ಬೈಟುಕಾಫಿ

ಅಳಿವಿನಂಚಿನ ಹಾಡು

ಅಳಿವಿನಂಚಿನ ಹಾಡು
Published On :

ಆ ದಿನ ನನಗೆ ತುಂಬಾ ಹಸಿವಾಗಿತ್ತು. ಬೆಳಗಿನ ತಿಂಡಿಗಾಗಿ ದಾಂಡೇಲಿಯ ಕಾಡಿನ ಮರಗಳನ್ನೆಲ್ಲ ಜಾಲಾಡಿದರೂ ಒಂದೂ ಹಣ್ಣು ಸಿಗಲಿಲ್ಲ. ಅಯ್ಯೋ ಹೊಟ್ಟೆ ಚುರುಗುಡ್ತಾ ಇದೆ. ಗಿಡದಿಂದ ಗಿಡಕ್ಕೆ ನೆಗೆದಾಡಲೂ ಶಕ್ತಿ ಇಲ್ಲ. ಹೇಗೋ ಕೊಂಬೆಗಳ ಮೇಲೆ ನಿಧಾನ ನಡೆದು, ಆ ಒಣಗಿದ ಮರವೇರಿದೆ. ಅಲ್ಲಿ ಕಾಯಿಗಳು ಕಂಡವು. ಸಿಕ್ಕಿದ್ದೇ ಶಿವಾ, ಜಮಾಯಿಸಿ ಬಿಡುವಾ ಅಂತ ಚೂರು ಬಾಯಿಗೆ ಹಾಕ್ಕೊಂಡೆ; ಒಗರೂ ಒಗರೂ! ಹಣ್ಣು ಸಿಹಿಯಾಗಿರಲಿಲ್ಲ. ಆದರೂ, ಊಟ ಅನಿವಾರ್ಯ.
ಆ ಎಲೆಯಂಥ ತೆಳುವಾದ ಕಾಯಿಯನ್ನು ಕಿತ್ತು, ಚೂಪಾದ ಉಗುರುಗಳಿಂದ ಕೊಂಬೆಗೆ ಬಿಗಿಯಾಗಿ ಹಿಡಿದಪ್ಪಿಕೊಂಡು, ಬಾಲವನ್ನು ಇಳಿಬಿಟ್ಟೆ. ಆಯತಪ್ಪಿ ಕೆಳ ಬೀಳದಂತೆ ಉದರದ ಮೇಲೆ ಭಾರಬಿಟ್ಟು ಕುಳಿತು, ಕೈಯಲ್ಲಿ ಕಾಯಿಯನ್ನು ಹಿಡಿದು ಮುಕ್ಕತೊಡಗಿದೆ. ಮತ್ತೆ ಮತ್ತೆ ಕಾಯಿಯನ್ನು ಕಿತ್ತು ತಿನ್ನುವ ಕೆಲಸವನ್ನು ಪುನರಾವರ್ತಿಸುತ್ತಾ ಮುಂದುವರಿಸಿದೆ. ಯಾಕೋ ಅನುಮಾನ ಬಂತು. ಕೆಳ ನೋಡಿದಾಗ ಅಲ್ಲಿ ಶಶಿಧರ ಹಿರೇಮಠ ಕ್ಯಾಮೆರಾ ಹಿಡಿದು ನಿಂತಿದ್ದ!
ಅವನಿಗೆ ನನ್ನ ಫೋಟೋ ಬೇಕಂತೆ. ಫೋಟೋ ಏನು, ನನ್ನ ಜಾತಕವನ್ನೇ ಕೊಡ್ತೀನಿ. ನಾನು ಕೆಂಚಳಿಲು. 'ಇಂಡಿಯನ್ ಗಯಂಟ್ ಸ್ಕ್ವಿರೆಲ್‌' ಎಂಬುದು ನನ್ನ ಇಂಟರ್‌ನ್ಯಾಶನಲ್ ಹೆಸರು. ಪಶ್ಷಿಮಘಟ್ಟ, ನಿತ್ಯ ಹರಿದ್ವರ್ಣ, ಪರ್ಣಪಾತಿ ಕಾಡುಗಳ ವೃಕ್ಷಗಳ ಮೇಲೆ ನನ್ನ ನೆಗೆದಾಟ ಕಾಮನ್ನು. ಒಟ್ಟಾರೆ 6 ಮೀಟರ್ ಜಿಗಿಯುವ ತಾಕತ್ತು ನನ್ನ ಕಾಲುಗಳಿಗಿದೆ.
ಇನ್ನು ನನ್ನ ಬಾಡಿ ಬಗ್ಗೆ ಹೇಳ್ತೀನಿ ಕೇಳಿ. ಅಚ್ಚ ಕೆಂಪು ಹಾಗೂ ಬೂದು ಮೈ. ಬಿಳಿ ಎದೆ. ಅಚ್ಚ ಕೆಂಪಾದ ದುಂಡನೆಯ ಮೊಂಡು ಕಿವಿಗಳು. ಉಗುರುಗಳೇ ನನ್ನ ಆಸ್ತಿ. ಬೂದು ವರ್ಣದ ಕೈ, ಕಾಲುಗಳು, ನೀಳವಾದ ಕೆಂಪು ವರ್ಣದ ಬಾಲವು ತುದಿಯಲ್ಲಿ ಬಿಳುಪಾಗಿದೆ. ಮೊಂಡಾದ ಮೂಗು ಅದರ ಎಡಬಲಗಳಲ್ಲಿ ಕಪ್ಪನೆ ಮೀಸೆ. ಇದರ ಸಹಾಯದಿಂದ ವಾಸನೆ ಗ್ರಹಿಸುವೆ. ನನ್ನವು ಸಣ್ಣ ಕಪ್ಪು ಕಣ್ಣುಗಳು. ನನ್ನ ಜನಾಂಗದ ಹೆಂಗಸರಿಗೆ ಮೂರು ಜೊತೆ ಸ್ತನಗಳು. ಟೋಟಲ್ಲಾಗಿ 3 ಕಿಲೋ ತೂಕ. ಯಾವ ವೈದ್ಯನೂ ಹೇಳಿಲ್ಲ, ಆದರೆ ನಾನು 20 ವರ್ಷ ಬದುಕ್ತೀನಿ.
ಮರಾಠಿಗರು ನನ್ನನ್ನು 'ಶೇಕ್ರು' ಎಂದು ಕರೆದು, 'ರಾಜ್ಯ ಪ್ರಾಣಿ' ಅಂತಲೂ ಗೌರವ ಕೊಟ್ಟಿದ್ದಾರೆ. ಜಿಲ್ಲೆಯ ಅಂಬಗೊನ ಮತ್ತು ಖೇದ ತಾಲೂಕುಗಳ 130 ಕಿ.ಮೀ. ವ್ಯಾಪ್ತಿಯ ಪಶ್ಚಿಮಘಟ್ಟದ ಸಹ್ಯಾದ್ರಿ ಪ್ರದೇಶವನ್ನು 1984ರಲ್ಲಿ 'ಭೀಮಶಂಕರ ಕೆಂಚಳಿಲು ಸಂರಕ್ಷಿತ ತಾಣ' ಎಂದು ಘೋಷಿಸಲಾಯಿತು.
ಮಾರ್ಚ್- ಏಪ್ರಿಲ್ ನನ್ನ ಸಂತಾನ ಕಾಲ. ಹೆಣ್ಣು ಗರ್ಭ ಧರಿಸಿದ 28ರಿಂದ 35 ದಿನಗಳ ನಂತರ 1 ಅಥವಾ 2 ಮರಿಗಳಿಗೆ ಜನ್ಮ ನೀಡುತ್ತದೆ. ನಾವು ಸರ್ವಭಕ್ಷ ಜೀವಿಗಳು. ಮೊನ್ನೆ 'ಕನ್ನಡಪ್ರಭ' ಓದಿ ಗೊತ್ತಾಯಿತು, ನಾನೀಗ ಅಳಿವಿನಂಚಿನ ಪ್ರಾಣಿ ಅಂತೆ. ನನ್ನ ಮೇಲೆ ಕರುಣೆ ಇರಲಿ. ಹೋಗಿ ಬರಲೇ...


- ಚಿತ್ರ-ಲೇಖನ: ಶಶಿಧರ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.