ತಾಯಿಯೇ ಮೊದಲ ಗುರು
'ಮನೆಯೇ ಮೊದಲ ಪಾಠ ಶಾಲೆ, ತಾಯಿಯೆ ಮೊದಲ ಗುರು' ಎಂಬ ನಾಣ್ಣುಡಿಯಂತೆ ತಾಯಿಯೇ ಮಗುವಿನ ಸಂಪೂರ್ಣ ಜವಾಬ್ದಾರಳಾಗಿರುತ್ತಾಳೆ. ಪರೀಕ್ಷಾ ಸಮಯದಲ್ಲಿ ಪೋಷಕರು ಮಕ್ಕಳಿಗೆ ಓದಲು ಪೂರಕವಾದ ಉತ್ತಮ ವಾತಾವರಣ ನಿರ್ಮಿಸಿ ಕೊಡಬೇಕು. ಪರೀಕ್ಷೆ ಎಂಬುದು ವಿದ್ಯಾರ್ಥಿ ಜೀವನದ ಒಂದು ಟನರ್ಂಗ್ ಪಾಯಿಂಟ್. ಪರೀಕ್ಷೆ ಎಂಬ ಭಯವನ್ನು ಹೋಗಲಾಡಿಸಿ ದೊಡ್ಡದೊಡ್ಡ ಮಹನೀಯರ ಉದಾಹರಣೆ ನೀಡಿ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಮುಂದಿನ ಭವಿಷ್ಯದ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಸಿ ಇದಲ್ಲದೆ ಮಕ್ಕಳಿಗೆ ಪರೀಕ್ಷೆಯ ಭಯ ಹುಟ್ಟಿಸಿ ಅವರನ್ನು ಮಾನಸಿಕವಾಗಿ ಹಿಂಸಿಸಬೇಡಿ. ಅವರಿಗೆ ಓದಲು ಪ್ರಶಾಂತವಾದ ವಾತಾವರಣವನ್ನು ನಿರ್ಮಿಸಿ ಕೊಡಿ. ಅವರೊಂದಿಗೆ ನೀವು ಕೂಡ ಕೂತು ಸಹಕರಿಸಿ.
= ಗೌತಮ್.ಎಂ, ತಿಪಟೂರು
ಫಲಿತಾಂಶ ಪ್ರತಿಷ್ಠೆಯ ವಿಷಯವಲ್ಲ
ಇತ್ತೀಚೆಗೆ ಹೆತ್ತವರಿಗೆ ಮಕ್ಕಳ ಪರೀಕ್ಷಾ ಫಲಿತಾಂಶ ಪ್ರತಿಷ್ಠೆಯ ವಿಷಯವಾಗಿದೆ. ಕೆಲವು ತಾಯಂದಿರು ಬೇರೆಯವರ ಮುಂದೆ ತಮ್ಮ ಮಕ್ಕಳ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದು ಮಕ್ಕಳಿಗೆ ಮುಜುಗರ ಉಂಟು ಮಾಡುತ್ತಿದೆ. ಹೀಗಾಗಿ ಮಕ್ಕಳ ಮೇಲೆ ಒತ್ತಡ ಹೆಚ್ಚಾಗಿ ಕಷ್ಟಪಟ್ಟು ಓದಿ ಗಳಿಸಿದ ಜ್ಞಾನ ಪರೀಕ್ಷೆ ಬರೆಯುವಾಗ ನೆನಪಿಗೆ ಬಾರದೆ ಹೋಗಬಹುದು. ಇದರ ಬದಲಾಗಿ ಇಂತಹ ಸಂದರ್ಭದಲ್ಲಿ ಪಾಲಕರು ಮಕ್ಕಳೊಂದಿಗೆ ಸ್ನೇಹಿತರಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಸೂಕ್ತ ಸಲಹೆ-ಸೂಚನೆ, ಮಾರ್ಗದರ್ಶನಗಳನ್ನು ನೀಡಬೇಕು. ಇನ್ನು ಮಹಿಳೆಯರು ಧಾರಾವಾಹಿಗಳ ಹುಚ್ಚಿನಿಂದ ಹೊರಬಂದು ಮಕ್ಕಳಿಗೆ ಉಪಯುಕ್ತ ಟಿವಿ ಕಾರ್ಯಕ್ರಮ ನೋಡಲು ಅನುವು ಮಾಡಿಕೊಡಬೇಕು. ಇಡೀ ದಿನ ಓದುವಿಕೆಯ ಗೊಂದಲದಲ್ಲೇ ಮಕ್ಕಳನ್ನು ಬಿಡದೆ ಸಮಯಕ್ಕೆ ಸರಿಯಾಗಿ ಊಟ, ನಿದ್ರೆ, ವಿಶ್ರಾಂತಿ ಮನರಂಜನೆ, ಆಟೋಟಗಳಲ್ಲಿ ಭಾಗವಹಿಸುವಂತೆ ಪ್ರೇರೆಪಿಸಬೇಕು. ಇಂತಹ ಪ್ರೋತ್ಸಾಹದಿಂದ ಮಕ್ಕಳ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಅಲ್ಲದೆ ಓದುವತ್ತ ಮನಸ್ಸು ಹರಿಯುತ್ತದೆ.
ಅಶೋಕ ಬಳ್ಳಾ, ಸೂಳೇಭಾವಿ
ಪೂರಕ ವಾತಾವರಣ ನಿರ್ಮಿಸಿ
ಇಂದಿನ ದಿನದಲ್ಲಿ ಉತ್ತಮ ಅಂಕ ಗಳಿಸುವದು ಅನಿವಾರ್ಯವಾಗಿದೆ. ಹೀಗಾಗಿ ಮಕ್ಕಳು ಅತ್ಯಧಿಕ ಅಂಕ ಗಳಿಸಬೇಕೆಂದು ಪಾಲಕರು ಹಂಬಲಿಸುವುದು ಸರ್ವೆಸಾಮಾನ್ಯ. ಹಾಗಂತ ಅಂಕ ಗಳಿಕೆಯೇ ಪ್ರತಿಷ್ಠೆಯ ವಿಷಯವಾಗಬಾರದು. ಪರೀಕ್ಷೆಯ ಸಮಯದಲ್ಲಿ ಮಕ್ಕಳಿಗೆ ಹೇರುವ ಒತ್ತಡದಿಂದ ಕಡಿಮೆ ಅಂಕ ಗಳಿಸುವ ಸಾಧ್ಯತೆಯೇ ಹೆಚ್ಚು. ಇದರಿಂದ ಮಕ್ಕಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಾರೆ. ಹೀಗಾಗಿ ಪರೀಕ್ಷೆಯ ಸಮಯದಲ್ಲಿ ಮಕ್ಕಳ ಮೇಲೆ ಒತ್ತಡ ಹೇರುವದು ಸೂಕ್ತವಲ್ಲ. ಮಕ್ಕಳ ಸಾಧನೆಯ ಬಗ್ಗೆ ನಿರೀಕ್ಷೆ ಇರಲಿ, ಆದರೆ ಅತಿಯಾಗದಿರಲಿ. ಮಕ್ಕಳಿಗೆ ಓದಿನ ಮಹತ್ವ ತಿಳಿಸಿ. ಇಡೀ ದಿನ ಅಭ್ಯಾಸದಲ್ಲಿಯೇ ಕಳೆಯಲು ನಿರ್ಬಂಧಿಸಬೇಡಿ. ಹಿಂದಿನ ಸಾಲಿನ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಲು ತಿಳಿಸಿ. ವಿರಾಮ, ಮನರಂಜನೆ ನಿದ್ದೆಯೂ ಮುಖ್ಯ. ಗುಂಪು ಅಧ್ಯಯನಕ್ಕೆ ಪ್ರೋತ್ಸಾಹ ನೀಡಿದರೆ ಆದರೆ ಅವರ ಕಡೆ ಗಮನವಿರಲಿ.
= ಜಯಶ್ರೀ ಅಬ್ಬಿಗೇರಿ, ಕಟಕೋಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

