೆದುಳನ್ನು ಮಂದಗೊಳಿಸಿದರೆ, ಪ್ರೊಟೀನ್ ಮೆದುಳನ್ನು ಕ್ರಿಯಾಶೀಲಗೊಳಿಸುತ್ತದೆ ಎನ್ನುವುದನ್ನು ವಿಜ್ಞಾನ ಜಗತ್ತು ಅಭಿಪ್ರಾಯಭೇದವಿಲ್ಲದೆ ಒಪ್ಪಿಕೊಂಡಿದೆ. ಕೆಲವು ಅಪವಾದಗಳು ಇದ್ದೇ ಇರುತ್ತವೆ. ಆದರೆ ಆರೋಗ್ಯವಂತ ವ್ಯಕ್ತಿಗಳ ಮೆದುಳಿನ ಮೇಲೆ ಕಾರ್ಬೊಹೈಡ್ರೇಟ್, ಪ್ರೊಟೀನ್‌ಗಳು ಬೀರುವ ಪರಿಣಾಮದ ವಿಚಾರವಾಗಿ ಯಾವ ಭಿನ್ನಮತವೂ ಇಲ್ಲ ಎನ್ನುವುದಂತೂ ನಿಜ.ಟಿ


(ಮುಂದುವರಿಯುವುದು)


ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)


-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.