ಕರ ಮುಗಿವೆ
ಆಗಿನ್ನೂ ವಯಸ್ಸು ಎಂಟಿರಬೇಕೇನೋ. ನಾವು ಪ್ರಾರ್ಥಿಸಿದಾಗ ಪ್ರಸಾದ ಆದರೆ(ಹೂ ಬೀಳುವುದು) ಕೇಳಿಕೊಂಡಿದ್ದು ...

ಆಗಿನ್ನೂ ವಯಸ್ಸು ಎಂಟಿರಬೇಕೇನೋ. ನಾವು ಪ್ರಾರ್ಥಿಸಿದಾಗ ಪ್ರಸಾದ ಆದರೆ(ಹೂ ಬೀಳುವುದು) ಕೇಳಿಕೊಂಡಿದ್ದು ಆಗುತ್ತದೆ ಎಂದು ದೊಡ್ಡವರು ಹೇಳಿದ್ದು ಕೇಳಿ ದೇವರ ಮನೆಯೆದುರು ಕುಳಿತು ನನ್ನ ಭಕ್ತಿಯ ಪರೀಕ್ಷೆ ನಡೆಸುತ್ತಿದ್ದೆ. ಅದು ಹೇಗೋ, ಪ್ರತಿದಿನ ಹೂವು ಬೀಳುತ್ತಿತ್ತು. ಪ್ರತಿದಿನ ಅಮ್ಮನಿಗೆ 'ಅಮ್ಮಾ ಪ್ರಸಾದ ಆಯ್ತು' ಎಂದು ಹೂವು ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಅಮ್ಮನಿಗೋ ಖುಷಿ ಮತ್ತು ಕುತೂಹಲ. ಒಂದು ದಿನ ಅವಳೂ ನಿಂತು ನೋಡಿದಳು, ನಾನು ಬೇಡುತ್ತಿದ್ದಂತೆ ಪ್ರಸಾದವಾಗಿದ್ದನ್ನು. ಮರುದಿನ ಸಂತಸದಿಂದ ಅಕ್ಕ, ಅಣ್ಣನಲ್ಲಿ ಈ ವಿಷಯ ಹೇಳಿದಳು. ಅವರೂ ಕುಳಿತರು, ಪ್ರಾರ್ಥಿಸಿದರು, ಪ್ರಸಾದವಾಗಲಿಲ್ಲ. ನೀನು ಪ್ರಾರ್ಥಿಸು ನೋಡೋಣ ಎಂದರು, ಪ್ರಾರ್ಥಿಸುತ್ತಿದ್ದಂತೆ 3 ಹೂವುಗಳು ಒಟ್ಟಿಗೇ ಉದುರಿದವು. ಕುತೂಹಲಗೊಂಡ ಅವರಿಬ್ಬರೂ ಏನೆಂದು ಪ್ರಾರ್ಥಿಸುತ್ತೀ ಎಂದು ಕೇಳಿದರು, 'ಪ್ರಸಾದ ಆಗ್ಲೀ ಅಂತಾ' ಅಂದೆ! ಈಗ ನೆನೆಸಿದರೆ ನಗು ಬರುತ್ತದೆ. ಜೊತೆಗೆ ಆಶ್ಚರ್ಯವೂ ಆಗುತ್ತದೆ, ನಿಜವಾಗಿಯೂ ನಮ್ಮ ನಿಷ್ಕಳಂಕ ಪ್ರಾರ್ಥನೆಗೆ ಶಕ್ತಿ ಇದೆ ಎನಿಸುತ್ತದೆ. ಆದರೆ ಅಷ್ಟೊಂದು ಸ್ವಾರ್ಥರಹಿತವಾಗಿ ಈಗ ಪ್ರಾರ್ಥಿಸಬಲ್ಲೆನೇ?!
ಭಕ್ತಿಯಿಂದ ಪ್ರಾರ್ಥಿಸಿದ ಭಕ್ತ ಕುಂಬಾರನಿಗೆ ಕಡಿದುಕೊಂಡ ಕೈಗಳು ಬರುವುದನ್ನು ಚಿತ್ರದಲ್ಲಿ ನೋಡಿ ಭಾವಪರವಶತೆಗೊಳಗಾಗಿದ್ದೇವೆ. ಕುಷ್ಠರೋಗಿಗಳು, ಮತ್ತೇನೋ ಕಾಯಿಲೆಯಿಂದ ಬಳಲುತ್ತಿರುವವರು ರಾತ್ರೋರಾತ್ರಿ ಗುಣಮುಖರಾಗಿ ಅವರ ಕನಸಿನಲ್ಲಿ ಭಗವಾನ್ ಕಲ್ಕಿ, ಸಾಯಿಬಾಬಾ ಇನ್ನಾರೋ ತಾವು ನಂಬಿದ ದೇವರು ಬಂದಿದ್ದ ಬಗ್ಗೆ ಬರೆದಿದ್ದನ್ನು ಓದಿದ್ದೇವೆ. ಇನ್ನಾರೋ ಋಷಿಮುನಿಗಳು ಮನಃಶಾಂತಿಗಾಗಿ ನಿರಂತರ ಪ್ರಾರ್ಥನೆಯಲ್ಲಿ ತೊಡಗಿ ಪ್ರಶಾಂತಚಿತ್ತರಾದ ಬಗೆಗೆ ನಮ್ಮ ಪುರಾಣದಲ್ಲಿ ಸಾವಿರಾರು ಕತೆಗಳೇ ಇವೆ. ಹಾಗಿದ್ದರೆ ಪ್ರಾರ್ಥನೆಗೆ ನಿಜಕ್ಕೂ ಹೀಲಿಂಗ್ ಪವರ್ ಇದೆಯೇ?
ಕೆಲವು ಇಂದ್ರಿಯಾತೀತವಾದವನ್ನು ವಿಜ್ಞಾನದಿಂದ ಅಳೆಯುವುದು ಸರಿಯಲ್ಲ, ಅಂಥವಕ್ಕೆ ನಿಖರ ಉತ್ತರವೂ ಸಿಗುವುದಿಲ್ಲ. ಆದರೂ ಮನುಷ್ಯ ಎಲ್ಲವಕ್ಕೂ ವಿಜ್ಞಾನದ ತಳಹದಿ ಹುಡುಕಹೊರಡುತ್ತಾನೆ. ಹಾಗೇ ಪ್ರಾರ್ಥನೆಯ ಮೇಲೂ ಸಾಕಷ್ಟು ಸಂಶೋಧನಾ ಪ್ರಯೋಗಗಳಾಗಿವೆ. ಪ್ರಾರ್ಥನೆಯ ಬಗ್ಗೆ ವಿಜ್ಞಾನದ ಅಧ್ಯಯನಗಳು ಹೇಳುವುದೇನು?
ಚರ್ಚ್ಗಳಲ್ಲಿ, ದೇವಾಲಯಗಳಲ್ಲಿ ಪ್ರಾರ್ಥನಾ ಕೋಣೆಗಳಿರುತ್ತವೆ. ಇಲ್ಲಿ ನೂರಾರು ಜನರು ತಮ್ಮ ಹೆಂಡತಿ, ಮಕ್ಕಳು, ಗಂಡ, ನೆಂಟ ಇನ್ನಿತರೆ ಹತ್ತಿರದವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಇನ್ನು ಕೆಲವು ಸೀರಿಯಸ್ ಕಂಡಿಶನ್ನಲ್ಲಿರುವವರಿಗಾಗಿ ಅಂತರ್ಜಾಲದಲ್ಲಿ ನೋಡಿದ ಪರಿಚಯವೇ ಇರದ ವ್ಯಕ್ತಿಗಳೂ ಪ್ರಾರ್ಥಿಸುತ್ತಾರೆ.
- ಹೀಗೆ ಆಪ್ತೇಷ್ಟರಲ್ಲದೆ ಅಪರಿಚಿತರೂ ತನಗಾಗಿ ಪ್ರಾರ್ಥಿಸುತ್ತಿದ್ದಾರೆ ಎಂಬ ಸಂಗತಿಯೇ ರೋಗಿಯಲ್ಲಿ ವಿಶೇಷ ಶಕ್ತಿ ತುಂಬುತ್ತದೆ. ಸಕಾರಾತ್ಮಕ ಯೋಚನೆಗಳನ್ನು ಬೆಳೆಸುತ್ತದೆ. ಆತ ಹೆಚ್ಚು ಧೈರ್ಯದಿಂದ ತನ್ನ ಕಾಯಿಲೆಯನ್ನು ಗೆಲ್ಲಬಲ್ಲ.
- ಪ್ರಾರ್ಥನೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಕಾಯಿಲೆಗಳ ಸೀವಿಯಾರಿಟಿಯನ್ನು ಕಡಿಮೆಗೊಳಿಸುತ್ತದೆ.
- ಪ್ರಾರ್ಥಿಸದವರಿಗಿಂತ ಪ್ರತಿದಿನ ಪ್ರಾರ್ಥಿಸುವವರಲ್ಲಿ ಶೇ.40ರಷ್ಟು ಬಿಪಿ ಸಂಭವನೀಯತೆ ಕಡಿಮೆಯಂತೆ.
- ಆಸ್ತಿಕರಿಗೆ ರೋಗಬಾಧೆ ಕಡಿಮೆ, ಆತ್ಮವಿಶ್ವಾಸ ಹೆಚ್ಚು.
- ಕಾಯಿಲೆಗೀಡಾಗುವುದು ಕಡಿಮೆ, ಗುಣಮುಖರಾಗುವುದು ಬೇಗ.
- ಪ್ರಾರ್ಥನೆ ಹ್ಯಾಪಿ ಹಾರ್ಮೋನ್ ಡೊಪಮೈನ್ ಅನ್ನು ಹೆಚ್ಚು ಸ್ರವಿಸುವಂತೆ ಮಾಡಿ ವ್ಯಕ್ತಿಯನ್ನು ಸಂತೋಷದಿಂದಿಡುತ್ತದೆ.
ಕೇಳುವವನೊಬ್ಬ ಬೇಕು!
ಇಂದು ಅಣಬೆಯಂತೆ ಎಲ್ಲೆಲ್ಲೂ ಹುಟ್ಟಿಕೊಂಡಿರುವ ಸ್ವಯಂಘೋಷಿತ ದೇವಮಾನವರನ್ನು ನಂಬಿ ಪ್ರಾರ್ಥಿಸುವವರಿಗೂ ಶಾಂತಿ ಸಿಗುತ್ತದೆ ಎಂದರೆ ಪ್ರಾರ್ಥನೆಯ ಶಕ್ತಿ ನೀಡುವವನನ್ನು ಅವಲಂಬಿಸಿಲ್ಲ, ಅದೇನಿದ್ದರೂ ಬೇಡುವವನ ಅಂತರಂಗದ ಶಕ್ತಿ ಎನಿಸದಿರದು. ನಮಗೆ ನಮ್ಮೆಲ್ಲ ನೋವನ್ನು, ಕಷ್ಟವನ್ನು ಹೇಳಿಕೊಳ್ಳಲು ಒಬ್ಬರು ಬೇಕು. ಹಾಗೆ ನಮ್ಮ ಸಮಸ್ಯೆಗಳನ್ನು ಕೇಳುವವನು ಸರ್ವಶಕ್ತ ಎಂಬ ನಂಬಿಕೆ ಇದ್ದರಂತೂ ಎಲ್ಲವನ್ನೂ ಆತನ ಹೆಗಲಿಗೆ ಹಾಕಿ ಸಮಾಧಾನ ಹೊಂದಬಹುದು. ಅಲ್ಲದೆ ಮನುಷ್ಯರಂತೆ ನನಗೆ ನಿನ್ನ ಮಾತನ್ನು ಕೇಳಲು ಸಮಯವಿಲ್ಲ ಎಂದು ಅವನೆಂದೂ ಹೇಳನಲ್ಲ! ಹೀಗಾಗಿ ಪ್ರಾರ್ಥನೆ ನಮ್ಮ ಮನಸ್ಸಿಗೆ ಶಾಂತಿ ನೀಡುತ್ತದೆ.
ದೇವರನ್ನು ನಂಬದಿದ್ದರೂ ಪ್ರಾರ್ಥಿಸಬೇಕು. ಏಕೆಂದರೆ, ಪ್ರಾರ್ಥನೆ ನಮಗೆ ನಮ್ಮ ಅಗತ್ಯಗಳೇನಿದೆ ಎಂಬುದನ್ನು ಮತ್ತೆ ಮತ್ತೆ ನೆನಪಿಸಿ ದೃಢಗೊಳಿಸುತ್ತದೆ. ಇದರಿಂದ ಅಯೋಚಿತವಾಗಿ ಅದನ್ನು ಪಡೆಯುವತ್ತ ಚಿತ್ತ ಹರಿಸುತ್ತೇವೆ. ಪ್ರಾರ್ಥನೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ನೀಡುವವನ್ಯಾರೋ ಇದ್ದಾನೆ ಎಂಬ ಭಾವವೇ ಬೇಡುವ ನನಗೆ ನಾನೇ ದೊಡ್ಡವನಲ್ಲ, ನನಗಿಂತ ದೊಡ್ಡವರಿದ್ದಾರೆ ಎಂಬ ಯೋಚನೆ ನೀಡಿ ಮನಸ್ಸಿನ ಆರೋಗ್ಯ ಕಾಪಾಡುತ್ತದೆ.
- ರೇಶ್ಮಾರಾವ್ ಸೊನ್ಲೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


