ಅಂಕಗಳೇ ಅಂತಿಮವಲ್ಲ...
ಇತ್ತೀಚಿನ ದಿನಗಳಲ್ಲಿ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೋ ಅಥವಾ ಪಾಲಕರು ಪರೀಕ್ಷೆ ಬರೆಯುತ್ತಿದ್ದಾರೋ ಒಂದೂ ಗೊತ್ತಾಗುತ್ತಿಲ್ಲ. ಏಕೆಂದರೆ ಮಕ್ಕಳ ಪರೀಕ್ಷಾ ಸಮಯದಲ್ಲಿ ಮಕ್ಕಳಿಗಿಂತ ಪಾಲಕರ ಮುಖದಲ್ಲಿಯೇ ಹೆಚ್ಚು ಒತ್ತಡದ ಗೆರೆಗಳು ಮೂಡುತ್ತವೆ. ಇದರ ಬದಲಾಗಿ ಮಕ್ಕಳಲ್ಲಿ ಧನಾತ್ಮಕ ಅಂಶಗಳನ್ನು ಗಮನಿಸಿ ಅವರನ್ನು ಓದುವತ್ತ ಒರೆಗೆ ಹಚ್ಚಬೇಕು. ಅಲ್ಲದೇ ಅವರಿಗೆ ಓದುವುದಕ್ಕೆ ಒಳ್ಳೆಯ ವಾತಾವರಣವನ್ನು ನಿರ್ಮಿಸಿಕೊಟ್ಟು ಅವರನ್ನು ಸ್ವತಂತ್ರವಾಗಿ ಬಿಡಬೇಕು. ಅಗತ್ಯವಿದ್ದರೆ ಅವರೊಂದಿಗೆ ಆ ವಿಷಯದ ಕುರಿತು ಚರ್ಚೆ ಮಾಡಬೇಕು. ಅಗತ್ಯವಾದ ಪರೀಕ್ಷಾ ಸಾಮಗ್ರಿಗಳನ್ನು ಒದಗಿಸಿಕೊಡಬೇಕು. ಇಷ್ಟಕ್ಕೂ ಅಂಕಗಳೇ ಅಂತಿಮವಲ್ಲವೆಂದು ಮನದಟ್ಟು ಮಾಡಿಸಿ.
-ಸಿದ್ಧಾರ್ಥ್. ಪಿ. ವರ್ಮಾ, ಬೀದರ್.
ಗಮನ ಬೇರೆಡೆ ಹರಿಯದಂತೆ ನಿಗಾ ಇರಲಿ
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪರೀಕ್ಷೆಯಲ್ಲಿ ಯಾರು ಹೆಚ್ಚು ಅಂಕ ಪಡೆಯುತ್ತಾರೊ ಅವರ ಮುಂದಿನ ವ್ಯಾಸಂಗ ಉತ್ತಮವಾಗಿರುವುದಲ್ಲದೇ, ಉನ್ನತ ಹುದ್ದೆಯನ್ನು ಪಡೆಯುತ್ತಾರೆ. ಹಲವರು ಕಷ್ಟಪಟ್ಟು ಓದಿದರೂ ಉತ್ತಮ ಅಂಕ ಪಡೆಯಲು ವಿಫಲರಾಗುತ್ತಾರೆ. ಆದ್ದರಿಂದ ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದುವುದು ಅತ್ಯವಶ್ಯಕ. ಅಲ್ಲದೆ ಪಾಲಕರು ಆಗಾಗ್ಗೆ ಶಾಲೆಗೆ ಭೇಟಿ ನೀಡಿ ತಮ್ಮ ಮಗುವಿನ ಪ್ರಗತಿಯನ್ನು ಪರಿಶೀಲಿಸಬೇಕು. ಮಕ್ಕಳಿಗೆ ಅಧ್ಯಯನದ ಮಹತ್ವವನ್ನು ತಿಳಿಸಬೇಕು. ಪ್ರತಿ ದಿನ ಮುಂಜಾನೆ ಮತ್ತು ರಾತ್ರಿ ದಿನಕ್ಕೆ ಕನಿಷ್ಠ ಆರು ಗಂಟೆಗಳಾದರೂ ಓದುವ ಹವ್ಯಾಸ ಬೆಳೆಸಬೇಕು ಇದರೊಂದಿಗೆ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದು ಸೂಕ್ತ. ಹೆಚ್ಚು ಅಂಕ ಪಡೆಯಲು ಒತ್ತಡ ಹೇರುವ ಬದಲು ಅವರ ಅಭ್ಯಾಸ, ಆಹಾರ ಮತ್ತು ಆರೋಗ್ಯದ ಕಡೆ ಗಮನ ಹರಿಸಬೇಕು. ಮುಖ್ಯವಾಗಿ ಮೊಬೈಲ್, ಚಾಟಿಂಗ್, ಟಿ.ವಿ. ಇತ್ಯಾದಿ ಹವ್ಯಾಸಗಳ ಕಡೆ ನಿಯಂತ್ರಣ ಅಗತ್ಯ.
- ರಾಘವೇಂದ್ರ ಎಸ್.ಡಿ., ರಾಮಕೃಷ್ಣಪುರ, ತೀರ್ಥಹಳ್ಳಿ.
ಸ್ನೇಹಪೂರ್ವಕ ಸೂಚನೆಗಳಿರಲಿ
ಪರೀಕ್ಷೆ ಎಂದೊಡನೆ ಎಲ್ಲ ಪಾಲಕರಿಗೆ ಒಂದೇ ಚಿಂತೆ ಮಗು ಚೆನ್ನಾಗಿ ಓದಬೇಕು, ಇಷ್ಟೇ ಮಾರ್ಕ್ಸ್ ತೆಗೆಯಬೇಕು ಎಂದೆಲ್ಲಾ ಒತ್ತಡ ಹೇರುತ್ತಾರೆ. ಅದನ್ನೆಲ್ಲ ಬಿಟ್ಹಾಕಿ, ಮಗು ತಿಳವಳಿಕೆಯಿಂದ ಓದಿದರೆ ಮಾತ್ರ ಇಂದಲ್ಲಾ ನಾಳೆಯೂ ಉತ್ತಮ ಅಂಕ ಪಡೆಯುತ್ತದೆ. ಹಾಗೆ ನೋಡಿದರೆ ಪರೀಕ್ಷೆ ವೇಳೆಯಲ್ಲಿ ಓದುವುದೇ ತಪ್ಪು. ಮೊದಲಿನಿಂದಲೂ ಒಂದೇ ತೆರನಾದ ವೇಗದಲ್ಲಿ ಮಗುವಿನ ಓದಿರಲಿ, ರಾತ್ರಿ ಬೇಗ ಮಲಗಿ ಮುಂಜಾನೆ ಬೇಗ ಏಳಲಿ, ಓದುವ ಕೋಣೆ ಪ್ರಶಾಂತ ವಾಗಿರಲಿ, ಬೇಕಿದ್ದರೆ ಕೋಣೆಯಲ್ಲಿ ವಿದ್ಯಾರ್ಥಿಗೆ ಬೇಕಾದ ನಕ್ಷೆ, ಸೂತ್ರಗಳು, ಚಿತ್ರಗಳನ್ನು ಗೋಡೆಗೆ ಅಂಟಿಸಲಿ. ಒತ್ತಡ ಬೇಡ, ಪ್ಲೀಸ್. ನೀನು ಚೆನ್ನಾಗಿ ಓದುತ್ತಿದ್ದೀಯ ನಿನಗೆ ಚೆನ್ನಾಗಿ ಮಾರ್ಕ್ಸ್ ಬಂದೇ ಬರುತ್ತದೆ ಎಂಬ ಭರವಸೆ ಕೊಟ್ಟು ಸ್ನೇಹಪೂರ್ವಕವಾಗಿ ನಡೆದುಕೊಳ್ಳಿ.
-ರವೀಂದ್ರ ಅಷ್ಟಗಿ. ರಬಕವಿ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಪರೀಕ್ಷೆ ಸಮಯದಲ್ಲಿ ಪಾಲಕರ ಪಾತ್ರ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

