ಸ್ಟೆತೋಯುಗ (1816-2014)

'ಸ್ಟೆತೋಸ್ಕೋಪ್'- ಎಲ್ಲರೂ ಕೇಳಿರೋ ಹೆಸರು. ಪರಶಿವನ ಕುತ್ತಿಗೆ ಅಲಂಕರಿಸುವ ಸರ್ಪದಂತೆ ವೈದ್ಯರ ಕೊರಳನ್ನು ಅಲಂಕರಿಸಿದ ವೈದ್ಯಲೋಕದ 'ಐಡೆಂಟಿಟಿ'. ಇದಿನ್ನು ಕೆಲವೇ ದಿನಗಳಲ್ಲಿ ಚರಿತೆಯ ಪುಟ ಸೇರಲಿದೆ. ಇದರ ಜಾಗವನ್ನು ಅಲ್ಟ್ರಾಸೌಂಡ್ ಸಾಮಗ್ರಿ ತುಂಬಲಿದೆ. ಸುಮಾರು 200 ವರ್ಷಗಳಿಂದ ಡಾಕ್ಟರ್ಗಳ ನೆರಳಂತೆ ನಡೆದು ಬಂದ, ಡಾಕ್ಟರ್ ಎಂದ ಕೂಡಲೇ ಇಂಜೆಕ್ಷನ್, ಸಿರೇಂಜ್ಗಳಿಗಿಂತಲೂ ಮುಂಚೆ ಥಟ್ಟನೆ ನೆನಪಾಗುವಂಥ ಈ ಸ್ಟೆತೋಸ್ಕೋಪ್ ವಸ್ತು ಸಂಗ್ರಹಾಲಯದ ಷೋಕೇಸ್ ಸೇರಲು ಹೊರಟಿದೆ.
ಅದು 1816. ಫ್ರಾನ್ಸ್ನ ಪ್ಯಾರಿಸ್ನಲ್ಲಿ ವೈದ್ಯ ರೆನೆ ಲೆನೆಕ್ ಎಂಬವರು ಸ್ಟೆತೋಸ್ಕೋಪ್ ಅನ್ನು ಜಗತ್ತಿಗೆ ಪರಿಚಯಿಸಿದರು. ನೆಕರ್- ಎನ್ಫ್ಯಾಂಟ್ಸ್ ಮಾಲಡೀಸ್ ಎಂಬ ಆಸ್ಪತ್ರೆಯಲ್ಲಿ ಇದನ್ನು ಮೊದಲ ಬಾರಿಗೆ ಪ್ರಯೋಗಿಸಲಾಯಿತು.
ಕಾಲಕ್ಕೆ ತಕ್ಕಂತೆ ನವೀಕರಣಗೊಳ್ಳುತ್ತಾ ಸಾಗಿಬಂದ ಸ್ಟೆತೋಸ್ಕೋಪ್, ತನ್ನ ವಿನ್ಯಾಸ ಹಾಗೂ ಕಾರ್ಯಕ್ಷಮತೆಗಳ ಆಧಾರದ ಮೇಲೆ ಬದಲಾವಣೆಗೊಳ್ಳುತ್ತಾ ಬಂತು.
ಸ್ಟೆತೋಸ್ಕೋಪ್ನಲ್ಲಿ ಹಲವು ವಿಧಗಳು. ಅಕಾಸ್ಟಿಕ್ ಸ್ಟೆತೋಸ್ಕೋಪ್, ಎಲೆಕ್ಟ್ರಾನಿಕ್ ಸ್ಟೆತೋಸ್ಕೋಪ್, ರೆಕಾರ್ಡಿಂಗ್ ಸ್ಟೆತೋಸ್ಕೋಪ್, ಫೀಟಲ್ ಸ್ಟೆತೋಸ್ಕೋಪ್, ಡೋಪ್ಲರ್ ಸ್ಟೆತೋಸ್ಕೋಪ್ ಎಂಬಿತ್ಯಾದಿ.
ಅಲ್ಟ್ರಾಸೌಂಡ್ ಎಂದರೆ...
ಇದು ಅಲ್ಟ್ರಾಸೌಂಡ್ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಾಧನ. ಶಬ್ದವನ್ನು ಕಂಪನಾಂಕ (ಫ್ರೀಕ್ಟೆನ್ಸಿ)ಗಳ ಆಧಾರದಲ್ಲಿ ಅಳೆಯುತ್ತಾರೆ. ಮಾನವನ ಕಿವಿಗಳು 20 ಹರ್ಟ್ಸ್ನಿಂದ 20,000 ಹರ್ಟ್ಸ್ಗಳ ನಡುವಿನ ಶಬ್ದದ ತರಂಗಳನ್ನು ಕೇಳಿಸಿಕೊಳ್ಳಲು ಶಕ್ತವಾಗಿವೆ. 20 ಹರ್ಟ್ಸ್ನಿಂದ ಕೆಳಗಿನ ಶಬ್ದ ತರಂಗಳನ್ನು ಇನ್ಫ್ರಾ ಸೌಂಡ್ ಅಂತಲೂ, 20,000 ಹರ್ಟ್ಸ್ಗಿಂತಲೂ ಮೇಲ್ಪಟ್ಟ ಶಬ್ದ ತರಂಗಗಳನ್ನು ಅಲ್ಟ್ರೌಸೌಂಡ್ ಎನ್ನಲಾಗುತ್ತದೆ. ಈ ಅಲ್ಟ್ರಾಸೌಂಡ್ ಶಬ್ದದ ಅಲೆಗಳು ಹೆಚ್ಚು ಶಕ್ತಿಶಾಲಿ.
ಈ ಶಬ್ದದ ಅಲೆಗಳನ್ನು ಬಳಸಿ, ಒಳ ಅಂಗಗಳ ಕಾರ್ಯವಿಧಾನ ಅಥವಾ ಲಕ್ಷಣಗಳನ್ನು ಅಧ್ಯಯನಿಸುವುದಕ್ಕೆ 'ಆಬ್ಸ್ಟೆಟ್ರಿಕ್ ಅಲ್ಟ್ರಾಸೌಂಡ್' ಎಂದು ಹೆಸರು. ಇದರಲ್ಲಿ ಅಲ್ಟ್ರಾಸೌಂಡ್ ಶಬ್ದದ ಅಲೆಗಳನ್ನು ಮಾನವನ ದೇಹದೊಳಕ್ಕೆ ಕಳುಹಿಸಲಾಗುತ್ತದೆ. ಈ ಅಲೆಗಳು ನಿರ್ದಿಷ್ಟ ಭಾಗಕ್ಕೆ ಬಡಿದು ಪ್ರತಿಧ್ವನಿಯಂತೆ ಮರುಕಳಿಸುತ್ತವೆ. ಹಾಗೆ ಬರುವ ಅಲೆಗಳು ದೇಹದ ಒಳಭಾಗದ ಅಂಗಗಳ ಕಾರ್ಯವಿಧಾನ (ಉದಾಹರಣೆಗೆ ಅಂಗಗಳ ಏರಿಳಿತ, ಚಲನ-ವಲನ ಮುಂತಾದುವು) ಹೊತ್ತು ತಂದು ಅದನ್ನು ಕ್ಯಾಥೋಡ್ ರೇ ಅಥವಾ ಎಲ್ಸಿಡಿ ಪರದೆಯ ಮೇಲೆ ರೂಪಿಸುತ್ತವೆ.
ವೈದ್ಯ ಲೋಕದ ಅವಿಭಾಜ್ಯ ಅಂಗವಾಗಿರುವ ಸ್ಟೆತೋಸ್ಕೋಪ್ ಅಷ್ಟು ಬೇಗ ಮರೆಯಾಗದು. ಅಲ್ಟ್ರಾಸೌಂಡ್ ಬಂದರೂ, ಅದನ್ನು ಬಳಸಲು ವೈದ್ಯರು ಹೊಸ ರೀತಿಯ ಸ್ಥಿತ್ಯಂತರಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ. ಇದೊಂದು ನಿಧಾನ ಪ್ರಕ್ರಿಯೆ. ಹಾಗಾಗಿ, ಸ್ಟೆತೋಸ್ಕೋಪ್ ಅಷ್ಟು ಬೇಗ ವೈದ್ಯರ ಹೆಗಲಿನಿಂದ ಇಳಿಯುವುದಿಲ್ಲ.
- ಡಾ. ಕಿರಣ್, ಕಾರ್ಡ್ರೋಡ್ ಆಸ್ಪತ್ರೆ, ಬೆಂಗಳೂರು
ಅಲ್ಟ್ರಾಸೌಂಡ್ ಪರಿಣಾಮಕಾರಿಯಾಗಿ, ನಿಖರವಾಗಿ ಕೆಲಸ ಮಾಡುವುದರಿಂದ, ಪ್ರಾಯಶಃ ಮುಂದಿನ ಪೀಳಿಗೆಗಳ ವೈದ್ಯರು ಅದನ್ನು ಬೇಗನೇ ಸ್ವೀಕರಿಸಬಹುದು. ಎಂಬಿಬಿಎಸ್ ಅಧ್ಯಯನದ ವೇಳೆಯೇ ಈ ಅಲ್ಟ್ರಾಸೌಂಡ್ ಸ್ಟೆತೋಸ್ಕೋಪ್ ಬಳಸಲು ಅನುವು ಮಾಡಿದಲ್ಲಿ, ಇದರ ಸಂಪೂರ್ಣ ಅನುಷ್ಠಾನ ಸಾಧ್ಯವಾದೀತು.
- ಡಾ. ಮಮತಾ, ತಜ್ಞರು
ಇದರಿಂದ, ಒಳ ಅಂಗಗಳ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಸಹಕಾರಿ. ಈ ಶಬ್ದ ತರಂಗಗಳು ಸೃಷ್ಟಿಸುವ ದೃಶ್ಯ ಸಾಮಾನ್ಯವಾಗಿ 2 ಡೈಮೆನ್ಷನಲ್ (2 ಡಿ) ಆಗಿರುತ್ತದೆ. ಇತ್ತೀಚೆಗೆ, ಇದರ 3 ಡಿ ದೃಶ್ಯಗಳನ್ನೂ ಪಡೆಯಬಹುದು.
ಕೊನೆಗೊಂದಿಷ್ಟು...
ಅಂದಹಾಗೆ ಅಲ್ಟ್ರಾಸೌಂಡ್ ಹೊಸ ಆವಿಷ್ಕಾರವೇನಲ್ಲ. ಗರ್ಭಿಣಿಯರನ್ನು ಸ್ಕ್ಯಾನಿಂಗ್ ಒಳಪಡಿಸುವ ವೇಳೆ ಇದನ್ನು ಬಳಸಲಾಗುತ್ತಿತ್ತು. ಈವರೆಗೂ ಸಾಂಪ್ರದಾಯಿಕವಾಗಿ ಉಪಯೋಗಿಸಲ್ಪಡುತ್ತಿದ್ದ ಸ್ಟೆತೋಸ್ಕೋಪ್ಗಿಂತಲೂ ಹೆಚ್ಚು ನಿಖರವಾಗಿ ರೋಗಿಯನ್ನು ಪರೀಕ್ಷಿಸಲು ಅಲ್ಟ್ರಾಸೌಂಡ್ ಪರಿಕರದಿಂದ ಸಾಧ್ಯವಿರುವುದರಿಂದ, ಈ ಸಾಮಗ್ರಿ ಶೀಘ್ರದಲ್ಲೇ ವೈದ್ಯರ ಕೋಟ್ನ ಪಾಕೆಟ್ಗಳಲ್ಲಿ ಸ್ಥಾನಪಡೆಯುತ್ತದೆ. ಇತ್ತೀಚೆಗಷ್ಟೇ ಟೆಲಿಗ್ರಾಮನ್ನು ಕಳೆದುಕೊಂಡಿದ್ದೇವೆ. ಸ್ಟೆತೋಸ್ಕೋಪ್ ಸರದಿ.
ಅಕಾಸ್ಟಿಕ್ ಸ್ಟೆತೋಸ್ಕೋಪ್
ಇದು ಹೆಚ್ಚು ಜನರಿಗೆ ಚಿರಪರಿಚಿತ. ಸಾಮಾನ್ಯವಾಗಿ ವೈದ್ಯರು ಹೆಚ್ಚಾಗಿ ಬಳಸುವುದು ಈ ಮಾದರಿಯನ್ನೇ. ಇದು ಹೃದಯ, ಶ್ವಾಸಕೋಶಗಳನ್ನು ಪರೀಕ್ಷಿಸುವಾಗ ಇದನ್ನು ಬಳಸುತ್ತಾರೆ. ಇದರಲ್ಲಿ ಶಬ್ದದ ಅಲೆಗಳು ನೀಳವಾದ ರಬ್ಬರ್ ಟ್ಯೂಬ್ನ ಒಳಗಿನ ನಿರ್ವಾತ ಪ್ರದೇಶದ ಮೂಲಕ ಶಬ್ದದ ತರಂಗಗಳನ್ನು ವೈದ್ಯರ ಕಿವಿಗೆ ಮುಟ್ಟಿಸುತ್ತದೆ.
ಎಲೆಕ್ಟ್ರಾನಿಕ್ ಸ್ಟೆತೋಸ್ಕೋಪ್
ಹೆಸರೇ ಹೇಳುವಂತೆ ಇದು ಎಲೆಕ್ಟ್ರಾನುಗಳ ನೆರವಿನಿಂದ ಕಾರ್ಯನಿರ್ವಹಿಸುತ್ತದೆ. ಮನುಷ್ಯನ ದೇಹದಲ್ಲಿನ ಅತಿ ಸಣ್ಣ ಶಬ್ದವನ್ನೂ ಗಣನೀಯ ಮಟ್ಟಕ್ಕೆ ವೃದ್ಧಿಸಿ (ಆ್ಯಂಪ್ಲಿಫಿಕೇಶನ್) ಅದನ್ನು ವೈದರ ಕಿವಿಗೆ ಮುಟ್ಟಿಸುತ್ತದೆ.
ರೆಕಾರ್ಡಿಂಗ್ ಸ್ಟೆತೋಸ್ಕೋಪ್
ಈ ಮಾದರಿಯ ಸ್ಟೆತೋಸ್ಕೋಪ್ ಅನ್ನು ಲ್ಯಾಪ್ಟಾಪ್ ಅಥವಾ ಇನ್ಯಾವುದೇ ಕಂಪ್ಯೂಟರ್ಗೆ ಜೋಡಿಸಿ, ಇದು ನೀಡುವ ಮಾಹಿತಿಯನ್ನು ದಾಖಲಿಸಿಕೊಳ್ಳಬಹುದು. ಆದ್ದರಿಂದ ಇದಕ್ಕೆ 'ರೆಕಾರ್ಡಿಂಗ್ ಸ್ಟೆತೋಸ್ಕೋಪ್' ಅಂತಾರೆ.
ಫೀಟಲ್ ಸ್ಟೆತೋಸ್ಕೋಪ್
ಇದನ್ನು ಗರ್ಭದಲ್ಲಿನ ಭ್ರೂಣ ಅಥವಾ ಮಗುವಿನ ಬೆಳವಣಿಗೆಯನ್ನು ಗಮನಿಸಲು ಬಳಸಲಾಗುತ್ತದೆ.
ಡೋಪ್ಲರ್ ಸ್ಟೆತೋಸ್ಕೋಪ್
ಈ ಸಾಮಗ್ರಿ, ಭೌತಶಾಸ್ತ್ರದ ಖ್ಯಾತ ನಿಯಮ 'ಡೋಪ್ಲರ್ ಎಫೆಕ್ಟ್' ಅನ್ನು ಆಧರಿಸುವುದರಿಂದ, ಇದಕ್ಕೆ ಡಾಪ್ಲರ್ ಸ್ಟೆತೋಸ್ಕೋಪ್ ಎಂದು ಹೆಸರು. ಇದರಲ್ಲೂ ಅಲ್ಟ್ರಾಸೌಂಡ್ ತಂತ್ರಜ್ಞಾನ ಬಳಸಲಾಗುತ್ತದೆ.
= ವಿ.ಎಲ್. ಪ್ರಮೀಳಾ ರಮೇಶ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


