ನೂರಿಲ್ಲ, ನೀರಿಲ್ಲ

ನೂರೊಂದು ದೇವಸ್ಥಾನಗಳು ಹಾಗೂ ನೂರೊಂದು ಬಾವಿಗಳನ್ನು ಹೊಂದಿದ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ತಾಲೂಕಿನ ಹೆಬ್ಬಳ್ಳಿ ಐತಿಹಾಸಿಕ ಮಹತ್ವ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.
ಯಾದವ ಚಕ್ರವರ್ತಿ ರಾಜಸಿಂಛಹನ ಆಡಳಿತಕ್ಕೆ ಒಳಪಟ್ಟು ನೂರಾರು ವರ್ಷಗಳ ಇತಿಹಾಸ ಹೊಂದಿದ ಈ ಗ್ರಾಮದಲ್ಲಿ ಹೆಜ್ಜೆ ಹೆಜ್ಜೆಗೂ ದೇವಾಲಯಗಳಿವೆ. ಆದರೆ ಬಾವಿಗಳು ಒಂದೊಂದಾಗಿ ಮರೆಯಾಗುತ್ತಿವೆ. ದೇವಾಲಯಕ್ಕೊಂದರಂತೆ ಇದ್ದ ಬಾವಿ ಆಧುನಿಕ ಜೀವನದ ಭರಾಟೆಗೆ ಸಿಕ್ಕು ಮಣ್ಣಿನೊಂದಿಗೆ ಲೀನವಾಗುತ್ತಿವೆ.
ಗ್ರಾಮದ ಕೆಲ ಬಾವಿಗಳು ಗ್ರಾಮ ಪಂಚಾಯಿತಿ ಅಧೀನದಲ್ಲಿವೆ. ಇನ್ನೂ ಕೆಲ ದೇವಾಲಯಗಳ ಆಡಳಿತ ಮಂಡಳಿ ಹಾಗೂ ಕುಟುಂಬಗಳಿಗೆ ಸೇರಿವೆ. ಅಭಿವೃದ್ಧಿ ಹೆಸರಲ್ಲಿ ಬಾವಿ ಮುಚ್ಚಲು ಮೊದಲು ಚಾಲನೆ ನೀಡಿದ್ದು ಗ್ರಾಮ ಪಂಚಾಯಿತಿ. ಗ್ರಾಪಂ ಕಟ್ಟಡದ ಪಕ್ಕದ ಬಾವಿಯನ್ನು ಗ್ರಾಪಂ ಆಡಳಿತವೇ ಮುಚ್ಚಿ ಕಲ್ಯಾಣ ಮಂಟಪದ ಕಾಂಪೌಂಡ್ ನಿರ್ಮಿಸಲು ಅನುಮತಿ ನೀಡಿದೆ. ಸದ್ಯ ಬಾವಿಯ ಸ್ಥಳದಲ್ಲಿ ಕಾಂಪೌಂಡ್ ತಲೆ ಎತ್ತಿ ನಿಂತಿದೆ.
ಏನು ಕಾರಣ?
ಅಂತರ್ಜಲ ಕುಸಿತದಿಂದ ಕೆಲ ಬಾವಿಗಳು ಪಾಳು ಬಿದ್ದಿವೆ. ಇನ್ನೂ ಕೆಲ ಬಾವಿಗಳು ಬಳಕೆ ಇಲ್ಲದೆ ಹಾಳಾಗುತ್ತಿವೆ. ಕೆಲವು ಕುಟುಂಬ ವಿಭಜನೆಯಿಂದಾಗಿ ಮುಚ್ಚಿಹೋಗುತ್ತಿವೆ. ಈ ಹಿಂದೆ ಗ್ರಾಮದ ಪ್ರತಿ ಓಣಿಗೊಂದು ದೇವಾಲಯ, ಬಾವಿಗಳಿದ್ದವು. ಬಾವಿಯ ನೀರಿನಿಂದಲೇ ದೇವರಿಗೆ ಅಭಿಷೇಕ ಹಾಗೂ ಪೂಜೆ ಸಲ್ಲುತ್ತಿತ್ತು. ಜನ ಸಿಹಿನೀರಿನ ಬಾವಿಗಳಿಂದಲೇ ದಾಹ ಇಂಗಿಸಿಕೊಳ್ಳುತ್ತಿದ್ದರು. ಆದರೆ ಮಲಪ್ರಭಾ ಹಾಗೂ ಕೊಳವೆ ಬಾವಿ ನೀರಿನ ಸೌಲಭ್ಯದಿಂದಾಗಿ ಜನತೆ, ಬಾವಿಗಳ ನಿರ್ವಹಣೆ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗ್ರಾಮದ ಹಿರಿಯ ಶರೀಫ್ ಅಗಸರ ಬೇಸರ ವ್ಯಕ್ತಪಡಿಸಿದರು. ಕಳೆದ ನಾಲ್ಕೈದು ವರ್ಷಗಳಲ್ಲಿಯೇ ಸುಮಾರು 10-15 ಬಾವಿಗಳು ಮುಚ್ಚಿ ಮನೆಗಳು ಎದ್ದು ನಿಂತಿವೆ. ಬಾವಿ ಉಳಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಪಣ ತೊಡಬೇಕಿದೆ.
ನಮ್ಮ ತಾತ-ಮುತ್ತಜ್ಜ ಹುಟ್ಟಿ ಬೆಳೆದ ಊರು ಹೆಬ್ಬಳ್ಳಿ. ನಮ್ಮ ಹಿರಿಯರು ಹೆಬ್ಬಳ್ಳಿಯಲ್ಲಿ ಜಹಗೀರದಾರರು. ಗ್ರಾಮದಲ್ಲಿ ದೇವಸ್ಥಾನಗಳೊಂದಿಗೆ ಅವರು ಹತ್ತಾರು ಬಾವಿ ನಿರ್ಮಿಸಿದ್ದರು. ಇತ್ತೀಚೆಗೆ ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕ ಸಂಸ್ಕೃತಿ ಬೆಳೆದಿದ್ದು, ಅಡುಗೆ ಮನೆಗೇ ನೀರು ಹರಿದು ಬರುತ್ತಿದೆ. ಬಳಕೆ ನಿಂತಿರುವ ಕಾರಣ ಜನತೆ ಬಾವಿಯನ್ನು ಕಡೆಗಣಿಸಿದ್ದಾರೆ. ಬರೀ ಹೆಬ್ಬಳ್ಳಿ ಅಲ್ಲ, ಎಲ್ಲೆಡೆ ಬಾವಿಗಳು ಕಾಣೆಯಾಗುತ್ತಿವೆ. ಸ್ಥಳೀಯ ಸಂಸ್ಥೆಗಳು ಬಾವಿ ಸ್ವಚ್ಛಗೊಳಿಸಿ ಆ ನೀರನ್ನೇ ಪೂರೈಸುವಂತಾದಾಗ ಬಾವಿಗಳು ಉಳಿಯುತ್ತವೆ.
= ಸುರೇಶ ಹೆಬ್ಳೀಕರ, ಪರಿಸರವಾದಿ
= ಹೊನ್ನಪ್ಪ ಲಕ್ಕಮ್ಮನವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


