ಬೈಟುಕಾಫಿ

ಅಪರೂಪದ ರೋಗ

ಅಪರೂಪದ ರೋಗ
Published On :

ಕಾಯಿಲೆಗಳಿಗೆ ಈ ಲೋಕದಲ್ಲಿ ಬರವಿಲ್ಲ. ಚಿರಪರಿಚಿತವಾದ ಕಾಯಿಲೆಗಳಿಂದ ಬಳಲುತ್ತಿರುವವರು ನಮ್ಮ ಸುತ್ತಮುತ್ತಲೂ ಸಾಕಷ್ಟು ಮಂದಿ ಕಾಣಸಿಗುತ್ತಾರೆ. ಕೆಲವು ಕಾಯಿಲೆಗಳು ಮಾತ್ರ ನಾವು ಹುಬ್ಬೇರಿಸುವಂತೆ ಮಾಡುತ್ತವೆ. ಇಂಥ ಕಾಯಿಲೆಯೂ ಇದೆಯಲ್ಲವೆ ಎಂಬ ಅರಿವಿನ ಕಣ್ಣು ತೆರೆಸುತ್ತವೆ.
ಫೆಬ್ರವರಿ 28, ಅಂಥ ಅಪರೂಪದ ರೋಗಗಳ ಜಾಗತಿಕ ದಿನ. ಅಪರೂಪದ ರೋಗಗಳಲ್ಲಿ ಲೈಸೋಸೋಮಲ್ ಸ್ಟೋರೇಜ್ ಡಿಸಾರ್ಡರ್ ಒಂದು. ಲೈಸೋಸೋಮಲ್ ಸ್ಟೋರೇಜ್, ಅಪರೂಪದ ಕಾಯಿಲೆ ಎಂಬುದರೊಂದಿಗೆ ಮಾರಣಾಂತಿಕ ಕಾಯಿಲೆ ಎಂದೂ ಗುರುತಿಸಲ್ಪಟ್ಟಿದೆ. ಇದು ಕಾಣಬರುವುದು 6 ತಿಂಗಳಿಂದ 1 ವರ್ಷದ ಮಕ್ಕಳಲ್ಲಿ.
ಈ ನಿಟ್ಟಿನಲ್ಲಿ ಎಲ್‌ಎಸ್‌ಡಿಎಸ್(ಲೈಸೋಸೋಮಲ್ ಸ್ಟೋರೇಜ್ ಡಿಸಾರ್ಡರ್ಸ್ ಸಪೋರ್ಟ್ ಸೊಸೈಟಿ) ವತಿಯಿಂದ ಬೆಂಗಳೂರಿನ ನಿಮ್ಹಾನ್ಸ್ ಕೇಂದ್ರದಲ್ಲಿ 'ಅವರ್ ಲೈಫ್ ಆಲ್ಸೋ ಮ್ಯಾಟರ್ಸ್‌' ಎಂಬ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ನಡೆಸಲಾಗುತ್ತಿದೆ. ಸುಮಾರು 300 ಕುಟುಂಬಗಳು ಭಾಗವಹಿಸಲಿವೆ. ಸ್ವತಃ ಲೈಸೋಸೋಮಲ್ ಸ್ಟೋರೇಜ್ ಕಾಯಿಲೆಗೆ ಒಳಗಾದ ಮಕ್ಕಳು ಮಾತನಾಡಲಿದ್ದಾರೆ.
ಲೈಸೋಸೋಮಲ್ ಸ್ಟೋರೇಜ್ ಡಿಸಾರ್ಡರ್ ಅಡಿಯಲ್ಲಿ 50 ಕಾಯಿಲೆಗಳು ಕಂಡುಬರುತ್ತವೆ. ಕೇವಲ 6-7 ರೀತಿಯ ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆ ಫಲಕಾರಿ. ಜೀವಕೋಶದ ಕೆಲವು ಕಿಣ್ವಗಳ ಕೊರತೆಯಿಂದಾಗಿ ಲೈಸೋಸೋಮ್ ಸ್ಟೋರೇಜ್ ಡಿಸಾರ್ಡರ್ ಕಂಡುಬರುತ್ತದೆ. ಎನ್‌ಜೈಮ್‌ಗಳ ಕೊರತೆ ಉಂಟಾದಾಗ ಜೀವಕೋಶಗಳಲ್ಲಿರುವ ನಿರುಪಯುಕ್ತ ಅಂಶಗಳು ಹೊರಹೋಗುವುದಿಲ್ಲ. ಜೀವಕೋಶಗಳ ಕಾರ್ಯ ಕುಂಠಿತಗೊಳ್ಳುತ್ತದೆ.
ಇದು ಬಹುತೇಕ ಅನುವಂಶಿಕವಾಗಿ ಬರುವ ಕಾಯಿಲೆ. ಐದು ಸಾವಿರದಲ್ಲಿ ಒಬ್ಬರಿಗೆ ಈ ಕಾಯಿಲೆ ಸಂಭವಿಸುತ್ತದೆ. ರಕ್ತಸಂಬಂಧಗಳಲ್ಲಿ ಮದುವೆಯಾಗುವವರ ಮಕ್ಕಳಲ್ಲೂ ಇಂತಹ ಕಾಯಿಲೆ ಕಂಡುಬರುವುದಿದೆ.
ಲಕ್ಷಣ
* ದೈಹಿಕ ಬೆಳವಣಿಗೆ ಕುಂಠಿತ
* ಮಾನಸಿಕ ಬೆಳವಣಿಗೆ ಆಗದಿರುವುದು
* ನಡೆದಾಡಲು ಸಾಧ್ಯವಾಗದಿರುವುದು
* ಮೂರ್ಛೆ ಹೋಗುವುದು
* ಬುದ್ಧಿಮಾಂದ್ಯ
* ಕಿವುಡು
* ಕುರುಡು
* ಲಿವರ್ ದೊಡ್ಡದಾಗುವುದು
* ಹೊಟ್ಟೆ ಉಬ್ಬಿಕೊಳ್ಳುವುದು
* ಹೃದಯದಲ್ಲಿ ಸಮಸ್ಯೆ
* ಉಸಿರಾಟದಲ್ಲಿ ತೊಂದರೆ
* ಮೂಳೆ ಅಥವಾ ಕೀಲು ವಕ್ರಗೊಳ್ಳುವುದು
ಪರಿಣಾಮ
ದೇಹದ ಪ್ರಮುಖ ಭಾಗಗಳಾದ ಹೃದಯ, ಕಿಡ್ನಿ, ಮೆದುಳುಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಉಸಿರಾಟ ಸ್ನಾಯುಗಳಲ್ಲಿ ಬಲಹೀನತೆ ಉಂಟಾಗುತ್ತದೆ. ಉಸಿರಾಡಲು ಸಮಸ್ಯೆ ಉದ್ಭವಿಸುತ್ತದೆ. ಸಕಾಲದಲ್ಲಿ ಚಿಕಿತ್ಸೆ ದೊರೆದಿದ್ದರೆ ಮರಣ.
ಚಿಕಿತ್ಸೆ
'ಎನ್‌ಜೈಮ್ ರಿಪ್ಲೇಸ್‌ಮೆಂಟ್ ಥೆರಪಿ' ಎಂಬ ಚಿಕಿತ್ಸೆ ನೀಡಲಾಗುತ್ತದೆ. ನಿರಂತರವಾಗಿ 15 ದಿನಕ್ಕೊಂದು ಚುಚ್ಚುಮದ್ದು ನೀಡಲಾಗುತ್ತದೆ. ಗಾಚಾರ್, ಫ್ಯಾಬ್ರಿ, ಮ್ಯೂಕೊಪೋಲಿಸಾಚೊರಿಡೋಸಿಸ್ 1,2,6 ಹಂತ, ಪಾಂಪೆ ಕಾಯಿಲೆಗಳಿಗೆ ಚಿಕಿತ್ಸೆ ಲಭ್ಯವಿದ್ದು ಫಲಕಾರಿ ಸಾಧ್ಯ.
ಭಾರತದಲ್ಲಿ ಹಲವು ಚಿಕಿತ್ಸಾ ಕೇಂದ್ರಗಳಿವೆ. ಅಮೆರಿಕದ ಚಾರಿಟಿ ಸಂಸ್ಥೆ ಲೈಸೋಸೋಮ್ ಸ್ಟೋರೇಜ್ ಡಿಸಾರ್ಡರ್‌ನಿಂದ ಬಳಲುತ್ತಿರುವ ಭಾರತದ 80 ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಕರ್ನಾಟಕದ 8 ಮಕ್ಕಳು ಈ ಪಟ್ಟಿಯಲ್ಲಿ ಇದ್ದಾರೆ. ಹೆಚ್ಚಿನ ಮಾಹಿತಿಗೆ : 080 28521833


-ಮಂಜುನಾಥ್ ಎಲ್. ಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.