ಬೈಟುಕಾಫಿ

ನಿತಿನ್ ನೀತಿಕತೆ

ನಿತಿನ್ ನೀತಿಕತೆ
Published On :

ಶಿವಮೊಗ್ಗ ಸಮೀಪದ ಹಳ್ಳಿ ಗಾಜನೂರಿನ ನಿತಿನ್ ಹೇರಳೆ ಇನ್ನೂ 23 ಹರೆಯದ ಹುಡುಗ. ಆದರೆ ತನ್ನ ಕೃಷಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಉತ್ತರ ಹುಡುಕುವ ಜಾಣ ಮತ್ತು ವಿವೇಕವಂತ. ಕಳೆದ ಒಂದೂವರೆ ವರ್ಷದಿಂದ ಹಗಲು ರಾತ್ರಿ ಎನ್ನದೆ ಪರಿಶ್ರಮಿಸಿ ಮೂರು ನಾಲ್ಕು ಕೃಷಿ ಪರಿಕರಗಳನ್ನು ಸಿದ್ಧಪಡಿಸಿದ್ದಾರೆ. ಹಾಗೆಯೇ ಇನ್ನಷ್ಟು ಸಂಶೋಧನೆಗೆ ಮುಂದಡಿ ಇಟ್ಟಿದ್ದಾರೆ.

ಮರ ಹತ್ತುವ ಯಂತ್ರ
ಮಾರುಕಟ್ಟೆಯಲ್ಲಿ ತಮಿಳುನಾಡಿನಲ್ಲಿ ತಯಾರಾಗುವ ಅಡಕೆ ಮರ ಹತ್ತುವ ಯಂತ್ರವೊಂದಿದೆ. ಇದಕ್ಕಿಂತ ಭಿನ್ನವಾಗಿ ಮಲೆನಾಡಿನ ಮರಕ್ಕೆ ಸಹ್ಯವಾಗುವ, ಆತಂಕವಿಲ್ಲದೆ ಮರ ಹತ್ತಬಹುದಾದ ಯಂತ್ರವನ್ನು ನಿತಿನ್ ಅಭಿವೃದ್ಧಿಪಡಿಸಿದ್ದಾರೆ. ಸದ್ಯ ಅಡಕೆ ಬೆಳೆಯುವ ಪ್ರದೇಶ ವಿಸ್ತಾರಗೊಳ್ಳುತ್ತಿದೆ. ಆದರೆ ಮರ ಹತ್ತುವ ಕೌಶಲ್ಯಯುತ ಕೂಲಿಕಾರ್ಮಿಕರು ಕಡಿಮೆಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಕಾರ್ಮಿಕರ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ನಿತಿನ್ ಅಡಕೆ ಮರ ಹತ್ತುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ.
8-9 ತಿಂಗಳ ನಿರಂತರ ಪ್ರಯೋಗ, ರು.  70 ಸಾವಿರ ವೆಚ್ಚದ ಬಳಿಕ ಉಪಕರಣ ಒಂದು ರೂಪ ಪಡೆದುಕೊಂಡಿದೆ. ಎರಡು ಅಸೆಂಬ್ಲಿ ಇರುವ ಈ ಉಪಕರಣದಿಂದ ಸರಸರನೆ ಅಡಕೆ ಮರ ಹತ್ತಿ ಇಳಿಯಬಹುದು. 150 ಕೆಜಿ ತೂಗುವ ಸಾಮರ್ಥ್ಯ ಇರುವ ಉಪಕರಣದಲ್ಲಿ ಲಾಕಿಂಗ್ ವ್ಯವಸ್ಥೆ, ಗ್ರಿಪ್ಪರ್ ಪ್ರಮುಖ. ಜೊತೆಗೆ ಸೇಫ್ ಬಲ್ಬ್ ಬಳಕೆಯಿದೆ. ರು.  3500ಗೆ ರೈತರಿಗೆ ತಲುಪಿಸಬೇಕೆಂಬ ಆಶಯ ನಿತಿನ್‌ರದ್ದು.

ಗೊನೆ ಉದುರಿಸುವ ಯಂತ್ರ
ಗೊನೆಯಿಂದ ಅಡಕೆ ಉದುರಿಸಲು ಕಡಿಮೆ ಖರ್ಚಿನಲ್ಲಿ ಯಂತ್ರ ಅಭಿವೃದ್ಧಿಪಡಿಸಿದ್ದಾರೆ. ಒಬ್ಬ ಕೂಲಿಯಾಳು ದಿನವೊಂದಕ್ಕೆ ರು.  350-400 ಪಡೆದು 200 ಗೊನೆ ಉದುರಿಸಬಹುದಷ್ಟೆ. ಆದರೆ, ಈ ಯಂತ್ರ ಗಂಟೆಗೆ 500 ಗೊನೆ ಉದುರಿಸುತ್ತದೆ. ಇದಕ್ಕಾಗಿ ರು.  2.20ಯ ವಿದ್ಯುತ್ ಸಾಕು. ಕಡಿಮೆ ಸಾಮರ್ಥ್ಯದ ಮೋಟರ್ ಬಳಸಿದ್ದಾರೆ. ಅಡಕೆ ಸುಲಿಯುವವರ ಸಮಸ್ಯೆ. ಹೀಗಾಗಿ ಕಳೆದ 4-5 ವರ್ಷಗಳಿಂದ ಹಸಿ ಅಡಕೆ ಮಾರುತ್ತಿದ್ದೆವು. ಕಡಿಮೆ ಬೆಲೆಗೆ ಮಾರಾಟವಾಗುತ್ತಿತ್ತು. ಆಗ ಆಲೋಚನೆ ಮಾಡಿದ್ದು ಗೊನೆ ಉದುರಿಸುವ ಯಂತ್ರ. ಹಾಗೆಯೇ ಕಡಿಮೆ ಖರ್ಚಿನಲ್ಲಿ ಅಡಕೆ ಸುಲಿಯುವ ಯಂತ್ರದ ಯೋಜನೆ ಸಿದ್ಧವಾಗುತ್ತಿದೆ ಎಂದು ವಿವರಿಸಿದರು ನಿತಿನ್.

ಕಡಿಮೆ ಖರ್ಚಿನಲ್ಲಿ ಚಾಪ್‌ಕಟರ್
ಅತಿ ಕಡಿಮೆ ಖರ್ಚಿನಲ್ಲಿ, ಕಡಿಮೆ ವಿದ್ಯುತ್ ಬಳಸಿ, ಸಣ್ಣ ಮೋಟರ್ ಬಳಸಿ ಚಾಪ್‌ಕಟರ್ ಸಿದ್ಧಪಡಿಸಿದ್ದಾರೆ. ರು.  12 ಸಾವಿರ ವೆಚ್ಚದಲ್ಲಿ ಇದನ್ನು ರೈತರಿಗೆ ನೀಡಬಹುದು. ಹಸಿ ಒಣಮೇವು, ಅಡಕೆ ಹಾಳೆ, ತೆಂಗಿನ ಮಟ್ಟೆಯನ್ನು ಸುಲಭವಾಗಿ ಬೇಕಾದ ಗಾತ್ರಕ್ಕೆ ಈ ಯಂತ್ರ ಕತ್ತರಿಸುತ್ತದೆ. <


ಆತ್ಮಸ್ಥೈರ್ಯ ಕುಗ್ಗಿಸುವ ವ್ಯವಸ್ಥೆ
ಸಹಕಾರ ಕೊಡಿ ಎಂದು ಸರ್ಕಾರಿ ಇಲಾಖೆಗೆ ಹೋದರೆ ಕಮಿಷನ್ ಎಷ್ಟು ಕೊಡುತ್ತೀರಾ ಎಂದು ಪ್ರಶ್ನಿಸುತ್ತಾರೆ. ಸಹಕಾರಿ ಸಂಸ್ಥೆಗಳಿಗೆ ಹೋದರೆ, ಸಂಶೋಧನೆ ಮುಗಿಸಿ ಬನ್ನಿ, ಯೋಚಿಸುತ್ತೇವೆ ಎನ್ನುತ್ತಾರೆ. ನನಗೆ ಬೇಕಾಗಿರುವುದು ಸಂಶೋಧನೆಗೆ ಹಣ. ಬಡ್ಡಿ ರಹಿತ ಸಾಲ ಕೊಟ್ಟರೆ ಅನುಕೂಲ ಅಂತಾರೆ ನಿತಿನ್.


ಅಮ್ಮನ ಹೆಮ್ಮೆ
ತಂದೆ ಪ್ರಕಾಶ್- ತಾಯಿ ಕಮಲ ನಿತಿನ್ ಪ್ರಯತ್ನಕ್ಕೆ ಬೆಂಬಲ. ಸ್ನೇಹಿತ  ವಿಶಾಲ್, ಉಪನ್ಯಾಸಕ ಜಯವರ್ಧನಾಚಾರ್ಯರ ಸಹಕಾರ. ಮಗನ ಸಾಧನೆಗೆ ಹೆಮ್ಮೆ ಪಡುವ ಕಮಲ, ಎಂಜಿನಿಯರಿಂಗ್ ಓದಿ ಉದ್ಯೋಗ ಮಾಡಲಿ ಎಂದು ಆಸೆ ಪಟ್ಟಿದ್ದೆ. ಆದರೀಗ ರೈತರಿಗೆ ಒಳಿತಾಗುವ ಉಪಕರಣ ಕಂಡು ಹಿಡಿದಿದ್ದಾನೆ. ಅದಕ್ಕೆ ಮಾರುಕಟ್ಟೆ ಸಿಕ್ಕರೆ ಖುಷಿಯಾಗುತ್ತದೆ. ಸಂಸೋಧನೆಗೆ ಬ್ಯಾಂಕಿನಲ್ಲಿ ಬಂಗಾರ ಇಟ್ಟು ಸಾಲ ಪಡೆದಿದ್ದೆ ಎಂದು ಹೇಳಿಕೊಂಡರು.


ವಿಶ್ವವಿದ್ಯಾಲಯದಲ್ಲಿ ನಡೆವ ರಿಸರ್ಚ್ ರೈತರಿಗೆ ಗೊತ್ತಿರುವುದಿಲ್ಲ. ವಿವಿಗಳು ಮಾಡಿದ ತಂತ್ರಜ್ಞಾನ ಕೃಷಿ ಕ್ಷೇತ್ರದಲ್ಲಿ ಅಪ್ಲಿಕೇಷನ್ ಆಗುವುದೇ ಇಲ್ಲ. ಕಂಪ್ಯೂಟರ್‌ನಲ್ಲಿ ಸಿದ್ಧವಾಗುವ ಯಂತ್ರ ಫೀಲ್ಡ್‌ಗೆ ಬರುವುದಿಲ್ಲ. ನಮ್ಮಂತವರ ಸಂಶೋಧನೆಗೆ ಪ್ರೋತ್ಸಾಹ ಬೇಕಾಗಿದೆ.
- ನಿತಿನ್ ಪಿ. ಹೇರಳೆ, ಗಾಜನೂರು

- ಶ್ರೀಕಾಂತ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.