ಬೈಟುಕಾಫಿ

ಬಿಟ್ಟರೂ ಬಿಡದ ಮನ್ಮಥ

ಬಿಟ್ಟರೂ ಬಿಡದ ಮನ್ಮಥ
Published On :

ಭರ್ತೃಹರಿ ಸಕಲ ಸುಖಭೋಗಗಳನ್ನುಂಡು, ಭೋಗದ ತಾತ್ಕಾಲಿಕತೆ ಹಾಗೂ ವಂಚನೆಗಳಿಂದ ಜಿಗುಪ್ಸೆ ಮೂಡಿ ಅದರತ್ತ ವಿಕರ್ಷಿತನಾಗಿದ್ದನಷ್ಟೆ. ಈ ಭರ್ತೃಹರಿ ಮಹಾ ಸುಂದರನೇ ಆಗಿದ್ದಿರಬೇಕು. ತರುಣಿಯರು, ವಿಲಾಸಿನಿಯರು ಈ ಸುಪುಷ್ಟಕಾಯ ತರುಣನನ್ನು ಸೆಳೆಯಲು ಮತ್ತೆ ಮತ್ತೆ ಪ್ರಯತ್ನಿಸಿದ್ದರೆಂದು ಕಾಣುತ್ತದೆ. ಇಲ್ಲವಾದರೆ ಈ ಬಗೆಯ ಕವನಗಳು ಆತನಿಂದ ಹೊರಬರುತ್ತಿರಲಿಲ್ಲ.
ಕಿಂ ಕಂದರ್ಪ! ಶರಂ ಕದರ್ಥಯಸಿ ರೇ ಕೋದಂಡ ಟಂಕಾರಿತಂ?
ರೇ ರೇ ಕೋಕಿಲ! ಕೋಮಲ ಕಲರವಂ ಕಿಂ ವಾ ವೃಥಾ ಜಲ್ಪಸಿ?
ಮುಗ್ಧೇ! ಸ್ನಿಗ್ಧವಿದಗ್ಧಚಾರುಮಧುರೈರ್ಲೋಲೈಃ ಕಟಾಕ್ಷೈರಲಂ
ಚೇತಶ್ಚುಂಬಿತ ಚಂದ್ರಚೂಡಚರಣಧ್ಯಾನಾಮೃತಂ ವರ್ತತೇ
ಅಯ್ಯಾ ಮನ್ಮಥನೇ, ನಿನ್ನ ಕೋದಂಡವನ್ನು ಝೇಂಕರಿಸಿ ದರ್ಪದಿಂದ ನನ್ನ ಮೇಲೆ ಸುಮಶರಗಳ ವರ್ಷವನ್ನು ಸುರಿದರೂ ವ್ಯರ್ಥ. ಎಲೆ ಕೋಗಿಲೆ, ನಿನ್ನ ಪಂಚಮದ ಕೋಮಲ ಕಲರವವೂ ವ್ಯರ್ಥ. ಮುಗ್ಧ ಬಾಲೆಯೇ, ನಿನ್ನ ಮಧುರ, ಮನೋಹರ, ಪ್ರಣಯಾವೇಶಿತ ಕಣ್ಣೋಟಗಳೂ ವ್ಯರ್ಥ. ನಾನು ಇವುಗಳಿಂದೆಲ್ಲ ವಿಚಲಿತನಾಗಲಾರೆ. ಯಾಕೆಂದರೆ ನಾನು ಶಿವನ ಚರಣಾರವಿಂದಗಳ ಧ್ಯಾನದಲ್ಲಿ ಮಗ್ನನಾಗಿದ್ದೇನೆ. ಆತನು ಮನ್ಮಥನನ್ನು ನಿಗ್ರಹಿಸಿದವನು. ಕಾಮವರ್ಧಿನಿಯಾದ ಚಂದ್ರನನ್ನು ಜಟೆಯಲ್ಲಿ ಮುಡಿದಿಟ್ಟವನು. ಕಾಮಿನಿಯ ಕಣ್ಣೋಟಕ್ಕೆ ಕರಗದೆ ಸ್ಮಶಾನವಾಸಿಯಾದವನು.
ವೈರಾಗ್ಯಕ್ಕೆ ತಿರುಗುವ ಮುನ್ನ ಭರ್ತೃಹರಿ ಸಾಕಷ್ಟು ಭೋಗವನ್ನು ಉಂಡವನೇ ಎಂಬುದು ನಮಗೆ ನೆನಪಿರಬೇಕು. ರಾಮ ಕಾಡಿಗೆ ಹೋದರೂ ಪಟ್ಟ ಆತನನ್ನು ಪಾದುಕೆಯ ರೂಪದಲ್ಲಿ ಅಟ್ಟಿಸಿಕೊಂಡು ಬಂತು. ಹಾಗೇ ಭರ್ತೃಹರಿಗೂ ಆಗಿದ್ದಿರಬೇಕು. ಒಮ್ಮೆ ರಾಜನೆನಿಸಿಕೊಂಡವನು ತಪಸ್ಸಿಗೆ ಕುಳಿತರೂ ರಾಜತ್ವ ಕಣ್ಣು ಹೊಡೆದು ಕರೆಯದಿರದು.



-ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.