ಸಮ್ಮಿಶ್ರ ಸರ್ಕಾರ ನೀರ ಮೇಲಿನ ಗುಳ್ಳೆ
ಶಿಸ್ತುಬದ್ಧ ಆಡಳಿತಬೇಕಾದಲ್ಲಿ, ಉತ್ತಮ ಯೋಜನೆಗಳು ಜಾರಿಯಾಗಬೇಕಾದಲ್ಲಿ ಬಹುಮತ ಪಡೆದ ಸರ್ಕಾರದ ಆಡಳಿತವೇ ಸೂಕ್ತ. ಸಮ್ಮಿಶ್ರ ಸರ್ಕಾರವು ನೀರ ಮೇಲಿನ ಗುಳ್ಳೆಯಂತೆಯೇ. ಯೋಜನೆಗಳ, ಅಭಿವೃದ್ಧಿಯ ಕಾರ್ಯಕ್ರಮಗಳ ನಿರ್ವಹಣೆ ಯಾವುದೂ ಮುಂದೆ ಸಾಗದು. ರಿಮೋಟ್ ಕಂಟ್ರೋಲ್ನಂತೆ ಕಾಣುವ ಸಮ್ಮಿಶ್ರ ಸರ್ಕಾರ ತಮ್ಮ ಅತಿಯಾದ ಆಸೆ-ಆಮಿಷ ಪೂರೈಸದಿದ್ದರೆ ರಾಜಿನಾಮೆಯಂತಹ ದೊಂಬರಾಟವನ್ನು ಶುರು ಮಾಡುತ್ತಾರೆ. ಇವೆಲ್ಲವನ್ನು ಬಗ್ಗು ಬಡಿಯಲು ಉತ್ತಮ ಆಡಳಿತ ನಡೆಸಲು ಪೂರ್ಣ ಬಹುಮತವಿರುವ ಹಾಗೂ ಪ್ರಬಲ ವಿರೋಧ ಪಕ್ಷವಿರುವ ಸರ್ಕಾರದಿಂದಲೇ ದೇಶದ ಅಭಿವೃದ್ಧಿ ಸಾಧ್ಯ.
- ಆನಂದ. ಕೆ. ಎಸ್, ಮೈಸೂರು
ಬಹುಮತದ ಸರ್ಕಾರ ಒಳ್ಳೆಯದು
ಯಾವುದೇ ರಾಷ್ಟ್ರ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿ ಯಾವ ಸರ್ಕಾರವಿದೆ ಎನ್ನುವುದೇ ಮುಖ್ಯ. ಬಹುಮತ ಪಡೆದ ಸರ್ಕಾರವು ಆ ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿಯಾಗಿರುತ್ತದೆ. ಸಮ್ಮಿಶ್ರ ಸರ್ಕಾರದ ಆಡಳಿತ ಸುಲಲಿತವಾಗಿ ಸಾಗುವುದಿಲ್ಲ. ಅಲ್ಲದೇ ಅವರವರಲ್ಲಿಯೇ ಕಿತ್ತಾಟ ಕೂಡ ಪ್ರಾರಂಭವಾಗುತ್ತದೆ. ಆ ಪಕ್ಷಕ್ಕೆ ಇಷ್ಟು ಈ ಪಕ್ಷಕ್ಕೆ ಇಷ್ಟು ಎಂದೆಲ್ಲ ಖಾತೆಗಳ ಹಂಚಿಕೆಯ ಪ್ರಕ್ರಿಯೆಯಲ್ಲಿ ಬಿನ್ನಾಭಿಪ್ರಾಯ ಉಂಟಾಗುತ್ತದೆ. ಅಧಿಕಾರದ ದಾಹದಿಂದ ಕಿತ್ತಾಟ ಪ್ರಾರಂಭವಾಗಿ ಸರ್ಕಾರ ಕುಸಿದು ರಾಷ್ಟಪತಿ ಆಳ್ವಿಕೆಗೆ ಒಳಪಡುತ್ತದೆ. ಕೆಲಮೊಮ್ಮೆ ಮರು ಚುನಾವಣೆಗಳು ನಡೆಯಬೇಕಾಗುತ್ತದೆ. ಇದರಿಂದ ಜನರಿಗೆ ಅನಾನುಕೂಲ ಉಂಟಾಗುವುದಲ್ಲದೇ ರಾಷ್ಟ್ರದ ಅಭಿವೃಧ್ಧಿ ಕುಂಠಿತಗೊಳ್ಳುತ್ತದೆ. ಆದ್ದರಿಂದ ಪೂರ್ಣ ಬಹುಮತದ ಸರ್ಕಾರವೇ ಸೂಕ್ತ.
- ಕರಿಯಪ್ಪ. ಎಚ್, ತುಮಕೂರು
ಬಹುಮತದ ಸರ್ಕಾರವೇ ಸೂಕ್ತ
ಯಾವುದೇ ದೇಶವು ಆರ್ಥಿಕವಾಗಿ ಬಲಾಢ್ಯವಾಗಬೇಕಾದರೆ ಆ ದೇಶದ ರಾಜಕೀಯ ಪರಿಸ್ಥಿತಿ ಸುಭದ್ರವಾಗಿರಬೇಕು. ಆಗ ಮಾತ್ರ ದೇಶದಲ್ಲಿ ಆರ್ಥಿಕ ಚಟುವಟಿಕೆಗಳು, ಜನಪರ ಕಾಮಗಾರಿಗಳು ಸುಗಮವಾಗಿ ನಡೆದು ದೇಶ ಅಭಿವೃದ್ಧಿ ಹೊಂದುತ್ತದೆ. ಬಹುಮತದ ಸರ್ಕಾರ ಕೇಂದ್ರದಲ್ಲಿ ನೆಲೆಸಿದಲ್ಲಿ ಆ ಪಕ್ಷಗಳು ತಾವು ಚುನಾವಣೆಯ ಸಂದರ್ಭದಲ್ಲಿ ನೀಡಿರುವ ಪ್ರಣಾಳಿಕೆಯ ಕಡೆಗೆ ಹೆಚ್ಚು ಗಮನಹರಿಸಿ ಅವುಗಳ ಅನುಷ್ಠಾನದ ಜತೆಗೆ ಇತರೆ ಜನಪರ ಕಾರ್ಯಗಳನ್ನು ಕೈಗೊಂಡು ದೇಶದ ಪ್ರಗತಿಗೆ ಹೆಚ್ಚು ಶ್ರಮಿಸಬಹುದಾಗಿದೆ. ಇಲ್ಲಿ ಪ್ರಬಲ ವಿರೋಧ ಪಕ್ಷವಿದ್ದು ಆಡಳಿತ ನಡೆಸುವ ಪಕ್ಷದ ಮೂಗದಾರ ಹಿಡಿದು ಅಡ್ಡ ದಾರಿಗೆ ಹೋಗದಂತೆ ನೋಡಿಕೊಳ್ಳುತ್ತದೆ.
- ಕೆ. ಟಿ. ಆರ್, ಬೆಂಗಳೂರು
'ಜಗುಲಿ'ಯಲ್ಲಿ ಈ ಸಲದ ವಿಷಯ 'ಪೂರ್ಣ ಬಹುಮತದ ಸರ್ಕಾರ ಒಳ್ಳೆಯದೋ? ಸಮ್ಮಿಶ್ರ ಸರ್ಕಾರ ಒಳ್ಳೆಯದೋ?' ಈ ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

