ಹಸಿವಿನ ಪಾಠ
ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯುವುದು ಹೇಗೆ? ಈ ಪ್ರಶ್ನೆಗೆ ಉತ್ತರ ಸ್ವತಃ ಸಿಎಂ ಸಿದ್ದರಾಮಯ್ಯನವರಿಗೇ ಗೊತ್ತಿಲ್ಲ....

ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯುವುದು ಹೇಗೆ? ಈ ಪ್ರಶ್ನೆಗೆ ಉತ್ತರ ಸ್ವತಃ ಸಿಎಂ ಸಿದ್ದರಾಮಯ್ಯನವರಿಗೇ ಗೊತ್ತಿಲ್ಲ. ಸಚಿವ ಕಿಮ್ಮನೆ ರತ್ನಾಕರರಿಗೂ ಸೂಕ್ತ ಐಡಿಯಾ ಹೊಳೆಯಲಿಲ್ಲ. ಆದರೆ, ಗದಗದ ಹೆಡ್ಮೇಸ್ಟ್ರು ಒಂದು ಪ್ಲೇಟ್ ಇಡ್ಲಿಯಲ್ಲಿ ಎಲ್ಲವನ್ನೂ ಸಾಧಿಸಿಬಿಟ್ಟಿದ್ದಾರೆ! ಆ ಶಾಲೆಗೀಗ ಮಕ್ಕಳ ಕೊರತೆಯಿಲ್ಲ!
ಶಾಲೆಯ ಬೆಳಗ್ಗಿನ ಬೆಲ್ ಹೊಡೆದಿತ್ತು. ಪ್ರಾರ್ಥನೆಗೆ ಟೈಮಾದರೂ 3ನೇ ತರಗತಿಯ ದೀಪಕ್ ಇನ್ನೂ ಬಂದಿರಲಿಲ್ಲ. ಅಂತೂ ಪ್ರೇಯರ್ ಮುಗಿಯುತ್ತಿದ್ದಂತೆ ಆ ದೀಪಕ್ ತಂದೆಯೊಂದಿಗೆ ಅಳುತ್ತಾ ಬರುವುದು ಕಾಣಿಸಿತು ಮೇಷ್ಟ್ರಿಗೆ. 'ಯಾಕೆ ಲೇಟಾಯ್ತು?' ಅಂತ ತಂದೆಗೆ ಕೇಳಿದರು. 'ಸರ್, ನನ್ನ ಮಗ ಬೆಳಗ್ಗೆಯಿಂದ ಒಂದೇ ಸಮನೆ ಇಡ್ಲಿ ತಿನ್ಬೇಕು ಅಂತ ಹಠ ಹಿಡಿದಿದ್ದ. ಹೋಟೆಲ್ಗೆ ಕರ್ಕೊಂಡ್ ಹೋಗಿ ಬರೋಷ್ಟರೊಳಗೆ ಬೆಲ್ ಹೊಡೆದಿತ್ತು' ಅಂದರು ತಂದೆ.
ಈ ಪ್ರಕರಣದ ಮರುದಿನವೇ ಗದಗದ ಬಸವೇಶ್ವರ ನಗರ ಸರ್ಕಾರಿ ಶಾಲೆಯಲ್ಲಿ 'ಇಡ್ಲಿ- ಸಾಂಬಾರ್ ಯೋಜನೆ' ಜಾರಿಮಾಡಿಬಿಟ್ಟರು ಹೆಡ್ಮೇಸ್ಟ್ರು ಎಂ.ಕೆ. ಮಂಗಳಗುಡ್ಡ! ಅಕ್ಷರ ದಾಸೋಹ ಕಾರ್ಯಕರ್ತೆಯರು ಅಕ್ಕಿ ಶುಚಿಮಾಡುವಾಗ ನುಚ್ಚಕ್ಕಿ ಉಳಿಯುವುದನ್ನು ಗಮನಿಸಿದ್ದರು ಇವರು. ಮಕ್ಕಳಿಗೆ ಶಿಕ್ಷಣದ ಜೊತೆಗೆ, ಬಯಸಿದ್ದನ್ನೂ ಕೊಡುವ ದೊಡ್ಡ ಗುಣ ಮಂಗಳಗುಡ್ಡ ಅವರದು. ಆ ನುಚ್ಚನ್ನು ಗಿರಣಿ ಬಾಯಿಗಿಟ್ಟು, ಇಡ್ಲಿರವೆ ಮಾಡಿಸಿ, ದೇವಸ್ಥಾನದಿಂದ ಇಡ್ಲಿ ಮಾಡುವ ಪಾತ್ರೆಯನ್ನು ಎರವಲು ಪಡೆದು, ಇಡ್ಲಿಯನ್ನು ಬಡಿಸಿಯೇಬಿಟ್ಟರು.
ಮಂಗಳಗುಡ್ಡ ಇಷ್ಟಕ್ಕೇ ತೃಪ್ತರಾಗಲಿಲ್ಲ. 166 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ 7 ಶಿಕ್ಷಕರ ದೃಢವಿಶ್ವಾಸದಿಂದ ಶುರುವಾದ ಈ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂಬ ಹಠ ಅವರೊಳಗೆ ಗುಡ್ಡವೇ ಆಗಿಹೋಯಿತು. ಎಸ್ಡಿಎಂಸಿ ಹಾಗೂ ಅಡುಗೆ ಸಿಬ್ಬಂದಿಯ ಸಭೆ ಕರೆದರು. ಅವರಿಂದಲೂ ಪೂರ್ಣ ಬೆಂಬಲ ಸಿಕ್ಕಿತು. ಅಗತ್ಯ ಅಡುಗೆ ಪಾತ್ರೆಗಳನ್ನು ದೇಣಿಗೆ ಕೊಡಲು ಪೋಷಕರು ಒಪ್ಪಿದರು. ಉದ್ದಿನ ಬೇಳೆ ಮತ್ತಿತ್ತರ ಸಾಮಗ್ರಿಗಳನ್ನು ಪ್ರತಿವಾರ ಒಬ್ಬರಂತೆ ನೀಡಲು ಎಲ್ಲರೂ ಸಿದ್ಧರಾದರು. ಅದೇ ಇಡ್ಲಿ ಯೋಜನೆಯಲ್ಲಿ ಮುಂದೆ ದೋಸೆಯೂ ಸೇರಿಕೊಂಡಿತು.
ಶಾಲೆಗೆ ಮಕ್ಕಳು ಬಂದ್ರು...
ಬೇರೆ ಮೇಸ್ಟ್ರು ಥರ ಸೋಮಾರಿ ಅಲ್ಲ ಮಂಗಳಗುಡ್ಡ ಸರ್. ಪ್ರತಿ ಶನಿವಾರ ಮುಂಜಾನೆ ಎದ್ದು ಇಡ್ಲಿ ತಯಾರಿಸುವ ಕಾರ್ಯಕರ್ತೆಯರಿಗೆ ಹೆಲ್ಪ್ ಮಾಡುತ್ತಾರಿವರು. ಮೇಸ್ಟ್ರು ಈ ಥರ ಇಡ್ಲಿ, ದೋಸೆಗಳನ್ನು ಬಡಿಸುತ್ತಲೇ ವಿದ್ಯಾರ್ಥಿಗಳ ಮನದೊಳಗೆ ಕೂತುಬಿಟ್ಟಿದ್ದಾರೆ. ಶಾಲಾ ಮಕ್ಕಳ ದಾಖಲಾತಿ ಗಣನೀಯ ಹೆಚ್ಚಳವಾಗಿದೆ. ಬಡ ಹಾಗೂ ಕೂಲಿಕಾರರ ಮಕ್ಕಳೇ ಹೆಚ್ಚಿರುವ ಈ ಶಾಲೆ ಫಲಿತಾಂಶದಲ್ಲೂ ಉತ್ತಮ ಸಾಧನೆಗೈದಿದೆ.
ಖಚು ವೆಚ್ಚ
2007-08ರಿಂದ ಆರಂಭವಾದ ಈ ಯೋಜನೆಗೆ ಖರ್ಚು ಕಡಿಮೆ. ಶಾಲಾ ಬಿಸಿಯೂಟದ ಅಕ್ಕಿ ನುಚ್ಚನ್ನು ಗಿರಣಿಗೆ ಹೋಗಿ, ರವೆ ಮಾಡಿದರೆ ಆಯಿತು... ಅರ್ಧ ಕೆಲಸ ಮುಗಿದಂತೆ. ಪ್ರತಿ 25 ಕೆ.ಜಿ. ರವೆಗೆ 4 ಕೆ.ಜಿ. ಉದ್ದಿನ ಬೇಳೆ ಬೇಕಾಗುತ್ತದೆ. ಅದನ್ನು ಪಾಲಕರು ದೇಣಿಗೆ ನೀಡುತ್ತಾರೆ. ಹಾಗೆಯೇ ಪಾತ್ರೆಗಳನ್ನೂ ಕೊಟ್ಟಿದ್ದಾರೆ. ಒಮ್ಮೆಗೆ 80 ಇಡ್ಲಿಗಳು ಸಿದ್ಧವಾಗುತ್ತವೆ. ಒಮ್ಮೆ ಇಡ್ಲಿ, ಮತ್ತೊಮ್ಮೆ ದೋಸೆ.
- ವಿನೋದ ರಾ. ಪಾಟೀಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


