ಬೈಟುಕಾಫಿ

ಚಲನಚಿತ್ರಾ ಶೆಣೈ

ಚಲನಚಿತ್ರಾ ಶೆಣೈ
Published On :

ಚಿತ್ರಾ ಶೆಣೈ ಬಣ್ಣದ ಲೋಕಕ್ಕೆ ಬಂದು ವರ್ಷ 25 ಸಮೀಪಿಸುತ್ತಿದೆ. ಆದರೆ ಅವರು ಪ್ರಸ್ತುತ ಹೆಚ್ಚು ಸುದ್ದಿಯಾಗಿರುವುದು ಮಲಯಾಳಂನ ಧಾರಾವಾಹಿಯೊಂದರ ಮೂಲಕ ಎಂಬುದು ವಾಸ್ತವ. ಏಷ್ಯಾನೆಟ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸ್ತ್ರೀ ಧನಂ ಧಾರಾವಾಹಿಯಲ್ಲಿ ಅತ್ತೆಯ ಪಾತ್ರ ಅವರಿಗೆ ಎಷ್ಟೊಂದು ಅಭಿಮಾನಿಗಳನ್ನು ಸೃಷ್ಟಿಸಿದೆ ಎಂದರೆ ಕಳೆದೆರಡು ವರ್ಷಗಳಿಂದ ನಿರಂತರವಾಗಿ ವಾಹಿನಿಯ ಪಾಪ್ಯುಲರ್ ಮೋಸ್ಟ್ ಆ್ಯಕ್ಟ್ರೆಸ್ ಪ್ರಶಸ್ತಿಯನ್ನು ತಾವೇ ಮುಡಿಗೇರಿಸಿಕೊಳ್ಳುತ್ತಿದ್ದಾರೆ. ವಿಶೇಷವೇನೆಂದರೆ ಅದು ಖಳನಾಯಕಿಯ ಪಾತ್ರ. ಚಿತ್ರಾಶೆಣೈ ಸಾಮಾನ್ಯವಾಗಿ ಮೃದು ಮನದ ಹೆಣ್ಣಾಗಿ ಕಾಣಿಸಿದ್ದೇ ಹೆಚ್ಚು. ಚಿತ್ರರಂಗದಲ್ಲಂತೂ ದರ್ಶನ್‌ಗೆ ಖಾಯಂ ತಾಯಿ ಎಂಬ ಹಾಗೆ ಗುರುತಿಸಿಕೊಂಡವರು. ಹೋಮ್ ಸೈನ್ಸ್‌ನಲ್ಲಿ ಪದವಿ ಪಡೆದಿರುವ ಚಿತ್ರಾ ಕಿರುತೆರೆಯ ಮೂಲಕವೇ ನಟನಾರಂಗಕ್ಕೆ ಕಾಲಿಟ್ಟವರು. ದೂರದರ್ಶನದಲ್ಲಿ ಪ್ರಸಾರವಾದ ಪ್ರೇಮದ ಕಾರಂಜಿಯಿಂದ ಆರಂಭಗೊಂಡ ಪಯಣದಲ್ಲಿ ಕಟ್ಟೆ, ಜ್ವಾಲಾಮುಖಿ, ಮುಖಾಮುಖಿ, ಸ್ವಾತಿಮುತ್ತು, ಬಿಸಿಲು ಕುದುರೆ, ಬೃಂದಾವನ, ಮಾಂಗಲ್ಯ ಹೀಗೆ ಧಾರಾವಾಹಿಗಳ ಸಂಖ್ಯೆ ತೊಂಭತ್ತು ಸಮೀಪಿಸಿದೆ.
ಮಲಯಾಳಂ ವಾಹಿನಿಗೆ ನಿಮ್ಮ ಪ್ರವೇಶವಾಗಿದ್ದು ಹೇಗೆ?
ನನ್ನ ಕೇರಳದ ಪ್ರವೇಶವಾಗಿದ್ದೇ ಧಾರಾವಾಹಿ ನಟನೆಯ ಮೂಲಕ. ಮಲಯಾಳಂನ ಗಾಂಧಾರಿ ಎಂಬ ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದಾಗ ಚಿತ್ರಗಳಲ್ಲಿಯೂ ಅವಕಾಶ ದೊರೆಯಿತು. ರಾಜ ಮಾಣಿಕ್ಯಂ ಎಂಬ ಚಿತ್ರದಲ್ಲಿ ಮಮ್ಮೂಟ್ಟಿಯ ಮಲತಾಯಿಯ ಪಾತ್ರದಲ್ಲಿ ನಟಿಸಿದ ಮೇಲೆ ಬಂದ ಕರೆಯೇ ಪ್ರಸ್ತುತ ಪ್ರಶಸ್ತಿಗರ್ಹಳನ್ನಾಗಿಸಿದ ಸ್ತ್ರೀ ಧನಂ ಎಂಬ ಧಾರಾವಾಹಿಯದ್ದಾಗಿತ್ತು.
ಖಳನಾಯಕಿಯ ಪಾತ್ರವನ್ನು ಒಪ್ಪಿಕೊಂಡಿದ್ದು ಹೇಗೆ?
ಆರಂಭದಲ್ಲಿ ನಾನು ಬೇಡವೆಂದು ನಿರಾಕರಿಸಿದ್ದೆ. ಯಾಕೆಂದರೆ ನಾನು ಮಮತಾಮಯಿಯಾಗಿಯೇ ಜನಪ್ರಿಯಳಾದವಳು. ಒಮ್ಮೆಲೆ ಖಳನಾಯಕಿಯ ಪಾತ್ರ ನನಗೂ ಅಗತ್ಯವಿರಲಿಲ್ಲ. ಅದು ನನಗೆ ಹೊಂದಲಾರದೆಂದೇ ನಾನು ಕೂಡ ಅಂದುಕೊಂಡಿದ್ದೆ. ಆದರೆ ನಿರ್ದೇಶಕರಿಗೆ ನನ್ನ ಮೇಲೆ ಭರವಸೆಯಿತ್ತು. ಮಾತ್ರವಲ್ಲ ಖಳನಾಯಕಿಗೆ ಅವಳದೇ ಆದ ನಿಟ್ಟಿನಲ್ಲಿ ಸರಿಯೆನಿಸಬಹುದಾದ ಸಮರ್ಥನೆಗಳಿವೆ. ಮಾತ್ರವಲ್ಲ ಸೆಕೆಂಡ್ ಹಾಫ್‌ನಲ್ಲಿ ಪರಿವರ್ತನೆಯೂ ಇರುತ್ತದೆ ಎಂದು ಹೇಳಿದ ಕಾರಣ ಒಪ್ಪಿಕೊಂಡೆ.
ದುಷ್ಟತನದ ಪಾತ್ರದಿಂದ ಹೇಗೆ ಇಷ್ಟು ಜನಪ್ರಿಯತೆ ಪಡೆದುಕೊಂಡಿರಿ?
ವರದಕ್ಷಿಣೆಗಾಗಿ ಕಾಡುವ ಅತ್ತೆ ಎಂಬುದಷ್ಟೇ ನನ್ನ ಕೊರತೆ. ಸ್ತ್ರೀಧನಂ ಅಂದರೆ ಮಲಯಾಳಂನಲ್ಲಿ ವರದಕ್ಷಿಣೆ ಎಂದು ಅರ್ಥ. ಹಾಗಾಗಿ ಧಾರಾವಾಹಿ ಪೂರ್ತಿ ನನ್ನ ಪಾತ್ರವನ್ನು ಕೇಂದ್ರೀಕರಿಸಿಕೊಂಡೇ ಮುಂದುವರಿಯುತ್ತಿದೆ. ನನ್ನ ನಟನೆ, ಕಾಸ್ಟ್ಯೂಮ್ಸ್, ನನ್ನ ಸಂಭಾಷಣೆಯ ರೀತಿ, ಎಲ್ಲವೂ ಇಷ್ಟವಾಗಿದೆ ಎಂದು ಹೇಳುವವರೇ ಹೆಚ್ಚಾಗಿ ಕೇರಳದಲ್ಲಿದ್ದಾರೆ. ಕಣ್ಣುಗಳನ್ನು ತುಂಬ ಚೆನ್ನಾಗಿ ಬಳಸುತ್ತೀರಿ ಎಂಬ ಪ್ರತಿಕ್ರಿಯೆಗಳು ಲಭಿಸಿವೆ. ಬಹುಶಃ ಇವೆಲ್ಲವನ್ನೂ ಮನಸ್ಸಲ್ಲಿಟ್ಟುಕೊಂಡೇ ಅಲ್ಲಿನ ಪ್ರೇಕ್ಷಕರು ನನಗೆ ಮತನೀಡಿ ಜನಪ್ರಿಯ ನಟಿಯಾಗಿ ಗೆಲ್ಲುವಂತೆ ಮಾಡಿದ್ದಾರೆ ಎನ್ನಬಹುದು.
ವಾಸ್ತವದಲ್ಲಿ ನಿಮ್ಮ ಸಾಧನೆಗೆ ಅರ್ಹ ಮನ್ನಣೆ ಕನ್ನಡದಿಂದ ದೊರೆತಿಲ್ಲವೆನ್ನಬಹುದಲ್ಲವೇ?
ನಿಜ. ಆದರೆ ಅದನ್ನು ಹೇಳಿದರೆ ತಪ್ಪಾಗುತ್ತದೆ. ಹೇಳದಿದ್ದರೆ ಸಂಕಟ ಹಾಗೇ ಉಳಿದುಕೊಳ್ಳುತ್ತದೆ. ಇಷ್ಟು ವರ್ಷಗಳಿಂದ ಇಷ್ಟೊಂದು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ವಿಶ್ವೇಶ್ವರಯ್ಯ ಪುರಸ್ಕಾರವೊಂದನ್ನು ಬಿಟ್ಟರೆ ಬೇರೆ ಪ್ರಶಸ್ತಿಗಳು ನನಗೆ ಲಭ್ಯವಾಗಿಲ್ಲ. ಅದಕ್ಕೆ ಮುಖ್ಯವಾಗಿ ನಮ್ಮಲ್ಲಿ ಮೊದಲು ಕಲಾವಿದರನ್ನು ಗುರುತಿಸಿ ಪಾತ್ರ ನೀಡುವಲ್ಲಿ ಮತ್ತು ಬಳಿಕ ಅವರ ಪ್ರತಿಭೆಗೆ ತಕ್ಕ ಮನ್ನಣೆ ನೀಡುವಲ್ಲಿ ಸದಾ ಹಿಂದೆ ಬಿದ್ದಿರುವುದಂತೂ ಸತ್ಯ.
ಜಯಲಲಿತಾರನ್ನು ಖಳ ಛಾಯೆಯೊಂದಿಗೆ ಪ್ರತಿನಿಧಿಸುವ ಕಿರುತೆರೆ ಜಾಹೀರಾತಿನಲ್ಲಿ ಕಾಣಿಸಿಕೊಂಡ ಬಗ್ಗೆ?
ಅದು ಈ ಬಾರಿಯಲ್ಲ  ಅದರ ಹಿಂದಿನ ಚುನಾವಣೆಯಲ್ಲಿ ನಟಿಸಿದ ಜಾಹೀರಾತು. ಕನ್ನಡದ ಪ್ರೊಡಕ್ಷನ್ಸ್ ಕಡೆಯಿಂದಲೇ ಅದರ ನಿರ್ಮಾಣಕಾರ್ಯ ನಡೆದಿತ್ತು. ಅದು ಬರೇ ಚುನಾವಣಾ ಪ್ರಚಾರಕ್ಕಾಗಿ ನಡೆಸಲಾದ ಜಾಹೀರಾತು ಅಷ್ಟೇ. ಚಿತ್ರೀಕರಣವೆಲ್ಲ ಬೆಂಗಳೂರಲ್ಲೇ ಆಗಿತ್ತು. ಪ್ರತಿಕ್ರಿಯೆ ಹೇಗಿರಬಹುದೆಂಬ ಬಗ್ಗೆ ನನಗೂ ಮೊದಲು ಸಂದೇಹವಿತ್ತು. ಆದರೆ ನಟನೆ ವೃತ್ತಿಯಾಗಿರುವುದರಿಂದ ಆ ಬಗ್ಗೆ ಹೆಚ್ಚು ಆತಂಕ ಪಡುವ ಅಗತ್ಯ ನನಗಿಲ್ಲವೆನಿಸಿತು.  
ಸಿನೆಮಾ ಬದುಕು ಮತ್ತು ಹೊಸ ಚಿತ್ರಗಳ ಬಗ್ಗೆ ಹೇಳಿ.
ನಾನು ಮೊದಲು ನಾಯಕಿಯಾಗಿ ನಟಿಸಿದ್ದು ಇಂದು ಸಂಗೀತ ನಿರ್ದೇಶಕರಾಗಿ ಜನಪ್ರಿಯರಾಗಿರುವ ಗುರುಕಿರಣ್‌ರೊಂದಿಗೆ. ಚಿತ್ರದ ಹೆಸರು ಮೌನ ಹೋರಾಟ. ಇದುವರೆಗೆ 500ರಷ್ಟು ಚಿತ್ರಗಳಲ್ಲಿ ಅಕ್ಕ, ತಂಗಿ, ಅತ್ತಿಗೆ, ಅಮ್ಮ ಎಂಬಂತೆ ಎಲ್ಲಾ ವಿಧದ ಪಾತ್ರಗಳಲ್ಲಿ ನಟಿಸಿದ್ದೇನೆ. ಇತ್ತೀಚೆಗೆ ಹಿಂದಿ ಸಿನೆಮಾವೊಂದರಲ್ಲಿ ನಟಿಸಿದ್ದೇನೆ. ಪುನೀತ್‌ಗೆ ಸಾಕು ತಾಯಿಯಾಗಿ ನಟಿಸಿರುವ ಅಶ್ವತ್ಥಾಮ ಸೇರಿದಂತೆ ಅಯ್ಯ-2, ರುದ್ರತಾಂಡವ ಚಿತ್ರಗಳು ಬಿಡುಗಡೆಯಾಗಲಿವೆ.
ನಿಮ್ಮ ಕೌಟುಂಬಿಕ ಬದುಕಿನ ಬಗ್ಗೆ ಹೇಳಿ.
ಪತಿ ಗುರುದಾಸ್ ಶೆಣೈ ಕಿರುತೆರೆ ನಿರ್ದೇಶಕರಾಗಿ ಗುರುತಿಸಿಕೊಂಡವರು. ಮೊದಲ ಧಾರಾವಾಹಿಯಾದ ಪ್ರೇಮ ಕಾರಂಜಿಯ ನಿರ್ಮಾಪಕರಾಗಿದ್ದ ಅವರೊಂದಿಗೆ ನನ್ನ ಪ್ರೇಮ ವಿವಾಹವಾಯಿತು. ಅವರು ಎಡಿಟಿಂಗ್, ಡಬ್ಬಿಂಗ್ ಸೌಲಭ್ಯವಿರುವ ದಕ್ಷಿಣ್ ಡಿಜಿಟಲ್ ಸ್ಟುಡಿಯೋದ ಮಾಲೀಕರೂ ಹೌದು. ನಾವು ನಮ್ಮಿಬ್ಬರ ತಾಯ್ತಂದೆಯರ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದೆವು. ಆದರೆ ಕಳೆದ ವರ್ಷ ನಮ್ಮಿಬ್ಬರ ತಂದೆಯರೂ ವಿಧಿವಶರಾದರು. ನಮ್ಮ ಮಗಳು ಖುಷಿ ಪ್ರಸ್ತುತ ನಾಲ್ಕನೇ ತರಗತಿ ವಿದ್ಯಾರ್ಥಿನಿ. ನಿರುಪಮಾ ರಾಜೇಂದ್ರರ ಬಳಿ ಕಥಕ್ ಅಭ್ಯಸಿಸುತ್ತಿರುವ ಅವಳಿಗೆ ಡ್ರಾಯಿಂಗ್ ಹವ್ಯಾಸವೂ ಇದೆ. ಇಂದು ನಾನು ಕಲಾವಿದೆಯಾಗಿ ಗುರುತಿಸಿಕೊಂಡಿರುವಲ್ಲಿ ನನ್ನ ಕುಟುಂಬದ ಪ್ರೋತ್ಸಾಹ ಪ್ರಮುಖವಾಗಿ ನಿಲ್ಲುತ್ತದೆ.


-ಶಶಿಕರ ಪಾತೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.