ಕೆಲ್ಸ ಖಾಲಿ ಇದೆ!

ನನ್ನಲ್ಲಿ ಐಡಿಯಾ ಇದೆ. ಆದರೆ ಯಾರೂ ಆದನ್ನು ಕೇಳಿಸಿಕೊಳ್ತಿಲ್ಲ. ನನ್ನಲ್ಲಿ ಒಳ್ಳೇ ರೂಪ ಇದೆ. ಆದ್ರೆ ಎಲ್ಲಾ ಂಟರ್ವ್ಯೂನಲ್ಲೂ ನಾನು ಯಾಕೆ ಸೋಲ್ತೀನಿ? ಎಂಬಿಎನಲ್ಲಿ ರ್ಯಾಂಕ್ ಸಿಕ್ಕಿದೆ ನಂಗೆ, ಆದರೆ ಡಿಗ್ರಿ ಮುಗಿದು ಮೂರು ವರ್ಷವಾದ್ರೂ ನನ್ನ ಯಾರೂ ಯಾಕೆ ಕೆಲಸಕ್ಕೆ ಸೇರಿಸಿಕೊಳ್ತಿಲ್ಲ?
ಇಂಥ ಯೋಚನೆ, ಚಿಂತೆ ಹಲವರದು. ಸಾಕಷ್ಟು ಅರ್ಹತೆ ನಮ್ಮಲ್ಲಿದ್ದರೂ ನಂಗೆ ಕೆಲಸ ಪಡೆಯಲಾಗಿಲ್ಲ ಎಂಬ ಕೊರಗು ನಿಮ್ಮದೂ ಇರಬಹುದು. ಲಕ್ಷಗಟ್ಟಲೆ ಫೀಸ್ ಕಟ್ಟಿ ಬಿ-ಸ್ಕೂಲ್ ಸೇರಿದಾಕ್ಷಣ ನಿಮಗೆ ಕೆಲಸ ಸಿಕ್ಕಂತೆಯೇ ಎಂಬ ಖಾತ್ರಿ ಬೇಡ. ಎಂಪ್ಲಾಯಬಿಲಿಟಿ ಅಥವಾ ಉದ್ಯೋಗಾರ್ಹತೆ ಎಂಬುದು ಅಷ್ಟು ಸುಲಭವಲ್ಲ. ಅದು ಜ್ಞಾನ, ನಡವಳಿಕೆ, ಶಿಸ್ತು, ಎಲ್ಲವನ್ನೂ ಸೇರಿಸಿ ಬರುವಂಥದ್ದು.
ತಮ್ಮನ್ನೆ ತಾವು ಬೆಸ್ಟ್ ಎಂದು ಹೇಳಿಕೊಳ್ಳುವ ಶಿಕ್ಷಣ ಸಂಸ್ಥೆಗಳು ಹೇಳುವ ಪ್ರಕಾರ 'ನಾವು ಕುದುರೆಯನ್ನು ಕೆರೆಗೆ ಒಯ್ಯಬಹುದು ಆದರೆ ನೀರು ಕುಡಿಯುವುದು ಅದಕ್ಕೆ ಬಿಟ್ಟಿದ್ದು'. ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಖಾಸಗಿ ಉದ್ಯೋಗದಲ್ಲೂ ನೀವು ಯಶಸ್ಸು ಪಡೆಯಬೇಕಾದರೆ ಈ ಕೆಳಗಿನ ಸೂತ್ರಗಳನ್ನು ಪಾಲಿಸಬೇಕು.
ಮಾತನಾಡುವ ಮತ್ತು ಬರೆಯುವ ಕೌಶಲ
ನಿಮ್ಮ ಹತ್ತಿರ ಒಂದಕ್ಕಿಂತ ಒಂದು ದೊಡ್ಡ ಐಡಿಯಾಗಳಿರುತ್ತವೆ. ಆದರೆ ಅದನ್ನು ವ್ಯಕ್ತಪಡಿಸುವ ಕೌಶಲ ಇಲ್ಲದಿದ್ದರೆ ಅವೆಲ್ಲ ವ್ಯರ್ಥ. ಅದಕ್ಕೆ ನಿಮ್ಮ ಮಾತನಾಡುವ ಹಾಗೂ ಬರೆಯುವ ಕೌಶಲ್ಯ ಪರಿಣಾಮಕಾರಿಯಾಗಿರಬೇಕು. ಅದರಲ್ಲೂ ಕಾರ್ಪೊರೇಟ್ ವಲಯದಲ್ಲಿ ನಿಮ್ಮ ವಿಷಯವನ್ನು ಸಂಕ್ಷಿಪ್ತವಾಗಿ ಹಾಗೂ ಪರಿಣಾಮಕಾರಿಯಾಗಿ ಹೇಳಬೇಕಾಗಿರುತ್ತದೆ. ಬರೆಯುವಾಗ ಸ್ಪಷ್ಟವಾಗಿ, ಎಲ್ಲರಿಗೂ ಅರ್ಥ ಆಗುವಂತೆ ಹಾಗೂ ವ್ಯಾಕರಣ ತಪ್ಪಿಲ್ಲದೆ ಬರೆಯಬೇಕು.
ಜಾಗತಿಕ ಮಟ್ಟದ ಜ್ಞಾನ
ನಾವಿಕನಾಗಿ ಈಜು ಬರದಿದ್ದರೆ ಹೇಗೆ? ಹಾಗೆಯೇ ಅರ್ಥಶಾಸ್ತ್ರದ ಮೂಲ ವಿಷಯವನ್ನು ಸರಿಯಾಗಿ ತಿಳಿದುಕೊಂಡಿರಬೇಕು. ಅದರ ಜೊತೆಗೆ ವ್ಯಾವಹಾರಿಕ ಜ್ಞಾನ ಅಷ್ಟೇ ಮುಖ್ಯ. ವಿವಿಧ ಆರ್ಥಿಕ ಮಾದರಿಗಳನ್ನು ಹಾಗೂ ಬೇರೆ ಬೇರೆ ಕಂಪನಿಗಳ ವ್ಯಾಪಾರ ತಂತ್ರಗಳನ್ನು ಅಭ್ಯಸಿಸಬೇಕು. ಅನುಭವಿಗಳೊಂದಿಗೆ ಚರ್ಚಿಸಬೇಕು. ಇವುಗಳಿಂದ ಜ್ಞಾನ ಬೆಳೆಯುವುದಲ್ಲದೆ ವ್ಯವಹಾರ ಕೌಶಲವೂ ತಿಳಿಯುವುದು.
ವಿಶ್ಲೇಷಣಾತ್ಮಕ, ಸಂಯೋಜನಾತ್ಮಕ ಚಿಂತನೆ
ಬಿಸಿನೆಸ್ ಎಂಬುದು ಅನಿಶ್ಚಿತತೆಯ ಮೇಲೆ ನಿಂತಿದೆ. ಬೇರೆಯವರ ಸೋಲನ್ನು ವಿಶ್ಲೇಷಿಸಿದಾಗ ನಮಗೆ ಪರಿಹಾರ ಹುಡುಕುವ ಕ್ಷಮತೆ ದೊರೆಯುತ್ತದೆ. ಹಾಗೆಯೇ ಜಾಗತಿಕ ಅರ್ಥ ವ್ಯವಸ್ಥೆಯನ್ನು ಸಂಯೋಜನಾತ್ಮಕವಾಗಿ ನೋಡಬೇಕು. ಏಕೆಂದರೆ ಅವೆಲ್ಲ ಪರಸ್ಪರ ಸಂಬಂಧ ಹೊಂದಿರುತ್ತವೆ. ಜಾಸ್ತಿ ವಿಶ್ಲೇಷಣೆಗಳು, ಪ್ರಾಜೆಕ್ಟ್, ಅಸೈನ್ಮೆಂಟ್ ಮಾಡಿದಂತೆ ಅದರ ಬಗ್ಗೆ ತಿಳಿಯುತ್ತದೆ.
ಜನರ ಜೊತೆ ಬೆರೆಯುವುದು
ನಾವು ಎಲ್ಲರ ಜೊತೆಗೂಡಿ ಕೆಲಸ ಮಾಡಬೇಕಾಗುತ್ತದೆ. ಒಂದು ಸಂಸ್ಥೆ ಬೆಳೆಯಬೇಕೆಂದರೆ ಅಲ್ಲಿ ಹಲವು ಕೈಗಳ ಕೆಲಸವಿರುತ್ತದೆ. ಅವುಗಳನ್ನು ಸಮರ್ಥವಾಗಿ ನಿಭಾಯಿಸುವ ಒಬ್ಬ ನಾಯಕನಿರುತ್ತಾನೆ. ನಾಯಕನೆಂದರೆ ಎಲ್ಲರ ಜೊತೆಗೂಡಿ ಕೆಲಸ ಮಾಡುವುದು. ಅದರಿಂದಲೆ ಒಬ್ಬ ನಾಯಕನಾಗಲು ಸಾಧ್ಯ. ವಿದ್ಯಾರ್ಥಿ ಸಂಘಗಳೊಂದಿಗೆ ಅಥವಾ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಬೆರೆತು ಕೆಲಸ ಮಾಡಬೇಕು.
ನೈತಿಕ ಮೌಲ್ಯ ಅಳವಡಿಕೆ
ಬರೀ ದುಡ್ಡಿನ ಹಿಂದೆ ಬಿದ್ದು ನೈತಿಕತೆ ಮರೆತರೆ ನಾವು ಕ್ಷಣಿಕ ಸುಖ ಪಡೆಯಬಹುದು. ಆದರೆ ಜೀವನದಲ್ಲಿ ಸೋಲುವುದಂತು ಖಚಿತ. ನೈತಿಕತೆಯನ್ನು ಯಾರ ಮೇಲೂ ಹೇರಲಾಗುವುದಿಲ್ಲ. ನೈತಿಕತೆಯಿಂದ ಗ್ರಾಹಕರ ವಿಶ್ವಾಸ ಪಡೆಯಬಹುದು. ಒಂದು ಸಾರಿ ಗ್ರಾಹಕ ವಿಶ್ವಾಸ ಉಳಿಸಿಕೊಂಡರೆ ನಿಮಗೆ ಸೋಲೇ ಬರದು.
ವಿಷಯದಲ್ಲಿ ಪರಿಣಿತಿ
ಇದು ಪರಿಣಿತರ ಯುಗ. ಇಲ್ಲಿ ಅರ್ಧ ಜ್ಞಾನಿಗಳಿಗೆ ಜಾಗವಿಲ್ಲ. ಯಾವುದಾದರೂ ಒಂದು ವಿಷಯದಲ್ಲಿ ಆಳವಾದ ಜ್ಞಾನ ಹೊಂದಿರುವುದು ಅತ್ಯಗತ್ಯ. ನಿಮಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಪರಿಣಿತಿ ಹೊಂದಲು ಪ್ರಯತ್ನಿಸಿ. ಬೇಡಿಕೆ ಇದೆಯೆಂದು ನಿಮಗೆ ಆಸಕ್ತಿ ಇರದ ವಿಷಯ ಆಯ್ಕೆ ಮಾಡಿಕೊಳ್ಳಬೇಡಿ.
ಕ್ರಿಯೇಟಿವಿಟಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾರು ಹೊಸದನ್ನು ಕೊಡುತ್ತಾರೊ ಅವರು ಸ್ಪರ್ಧೆಯಲ್ಲಿ ಉಳಿಯುತ್ತಾರೆ. ಕ್ರಿಯೇಟಿವಿಟಿ ಕೆಲವರಲ್ಲಿ ಮಾತ್ರ ಇರುತ್ತದೆ ಎಂದೇನಿಲ್ಲ. ವಿಷಯವನ್ನು ಬೇರೆ ಕೋನದಿಂದ ನೋಡಲು ಪ್ರಯತ್ನಿಸಿದರೆ ನೀವು ಒಬ್ಬ ಕ್ರಿಯೇಟಿವ್ ವ್ಯಕ್ತಿಯಾಗಬಹುದು. ಕೊನೆ ಮಾತು- ಬರೀ ಪಠ್ಯಪುಸ್ತಕ ಓದುತ್ತ ಪುಸ್ತಕ ಹುಳು ಆಗಿ ಉಳಿಯಬೇಡಿ.
ಇಂಜಿನಿಯರಿಂಗ್ ಕ್ಷೇತ್ರದಲ್ಲೂ ಉದ್ಯೋಗಾವಕಾಶ ಹೆಚ್ಚಿದೆ. ದೇಶದ ಎರಡನೇ ದೊಡ್ಡ ಸಾಫ್ಟ್ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಈಗಾಗಲೇ 15,000ರಿಂದ 16,000 ಸಿಬ್ಬಂದಿ ಆಯ್ಕೆ ಮಾಡಲು ಸಿದ್ಧತೆ ನಡೆಸಿದೆ.
ಈ ವರ್ಷ ಉದ್ಯೋಗ ಭಾಗ್ಯ
2014 ಉದ್ಯೋಗಾಕಾಂಕ್ಷಿಗಳ ಬದುಕಿಗೆ ಹೊಸ ಆಶಾಕಿರಣ ಹೊತ್ತು ತಂದಿದೆ. ವಾಣಿಜ್ಯ ಕ್ಷೇತ್ರಗಳಲ್ಲಿ ನೌಕರಿ ಸಿಗುತ್ತಿಲ್ಲ ಎಂಬ ಕೊರಗು ಮರೆಯಾಗಬಹುದು. ಬ್ಯಾಂಕಿಂಗ್ ಮತ್ತು ಇತರೆ ಕ್ಷೇತ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವ ನಿಟ್ಟಿನಲ್ಲಿ ಕೆಲವು ಕ್ರಮಗಳು ನಡೆಯುತ್ತಿವೆ.
ಕಳೆದ ವರ್ಷ ಮಧ್ಯಂತರದಲ್ಲಿ ಕಂಡುಬಂದ ಅರ್ಥಿಕ ಹಿನ್ನಡೆ ಈಗ ಕಂಡುಬರುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಗಣನೀಯ ಸುಧಾರಣೆ ಕಂಡುಬರುತ್ತಿದ್ದು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಸಂಸ್ಥೆಗಳು ಮುಂದಾಗಿವೆ ಎಂಬುದೇ ಸಂತಸದ ಸಂಗತಿ. ವಿವಿಧ ಬ್ಯಾಂಕ್ಗಳು ಖಾಲಿ ಇರುವ ಹುದ್ದೆಗಳಿಗೆ ಸೂಕ್ತ ಸಿಬ್ಬಂದಿಗಳನ್ನು ಭರ್ತಿ ಮಾಡುವ ಯೋಜನೆ ಹಾಕಿಕೊಂಡಿವೆ. ಕಳೆದ ವರ್ಷ 10 ಲಕ್ಷ ಆಕಾಂಕ್ಷಿಗಳ ನಡುವೆ ಕೇವಲ 19,000 ಮಂದಿಗೆ ನೌಕರಿ ದೊರೆತಿತ್ತು. ಈ ವರ್ಷ ಅವಕಾಶಗಳ ಸಂಖ್ಯೆ ಹೆಚ್ಚಿರುವುದರಿಂದ ಆಕಾಂಕ್ಷಿಗಳಿಗೆ ಭರವಸೆ ಮೂಡಿಸಿವೆ. ಅನೇಕ ನೂತನ ಸಂಸ್ಥೆಗಳು ಭಾರತದಲ್ಲಿ ಹೂಡಿಕೆ ಮಾಡುತ್ತಿರುವುದರಿಂದ ಹೊಸ ಪ್ರತಿಭೆಗಳ ಹುಡುಕಾಟ ನಡೆಯುತ್ತಿದೆ. ಚಿಲ್ಲರೆ, ಟೆಲಿಕಾಂ, ಪ್ರವಾಸೋದ್ಯಮ ಹಾಗು ಇತರ ವಲಯಗಳಲ್ಲೂ ಉದ್ಯೋಗಾವಕಾಶ ವಿಸ್ತರಿಸಿದೆ.
ಮೂಲ ಸೌಕರ್ಯ ವಲಯದಲ್ಲೂ ಉದ್ಯೋಗ ಭರಾಟೆ ಜಾಸ್ತಿಯಾಗಿದೆ. ನೆನೆಗುದಿಗೆ ಬಿದ್ದಿರುವ ಬಹಳಷ್ಟು ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿರುವುದರಿಂದ ನುರಿತ ಹಾಗೂ ಹೊಸ ಕೆಲಸಗಾರರ ಹುಡುಕಾಟ ಸಾಗಿದೆ. ಕಾರಿಡಾರ್ ಯೋಜನೆ ಜಾರಿಯಾಗುವ ಲಕ್ಷಣ ಇದೆ. ಸೂಕ್ತ ಅಭ್ಯರ್ಥಿಗಳಿಗಾಗಿ ಅರಸುತ್ತಿರುವ ಸಂಸ್ಥೆಗಳು ಮಾನವ ಸಂಪನ್ಮೂಲ ಹೊರಗುತ್ತಿಗೆ ನೀಡುವತ್ತ ಒಲವು ತೋರಿವೆ. ಹೆಚ್ಚಿನ ಜ್ಞಾನ ಹಾಗೂ ಕೌಶಲ ಬೆಳೆಸಿಕೊಂಡರೆ ಉದ್ಯೋಗ ಸಿಗುವುದರಲ್ಲಿ ಎರಡು ಮಾತಿಲ್ಲ.
-ಸೂರಜ್ಕುಮಾರ್ ಚವ್ಹಾಣ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


