ಬೈಟುಕಾಫಿ

ನೋಟ್ ಡೌನ್

ನೋಟ್ ಡೌನ್
Published On :

ನಿಮ್ಮಲ್ಲಿ 2005ರ ಹಿಂದೆ ಅಚ್ಚಾಗಿರುವ ನೋಟುಗಳು ಇವೆಯೇ? ಹಾಗಿದ್ದರೆ ಅದನ್ನು ಏಪ್ರಿಲ್ ಒಂದರ ನಂತರ ಹಿಂಪಡೆಯಲಾಗುತ್ತದೆ ಮತ್ತು ಅದರ ಬದಲಿಗೆ ಹೊಸ ನೋಟುಗಳನ್ನು ವಿತರಿಸಲಾಗುತ್ತದೆ. ಈ ಹಳೆ ಶ್ರೇಣಿಯ ನೋಟುಗಳ ಗುರುತು ಸುಲಭ. ಅವುಗಳ ಹಿಂಬಾಗದ ಕೆಳಭಾಗದಲ್ಲಿ ಇಸವಿ ಅಚ್ಚು ಹಾಕಿಕೊಂಡು ಇರುವುದಿಲ್ಲ. 2005ರ ನಂತರ ಮುದ್ರಿತವಾಗಿರುವ ಎಲ್ಲ ನೋಟುಗಳಲ್ಲೂ ಅವುಗಳು ಅಚ್ಚಾದ ಇಸವಿಯನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಈ ರೀತಿಯ ವಿನಿಮಯದ ಕ್ರಮವನ್ನು ಕಳ್ಳ ನೋಟುಗಳ ನಿಯಂತ್ರಣಕ್ಕಾಗಿ ಆಡಳಿತಾತ್ಮಕವಾಗಿ ಕೈಗೊಳ್ಳಲಾಗಿದೆ ಎನ್ನುವುದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿಕೆ.
ನಕಲಿ ಸುಲಭ
2005ರ ಮೊದಲು ಪ್ರಿಂಟಾದ ನೋಟುಗಳಲ್ಲಿ ಭದ್ರತಾ ಕ್ರಮಗಳು ಅಷ್ಟಾಗಿ ಇಲ್ಲ. ಹೀಗಾಗಿ ಅವುಗಳನ್ನು ನಕಲು ಮಾಡುವುದು ಸುಲಭ. ಈಗಾಗಲೇ ಅಂತಹ ಬಹಳಷ್ಟು ನಕಲಿ ನೋಟುಗಳು ಚಲಾವಣೆಯಲ್ಲಿ ಇರಬಹುದು. ಇನ್ನಷ್ಟು  ಹೊಸ ನಕಲಿ ನೋಟುಗಳನ್ನು ಸೃಷ್ಟಿ ಮಾಡಲು ಸುಲಭವಾಗಿರಬಹುದು. ಆ ಕಾರಣಕ್ಕಾಗಿ ಅಂತಹ ಹಳೆಯ ನೋಟುಗಳನ್ನೆಲ್ಲಾ ಒಮ್ಮೆಗೇ ಹೊರಕ್ಕೆಳೆದು ನಕಲಿ ನೋಟುಗಳನ್ನು ಮುಟ್ಟುಗೋಲು ಹಾಕಿ ಅಸಲಿ ನೋಟುಗಳ ಬದಲಿಗೆ ಹೊಸತಾದ ಹೆಚ್ಚುವರಿ ಭದ್ರತಾ ಲಕ್ಷಣಗಳುಳ್ಳ ನೋಟುಗಳನ್ನು ನೀಡುವುದು ಉತ್ತಮ ಕ್ರಮ. ಈ ಕ್ರಮ ಬಳಿಕ ಹಳೆ ಶ್ರೇಣಿಯ ನೋಟುಗಳು ಚಲಾವಣೆಯಲ್ಲಿಯೇ ಇರುವುದಿಲ್ಲ. ಕಳ್ಳನೋಟು ಅಥವಾ ನಕಲಿ ನೋಟುಗಳ ನಿಯಂತ್ರಣಾ ದೃಷ್ಟಿಯಿಂದ ಇದು ಒಳ್ಳೆಯದೇ. ಆದರೆ, ಈ ಪ್ರಕ್ರಿಯೆಯಲ್ಲಿ ಕಪ್ಪುಹಣವೂ ತಗಲು ಹಾಕಿಕೊಂಡಿರುವುದು ವಿವಾದಕ್ಕೆ ಕಾರಣ.
ಕಳ್ಳ ನೋಟು ಮತ್ತು ಕಪ್ಪು ಹಣ
ಕಳ್ಳ ನೋಟು ಮತ್ತು ಕಪ್ಪು ಹಣ ಬೇರೆ ಬೇರೆ. ಅವೆರಡರ ನಡುವೆ ಇರುವ ವ್ಯತ್ಯಾಸ ತಿಳಿದುಕೊಳ್ಳುವುದು ಅಗತ್ಯ. ಕಳ್ಳ ನೋಟು ಅಂದರೆ ಅನಧಿಕೃತವಾಗಿ ಪ್ರಿಂಟ್ ಮಾಡಿಕೊಂಡ ನೋಟು. ಧೂರ್ತರು ನಕಲಿ ನೋಟನ್ನು ಪ್ರಿಂಟ್ ಹಾಕಿ ಚಲಾವಣೆಗೆ ಬಿಡುತ್ತಾರೆ. ಇದು ಕಾನೂನು ಬಾಹಿರ ಕೃತ್ಯ. ಬ್ಯಾಂಕ್‌ಗಳಲ್ಲಿ ನಕಲಿ ನೋಟು ಕಂಡಾಕ್ಷಣ ಹರಿದು ಹಾಕುತ್ತಾರೆ. ಅದರ ಬದಲಿಗೆ ಹೊಸ ನೋಟನ್ನು  ನಿಮಗೆ ನೀಡುವುದೇ ಇಲ್ಲ. ಹಾಗಾಗಿ ಒಂದು ಬಾರಿ ಎಲ್ಲ ನೋಟುಗಳನ್ನು ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ಹರಿಸಿದರೆ ನಕಲಿ ನೋಟುಗಳನ್ನು ಹಿಡಿದು ಹಾಕುವುದು ಸುಲಭ.
ಕಪ್ಪು ಹಣ ಎಂದರೆ?
ಸರ್ಕಾರಕ್ಕೆ ಕರ ಪಾವತಿ ಮಾಡದೆ ಗಳಿಸಿದ ಆದಾಯವನ್ನು ಕಪ್ಪು ಹಣ ಎನ್ನಲಾಗುತ್ತದೆ. ಕಾಳಧನವನ್ನು ಚಿನ್ನ, ಭೂಮಿ ಹಾಗೂ ನಗದು ರೂಪದಲ್ಲಿ ಸರ್ಕಾರಕ್ಕೆ ಕಾಣಿಸದ ರೀತಿ ಬಚ್ಚಿಡುತ್ತಾರೆ. ಆ ರೀತಿ ನಗದು ರೂಪದಲ್ಲಿ ಬಚ್ಚಿಟ್ಟ ಕಾಳಧನದಲ್ಲಿ 2005ರ ಹಿಂದಿನ ಹಳೆ ನೋಟುಗಳೂ ಇರಲು ಸಾಧ್ಯ. ಅಂತಹ ನೋಟುಗಳನ್ನು  ಈಗ ಕಡ್ಡಾಯವಾಗಿ ಬ್ಯಾಂಕ್‌ಗಳಲ್ಲಿ ಕೊಟ್ಟು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳಬೇಕಾಗಿದೆ. ಹೀಗಾಗಿ, ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಕಪ್ಪು ಹಣವನ್ನು ಹೊರಗೆಳೆದಂತೆಯೇ ಆಗುತ್ತದೆ. ಈ ನಿಟ್ಟಿನಿಂದ ಈ ಹೊಸ ಕಾನೂನು ಚರ್ಚೆಗೆ ಗ್ರಾಸವಾಗಿದೆ.
ಕಪ್ಪುಹಣಕ್ಕೆ ಕುತ್ತು
ಹಳೆ ನೋಟುಗಳ ರೂಪದಲ್ಲಿ ಬಚ್ಚಿಟ್ಟ ಕಪ್ಪು ಹಣ ಬ್ಯಾಂಕಿಗೆ ಕೊಂಡೊಯ್ದು ಹೊಸ ನೋಟುಗಳನ್ನು ಕೇಳುವ ಹಾಗಿಲ್ಲ. ಯಾಕೆಂದರೆ ಹಳೆ ನೋಟುಗಳ ರೂಪದಲ್ಲಿರುವ ಈ ಕಪ್ಪುಹಣ ಎಲ್ಲಿಂದ ಬಂತು ಎನ್ನುವ ಪ್ರಶ್ನೆ ಬರುತ್ತದೆ. ಒಬ್ಬ ಜನಸಾಮಾನ್ಯ ತನ್ನ ಆದಾಯದ ಮಿತಿಯೊಳಗೆ ಒಂದಿಷ್ಟು ಹಳೆ ನೋಟು ವಿನಿಮಯಿಸಲು ಯಾವುದೇ ಅಡ್ಡಿ ಇಲ್ಲ. ಆದರೆ ಆದಾಯ ತೆರಿಗೆ ಸಲ್ಲಿಸದೆ ಕೋಟಿಗಟ್ಟಲೆ ಹಳೆ ನೋಟು ವಿನಿಮಯಕ್ಕೆಂದು ಬ್ಯಾಂಕಿಗೆ ಕೊಂಡೊಯ್ದರೆ ಆತ ಸಿಕ್ಕಿ ಬೀಳುತ್ತಾನೆ. ಹಾಗಾಗಿ ಈ ಕಾನೂನು ಪರೋಕ್ಷವಾಗಿ ಕಾಳಧನದ ದಾಸ್ತಾನಿನ ಮೇಲೆ ಒತ್ತಡ ಹೇರಿದೆ.
ಚುನಾವಣಾ ಸಮಯ
ಶೀಘ್ರದಲ್ಲೇ ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗಲಿದೆ. ಅದಕ್ಕೆ ಪೂರಕವಾಗಿ ಆರ್‌ಬಿಐ ಹಳೆ ನೋಟುಗಳನ್ನು ಬದಲಾವಣೆ ಬಗೆಗಿನ ಸೂಚನೆ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಚುನಾವಣೆ ವೆಚ್ಚಕ್ಕಾಗಿ ಕಾಳಧನವನ್ನು ತಮ್ಮತ್ತ ಸೆಳೆಯಲು ಇದು ರಾಜಕೀಯ ಪುಢಾರಿಗಳು ರೂಪಿಸಿರುವ ತಂತ್ರ ಎಂಬುದಾಗಿ ಜನ ಆಡಿಕೊಳ್ಳುತ್ತಿದ್ದಾರೆ.
ಕಾಳಧನಿಕರು ತಮ್ಮಲ್ಲಿರುವ ದಾಸ್ತಾನಿನ ಸ್ವಲ್ಪ ಭಾಗವನ್ನು ಪುಡಾರಿಗಳ ಜೇಬಿಗೆ ತುರುಕಿದರೆ ಈ ಕಾನೂನು ಚುನಾವಣೆ ಮುಗಿದ ಕೂಡಲೇ ರದ್ದಾದೀತು ಎಂಬುದು ರಾಜಕೀಯ ಅನುಭವಸ್ಥರ ಅಂದಾಜು. ಆರ್‌ಬಿಐ ನಡೆಯೂ ಈ ಮಾತಿಗೆ ಪುಷ್ಟಿ ಕೊಡುವಂತೆಯೇ ಇದೆ. ಕಳ್ಳ ನೋಟು ಮಟ್ಟ ಹಾಕಲು ಈ ಬದಲಾವಣೆ ಎಂದಾದಲ್ಲಿ ಅದನ್ನು 2 ತಿಂಗಳ ಮೊದಲೇ ಘೋಷಿಸುವ ಅವಶ್ಯಕತೆ ಏನು? ಏಕಾಏಕಿ ಮಾಡಿದರೆ ಮಾತ್ರವೇ ಫಲ ಕೊಡುವ ಇಂತಹ ಹೆಜ್ಜೆಯನ್ನು ಇಷ್ಟು ಬೇಗ ಪ್ರಕಟಿಸಿದ್ದು, ಕಾಳಧನವಂತರು ತಪ್ಪಿಸಿಕೊಳ್ಳುವ ಸೂಕ್ತ ಕ್ರಮ ಕೈಗೊಳ್ಳಲಿ ಎನ್ನುವ ಉದ್ದೇಶದಿಂದಲೇ ಎನ್ನುವುದು ತಜ್ಞರ ವಾದ.
ಜನಸಾಮಾನ್ಯರಿಗೆ ಸಮಸ್ಯೆಯೇ ಇಲ್ಲ
ಆರ್‌ಬಿಐ ಪ್ರಕಟಿಸಿದ ಕ್ರಮದ ಹಿಂದಿನ ಉದ್ದೇಶ ಏನೇ ಇರಲಿ ಅದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗದು.
ತಮ್ಮ ಆದಾಯದ ಮಿತಿಯೊಳಗೆ ತರ್ಕಬದ್ಧವಾದ ಮೊತ್ತದಲ್ಲಿ ಹಳೆ ನೋಟುಗಳನ್ನು ಹೊಂದಿರುವ ಜನಸಾಮಾನ್ಯರು ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ.
ಮನೆಯಲ್ಲಿ ಸಹಜವಾಗಿಯೇ ಶೇಖರವಾಗಿದ್ದ ನಾಲ್ಕಾರು ಇಂತಹ ಹಳೆ ನೋಟುಗಳನ್ನು ಏಪ್ರಿಲ್ 1ರ ಒಳಗೆಧೈರ್ಯದಿಂದ ಬ್ಯಾಂಕುಗಳಿಗೆ ಹೋಗಿ ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳಬಹುದು.
ಆದಾಯದ ಮಿತಿ ಮೀರಿದ ವ್ಯಕ್ತಿಗಳು ಮಾತ್ರ ದೊಡ್ಡ ಮೊತ್ತವನ್ನು ಬ್ಯಾಂಕ್‌ಗೆ  ವಿನಿಮಯಕ್ಕಾಗಿ ಕೊಂಡೊಯ್ಯುವಾಗ ಆತಂಕಪಡಬೇಕಾದ ಅಗತ್ಯವಿದೆ. ಆ ಮೊತ್ತ ಅವರಿಗೆ ಎಲ್ಲಿಂದ ಹೇಗೆ ಬಂತು ಎನ್ನುವುದರ ಸ್ಪಷ್ಟೀಕರಣ, ಆದಾಯ ತೆರಿಗೆ ಸಲ್ಲಿಕೆಯ ಪ್ರತಿ ಇತ್ಯಾದಿ ಪ್ರಶ್ನೋತ್ತರಗಳ ಸರಮಾಲೆಯನ್ನು ಆ ಹಂತದಲ್ಲಿ ಅಥವಾ ಬಳಿಕ ಎದುರಿಸಬೇಕಾಗಿ ಬರಬಹುದು.
ಗಡುವು ಇಲ್ಲ ನೋಟು ವಿನಿಮಯ
ಪ್ರಕ್ರಿಯೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಗಡುವು ವಿಧಿಸಿಲ್ಲ. ಅಂದರೆ ಅದು ವರ್ಷ ಪೂರ್ತಿ ನಡೆಯಲಿದೆಯೇ, ಕೇವಲ ತಿಂಗಳು ಮಾತ್ರವೇ ಎಂಬ ವಿಚಾರ ಸ್ಪಷ್ಟವಾಗಿಲ್ಲ. ಹೀಗಾಗಿ ಇದೊಂದು ರಾಜಕೀಯ ಸ್ನೇಹಿ ಹೆಜ್ಜೆ ಎನ್ನುವ ಗುಮಾನಿಗೆ ಪುಷ್ಟಿ ಕೊಡುತ್ತದೆ.
ನೋಟುಗಳ ವಿನಿಮಯ ದಿನ ಶುರು:  ತಕ್ಷಣದಿಂದ
ಯಾವ ಮುಖ ಬೆಲೆ
5, 10
20, 50
100, 500 1000
ಏ. 1ರ ನಂತರ 500 1000 ಮುಖಬೆಲೆಯ 10ಕ್ಕಿಂತ ಹೆಚ್ಚು ನೋಟುಗಳನ್ನು ವಿನಿಮಯಗೊಳಿಸಬೇಕಿದ್ದರೆ ಬ್ಯಾಂಕ್‌ಗೆ ಗುರುತಿನ ಚೀಟಿ ಕೊಡಬೇಕು.
7,351 ಚಾಲ್ತಿಯಲ್ಲಿರುವ ಕೋಟಿ ಕರೆನ್ಸಿ ನೋಟುಗಳು (2013 ಮಾ.31ರ ಅಂಕಿ ಅಂಶ)
ಈ ಹಿಂದೆ ಏನಾಗಿತ್ತು?
ಕೆಲ ವರ್ಷಗಳ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ ಕೆಲ ಸರಣಿಯ ನೋಟುಗಳನ್ನು ಮಾರುಕಟ್ಟೆಯಿಂದ ಹಿಂಪಡೆದಿತ್ತು. ಆದರೆ ಸಾರ್ವಜನಿಕರು ತಮ್ಮಲ್ಲಿದ್ದ ಅದೇ ಸರಣಿಯ ನೋಟುಗಳನ್ನು ಹಿಂತಿರುಗಿಸಬೇಕೆಂದು ಸೂಚಿಸಿರಲಿಲ್ಲ.
ದಾರಿ ಯಾವುದು?
ಕಾನೂನು ಪಾಲನೆಗೆ ಸಾಕಷ್ಟು ಸಮಯಾವಧಿ ನೀಡಿರುವ ಕಾರಣ ಇವತ್ತಿನಿಂದಲೇ ಅವರು ಹಳೆ ನೋಟುಗಳನ್ನು ನಿಧಾನವಾಗಿ ಸ್ವಲ್ಪ ಸ್ವಲ್ಪವಾಗಿಯೇ ಚಲಾವಣೆಗೆ ತಂದು ದಾಸ್ತಾನು ಮುಗಿಸಿಯಾರು. ಹೀಗಾಗಿ ಮಾರುಕಟ್ಟೆಯಲ್ಲಿ ಏಕಾಏಕಿ ಹಳೆ ನೋಟುಗಳು ಬರಬಹುದು.
ಹಳೆ ನೋಟುಗಳು ಸಾಮಾನ್ಯ ವ್ಯವಹಾರಗಳಲ್ಲಿ ಮುಗಿಸಲಾರದಷ್ಟು ದಾಸ್ತಾನು ಇರುವವರು ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿಯಾರು. 500 ನೋಟುಗಳು 400, 450ಕ್ಕೆ ಬಿಕರಿಯಾದೀತು.
ಪವಿತ್ರ ಕ್ಷೇತ್ರಗಳಿಗೆ ದೇಣಿಗೆ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದರೂ ಅಚ್ಚರಿಯೇನಿಲ್ಲ. ಕಾಳಧನಾಧೀಶರು ದೇಣಿಗೆಗಳನ್ನು ಹುಂಡಿಗಳಲ್ಲಿ ಹಾಕಿ ಕೈಮುಗಿಯಲಿರುವರು.
ಪೂಜಾ ಸ್ಥಳಗಳಲ್ಲಿ ಏಕಾಏಕಿ ಹೊಸತರ ಬದಲು ಹಳೆ ನೋಟುಗಳು ಬಂದು ಬೀಳುವುದನ್ನು ನೋಡಲಿದ್ದೇವೆ.
ಚಿನ್ನ ಖರೀದಿಯ ಮೇಲೆ ಯಾವ ರೀತಿಯ ನಿಯಂತ್ರಣ ಹೇರಿದರೂ ಸ್ಮಗ್ಲಿಂಗ್ ಮೂಲಕ ಮಾರಾಟ ಜೋರಾಗಿ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂತಹ ಜಾಲಗಳಲ್ಲಿ ಈ ಹಳೆ ನೋಟುಗಳನ್ನು ಕಡಿಮೆ ಬೆಲೆಗೆ ತೆತ್ತು ಚಿನ್ನ ಕೊಳ್ಳುವವರ ಸಂಖ್ಯೆ ಜಾಸ್ತಿಯಾದೀತು.



-ಜಯದೇವ ಪ್ರಸಾದ ಮೊಳೆಯಾರ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.