ಇದು Walk ಶಕ್ತಿ
ಒಂದು ಸುಂದರವಾದ ಹುಡುಗಿ ದಾರಿಯಲ್ಲಿ ನಡೆದು ಹೋಗುತ್ತಿದ್ದರೆ 'ಬಂತು ಬಂತು ಕರೆಂಟು ಬಂತು' ಎಂದು ಹಾಡಬಹುದು ಎಂದು ತೋರಿಸಿದ್ದ ಹಂಸಲೇಖರ ಹಾಡು ಈಗ ನಿಜವಾಗುವ ಪರಿಸ್ಥಿತಿ ಬಂದಿದೆ. ಹೌದು ಈಗ ಆ ಹುಡುಗಿ ನಡೆದು ಹೋಗುವಾಗ ಈ ಪಾದರಕ್ಷೆಗಳನ್ನು ಧರಿಸಿದರೆ ನಿಜಕ್ಕೂ ಕರೆಂಟು ಬರುತ್ತದೆ! ಹಾಗಂತ ಇದು ಕೇವಲ ಹುಡುಗಿಯರಿಗಾಗಿ ಮಾತ್ರ ಅಲ್ಲ.
ನಿತ್ಯದ ಕಾಲ್ನಡಿಗೆ, ನಮ್ಮ ಆರೋಗ್ಯ ಸಂರಕ್ಷಣೆಗೆ ಸಹಕಾರಿ ಎಂಬುದು ಎಲ್ಲರಿಗೂ ಗೊತ್ತು. ಆದರೆ, ನಮ್ಮ ಈ ದಿನ ನಿತ್ಯದ ನಡಿಗೆಯಿಂದ ಕೇವಲ ನಿಮ್ಮ ಮೈಗೆಷ್ಟೇ ಅಲ್ಲ, ಮೊಬೈಲ್ಗೂ ಪವರ್ ಬರುತ್ತದೆ ಎನ್ನುವ ಸಂಶೋಧನೆ ಇದು.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಶ್ರೀ ವಾಣಿ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಧ್ರುವ್ ಎಸ್. ಶಿಂಧೆ ಎಂಬ ಬಾಲ ಪ್ರತಿಭೆ ಈ ಬಗ್ಗೆ ಸಂಶೋಧನೆ ಮಾಡಿದ್ದರ ಫಲವೇ ಕರೆಂಟ್ ಜೆನರೇಶನ್ನ ಈ ಹುಡುಗ ಕಂಡುಹಿಡಿದಿರುವ ಈ ಕರೆಂಟ್ ಜೆನರೇಟರ್ ಹೊಂದಿದ ವಿಶೇಷ ಪಾದರಕ್ಷೆ!
ಈ ಪಾದರಕ್ಷೆಯ ಹಿಮ್ಮಡಿಯಲ್ಲಿ ಸೋಲ್ (Sole) ಆನ್ನು ಅಳವಡಿಸಲಾಗಿದೆ. ಈ ಸೋಲ್ ಒಳಭಾಗ ಟೊಳ್ಳಾಗಿದ್ದು, ಈ ಭಾಗದಲ್ಲಿ ಲಿವರ್ (Lever) ಮತ್ತು ಡೈನಮೋ (Dynam) ಗಳನ್ನು ಅಳವಡಿಸಲಾಗಿದೆ. ಲಿವರ್ ಮತ್ತು ಡೈನಮೋ ಶ್ಯಾಪ್ಟ್ (Shaft) ಗಳ ಮಧ್ಯೆ ಸಂಪರ್ಕ ಕಲ್ಪಿಸಲು ಗೇರ್ (Gear) ಗಳನ್ನು ಬಳಸಲಾಗಿದೆ. ನಡಿಗೆಯ ಸಂದರ್ಭದಲ್ಲಿ ಪಾದಗಳನ್ನು ನೆಲದ ಮೇಲೆ ಊರಿದಾಗ, ಒತ್ತಡವನ್ನು ಸ್ವೀಕರಿಸುವ ಲಿವರ್ ಮೂಲಕ ಡೈನಮೋದ ಶ್ಯಾಫ್ಟ್ ಕಾರ್ಯೋನ್ಮುಖವಾಗಿ ವಿದ್ಯುತ್ ಶಕ್ತಿ ಉತ್ಪಾದನೆಯಾಗುತ್ತದೆ. ಹೀಗೆ ವಿದ್ಯುತ್ ಉತ್ಪಾದಿಸುವ ಡೈನಮೋಗೆ ವೈರ್ (Wire) ಒಂದರ ಸಂಪರ್ಕ ಕಲ್ಪಿಸಲಾಗಿದೆ. ಪಾದರಕ್ಷೆಯಿಂದ ಹೊರಚಾಚಿರುವ ಈ ತಂತಿಯ ಮೂಲಕ ವಿದ್ಯುತ್ ಶಕ್ತಿಯ ಅಗತ್ಯವಿರುವ ಉಪಕರಣಕ್ಕೆ ಸಂಪರ್ಕ ಏರ್ಪಡಿಸಿ, ವಿದ್ಯುಚ್ಛಕ್ತಿಯನ್ನು ಬಳಸಬಹುದು. ನಡಿಗೆಯ ವೇಗ ಹೆಚ್ಚಾದಂತೆ, ಡೈನಾಮೋ ಕಾರ್ಯಕ್ಷಮತೆಯೂ ವೃದ್ಧಿಸಿ, ವಿದ್ಯುತ್ ಉತ್ಪಾದನೆಯೂ ಹೆಚ್ಚುತ್ತದೆ. ಈ ಪಾದರಕ್ಷೆಯ ನೆರವಿನಿಂದ, ಸೆಲ್ಫೋನ್ಗಳು, ರೀ ಚಾರ್ಜ್ ಮಾಡಬಲ್ಲ ಟಾರ್ಚ್ಗಳು, ಬ್ಯಾಟರಿಗಳು, ಅತಿ ಕಡಿಮೆ ವೋಲ್ಟೇಜ್ ನೆರವಿನಿಂದ ಕಾರ್ಯನಿರ್ವಹಿಸಬಲ್ಲ ಉಪಕರಣಗಳು ಮೊದಲಾದವುಗಳಿಗೆ ವಿದ್ಯುತ್ ಅನ್ನು ಪ್ರಸರಿಸಬಹುದು. ಇತ್ತೀಚಿಗೆ ಶ್ರೀ ವಾಣಿ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಲಾಗಿದ್ದ 'ವಿಜ್ಞಾನ ಪ್ರದರ್ಶನ'ದಲ್ಲಿ ಈ ವಿಶೇಷ ಪಾದರಕ್ಷೆಯ ಮಾದರಿಯನ್ನು ಅನಾವರಣಗೊಂಡಿತು. ಧ್ರುವ್ ಎಸ್. ಶಿಂಧೆಯ ಈ ಸಂಶೋಧನೆಗೆ ಆತನ ಗೆಳೆಯ ರಘುನಂದನ್ ನೀಡಿದ ಅಮೂಲ್ಯವಾದ ನೆರವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ನಿತ್ಯದ ನಡಿಗೆಯಿಂದ ಕೇವಲ ನಿಮ್ಮ ಮೈಗಷ್ಟೇ ಅಲ್ಲ, ಮೊಬೈಲ್ಗೂ ಪವರ್ ಬರುತ್ತದೆ ಎನ್ನುವ ಸಂಶೋಧನೆ ಇದು. ಬೆಂಗಳೂರಿನ ರಾಜಾಜಿನಗರದಲ್ಲಿರುವ ಶ್ರೀ ವಾಣಿ ಪಬ್ಲಿಕ್ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಧ್ರುವ್ ಎಸ್. ಶಿಂಧೆ ಎಂಬ ಬಾಲ ಪ್ರತಿಭೆ ಪಾದರಕ್ಷೆಯಲ್ಲೂ ಕರೆಂಟು ತೋರಿಸಿದ್ದಾನೆ...
ಮಾಹಿತಿಗೆ ಮೇಲ್ ಮಾಡಿ dhruv.shindhe@gmail.com
-ಶಿಂದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

