ನೇಕಾರನಿಗೆ ಜೈಕಾರ

ಹೊಸವರ್ಷ ಎಲ್ಲರ ಪಾಲಿಗೂ ಸಿಹಿಯಾಗಿ ಪ್ರಾರಂಭವಾಗಿಲ್ಲ. ವರ್ಷಗಳು, ಕ್ಯಾಲೆಂಡರ್ಗಳು, ಬದುಕು ಬದಲಾಯಿಸಲಾರವು ಎಂಬುದು ಎಲ್ಲರ ಪಾಲಿಗಲ್ಲವಾದರೂ ನೇಕಾರರ ಪಾಲಿಗೆ ಸತ್ಯವಾಗಿದೆ. ಆದರೆ 'ಇದು ಬದಲಾಗದ ಬವಣೆ ಎಂದು ಕೈ ಚೆಲ್ಲಿ ಕೂರುವ ಮಂದಿಯಲ್ಲ ನಾವು' ಅಂತ ನೇಕಾರರು ಈ ಬಾರಿ ಸಮರ ಸಾರಿದ್ದಾರೆ. ಹೊಸವರ್ಷದ ಮೊದಲ ದಿನವೇ ಮಹಾತ್ಮ ಗಾಂಧೀಜಿಯವರ ಸತ್ಯಾಗ್ರಹದ ಮಾರ್ಗವನ್ನು ಅನುಸರಿಸಿ, ಅವರ ಕನಸಿನ ಕೂಸಾದ ಕೈಮಗ್ಗದ ನೇಕಾರಿಕೆಯನ್ನು ಉಳಿಸುವತ್ತ ಚಳವಳಿ ಶುರುವಿಟ್ಟುಕೊಂಡಿದ್ದಾರೆ. ಇದೀಗ ಹದಿನೈದನೆ ದಿನದತ್ತ ಕಾಲಿಡುತ್ತಿರುವ ಚಳವಳಿ ದೇಶಾದ್ಯಂತ ವ್ಯಾಪಕ ಬೆಂಬಲ ಪಡೆಯುತ್ತಿದೆ. ಚಳವಳಿ ಈಗ ಕೇವಲ ನೇಕಾರರ ಕೂಗಾಗಿ ಉಳಿದಿಲ್ಲ. ಗಾಂಧಿವಾದಿಗಳು, ಹಿರಿಯ ಸತ್ಯಾಗ್ರಹಿಗಳು, ಸಾಹಿತಿಗಳು, ರಂಗಕರ್ಮಿಗಳು, ಕಲಾವಿದರು, ಸ್ವಾತಂತ್ರ್ಯ ಹೋರಾಟಗಾರರು, ಪರಿಸರವಾದಿಗಳು ಸೇರಿದಂತೆ ಭಾರಿ ಜನಸಮೂಹವೇ ಕೈಜೋಡಿಸುತ್ತಿದೆ.
ಅಖಿಲ ಭಾರತ ಕೈಮಗ್ಗ ಸಂಘದವರು ಒಗ್ಗೂಡಿ ನಿಂತಿರುವ ಈ ಸತ್ಯಾಗ್ರಹ ಈ ಜನವರಿ ಹದಿನೈದರಿಂದ ಹೊಸ ಸ್ವರೂಪ ಪಡೆಯುತ್ತಿದೆ. ಕರ್ನಾಟಕದ ನೇಕಾರರು, ಕೈ ಮಗ್ಗ ಕಾರ್ಯಕರ್ತರು, ಸಮಾಜಸೇವಕರು, ಪರಿಸರವಾದಿಗಳು, ಸಾಹಿತಿ ಮತ್ತು ಕಲಾವಿದರು ಜನವರಿ ಹದಿನೈದರಿಂದ ನೇಕಾರರ ಕುಲದೇವತೆ ಬನಶಂಕರಿ ಹೆಸರಲ್ಲಿ ಪಾದಯಾತ್ರೆ ಕೈಗೊಳ್ಳಲಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಢದಿಂದ ಹೊರಟು ಬಾಗಲಕೋಟೆ ಜಿಲ್ಲೆಯ ಬಾದಾಮಿಯವರೆಗೆ ನೇಕಾರಿಕೆ ನಂಬಿರುವ ಎಲ್ಲ ಗ್ರಾಮಗಳನ್ನು ಬಳಸಿಕೊಂಡು ಬನಶಂಕರಿ ಜಾತ್ರೆಯ ಸ್ಥಳದಲ್ಲಿ ಒಂದುಗೂಡಿ ಪಾದಯಾತ್ರೆ ಪೂರೈಸಲಿದ್ದಾರೆ. ಗಾಂಧೀಜಿಯವರು ಹುತಾತ್ಮರಾದ ದಿನ, ಜನವರಿ ಮೂವತ್ತರಿಂದ ಅನಿರ್ದಿಷ್ಟ ಕಾಲದ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವ ಯೋಜನೆ ಇಟ್ಟುಕೊಂಡಿದ್ದಾರೆ.
ನೇಕಾರರ ಬೇಡಿಕೆ ಏನು?
ನೇಕಾರರೇ ಹೇಳುವಂತೆ ಅವರದ್ದು ಬೇಡಿಕೆಯ ಪಟ್ಟಿ ಇಲ್ಲ. ಅಸಲಿಗೆ ಪಟ್ಟಿ ಮಾಡುವಷ್ಟು ಸಂಖ್ಯೆಯ ಬೇಡಿಕೆಗಳೇ ಇಲ್ಲ. ಅವರ ಬೇಡಿಕೆ ಒಂದೇ. 'ಕೈಮಗ್ಗದ ಯಾಂತ್ರೀಕರಣ ಪ್ರಕ್ರಿಯೆಯನ್ನು ನಿಲ್ಲಿಸಿ ನೇಕಾರರ ಕುಲಕಸುಬನ್ನು ಉಳಿಸಿ' ಎಂಬುದು ಅವರ ಏಕೈಕ ಬೇಡಿಕೆ.
ವ್ಯತಿರಿಕ್ತ ಪರಿಣಾಮ
ಕೈಮಗ್ಗ ನೇಕಾರಿಕೆ ಗಾಂಧೀಜಿಯವರ ಕನಸು. ಅದು ಸ್ವಾವಲಂಬನೆಯ ಸಂಕೇತವಾಗಿ ಹುಟ್ಟಿಕೊಂಡ ಉದ್ಯೋಗ ಮಾರ್ಗ. ಅದು ನಂತರದಲ್ಲಿ ಭಾರತದ ಪರಂಪರೆಯ ಭಾಗವಾಗಿ ಹೋಗಿರುವುದು ಸತ್ಯ. ಆದರೆ ಈಗ ಅದು ಇತಿಹಾಸದ ಪುಟಕ್ಕೆ ಸೇರುವ ದುಃಸ್ಥಿತಿ ಕಾಣುತ್ತಿದೆ. ರೇಷ್ಮೆ ನೇಕಾರಿಕೆ, ಕಂಬಳಿ ನೇಕಾರಿಕೆ, ಹತ್ತಿ ನೇಕಾರಿಕೆ ಎಲ್ಲೆಡೆ ಯಂತ್ರಗಳು ದಾಳಿ ಮಾಡಿವೆ. ಬೇರ್ಯಾವ ದೇಶದಲ್ಲೂ ಇಲ್ಲದ ಕೈಮಗ್ಗ ನೇಕಾರಿಕೆಯ ಭವ್ಯ ಪರಂಪರೆಯನ್ನು ಯಂತ್ರಗಳು ನಾಶಪಡಿಸುತ್ತಿವೆ. ನಾಗರಿಕತೆ ಹಾಗೂ ವೇಗದ ನೆಪದಲ್ಲಿ ಕೈಮಗ್ಗದ ನೇಕಾರಿಕೆಗೆ ಸಂಚಕಾರ ಒದಗುತ್ತಿದೆ.
ಕೈಮಗ್ಗ ನೇಕಾರಿಕೆಯನ್ನು ಸಂಪನ್ಮೂಲ ಎಂದು ಪರಿಗಣಿಸಿ ಅರ್ಥಿಕ ಪ್ರಗತಿ ಸಾಧಿಸುವುದು ಹಾಗೂ ರಫ್ತು ವ್ಯಾಪಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವೃದ್ಧಿಸುವುದು ಸಾಧ್ಯವಿದ್ದರೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಕೈಮಗ್ಗ ಕಾರ್ಯಕರ್ತರಲ್ಲಷ್ಟೇ ಅಲ್ಲದೆ ಬುದ್ಧಿಜೀವಿಗಳ, ಪರಿಸರವಾದಿಗಳ, ಪ್ರಗತಿಪರರ ಮನದಲ್ಲಿ ಅಸಮಾಧಾನ ಮೂಡಿಸಿದೆ.
ಮಾರುಕಟ್ಟೆಗೆ ಬಿಡುಗಡೆಯಾಗುತ್ತಿರುವ ಬಟ್ಟೆಗಳಲ್ಲಿ ಶೇಕಡಾ ಎಪ್ಪತ್ತರಷ್ಟು ಬಟ್ಟೆ ವಿದ್ಯುತ್ ಮಗ್ಗದಿಂದ ತಯಾರಾಗುತ್ತಿದೆ ಎಂಬ ಅಂಕಿ ಅಂಶ ತೆರೆದಿಡುವ ಕಾರ್ಯಕರ್ತರು, ಇದರಿಂದ ಖಾದಿ ಮತ್ತು ಕೈಮಗ್ಗ ನಂಬಿಕೊಂಡು ಬದುಕುತ್ತಿರುವವರ ಸ್ಥಿತಿ ದಯನೀಯವಾಗಿದೆ ಎಂಬ ನೋವು ವ್ಯಕ್ತಪಡಿಸುತ್ತಾರೆ.
'ಸ್ವಾತಂತ್ರ್ಯಾನಂತರ ರಾಜಕೀಯ ಕಾರಣಗಳಿಂದ ಕುಲಕಸುಬುಗಳಿಗೆ ಕಂಟಕ ಬಂದಿದೆ. ಬಂಡವಾಳಶಾಹಿಗಳಿಂದ , ಬೃಹತ್ ಉದ್ದಿಮೆಗಳಿಂದ ಹಾಗೂ ವಿದೇಶದಿಂದ ಹರಿದು ಬರುತ್ತಿರುವ ಹೇರಳ ಹಣದಿಂದ ಪಾರಂಪರಿಕ ಕಸುಬುಗಳಿಗೆ ಹಾಗೂ ಸ್ವಾವಲಂಬಿತ ಉದ್ಯೋಗಗಳಿಗೆ ದುಸ್ಥಿತಿ ಬಂದು ನಶಿಸುತ್ತಿದೆ. ಈ ಸಂದರ್ಭದಲ್ಲಿ ಕೈಮಗ್ಗ ಸೇರಿದಂತೆ ಪಾರಂಪರಿಕ ಕುಲಕಸುಬುಗಳನ್ನು ಉಳಿಸಿಕೊಳ್ಳುವ ಕೆಲಸವಾಗಬೇಕಾಗಿದೆ. ಆ ಸಲುವಾಗಿಯೇ ಈ ಹೋರಾಟ' ಎನ್ನುತ್ತಾರೆ ಒಕ್ಕೂಟದ ಸಂಚಾಲಕರಾದ ದೇವರಮನಿ.
'ಸರ್ಕಾರಗಳು ಕೈಮಗ್ಗ ಗಾಳಿಗೆ ತೂರಿ ನೇಕಾರಿಕೆ ಕ್ಷೇತ್ರದಲ್ಲಿ ವಿದ್ಯುತ್ ಮಗ್ಗಗಳನ್ನು ಅಳವಡಿಸುವ ಆತ್ಮಹತ್ಯಕಾರಕ ಕೆಲಸಕ್ಕೆ ಇಳಿದಿವೆ. ಯಾಂತ್ರೀಕರಣ ಪ್ರಕ್ರಿಯೆ ಈ ಕೂಡಲೇ ನಿಲ್ಲಿಸಬೇಕು. ಅದಕ್ಕಾಗಿಯೆ ಈ ಸತ್ಯಾಗ್ರಹ. ಆದರೆ ಒಂದು ತಪ್ಪನ್ನು ತಿದ್ದಿಕೊಳ್ಳುವ ಹಾದಿಯಲ್ಲಿ ಮತ್ತೊಂದು ತಪ್ಪು ಸರ್ಕಾರದ ಕಡೆಯಿಂದ ಆಗಬಾರದು. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಮಗ್ಗ ನಂಬಿ ಬದುಕುತ್ತಿರುವ ನೇಕಾರರನ್ನು ಗಮನದಲ್ಲಿಟ್ಟುಕೊಂಡು ಅವರು ಬೀದಿಗೆ ಬೀಳದಂತೆ ಅಧಿನಿಯಮವನ್ನು ಜಾರಿಗೊಳಿಸಬೇಕಾಗಿದೆ' ಎಂದು ಹಿರಿಯ ರಂಗಕರ್ಮಿ, ದೇಸಿ ಸಂಸ್ಥೆಯ ಸ್ಥಾಪಕ ಪ್ರಸನ್ನ ನುಡಿಯುತ್ತಾರೆ.
ಪ್ರಸ್ತುತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ.ಡಿಸೋಜಾ, ಹಿರಿಯ ಸಾಹಿತಿಗಳಾದ ಯು. ಆರ್. ಅನಂತಮೂರ್ತಿ, ದೇವನೂರು ಮಹಾದೇವ, ಡಾ.ಚನ್ನವೀರ ಕಣವಿ, ರಾಜೀವ್ ತಾರಾನಾಥ್, ಮರುಳಸಿದ್ದಪ್ಪ, ಹಿರಿಯ ನಿರ್ದೇಶಕ ಎಂ.ಎಸ್.ಸತ್ಯು ಸೇರಿದಂತೆ ಹಲವು ಗಣ್ಯರು ಈ ಸತ್ಯಾಗ್ರಹಕ್ಕೆ ತಮ್ಮ ಸಕ್ರಿಯ ಬೆಂಬಲ ಸೂಚಿಸಿ ಆನೆ ಬಲ ನೀಡಿದ್ದು, ಬೇಡಿಕೆ ಪೂರೈಸುವ ತನಕ ಈ ಸತ್ಯಾಗ್ರಹ ಕೊನೆಗೊಳಿಸುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಗಾಂಧೀ ಮಾರ್ಗದ ಈ ಸತ್ಯಾಗ್ರಹಕ್ಕೆ ಜಯ ದೊರೆಯುವುದಾ ಎಂದು ಕಾದು ನೋಡಬೇಕಿದೆ.
"ನೇಕಾರರ ಪಾಲನೆ ಸರ್ಕಾರದ ಹೊಣೆ. ವಿದ್ಯುತ್ ಮಗ್ಗದ ಕಾರ್ಮಿಕರಿಗೆ ನೂಲನ್ನು ಒದಗಿಸಿ, ಕೈ ಮಗ್ಗ ಮೀಸಲಾತಿ ಅಧಿನಿಯಮಕ್ಕೆ ಒಳಪಡದ ಬಟ್ಟೆಗಳನ್ನು ನೇಯಿಸಿ ಸರ್ಕಾರಿ ಸಮವಸ್ತ್ರ, ಸರ್ಕಾರಿ ಆಸ್ಪತ್ರೆಗಳ ಹಾಸಿಗೆ, ಹೊದಿಕೆ, ಸರ್ಕಾರಿ ಬಸ್ಗಳ ಹೊದಿಕೆಗಳು ಮುಂತಾದವುಗಳನ್ನು ಕೊಂಡುಕೊಳ್ಳುವ ಮೂಲಕ ವಿದ್ಯುತ್ ಮಗ್ಗದ ಬಡ ಕಾರ್ಮಿಕರನ್ನು ಸಲಹಬೇಕಿದೆ."
- ಪ್ರಸನ್ನ, ಚರಕ, ಹೆಗ್ಗೋಡು
ಫೋಟೋ: ಶಿವಮೊಗ್ಗ ನಂದನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


