ಸರಪಳಿ ಕ್ರಿಯೆಗಳು
ನಾವು ನೀವೆಲ್ಲ ಇದನ್ನು ಅನುಭವಿಸಿದವರೇ. ಸರಣಿ ಪ್ರತಿಕ್ರಿಯೆ ಎಂಬುದೊಂದಿರುತ್ತದೆ. ಬೆಳಗ್ಗೆದ್ದು ಆಫೀಸಿಗೆ ಬರುತ್ತಿದ್ದೀರಿ. ಅದ್ಯಾವನೋ ಕಾರಿನವನು ನಿನ್ನೆ ರಾತ್ರಿಯ ಹ್ಯಾಂಗೋವರಿನಲ್ಲೇ ಎದ್ದು ಇಂದು ಡ್ರೈವ್ ಮಾಡುತ್ತ ನಿಮ್ಮ ಸ್ಕೂಟರನ್ನು ಸವರಿಕೊಂಡೇ ಹೋಗಿದ್ದಕ್ಕೆ ನಿಮ್ಮಲ್ಲಿ ಸಿಟ್ಟು ಉಕ್ಕಿದೆ. ಕಚೇರಿಗೆ ಬಂದು ಫೈಲುಗಳ ರಾಶಿಯನ್ನು ನೋಡಿ ಕೈ ಕೆಳಗಿನವರ ಮೇಲೆ ಶರಂಪರ ರೇಗುತ್ತೀರಿ. ಪಾಪ, ಆ ಬಡಪಾಯಿ ಗುಮಾಸ್ತ ಆಫೀಸ್ ಬಾಯ್ ಮೇಲೆ ರೇಗುತ್ತಾನೆ. ಆಫೀಸ್ ಬಾಯ್ ಮನೆಗೆ ಸಂಜೆ ಮನೆಗೆ ಹೋಗುವವರೆಗೂ ಆ ಸಿಟ್ಟನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಹೆಂಡತಿಯ ಮೇಲೆ ಅದನ್ನೆಲ್ಲ ಕಾರುತ್ತಾನೆ. ಆಕೆ ಸುಮ್ಮನಿರಬೇಕಲ್ಲ, ಕಾರಣವಿಲ್ಲದೆ ಮಕ್ಕಳ ಮೇಲೆ ಹರಿಹಾಯ್ದು ಬೆನ್ನಿಗೆ ನಾಲ್ಕು ಹೇರುತ್ತಾಳೆ. ಮಕ್ಕಳು ನಾಯಿಯ ಮೇಲೋ, ಬೆಕ್ಕಿನ ಮೇಲೋ ಮುಗಿಬೀಳುತ್ತಾರೆ!
ನೋಡಿ, ಎಲ್ಲೋ ಆರಂಭವಾದ ಸಿಟ್ಟು ಎಲ್ಲೆಲ್ಲಿಗೋ ಮುಂದುವರಿದಿದೆ, ತಲುಪಿದೆ. ಅದು ಹಾಗೇ ಮುಂದುವರಿಯುತ್ತದೆ. ಯಾವ ಭಾವವೂ ಈ ಲೋಕದಲ್ಲಿ ಅಂತ್ಯವಾಗುವುದೆಂದಿಲ್ಲ. ಸಿಟ್ಟು, ನಗು, ಮಂಕುತನ, ದುಗುಡ, ವಿಷಾದ, ಉಲ್ಲಾಸ- ಇವೆಲ್ಲವೂ ಸಾಂಕ್ರಾಮಿಕಗಳು. ಅದು ಒಬ್ಬನಿಂದ ಇನ್ನೊಬ್ಬನಿಗೆ ಟ್ರಾನ್ಸ್ಫರ್ ಆಗುತ್ತಲೇ ಇರುತ್ತದೆ. ಹೀಗಿರುವಾಗ ನೀವು ನೆಗೆಟಿವ್ ಭಾವಗಳನ್ನೇ ಯಾಕೆ ಹಂಚಬೇಕು? ಧನಾತ್ಮಕ ಭಾವಗಳನ್ನು ಹಂಚಬಾರದೇಕೆ? ಈಗ ಅದೇ ಸಿಟ್ಟಿನ ಜಾಗದಲ್ಲಿ ಮುಗುಳ್ನಗೆಯನ್ನಿಟ್ಟು ನೋಡಿ. ನಿಮ್ಮಿಂದ ಮುಗುಳ್ನಗೆಯ ಟ್ರೀಟ್ ಪಡೆದ ಕ್ಲರ್ಕ್ ಆ ದಿನ ಚೆನ್ನಾಗಿ ಕೆಲಸ ಮಾಡುತ್ತಾನೆ, ಆಫೀಸ್ ಬಾಯ್ ಕೂಡ ಸಂತೋಷದಿಂದ ಮನೆಗೆ ಹಿಂದಿರುಗುತ್ತಾನೆ. ಆತನ ಹೆಂಡತಿ, ಮಕ್ಕಳು ಖುಷಿಯಾಗಿರುತ್ತಾರೆ. ನೀವೂ ಖುಷಿಯಾಗಿರುತ್ತೀರಿ. ಒಂದು ಮುಗುಳ್ನಗೆ, ಪ್ರೀತಿಯ ಮಾತಿನಿಂದ ನೀವು ಕಳೆದುಕೊಳ್ಳುವುದಾದರೂ ಏನು? ಏನೂ ಇಲ್ಲ. ಆದರೆ ಅದರ ಬದಲಿಗೆ ನೀವು ಇಡೀ ಲೋಕವನ್ನೇ ಗೆಲ್ಲಬಲ್ಲಿರಿ, ಅಥವಾ ನಿಮ್ಮ ಸುತ್ತಮುತ್ತಲನ್ನಾದರೂ ಖುಷಿಯಾಗಿ, ಲವಲವಿಕೆಯಿಂದಿಟ್ಟುಕೊಳ್ಳಬಲ್ಲಿರಿ.
-ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

